ಟೀಂ ಇಂಡಿಯಾ ಪ್ರಾಕ್ಟೀಸ್ ಜೆರ್ಸಿ ಬಣ್ಣ ಕೇಸರಿ! – ಕೇಂದ್ರದ ವಿರುದ್ಧ ಗುಡುಗಿದ ದೀದಿ

ಟೀಂ ಇಂಡಿಯಾ ಪ್ರಾಕ್ಟೀಸ್ ಜೆರ್ಸಿ ಬಣ್ಣ ಕೇಸರಿ! – ಕೇಂದ್ರದ ವಿರುದ್ಧ ಗುಡುಗಿದ ದೀದಿ

ಐಸಿಸಿ ಕ್ರಿಕೆಟ್​ ವಿಶ್ವಕಪ್ ಗೆಲ್ಲಲು ಭಾರತ ತಂಡದ ಕನಸಿಗೆ ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​​ ಮೈದಾನದಲ್ಲಿ 2023ರ ಐಸಿಸಿ ವಿಶ್ವಕಪ್‌ ಫೈನಲ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಕಾದಾಡಲಿವೆ. ಟೀಂ ಇಂಡಿಯಾ ಆಟಗಾರರು ಪ್ರ್ಯಾಕ್ಟೀಸ್ ನಲ್ಲಿ ತೊಡಗಿದ್ದಾರೆ. ಇದೀಗ ಟೀಂ ಇಂಡಿಯಾದ ಪ್ರ್ಯಾಕ್ಟೀಸ್ ಜೆರ್ಸಿಯಲ್ಲಿರುವ ಕೇಸರಿ ಬಣ್ಣವನ್ನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರು ಕಟುವಾಗಿ ವಿರೋಧಿಸಿದ್ದಾರೆ.

ಹೌದು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಟೀಂ ಇಂಡಿಯಾದ ಪ್ರ್ಯಾಕ್ಟೀಸ್ ಜೆರ್ಸಿಯಲ್ಲಿ ಇರುವ ಕೇಸರಿ ಬಣ್ಣದ ಕುರಿತು ಕಿಡಿಕಾರಿದ್ದು, ಟೀಂ ಇಂಡಿಯಾದ ಅಭ್ಯಾಸ ಜೆರ್ಸಿಗಳಲ್ಲಿ ಕೇಸರಿ ಬಣ್ಣ ಅಲ್ಲದೇ ಮೆಟ್ರೋ ಸ್ಟೇಷನ್‍ಗಳ ಗೋಡೆಗಳಿಗೂ ಕೇಸರಿ ಬಣ್ಣವನ್ನು ಬಳಿಯಲಾಗುತ್ತಿದೆ. ಈ ಮೂಲಕ ಕೇಂದ್ರ ಸರ್ಕಾರವು ಹಲವು ಸಂಸ್ಥೆಗಳನ್ನು ಕೇಸರೀಕರಣಗೊಳಿಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ರೋಹಿತ್ ಶರ್ಮಾ & ವಿರಾಟ್ ಕೊಹ್ಲಿ ಮಧ್ಯೆ ಬ್ರೋಮ್ಯಾನ್ಸ್ – ಇವರೇ ಟೀಮ್ ಇಂಡಿಯಾದ ಬಲಾಢ್ಯ ಕಂಬಗಳು

ಈ ಹಿಂದೆ ಅವರು ನೀಲಿ ಬಣ್ಣದ ಜೆರ್ಸಿ ಧರಿಸುತ್ತಿದ್ದರು. ಆದರೆ ಇದೀಗ ಬಿಜೆಪಿಯವರು ಇಡೀ ದೇಶಕ್ಕೆ ಕೇಸರಿ ಬಣ್ಣ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಭಾರತೀಯ ಆಟಗಾರರ ಮೇಲೆ ನಮಗೆ ಹೆಮ್ಮೆ, ಅಭಿಮಾನ ಹೊಂದಿದ್ದೇವೆ. ವಿಶ್ವಕಪ್ ನಲ್ಲಿ ಗೆಲ್ಲುತ್ತಾರೆಂದು ನಂಬುತ್ತೇನೆ. ಆದರೆ ನಮ್ಮ ಆಟಗಾರರು ಈಗ ಕೇಸರಿ ಬಣ್ಣದ ಜೆರ್ಸಿ ಹಾಕಿ ಆಡಬೇಕಿದೆ. ಇತ್ತ ಮೆಟ್ರೋ ಸ್ಟೇಷನ್‍ಗಳಿಗೂ ಕೇಸರಿ ಬಳಿಯಲಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಬ್ಯಾನರ್ಜಿ ಅಸಮಾಧಾನ ಹೊರಹಾಕಿದ್ದಾರೆ.

ಭಾರತ ದೇಶವು ಇಲ್ಲಿನ ಜನರಿಗೆ ಸೇರಿದ್ದಾಗಿದೆ ಹೊರತು ಕೇವಲ ಬಿಜೆಪಿಯವರಿಗೆ ಸೇರಿದ್ದಲ್ಲ. ಅಧಿಕಾರ ನಿಂತ ನೀರಲ್ಲ, ಬರುತ್ತದೆ ಹೋಗುತ್ತದೆ. ಆದರೆ ಇಂತಹದ್ದೆಲ್ಲಾ ಯಾವ ಕಾರಣಕ್ಕೂ ಫಲ ನೀಡುವುದಿಲ್ಲ ಎಂದು ದೀದಿ ಗುಡುಗಿದ್ದಾರೆ.

Shwetha M