ವಿಶ್ವಕಪ್ ಫೈನಲ್‌ಗೇರಿದ ಟೀಂ ಇಂಡಿಯಾ – ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಮುಖಭಂಗ

ವಿಶ್ವಕಪ್ ಫೈನಲ್‌ಗೇರಿದ ಟೀಂ ಇಂಡಿಯಾ –  ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಮುಖಭಂಗ

2025 ರ ಮಹಿಳಾ ವಿಶ್ವಕಪ್ ಸೆಮಿಫೈನಲ್​ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸೋಲಿಸಿ ಟೀಮ್ ಇಂಡಿಯಾ ವನಿತೆಯರು ಫೈನಲ್‌ಗೆ ಎಂಟ್ರಿಕೊಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಪ್ರಶಸ್ತಿಗಾಗಿ ಭಾರತದ ಮಹಿಳಾ ಪಡೆ ಕಾದಾಟ ನಡೆಸಲಿದೆ.

ಇದನ್ನೂ ಓದಿ:ಮಳೆಗೆ ಕೊಚ್ಚಿಹೋಯ್ತು ಮ್ಯಾಚ್ – ಪಂದ್ಯ ರದ್ದಾದ್ರೂ ಭಾರತಕ್ಕೆ ಪ್ಲಸ್

ಜೆಮಿಮಾ ರೋಡ್ರಿಗಸ್ ಅವರ ಅಜೇಯ ಶತಕ ಹಾಗೂ ನಾಯಕಿ ಹರ್ಮನ್​ಪ್ರೀತ್ ಕೌರ್ ಅವರ ಅರ್ಧಶತಕದ ನೆರವಿನಿಂದ ಭಾರತ ಮಹಿಳಾ ತಂಡ 2025 ರ ಮಹಿಳಾ ವಿಶ್ವಕಪ್ ಫೈನಲ್‌ಗೇರಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ, ಭಾರತಕ್ಕೆ 339 ರನ್‌ಗಳ ಬೃಹತ್ ಸವಾಲನ್ನು ಒಡ್ಡಿತ್ತು. ಗುರಿ ದೊಡ್ಡದಿದ್ದರಿಂದ ಹರ್ಮನ್ ಪಡೆ ಈ ಗುರಿಯನ್ನು ತಲುಪಲು ಸಾಧ್ಯವೇ ಎಂಬ ಅನುಮಾನವಿತ್ತು. ಬಲಿಷ್ಠ ಆಸ್ಟ್ರೇಲಿಯಾದೆದುರು ಸ್ಮರಣೀಯ ಪ್ರದರ್ಶನ ನೀಡಿದ ಭಾರತೀಯ ಮಹಿಳಾ ತಂಡವು ಇತಿಹಾಸ ಸೃಷ್ಟಿಸಿದೆ. ಈ ಗೆಲುವಿನೊಂದಿಗೆ ಗುಂಪು ಹಂತದಲ್ಲಿನ ಸೋಲಿಗೆ ಸೇಡು ಕೂಡ ತೀರಿಸಿಕೊಂಡಿದೆ. ಈಗ ವಿಶ್ವಕಪ್ ಟ್ರೋಫಿಗಾಗಿ ಟೀಂ ಇಂಡಿಯಾ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

338 ರನ್ ಕಲೆಹಾಕಿದ ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರ್ತಿ ಲಿಚ್‌ಫೀಲ್ಡ್ ಶತಕ ಬಾರಿಸಿದರು. ಇದರ ಜೊತೆಗೆ ಪೆರ್ರಿ ಅವರೊಂದಿಗೆ ಎರಡನೇ ವಿಕೆಟ್‌ಗೆ 155 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಅಂತಿಮವಾಗಿ ಲಿಚ್‌ಫೀಲ್ಡ್ 119 ರನ್‌ಗಳಿಗೆ ಔಟಾದರು. ಆ ಬಳಿಕ ಬಂದ ಬೆತ್ ಮೂನಿ (24) ಮತ್ತು ಅನ್ನಾಬೆಲ್ ಸದರ್ಲ್ಯಾಂಡ್ (3) ಬೇಗನೇ ಪೆವಿಲಿಯನ್ ಸೇರಿಕೊಂಡರು. ಎಲ್ಲಿಸ್ ಪೆರ್ರಿ ಕೂಡ77 ರನ್‌ಗಳಿಗೆ ಔಟಾದರು. ನಂತರ ಒಬ್ಬೊಬ್ಬರೇ ಪೆವಿಲಿಯನ್ ಸೇರಿದ್ದರಿಂದ ಆಸ್ಟ್ರೇಲಿಯಾ ಪೂರ್ಣ 50 ಓವರ್‌ಗಳನ್ನು ಆಡಲು ಸಾಧ್ಯವಾಗಲಿಲ್ಲ. ಭಾರತ ಪರ ಶ್ರೀ ಚರಣ್ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಪಡೆದರೆ, ಅಮನ್‌ಜೋತ್ ಕೌರ್, ಕ್ರಾಂತಿ ಗೌರ್ ಮತ್ತು ರಾಧಾ ಯಾದವ್ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಿಬ್ಬರೂ ಬಹುಬೇಗನೇ ಪೆವಿಲಿಯನ್ ಸೇರಿಕೊಂಡರು. ನಂತರ ಇನ್ನಿಂಗ್ಸ್ ಕಟ್ಟಿದ ಜೆಮಿಮಾ ಹಾಗೂ ಹರ್ಮನ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ 167 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಜೆಮಿಮಾ 134 ಎಸೆತಗಳಲ್ಲಿ 14 ಬೌಂಡರಿಗಳ ಸಹಾಯದಿಂದ 127 ರನ್ ಗಳಿಸಿ ಅಜೇಯರಾಗಿ ಉಳಿದರೆ, ಹರ್ಮನ್​ಪ್ರೀತ್ 88 ಎಸೆತಗಳಲ್ಲಿ 10 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 89 ರನ್ ಬಾರಿಸಿದರು. ಇದರ ಪರಿಣಾಮವಾಗಿ ಟೀಂ ಇಂಡಿಯಾ 48.3 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು 341 ರನ್ ಕಲೆಹಾಕುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು.

ಭಾರತ ತಂಡ ಏಕದಿನ ವಿಶ್ವಕಪ್‌ನ ಫೈನಲ್ ತಲುಪುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ 2005 ಮತ್ತು 2017 ರಲ್ಲಿ ತಂಡವು ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದುಕೊಂಡಿತ್ತು. ಭಾರತ ಇದುವರೆಗೆ ವಿಶ್ವಕಪ್ ಗೆದ್ದಿಲ್ಲ.  ಈ ಬಾರಿಯಾದರೂ ಭಾರತಕ್ಕೆ ವಿಶ್ವಕಪ್ ಸಿಗುತ್ತಾ ಅನ್ನೋ ನಿರೀಕ್ಷೆ ಗರಿಗೆದರಿದೆ.

Sulekha