RO-KO ರಾಕ್.. ಗಂಭೀರ್ ಶಾಕ್ – ಬ್ಯಾಟ್ ನಲ್ಲೇ ಬಾಯಿ ಮುಚ್ಚಿಸಿದ ಸ್ಟಾರ್ಸ್
ಗೌತಿ ಕೋಚ್ ಗ್ರಾಫ್ ಹೇಗಿದೆ?

RO-KO ರಾಕ್.. ಗಂಭೀರ್ ಶಾಕ್ – ಬ್ಯಾಟ್ ನಲ್ಲೇ ಬಾಯಿ ಮುಚ್ಚಿಸಿದ ಸ್ಟಾರ್ಸ್ಗೌತಿ ಕೋಚ್ ಗ್ರಾಫ್ ಹೇಗಿದೆ?

ಗೌತಮ್ ಗಂಭೀರ್.. ಸದ್ಯ ಸಿಕ್ಕಾಪಟ್ಟೆ ಟ್ರೆಂಡಿಂಗ್​ನಲ್ಲಿರೋ ಹೆಸ್ರು. ಹಾಗಂತ ಪಾಸಿಟಿವ್ ಆಗಿ ಅಲ್ಲ ನೆಗೆಟಿವ್ ಆಗಿ. ಭಾರತ ತಂಡದ ಹೆಡ್​ಕೋಚ್ ಆದ್ಮೇಲೆ ಟೀಂ ಇಂಡಿಯಾದ ಡೌನ್ ಫಾಲ್ ನೋಡಿ ನೋಡಿ ಕ್ರಿಕೆಟ್ ಫ್ಯಾನ್ಸ್ ನೆಕ್ಸ್​ಟ್ ಲೆವೆಲ್​ನಲ್ಲಿ ರೋಸ್ಟ್ ಮಾಡ್ತಿದ್ದಾರೆ. ಅದ್ರಲ್ಲೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಚಾರದಲ್ಲಿ ಗಂಭೀರ್ ನಡೆಯೇ ಸಾಕಷ್ಟು ಚರ್ಚೆಯಾಗ್ತಿದೆ. ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ.

ಇದನ್ನೂ ಓದಿ : ಗಿಲ್ ಬದಲು KL ಕ್ಯಾಪ್ಟನ್ – ODIನಲ್ಲಿ ರಾಹುಲ್ ರಿಯಲ್ ಸ್ಟಾರ್

ಭಾರತ ತಂಡದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದು ತೆರೆದ ಪುಸ್ತಕ. ಅಲ್ಲಿ ಯಾವ ಗುಟ್ಟೂ ಉಳ್ಕೊಂಡಿಲ್ಲ. ತಂಡದ ಬದಲಾವಣೆ, ಗಂಭೀರ್ ರೂಲ್ಸ್, ಲೆಜೆಂಡರಿ ಆಟಗಾರರ ನಿರ್ಲಕ್ಷ್ಯ ಪದೇಪದೆ ಸುದ್ದಿಯಾಗ್ತಾನೇ ಇರುತ್ತೆ. 2024ರ ಜುಲೈನಲ್ಲಿ ಅಧಿಕೃತವಾಗಿ ಭಾರತ ತಂಡದ ಕೋಚ್​ ಜವಾಬ್ದಾರಿ ವಹಿಸಿಕೊಂಡಾಗಿಂದ ಹಿಡ್ದು ಈ ಕ್ಷಣದವರೆಗೂ ಗಂಭೀರ್ ಫ್ಯಾನ್ಸ್ ಪಾಲಿಗೆ ಬಿಡಿಸಲಾಗದ ಒಗಟಾಗಿದ್ದಾರೆ.

ಆರಂಭದಲ್ಲಿ ಕೊಹ್ಲಿ ಮತ್ತು ಗಂಭೀರ್ ನಡುವೆ ಹೊಗಳಿಕೆ ಮಾತು!

ಗಂಭೀರ್ ಮತ್ತು ಕೊಹ್ಲಿ ನಡುವೆ ಸಾಕಷ್ಟು ವಿಚಾರಗಳಲ್ಲಿ ವೈಮನಸ್ಸುಗಳಿಗೆ. ಐಪಿಎಲ್​ನಲ್ಲಿ ಎರಡೆರಡು ಸಲ ಮೈದಾನದಲ್ಲೇ ಜಗಳ ಮಾಡ್ಕೊಂಡಿದ್ದಾರೆ. 2023ರಲ್ಲಂತೂ ನೇರಾನೇರಾ ವಾಗ್ಯುದ್ಧ ನಡೆಸಿದ್ರು. ಇದಾಗ ಮರುವರ್ಷವೇ ಅಂದ್ರೆ 2024ರಲ್ಲಿ ಕೋಚ್ ಆಗ್ತಾರೆ. ಸೋ ಮುಂದೆ ತಂಡದಲ್ಲಿ ಏನೇನ್ ಆಗುತ್ತೋ ಅನ್ಕೊಂಡ್ರೆ ಸೆಪ್ಟೆಂಬರ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿಗೂ ಇಬ್ಬರೂ ಜೊತೆಯಾಗಿ ಚಿಟ್​ ಚಾಟ್​​ವೊಂದರಲ್ಲಿ ಕಾಣಿಸಿಕೊಂಡಿದ್ರು. ತಮ್ಮಿಬ್ಬರ ನಡುವಿನ ಮಸಾಲ ಸುದ್ದಿಗಳಿಗೆ ತೆರೆ ಎಳೆದಿದ್ರು. ಬಿಸಿಸಿಐ ಹಂಚಿಕೊಂಡಿದ್ದ ಚಿಟ್​ಚಾಟ್ ವಿಡಿಯೋದಲ್ಲಿ ಒಬ್ಬರನೊಬ್ಬರು ಹಾಡಿ ಹೊಗಳಿದ್ರು. ಸೋ ಅಲ್ಲಿಗೆ ಎಲ್ಲವೂ ತಣ್ಣಗಾಗಿದೆ ಅಂತಾನೇ ತಿಳಿದುಕೊಂಡಿದ್ರು.

ತವರಿನಲ್ಲೇ ನ್ಯೂಜಿಲೆಂಡ್ ವಿರುದ್ಧ ಭಾರತ ಕ್ಲೀನ್ ಸ್ವೀಪ್!

ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ಅವಧಿಯಲ್ಲಿ ಭಾರತೀಯ ಕ್ರಿಕೆಟ್‌ನ ಅತ್ಯಂತ ಪ್ರಕಾಶಮಾನವಾದ ಸಾಧನೆಯೆಂದರೆ ತವರಿನಲ್ಲಿ ಅವರ ಅಜೇಯ ಟೆಸ್ಟ್ ಸರಣಿ. ಆದ್ರೆ ಗಂಭೀರ್ ಕೋಚ್ ಆದ ಕೆಲ ತಿಂಗಳಲ್ಲೇ ಭಾರತ ರೋಹಿತ್ ಶರ್ಮಾ ನಾಯಕತ್ವದಲ್ಲಿ, ಅಕ್ಟೋಬರ್ ಮತ್ತು ನವೆಂಬರ್ 2024 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಆಯ್ತು. ಮೂರಕ್ಕೆ ಮೂರೂ ಪಂದ್ಯಗಳನ್ನ ಸೋತ್ರು. ಭಾರತವು 12 ವರ್ಷಗಳಲ್ಲಿ ಮೊದಲ ಬಾರಿಗೆ ತವರಿನಲ್ಲಿ ಟೆಸ್ಟ್ ಸರಣಿ ಸೋಲನ್ನು ಅನುಭವಿಸಿದ್ದಲ್ಲದೆ, ವೈಟ್‌ವಾಶ್ ಅನುಭವಿಸಿತು.

ಆಸ್ಟ್ರೇಲಿಯಾ ವಿರುದ್ಧ ರೋಕೊ ನೀರಸ ಪ್ರದರ್ಶನ!

ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯ ವೈಟ್ ವಾಶ್ ಬೆನ್ನಲ್ಲೇ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ರೋಹಿತ್ ಕ್ಯಾಪ್ಟನ್ಸಿಯಲ್ಲಿ ತಂಡ ಆಸ್ಟ್ರೇಲಿಯಾಗೆ ಹಾರಿತ್ತು. ಆದ್ರೆ ಈ ಸರಣಿ 2025 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ತಲುಪುವ ಭಾರತದ ಆಸೆಯನ್ನು ನುಚ್ಚುನೂರಾಗಿಸಿತ್ತು. 2024 ರ ಕೊನೆಯಲ್ಲಿ ನಡೆದ ಐದು ಪಂದ್ಯಗಳ ಸರಣಿಯಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 1-3 ಅಂತರದಲ್ಲಿ ಸೋಲು ಕಂಡಿತು. ಈ ಸರಣಿಯಲ್ಲಿ ಕೊಹ್ಲಿ ಮತ್ತು ರೋಹಿತ್ ಅವರ ಕಳಪೆ ಫಾರ್ಮ್ ದೊಡ್ಡ ಚರ್ಚೆಯ  ವಿಷಯವಾಗಿತ್ತು. ಕೊಹ್ಲಿ ಐದು ಟೆಸ್ಟ್‌ಗಳಲ್ಲಿ ಕೇವಲ 190 ರನ್‌ಗಳನ್ನು ಗಳಿಸಿದರು, ಆಫ್-ಸ್ಟಂಪ್‌ನ ಹೊರಗಿನ ಎಸೆತಗಳಿಗೆ ಪದೇ ಪದೇ ಔಟಾಗುತ್ತಿದ್ದರು. ಮತ್ತೊಂದೆಡೆ, ರೋಹಿತ್ ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ 31 ರನ್‌ಗಳನ್ನು ಗಳಿಸಿದರು ಮತ್ತು ಅಂತಿಮ ಟೆಸ್ಟ್‌ಗೆ ಪ್ಲೇಯಿಂಗ್ 11ನಿಂದ ಕೈಬಿಡಲಾಗಿತ್ತು.

ಸೀನಿಯರ್ಸ್ ಗೆ ಡೊಮೆಸ್ಟಿಕ್ ಕಡ್ಡಾಯಗೊಳಿಸಿದ ಬಿಸಿಸಿಐ!

ಇನ್ನು ಆಸ್ಟ್ರೇಲಿಯಾ ಸಿರೀಸ್​ನಲ್ಲಿ ಇಬ್ಬರ ಫೇಲ್ಯೂರ್ ಬೆನ್ನಲ್ಲೇ ಬಿಸಿಸಿಐ ಒಂದು ಕಟ್ಟುನಿಟ್ಟಿನ ಆದೇಶ ಹೊರಡಿಸುತ್ತೆ. ಅದುವೇ ಭಾರತ ತಂಡದ ಎಲ್ಲರೂ ಡೊಮೆಸ್ಟಿಕ್ ಕ್ರಿಕೆಟ್ ಆಡ್ಬೇಕು ಅನ್ನೋದು. ಹೀಗಾಗಿ ನಿಯಮದಂತೆ ರೋಹಿತ್ ಮತ್ತು ಕೊಹ್ಲಿ ತಮ್ಮ ರಾಜ್ಯ ತಂಡಗಳ ಪರವಾಗಿ ಆಡಿದರು. 2015 ರ ನಂತರ ಮೊದಲ ಬಾರಿಗೆ ರೋಹಿತ್ ಮುಂಬೈ ಪರ ರಣಜಿ ಟ್ರೋಫಿ ಪಂದ್ಯವನ್ನು ಆಡಿದರೆ, ಕೊಹ್ಲಿ ಒಂದು ದಶಕದಲ್ಲಿ ಮೊದಲ ಬಾರಿಗೆ ದೆಹಲಿ ಪರ ರಣಜಿ ಪಂದ್ಯವನ್ನು ಆಡಿದರು. ದುರದೃಷ್ಟವಶಾತ್, ಈ ಜೋಡಿ ಇಲ್ಲೂ ಉತ್ತಮ ಪ್ರದರ್ಶನ ನೀಡೋಕೆ ಸಾಧ್ಯವಾಗ್ಲಿಲ್ಲ.

ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ರೂ ಟೆಸ್ಟ್ ನಿವೃತ್ತಿ!

ಕ್ರಿಕೆಟ್ ವಲಯದಲ್ಲಿ ರೋಕೋ ಭವಿಷ್ಯದ ಬಗ್ಗೆ ಚರ್ಚೆಗಳು ಶುರುವಾಗಿದ್ರೂ ಕಳೆದ ಮಾರ್ಚ್‌ನಲ್ಲಿ ರೋಹಿತ್ ಶರ್ಮಾ ಭಾರತವನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ರು. ಕ್ಯಾಪ್ಟನ್ ಆಗಿ ಅಜೇಯವಾಗಿ ಟ್ರೋಫಿ ಗೆಲ್ಲಿಸಿದ್ರು. ಈ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಕೊಹ್ಲಿ ಶತಕ ಬಾರಿಸಿದರೆ, ಫೈನಲ್‌ನಲ್ಲಿ ರೋಹಿತ್ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದರು. ಅಲ್ಲಿಗೆ ಇವ್ರಿಬ್ಬರ ವಿರುದ್ಧದ ಚರ್ಚೆಗಳಿಗೆ ಬ್ರೇಕ್ ಬಿದ್ದಿತ್ತು. ಆ ನಂತ್ರ ಐಪಿಎಲ್ ಸ್ಟಾರ್ಟ್ ಆಯ್ತು. ಬಟ್ ಐಪಿಎಲ್ ನಡುವೆಯೇ ಅಂದ್ರೆ 2025ರ ಮೇ 7ರಂದು ರೋಹಿತ್ ಟೆಸ್ಟ್ ಕ್ರಿಕೆಟ್‌ನಿಂದ ದಿಢೀರ್ ನಿವೃತ್ತಿ ಘೋಷಿಸಿದ್ರು. ಇದಾದ ಐದೇ ದಿನಗಳಲ್ಲಿ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್ ನಿವೃತ್ತಿ ಅನೌನ್ಸ್ ಮಾಡಿದ್ರು. ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಗೆ ಕೇವಲ ಒಂದು ತಿಂಗಳ ಮೊದಲು, ಭಾರತದ ಇಬ್ಬರು ಅತ್ಯಂತ ಅನುಭವಿ ಆಟಗಾರರು ರೆಡ್-ಬಾಲ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.

2027ರ ವಿಶ್ವಕಪ್ ಬಗ್ಗೆ ಇನ್ನೂ ಅತಂತ್ರ ಭವಿಷ್ಯ!

ಇನ್ನು 2027ರ ವಿಶ್ವಕಪ್ ಗೆಲ್ಲಲೇಬೇಕು ಅನ್ನೋದು ಈ ಇಬ್ಬರು ಆಟಗಾರರ ಆಸೆ. ಆದ್ರೆ ಈ ಜೋಡಿ ಅಲ್ಲಿವರೆಗೂ ತಂಡದಲ್ಲಿ ಆಡ್ತಾರಾ ಅನ್ನೋ ಬಗ್ಗೆ ಫೈನಲ್ ಆಗಿಲ್ಲ.  2023 ರಲ್ಲಿ ತವರಿನಲ್ಲೇ ನಡೆದ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ತಲುಪಿದ್ರೂ ಪ್ರಶಸ್ತಿ ಗೆಲ್ಲೋಕೆ ಆಗಿರಲಿಲ್ಲ. ಫೈನಲ್​ನಲ್ಲಿ ಸೋಲು ಕಂಡಿದ್ರು. ಹೀಗಾಗಿ ಮುಂದಿನ ವಿಶ್ವಕಪ್ ಗೆದ್ದು ನಿವೃತ್ತಿ ಘೋಷಿಸೋ ಪ್ಲ್ಯಾನ್​ನಲ್ಲಿದ್ದಾರೆ. ಆದ್ರೆ ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್, 2027 ರ ವಿಶ್ವಕಪ್‌ನಲ್ಲಿ ಕೊಹ್ಲಿ ಮತ್ತು ರೋಹಿತ್‌ಗೆ ಸ್ಥಾನ ನೀಡುವ ಭರವಸೆ ನೀಡಲು ನಿರಾಕರಿಸಿದ್ದಾರೆ. ಎರಡು ವರ್ಷಗಳ ನಂತರ, ಪರಿಸ್ಥಿತಿ ಹೇಗಿರುತ್ತದೆ ಎಂದು ಹೇಳುವುದು ಕಷ್ಟ. ಯಾರಿಗೆ ಗೊತ್ತು, ಆ ಸ್ಥಾನವನ್ನು ಪಡೆಯುವ ಯುವ ಆಟಗಾರರು ಇರಬಹುದು. ನೀವು ಅವರನ್ನು ಪ್ರತಿ ಪಂದ್ಯಕ್ಕೂ ಅಭ್ಯಾಸಕ್ಕೆ ಒಳಪಡಿಸುವುದಿಲ್ಲ, ಆದರೆ 2027 ಬಹಳ ಮುಂದಿದೆ ಎಂದು ಕಳೆದ ಅಕ್ಟೋಬರ್‌ನಲ್ಲಿ ಅಗರ್ಕರ್ ಹೇಳಿದ್ರು.

ಏಕದಿನ ನಾಯಕತ್ವ ಕಳೆದುಕೊಂಡ ರೋಹಿತ್ ಶರ್ಮಾ!

ಟೀಂ ಇಂಡಿಯಾದಲ್ಲಿ ಆದ ಮತ್ತೊಂದು ಮೇಜರ್ ಬದಲಾವಣೆ ಇದೇ ನೋಡಿ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಭವಿಷ್ಯದ ಮೇಲೆ ಮತ್ತಷ್ಟು ಅನುಮಾನ ಮೂಡಿಸಿದೆ. ರೋಹಿತ್ ಏಕದಿನ ನಾಯಕತ್ವವನ್ನು ಕಳೆದುಕೊಂಡ್ರು. ನಂಬರ್ಸ್ ಪ್ರಕಾರ ನೋಡೋದಾದ್ರೆ ಭಾರತದ ಅತ್ಯಂತ ಯಶಸ್ವಿ ನಾಯಕನಾಗಿದ್ದರೂ ಸಹ ಅವ್ರಿಗಿಂತ 12 ವರ್ಷ ಕಿರಿಯರಾದ ಶುಭಮನ್ ಗಿಲ್ ಅವರನ್ನು ಏಕದಿನ ಮಾದರಿಗೆ ನಾಯಕನಾಗಿ ಘೋಷಿಸಲಾಯ್ತು. ಆಸ್ಟ್ರೇಲಿಯಾ ಸರಣಿ ಮೂಲಕ ರೋಹಿತ್ ನಾಯಕತ್ವದಿಂದ ಕೆಳಗಿಳಿದ್ರು. ಬಟ್ ಆಟಗಾರನಾಗಿ ಕಂಟಿನ್ಯೂ ಮಾಡ್ತಿದ್ದಾರೆ.

ಗಂಭೀರ್ ಮೇಲೆ ಜಿದ್ದು.. ರೋಕೊ ರುದ್ರತಾಂಡವ!

ಯಾವಾಗ ತಂಡದಲ್ಲಿ ಪದೇಪದೆ ಸೆಟ್​ಬ್ಯಾಕ್ ಆಯ್ತೋ ರೋಹಿತ್ ಮತ್ತು ಕೊಹ್ಲಿ ಗಂಭಿರ್ ವಿರುದ್ಧ ರುದ್ರತಾಂಡವ ಶುರು ಮಾಡಿದ್ದಾರೆ. ಅದೂ ಕೂಡ ಮೈದಾನದಲ್ಲಿ. ಇತ್ತೀಚಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ನಂತರದ ನಾಲ್ಕು ಏಕದಿನ ಪಂದ್ಯಗಳಲ್ಲಿ ರೋಹಿತ್ ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. ಐಸಿಸಿ ಪುರುಷರ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ. 1 ಸ್ಥಾನವನ್ನು ಗಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಎರಡು ಬಾರಿ ಶೂನ್ಯಕ್ಕೆ ಔಟಾದರೂ ಕೊಹ್ಲಿ ಆ ನಂತ್ರ ಗ್ರೇಟ್ ಕಂ ಬ್ಯಾಕ್ ಮಾಡಿದ್ರು. ಒಂದು ಅರ್ಧಶತಕ ಮತ್ತು ಬ್ಯಾಕ್ ಟು ಬ್ಯಾಕ್ ಎರಡು ಶತಕ ಬಾರಿಸಿದ್ದಾರೆ. ಒಂದ್ಕಡೆ ರೋಕೋ ಅಬ್ಬರಿಸ್ತಿದ್ರೆ ಅತ್ತ ಬಿಸಿಸಿಐ ಮಾತ್ರ ಥಂಡಾ ಹೊಡೆದಿದೆ.

ರೋಹಿತ್ ಕೊಹ್ಲಿ ಆರ್ಭಟ.. ಬಿಸಿಸಿಐಗೆ ಸಂಕಟ!

ಟೀಂ ಇಂಡಿಯಾದ ಸ್ಟಾರ್ ಜೋಡಿ ಅಬ್ಬರಿಸೋಕೆ ಶುರು ಮಾಡಿದ್ರೆ ಭಾರತೀಯ ತಂಡದ ಆಡಳಿತ ಮಂಡಳಿಯಲ್ಲಿ ಮಾತ್ರ ಬಿಸಿಯೇರಿದೆ. ಗಂಭೀರ್ ಮತ್ತು ಕೊಹ್ಲಿ, ರೋಹಿತ್ ನಡುವಿನ ಸಂಬಂಧ ಉತ್ತಮವಾಗಿಲ್ಲ ಅನ್ನೋ ಸುದ್ದಿ ಹೊರಬೀಳ್ತಿದೆ. ಹೀಗಾಗಿ ಬಿಸಿಸಿಐನಿಂದ ದೇಶೀಯ ಕ್ರಿಕೆಟ್ ಆಡುವಂತೆ ಇಬ್ಬರ ಮೇಲೆ ಒತ್ತಡ ಹೆಚ್ಚುತ್ತಲೇ ಇದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ರೋಹಿತ್ ಒಪ್ಪಿಗೆ ಸೂಚಿಸಿದ್ದರೂ, ಕೊಹ್ಲಿ ಕ್ಲಾರಿಟಿ ಕೊಟ್ಟಿಲ್ಲ. ಹೀಗಾಗಿ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ಈ ಜೋಡಿಯ ನಡುವಿನ ಸಂಬಂಧವೂ ಹದಗೆಟ್ಟಂತೆ ಕಾಣುತ್ತಿದೆ. ಹೀಗೆ ಗಂಭಿರ್ ಮತ್ತು ಅಗರ್ಕರ್ ರೋಕೋ ಜೋಡಿಯನ್ನ ತಂಡದಿಂದ ಹೊರಗಾಕೋಕೆ ನೋಡ್ತಿದ್ರೆ ಅತ್ತ ಇದೇ ಜೋಡಿ ಬಿಸಿಸಿಐ ಬಾಯಿ ಮುಚ್ಚುವಂತೆ ಪ್ರದರ್ಶನ ನೀಡ್ತಿದ್ದಾರೆ.

Shantha Kumari