ಪ್ಲೇಯರ್ಸ್ ​ಗೆ ಪುಟ್ಟ ಮಗು TROPHY – ಕಪ್ ಮೇಲೆ ಕಾಲಿಟ್ಟವ್ರು ನೋಡಿ ಕಲೀರಿ!
ವಿಶ್ವ ಗೆದ್ದ ವೀರರಿಗೆ ಜನಸಾಗರದ ಸಲಾಂ

ಪ್ಲೇಯರ್ಸ್ ​ಗೆ ಪುಟ್ಟ ಮಗು TROPHY – ಕಪ್ ಮೇಲೆ ಕಾಲಿಟ್ಟವ್ರು ನೋಡಿ ಕಲೀರಿ!ವಿಶ್ವ ಗೆದ್ದ ವೀರರಿಗೆ ಜನಸಾಗರದ ಸಲಾಂ

ಪುಟ್ಟ ಮಗು ಅದು. ಒಬ್ರಿಂದ ಒಬ್ಬರ ಕೈಗೆ ಹೋಗ್ತಿದೆ. ಪ್ರತಿಯೊಬ್ಬರೂ ಎತ್ತಿಕೊಳ್ತಿದ್ದಾರೆ. ಮುತ್ತಿಡ್ತಾರೆ. ಅಪ್ಪಿಕೊಳ್ತಾರೆ. ಕೆನ್ನೆ ಸವರಿಸಿಕೊಂಡು ಆ ಸುಂದರ ಕ್ಷಣವನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ. ಪಕ್ಕದಲ್ಲೇ ಮಲಗಿಸಿಕೊಂಡು ನೆಮ್ಮದಿಯ ನಿದ್ರೆಗೆ ಜಾರುತ್ತಿದ್ದಾರೆ. ಕೋಟಿ ಕೋಟಿ ಭಾರತೀಯರ ಸಂಭ್ರಮಕ್ಕೆ ಕಾರಣವಾಗಿರೋ ಆ ಮಗು ಮತ್ಯಾರೂ ಅಲ್ಲ. ಟೀಂ ಇಂಡಿಯಾಗೆ ಸಿಕ್ಕಿರೋ ಟಿ-20 ಚಾಂಪಿಯನ್ಸ್ ಟ್ರೋಫಿ ಎಂಬ ದೇವರ ಮಗು. ಮದುವೆಯಾಗಿ ಹತ್ತಾರು ವರ್ಷ ಆದ್ರೂ ಮಕ್ಕಳಾಗದ ದಂಪತಿ, ನಾನಾ ದೇಗುಲಗಳನ್ನ ಸುತ್ತಿ, ಉಪವಾಸ, ವ್ರತ ಅಂತೆಲ್ಲಾ ಹರಕೆ ಕಟ್ಟಿಕೊಂಡು ಮಹಾತಪಸ್ಸಿನಂತೆ ಕಾದು ವರ ಪಡೆದು ಪುಟಾಣಿ ಹುಟ್ಟಿದಾಗ ಅದೆಷ್ಟು ಪ್ರೀತಿಸ್ತಾರೆ, ಅದೆಷ್ಟು ಮುದ್ದಾಡ್ತಾರೆ, ಅದೆಷ್ಟು ಜೋಪಾನ ಮಾಡ್ತಾರೋ ಅದಕ್ಕಿಂತ್ಲೂ ಒಂದು ಕೈ ಜಾಸ್ತಿಯೇ ಸಂಭ್ರಮ ಇಲ್ಲಿದೆ. ಕಪ್ ಗೆದ್ವಿ ಅನ್ನೋ ದೌಲತ್ತಲ್ಲಿ ಅದ್ರ ಮೇಲೆ ಕಾಲಿಟ್ಟು ದರ್ಪ ತೋರುವ ಅವ್ರೆಲ್ಲಿ. ಸಾಕ್ಷಾತ್ ಭಗವಂತನನ್ನೇ ಕಂಡಂತೆ ಗೌರವಿಸೋ ನಮ್ಮ ಭಾರತೀಯರೆಲ್ಲಿ. ಗುರುವಾರ ಸಂಜೆ ಮುಂಬೈನ ವಾಂಖೆಡೆ ಸ್ಟೇಡಿಯಮ್​ನಲ್ಲಿ ನಡೆದ ಸೆಲೆಬ್ರೇಷನ್ ನೋಡಿದ ಪ್ರತಿಯೊಬ್ಬ ಭಾರತೀಯನ ಕಣ್ಣಾಲೆಗಳೂ ಒದ್ದೆಯಾಗಿದೆ. ಟ್ರೋಫಿಯೊಂದಿದೆ ಟೀಂ ಇಂಡಿಯಾ ಆಟಗಾರರು ಹೇಗೆಲ್ಲಾ ಸಂಭ್ರಮಿಸುತ್ತಿದ್ದಾರೆ..? ಮುಂಬೈನಲ್ಲಿ ಚಾಂಪಿಯನ್ಸ್​ಗೆ ಸಿಕ್ಕ ಗೌರವ ಎಂಥಾದ್ದು? ಅಭಿಮಾನಿಗಳ ಮುಂದೆ ಪ್ಲೇಯರ್ಸ್ ಕಣ್ಣೀರಾಕಿದ್ದೇಕೆ? ವಿರಾಟ್ ಮತ್ತು ರೋಹಿತ್ ಭಾವುಕರಾಗಿದ್ದೇಕೆ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:1983ರಲ್ಲಿ ಬಿಸಿಸಿಐ ಖಜಾನೆ ಖಾಲಿ ಖಾಲಿ – ಮಾನ ಕಾಪಾಡಿದ ಲತಾಮಂಗೇಶ್ಕರ್ ಹಾಡು

ವಾಟ್ ಎ ಮೂಮೆಂಟ್. ವಾಟ್ ಎ ಸೆಲೆಬ್ರೇಷನ್. ಕ್ರಿಕೆಟ್ ಅನ್ನೋದು ಜಸ್ಟ್ ಒಂದು ಗೇಮ್ ಅಲ್ಲ. ಇಟ್ಸ್ ಅವರ್ ಎಮೋಷನ್ ಅನ್ನೋ ಮಾತು ಅಕ್ಷರಶಃ ಸತ್ಯ. ಸೋತಾಗ ಬೆನ್ನಿಗೆ ನಿಂತು ಬೆಟರ್ ಲಕ್ ನೆಕ್ಸ್​​ಟ್ ಟೈಂ ಅಂತಿದ್ದ ಅದೇ ಅಭಿಮಾನಿಗಳು ಇಂದು ಟೀಂ ಇಂಡಿಯಾ ವಿಕ್ಟರಿಯನ್ನ ತಲೆ ಮೇಲೆ ಹೊತ್ತು ಮೆರೆಸುತ್ತಿದ್ದಾರೆ. ಟೀಂ ಇಂಡಿಯಾ ಆಟಗಾರರನ್ನ ಹೊತ್ತ ಆ ವೆಹಿಕಲ್ ಜನಸಾಗರವನ್ನ ಸೀಳಿ ಮುಂದೆ ಬರ್ತಿದ್ರೆ ಅಭಿಮಾನಿಗಳ ಕೇಕೆ, ಶಿಳ್ಳೆ, ಜೈಘೋಷ ಮುಗಿಲು ಮುಟ್ಟಿತ್ತು. ಜನರ ಈ ಪ್ರೀತಿ, ಅಭಿಮಾನ ಕಂಡ ಆಟಗಾರರು ಅಕ್ಷರಶಃ ಕಣ್ಣೀರಾಗಿದ್ರು. ತಮ್ಮ ತಮ್ಮ ಫೋನ್​ಗಳಲ್ಲಿ ಈ ಅದ್ಭುತ ಕ್ಷಣಗಳನ್ನ ಸೆರೆ ಹಿಡಿಯುತ್ತಾ ಸಂಭ್ರಮಿಸುತ್ತಿದ್ರು.

ಒಂದಲ್ಲ ಎರಡಲ್ಲ.. ಬರೋಬ್ಬರಿ 17 ವರ್ಷಗಳ ಮಹಾತಪಸ್ಸಿನ ಬಳಿಕ ಟೀಂ ಇಂಡಿಯಾಗೆ ಟಿ-20 ವಿಶ್ವಕಪ್ ಟ್ರೋಫಿ ಸಿಕ್ಕಿದೆ. ಜಗತ್ತನ್ನೇ ಗೆದ್ದ ಖುಷಿಯಲ್ಲಿರೋ ಆಟಗಾರರ ಕೈಗೆ ಟ್ರೋಫಿ ಸಿಕ್ಕಿದ್ದೇ ಸಿಕ್ಕಿದ್ದು. ಅಂದಿನಿಂದ ಈ ಕ್ಷಣದವರೆಗೂ ಅದೇ ಟ್ರೋಫಿಯನ್ನ ಪುಟ್ಟ ಮಗುವಿನಂತೆ ಜೋಪಾನ ಮಾಡ್ತಿದ್ದಾರೆ. ಮೊದಲು ಟೀಂ ಇಂಡಿಯಾ ಆಟಗಾರರು ಬಾರ್ಬಡೋಸ್ ಮೈದಾನದಲ್ಲೇ ಕಪ್ ಹಿಡಿದು ಕುಣಿದು ಕುಪ್ಪಳಿಸಿದ್ರು. ಬಳಿಕ ಒಬ್ಬೊಬ್ಬರಾಗೇ ಅಪ್ಪಿಕೊಂಡು ಫೋಟೋಗೆ ಪೋಸ್ ಕೊಟ್ರು. ನಂತ್ರ ಆಟಗಾರರ ಕುಟುಂಬಸ್ಥರು ಕೂಡ ಟ್ರೋಫಿ ಎತ್ತಿ ಖುಷಿ ಪಟ್ರು. ಬಿಸಿಸಿಐ ಸಿಬ್ಬಂದಿ ಆನಂದಕ್ಕೂ ಪಾರವೇ ಇರಲಿಲ್ಲ. ಹೀಗೆ ಟ್ರೋಫಿ ಜೊತೆಗಿನ ಒಂದೊಂದೂ ಕ್ಷಣಗಳನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಜನರೊಟ್ಟಿಗೆ ಶೇರ್ ಮಾಡಿದ್ರು. ಅದ್ರಲ್ಲೂ ಚಾಂಪಿಯನ್ ಪಟ್ಟಕ್ಕೇರಿ ತವರಿಗೆ ವಾಪಸ್ ಆಗುವಾಗಲೂ ಕೂಡ ಭಾರತೀಯ ಆಟಗಾರರಿಗೆ ಈ ಟ್ರೋಫಿ ಕ್ರೇಜ್ ಕಿಂಚಿತ್ತೂ ಕಮ್ಮಿ ಆಗಿರಲಿಲ್ಲ. ವಿಮಾನದಲ್ಲಿ ಒಬ್ಬರಿಂದ ಒಬ್ಬರ ಕೈಗೆ ಮಗುವನ್ನ ಕೊಡುವಂತೆ ಒಬ್ಬೊಬ್ಬರೇ ಪಡೆದು ಅದಕ್ಕೆ ಕೆನ್ನೆ ಸವರಿಸುತ್ತಾ ಖುಷಿ ಪಡ್ತಿದ್ರು. ನಿಜಕ್ಕೂ ಕೂಡ ಆಟಗಾರರ ಪಾಲಿಗೆ ಈ ಗೆಲುವು ಎಂದೂ ಮರೆಯಲಾಗದ, ಬೆಲೆ ಕಟ್ಟಲಾಗದ ಕ್ಷಣ.

ಭಾರತೀಯ ಆಟಗಾರರು ಬಾರ್ಬಡೋಸ್​ನಿಂದ ಗುರುವಾರ ಬೆಳಗ್ಗೆ ದೆಹಲಿಗೆ ಬಂದು ಇಳೀತಾ ಇದ್ದಂತೆ ಫಸ್ಟ್ ಮೀಟ್ ಮಾಡಿದ್ದೇ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವ್ರನ್ನ. ಈ ವೇಳೆಯೂ ಅಲ್ಲಿ ರಾರಾಜಿಸಿದ್ದು ಅದೇ ಟ್ರೋಫಿ. ಟಿ-20 ಚಾಂಪಿಯನ್ಸ್ ಜೊತೆ ಟ್ರೋಫಿ ಜೊತೆ ಪ್ರಧಾನಿ ಮೋದಿ ಫೋಟೋಗೆ ಪೋಸ್ ಕೊಟ್ಟಿದ್ರು. ಬಳಿಕ ಅಲ್ಲಿಂದ ಅದೇ ಕಪ್ ಜೊತೆ ಮುಂಬೈಗೆ ಬಂದಿಳಿದ ಆಟಗಾರರು ಅದೇ ಮಗುವನ್ನ ಜನರೆದುರು ಎತ್ತಿ ತೋರಿಸಿದ್ರು. ಈ ಗೆಲುವು ನಿಮ್ಮದೇ ಎಂದು ಕೂಗಿ ಕೂಗಿ ಹೇಳಿದ್ರು. ಟ್ರೋಫಿ ಜೊತೆಗೆ ಚಾಂಪಿಯನ್ಸ್‌ ವಿಜಯೋತ್ಸವ ನಡೆಸಿದ್ರು. ವಾಂಖೆಡೆ ಮೈದಾದವರೆಗೂ ಬಸ್‌ ಏರಿ ಸಂಭ್ರಮಿಸಿದ್ರು. ಜಗತ್ತನ್ನೇ ಗೆದ್ದು ಬಂದ ವೀರರನ್ನ ನೋಡಲು ಅಭಿಮಾನಿಗಳ ಸಾಗರವೇ ನೆರಿದಿತ್ತು. ತಮ್ಮ ನೆಚ್ಚಿನ ಆಟಗಾರರನ್ನು ಕಂಡ ಫ್ಯಾನ್ಸ್ ಖುಷಿಗೆ ಪಾರವೇ ಇರಲಿಲ್ಲ. ರಸ್ತೆಯಲ್ಲೇ ಕುಣಿದು ಕುಪ್ಪಳಿಸಿದ್ರು. ಇತ್ತ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಕೂಡ ಅಭಿಮಾನಿಗಳೆದು ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದ್ರು. ಸುತ್ತಮುತ್ತ ಎತ್ತ ಕಣ್ಣಾಯಿಸದ್ರೂ ಜನವೋ ಜನ. ಇಂಥ ಅವಿಸ್ಮರಣೀಯ ಸಮಯದಲ್ಲೂ ಟೀಂ ಇಂಡಿಯಾ ಆಟಗಾರರು ಟ್ರೋಫಿಯನ್ನ ಮರೆಯಲಿಲ್ಲ. ಕೈಯಲ್ಲಿಡು ಅಭಿಮಾನಿಗಳತ್ತ ತೋರಿಸುತ್ತಾ ತಾವೂ ವಿಡಿಯೋ ಮಾಡುತ್ತಾ ಖುಷಿಯಲ್ಲಿ ತೇಲಾಡಿದ್ರು.

ಮುಂಬೈ ಚಾಂಪಿಯನ್ನರು ಬರೋ ಮೊದ್ಲೇ ವರುಣ ಕೂಡ ಎಂಟ್ರಿ ಕೊಟ್ಟಿದ್ದ. ವಾಂಖೇಡೆ ಮೈದಾನದ ಸುತ್ತಮುತ್ತ ಗುರುವಾರ ಸಂಜೆಯಿಂದ ಮಳೆ ಸುರೀತಿತ್ತು. ಆದ್ರೆ ಅಭಿಮಾನಿಗಳಿಗೆ ಮಳೆಯ ಹನಿಗಳು ಹೂಮಳೆ ಸುರಿಸಿದಂತಾಗಿತ್ತು. ಮಳೆ ನೀರನ್ನ ಎಂಜಾಯ್ ಮಾಡುತ್ತಾ ಕುಣಿದು ಕುಪ್ಪಳಿಸುತ್ತಿದ್ರು. ವಾಂಖೆಡೆ ಸುತ್ತಮುತ್ತಾ ಜೈ ಹೋ ಇಂಡಿಯಾ, ಜೈ ಹೋ ಇಂಡಿಯಾ ಎಂಬ ಜೈಕಾರ ಅಷ್ಟೇ ಕೇಳಿಸ್ತಿತ್ತು.  ಅಭಿಮಾನಿಗಳ ಕ್ರೇಜ್ ಅದೆಷ್ಟರ ಮಟ್ಟಿಗೆ ಇತ್ತು ಅಂದ್ರೆ ಭಾರತೀಯರ ಆಟಗಾರರು ಬಸ್​ನಲ್ಲಿ ಪರೇಡ್ ನಡೆಸುವಾಗ ಯುವಕನೊಬ್ಬ ಆಟಗಾರರನ್ನ ನೋಡಲು ಮರವೇರಿ ಕುಳಿತಿದ್ದ. ಇದನ್ನು ಗಮನಿಸದ ಬಸ್‌ ಮುಂದೆ ಸಾಗಿತ್ತು. ಮರದ ಕೊಂಬೆಗಳ ಪಕ್ಕವೇ ಬಸ್ ಬರ್ತಿದ್ದಂತೆ ಕೊಂಬೆ ಮೇಲಿದ್ದ ಯುವಕ ಜೋರಾಗಿ ಕಿರುಚಿದ್ದ. ಇದನ್ನು ಕಂಡ ಟೀಂ ಇಂಡಿಯಾ ಆಟಗಾರರು ಒಮ್ಮೆಲೆ ಶಾಕ್ ಆಗಿದ್ರು. ಯಾಕಂದ್ರೆ ಆ ಯುವ ಮರದ ಎಲೆಗಳು ಹಾಗೂ ಕೊಂಬೆಗಳ ನಡುವೆ ಫೋನ್‌ ಹಿಡಿದುಕೊಂಡು ಫೋಟೋ ತೆಗೆಯಲು ಮುಂದಾಗಿದ್ದ. ನಂತರ ಯುವಕ ಕಿರುಚಿದ್ದನ್ನು ಕಂಡು ಕೆಲ ಆಟಗಾರರು ನಕ್ಕಿದ್ದಾರೆ. ಸದ್ಯ ಈ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

2023ರ ಏಕದಿನ ವಿಶ್ವಕಪ್​ ಬಳಿಕ ನಡೆದ ಆ ಒಂದು ಘಟನೆಯನ್ನ ನಾವಿಲ್ಲಿ ಹೇಳಲೇಬೇಕು. ಅಲ್ಲೂ ಕೂಡ ಸೋಲೇ ಕಾಣದೆ ಟೀಂ ಇಂಡಿಯಾ ಫೈನಲ್ ಪ್ರವೇಶ ಮಾಡಿತ್ತು. ಆದ್ರೆ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೂಲಕ ರನ್ನರ್ ಅಪ್ ಆಗಿತ್ತು. ಅಂದು ನಮ್ಮ ಭಾರತ ಸೋಲ್ತು ಅನ್ನೋದಕ್ಕಿಂತ ಭಾರತೀಯರನ್ನ ಕಾಡಿದ್ದು ಅದೊಂದು ಫೋಟೋ. ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ 13ನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಆತಿಥೇಯ ಟೀಮ್ ಇಂಡಿಯಾವನ್ನು 6 ವಿಕೆಟ್​ಗಳಿಂದ ಮಣಿಸಿದ ಆಸ್ಟ್ರೇಲಿಯಾ 6ನೇ ಏಕದಿನ ವಿಶ್ವಕಪ್​ ಗೆದ್ದು ಸಂಭ್ರಮಿಸಿತ್ತು. ಈ ಐತಿಹಾಸಿಕ ಸಾಧನೆ ಬಳಿಕ ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌  ಡ್ರೆಸ್ಸಿಂಗ್​ ರೋಮ್​ನಲ್ಲಿ ಟ್ರೋಫಿ ಮೇಲೆ ಕಾಲಿಟ್ಟು ಸಂಭ್ರಮಿಸಿದ್ದರು. ಈ ಫೋಟೋವನ್ನ ಶೇರ್ ಮಾಡಿಕೊಂಡಿದ್ದರು. ಮಾರ್ಷ್​ ಅವರ ಈ ದೌಲತ್ತಿಗೆ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಕೆಂಡಾಮಂಡಲರಾಗಿದ್ರು. ಕೆಲವರು ಮಾರ್ಷ್ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್‌ಐಆರ್‌ ಕೂಡ ದಾಖಲಿಸಿದ್ದರು. ಆದ್ರೆ ನಾವು ಭಾರತೀಯರು. ಹಾಗಲ್ಲ. ಟ್ರೋಫಿಯನ್ನ ತಮ್ಮ ಮಗುವಿನಂತೆ ಕೇರ್ ಮಾಡ್ತಿದ್ದಾರೆ. ಗೌರವಿಸ್ತಿದ್ದಾರೆ, ಪ್ರೀತಿಸ್ತಿದ್ದಾರೆ, ಖುಷಿ ಪಡ್ತಿದ್ದಾರೆ.  ವಿಮಾನದಲ್ಲಿ ಭಾರತಕ್ಕೆ ವಾಪಾಸ್ಸಾಗುವ ವೇಳೆ ಟೀಂ ಇಂಡಿಯಾ ಪ್ಲೇಯರ್ಸ್‌ ಮಕ್ಕಳಂತೆ ಆಟವಾಡಿದ್ದಾರೆ. ಈ ವಿಡಿಯೋ ನೋಡಿದ್ರೆ ನಿಮಗೆ ಖುಷಿ ಜೊತೆ ಕಣ್ಣೀರು ಬರೋದ್ರಲ್ಲಿ ಯಾವುದೇ ಡೌಟಿಲ್ಲ. ರೋಹಿತ್‌ ಶರ್ಮಾ ಅಂತೂ ಚಿಕ್ಕ ಹುಡುಗನಂತೆ ಟ್ರೋಫಿ ಕಡೆ ಕೈ ಮಾಡುತ್ತಾ ಕೂಗಿದ್ದಾರೆ. ಸಿರಾಜ್‌, ಚಹಾಲ್‌, ಅರ್ಶದೀಪ್‌ ಟ್ರೋಫಿ ಹಿಡಿದುಕೊಂಡು ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ಇದೀಗ ಭಾರತ ತಂಡ ಟಿ20 ವಿಶ್ವಕಪ್​ ಗೆದ್ದ ತವರಿಗೆ ಮರಳಿದ ವೇಳೆ ಆಟಗಾರರಿಗೆ ಸಿಕ್ಕ ಸ್ವಾಗತ ಮತ್ತು ಆಟಗಾರರು ಟ್ರೋಫಿಗೆ ನೀಡಿದ ಗೌರವವನ್ನು ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಕೊಂಡಾಡಿದ್ದಾರೆ. ಇದು ನೈಜ ಮತ್ತು ನಮ್ಮ ದೇಶದ ಸಂಸ್ಕೃತಿ ಎಂದು ಮಾರ್ಷ್​ಗೆ ಮತ್ತು ಆಸೀಸ್​ ಆಟಗಾರರಿಗೆ ಟಾಂಗ್​ ಕೊಟ್ಟಿದ್ದಾರೆ. ಕಳೆದ ಬಾರಿ ಟ್ರೋಫಿ ಮೇಲೆ ಕಾಲಿಟ್ಟ ತಪ್ಪಿಗೆ ಈ ಸಲ ತನಗಿಂತ ಕೆಳ ಕ್ರಮಾಂಕದ ತಂಡದ ವಿರುದ್ಧ ಕೂಡ ಸೋಲಿನ ಅವಮಾನ ಎದುರಿಸಬೇಕಾಯ್ತು. ನಿಮ್ಮ ದರ್ಪವೇ  ಇದಕ್ಕೆಲ್ಲಾ ಕಾರಣ ಅಂತಾ ಟಾಂಟ್ ಕೊಡ್ತಿದ್ದಾರೆ.

ಇನ್ನು ಮುಂಬೈನಲ್ಲಿ ರೋಡ್ ಶೋ ಬಳಿಕ ಆಟಗಾರರು ವಾಂಖೇಡೆ ಮೈದಾನಕ್ಕೆ ತೆರಳಿದ್ರು. ವಾಂಖೆಡೆ ಮೈದಾನದಲ್ಲಿ ಸೇರಿದ್ದ ಅಭಿಮಾನಿಗಳತ್ತ ಟೀಂ ಇಂಡಿಯಾ ಆಟಗಾರರು ಬಾಲ್‌ ಎಸೆದಿದ್ರು. ಈ ವೇಳೆ ಮುಂಬೈ ಕಾ ರಾಜ ರೋಹಿತ್‌ ಶರ್ಮಾ ಅಂತ ಫ್ಯಾನ್ಸ್ ಜೈಕಾರ ಕೂಗ್ತಿದ್ರು. ಮೈದಾನದ ಸುತ್ತ ಒಂದು ರೌಂಡ್ ಹಾಕಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಟೀಂ ಇಂಡಿಯಾ ಬಾಯ್ಸ್‌ ಬಳಿಕ ಮೈದಾನದ ಒಳಗೂ ಸೆಲೆಬ್ರೇಷನ್​ನಲ್ಲಿ ಭಾಗಿಯಾಗಿದ್ರು. ವಾಂಖೆಡೆ ಮೈದಾನದಲ್ಲಿ ಮಾತನಾಡಿದ ಆಟಗಾರರು ತಮ್ಮ ಗೆಲುವಿನ ಐತಿಹಾಸಿಕ ಕ್ಷಣಗಳನ್ನ ಅಭಿಮಾನಿಗಳೊಟ್ಟಿಗೆ ಶೇರ್ ಮಾಡಿದ್ರು. ಈ ವೇಳೆ ಮಾತನಾಡಿದ ಕಿಂಗ್ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಅವರನ್ನ ಹಾಡಿ ಹೊಗಳಿದ್ರು. ರೋಹಿತ್‌ ಕ್ಯಾಪ್ಟನ್‌ ಆಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ವಿಶ್ವಕಪ್‌ ವಿನ್ ಆದ ಬಳಿಕ ರೋಹಿತ್‌ ಅಳ್ತಾ ಇದ್ರು. ನಾನು ಕೂಡ ಅದೇ ಸಮಯಕ್ಕೆ ಅಲ್ಲಿ ಹೋದೆ. ಒಂದು ಅಪ್ಪುಗೆ ಕೊಟ್ಟೆ. ಇಬ್ಬರು ಮುಖ ಮುಖ ನೋಡಿಕೊಂಡೆವು.  ರೋಹಿತ್‌ ನಿನಗೂ ಅಭಿಮಾನಿಗಳಿಗೂ ದೊಡ್ಡ ಥ್ಯಾಂಕ್ಸ್ ಎಂದ್ರು ವಿರಾಟ್‌ ಕೊಹ್ಲಿ. ಇನ್ಮುಂದೆ ನಾನು ಇದನ್ನೆಲ್ಲಾ ಮಿಸ್ ಮಾಡಿಕೊಳ್ಳುತ್ತೇನೆ ಅಂದ್ರು ವಿರಾಟ್‌. ಜೀವದ ಗೆಳೆಯನ ಈ ಮಾತು ಕೇಳಿದ ರೋಹಿತ್‌ ಶರ್ಮಾ ಅಕ್ಷರಶಃ ಭಾವುಕರಾಗಿದ್ರು. ಕೂತಲ್ಲಿಯೇ ವಿರಾಟ್‌ ಕೊಹ್ಲಿಗೆ ಸೆಲ್ಯೂಟ್ ಹೊಡೆದ್ರು.

ಇನ್ನು ಟೀಂ ಇಂಡಿಯಾದ ವಿಕ್ಟರಿ ಪರೇಡ್​ನಲ್ಲಿ ವಾಂಖೆಡೆ ಸ್ಟೇಡಿಯಂಗೆ ಹೋಗುವ ಮುನ್ನ ಲಕ್ಷಾಂತರ ಅಭಿಮಾನಿಗಳು ಚಾಂಪಿಯನ್ನರನ್ನ ಸ್ವಾಗತಿಸಿದ್ದಾರೆ. ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಆಟಗಾರರನ್ನು ಸನ್ಮಾನಿಸಲಾಗಿದ್ದು, ಮೈದಾನದಲ್ಲಿ ಆಟಗಾರರು ಪ್ರೇಕ್ಷಕ ವಂದನೆಯನ್ನೂ ಸಲ್ಲಿಸಿದ್ರು. ಈ ವೇಳೆ ಮೈದಾನದಲ್ಲಿ ಜೋರಾಗಿ ವಂದೇ ಮಾತರಂ ಗೀತೆ ಮೊಳಗಿತ್ತು. ಈ ಕ್ಷಣ ನಿಜಕ್ಕೂ ಪ್ರತಿಯೊಬ್ಬ ಭಾರತೀಯರನ್ನೂ ಹೆಮ್ಮೆ ಮತ್ತು ಭಾವುಕರನ್ನಾಗಿಸಿತ್ತು. ಅಭಿಮಾನಿಗಳ ಈ ಖುಷಿ ಕಂಡ ಆಟಗಾರರಿಗೆ ಮತ್ತೊಂದು ವಿಶ್ವಕಪ್ ಗೆದ್ದಷ್ಟೇ ಫೀಲ್ ಆಗಿತ್ತು. ಇದೇ ವೇಳೆ ಬಿಸಿಸಿಐನಿಂದ ಆಟಗಾರರಿಗೆ 125 ಕೋಟಿ ರೂಪಾಯಿಗಳ ಬಹುಮಾನವೂ ಸಿಕ್ಕಿದೆ.

Shwetha M

Leave a Reply

Your email address will not be published. Required fields are marked *