ಸಿರಾಜ್ ಈಗ ಡಿಎಸ್ಪಿ – ಟೀಮ್ ಇಂಡಿಯಾಗೆ ಹೇಳ್ತಾರಾ ಗುಡ್ ಬೈ?
ಮೊಹಮ್ಮದ್ ಸಿರಾಜ್. ಟೀಂ ಇಂಡಿಯಾದ ವೇಗದ ಬೌಲರ್. ಟಿ-20, ಏಕದಿನ, ಟೆಸ್ಟ್ ಹೀಗೇ ಮೂರೂ ಮಾದರಿಯಲ್ಲೂ ಕೂಡ ಭಾರತ ತಂಡದಲ್ಲಿ ಖಾಯಂ ಸ್ಥಾನ ಪಡೆಯುತ್ತಿರೋ ಪ್ರತಿಭಾವಂತ ಆಟಗಾರ. ಸಣ್ಣದೊಂದು ಗಲ್ಲಿಯಿಂದ ಶುರುವಾದ ಕ್ರಿಕೆಟ್ ಯಾನ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾಖಲೆಗಳನ್ನ ಬರೆಯೋ ಮಟ್ಟಿಗೆ ತಲುಪಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಮೊಹಮ್ಮದ್ ಸಿರಾಜ್ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹುಡುಗ. ಕಿಂಗ್ ವಿರಾಟ್ ಕೊಹ್ಲಿಯ ಅಪ್ಪಟ ಗೆಳೆಯ. ಅದೇ ಸಿರಾಜ್ ಈಗ ಡಿಎಸ್ಪಿಯಾಗಿದ್ದಾರೆ. ತೆಲಂಗಾಣದಲ್ಲಿ ಪೊಲೀಸ್ ಇಲಾಖೆಯ ಉನ್ನದ ಹುದ್ದೆ ಅಲಂಕರಿಸಿದ್ದಾರೆ. ಇದೇ ಹುದ್ದೆಯಿಂದ ಕ್ರೀಡಾಭಿಮಾನಿಗಳಲ್ಲಿ ಒಂದಷ್ಟು ಗೊಂದಲ ಉಂಟಾಗಿದೆ. ಅಷ್ಟಕ್ಕೂ ಸಿರಾಜ್ಗೆ ಪೊಲೀಸ್ ಇಲಾಖೆಯ ಕೆಲಸ ಸಿಕ್ಕಿದ್ದೇಗೆ? ಆ ಹುದ್ದೆಯಿಂದ ಸಿಗೋ ಸೌಲಭ್ಯಗಳೇನು? ಟೀಂ ಇಂಡಿಯಾದಿಂದ ಹೊರ ಬೀಳ್ತಾರಾ? ಸಿರಾಜ್ ರ ಈ ಸಕ್ಸಸ್ ಗೆ ಕೊಹ್ಲಿಯೇ ಕಾರಣ ಆಗಿದ್ದು ಹೇಗೆ ಅನ್ನೋ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ.
ಇದನ್ನೂ ಓದಿ: ನವರಾತ್ರಿ ದಿನವೇ ನಟಿ ಶಿಲ್ಪಾ ಶೆಟ್ಟಿ ದಂಪತಿಗೆ ಬಿಗ್ ರಿಲೀಫ್ – ಇಡಿ ನೋಟಿಸ್ ಗೆ ತಡೆ ನೀಡಿದ ಕೋರ್ಟ್!
ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ತಮ್ಮ ಕರಾರುವಕ್ ದಾಳಿಯಿಂದ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿ ಹಾಕುವ ಪ್ಲೇಯರ್. ಇವರ ಪರ್ಫೆಕ್ಟ್ ಲೈನ್ ಹಾಗೂ ಲೆಂತ್‌ಗಳು ಎದುರಾಳಿ ಬ್ಯಾಟರ್‌ಗಳನ್ನು ಕಾಡುತ್ತವೆ. ಇದೀಗ ಇವರ ಸಾಧನೆಯ ಹಾದಿಯಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದ್ದಾರೆ. ಮೊಹಮ್ಮದ್ ಸಿರಾಜ್ ಅವರಿಗೆ ತೆಲಂಗಾಣ ಪೊಲೀಸ್‌ನಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯನ್ನು ನೀಡಲಾಗಿದೆ. ಸಿರಾಜ್ಗೆ ಈ ಪದವಿಯನ್ನು ನೀಡಿದ್ದರ ಬಗ್ಗೆ ತೆಲಂಗಾಣ ಪೊಲೀಸ್ ಇಲಾಖೆ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದೆ. ಇನ್ಮುಂದೆ ಮೈದಾನದ ಹೊರಗೆ ಸಿರಾಜ್ ಖಡಕ್ ಪೊಲೀಸ್ ಆಫೀಸರ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಡಿಎಸ್ಪಿ ಹುದ್ದೆ ಜೊತೆಗೆ ಜಮೀನು ಮಂಜೂರು!
ಟೀಮ್ ಇಂಡಿಯಾದ ವೇಗದ ಬೌಲರ್ ಸಿರಾಜ್, ಹಲವು ಮಹತ್ವದ ಸನ್ನಿವೇಶಗಳಲ್ಲಿ ಬಿಗುವಿನ ದಾಳಿ ನಡೆಸಿ ಗಮನ ಸೆಳೆದಿದ್ದಾರೆ. 2024ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದಿದ್ದ, ಟಿ20 ವಿಶ್ವಕಪ್ ಚಾಂಪಿಯನ್ ತಂಡದ ಸದಸ್ಯ. ಟಿ20 ವಿಶ್ವಕಪ್ ಚಾಂಪಿಯನ್ ತಂಡದಲ್ಲಿ ಸ್ಥಾನ ಪಡೆದಿದ್ದ ಏಕೈಕ ತೆಲಂಗಾಣ ಆಟಗಾರ ಸಿರಾಜ್. ಇದೇ ಕಾರಣಕ್ಕೆ ತೆಲಂಗಾಣ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಈ ಹುದ್ದೆ ನೀಡಿದೆ. ತೆಲಂಗಾಣ ಪೊಲೀಸ್ ಇಲಾಖೆಯ ನೂತನ ಜವಾಬ್ದಾರಿಯನ್ನು ಸಿರಾಜ್ ಕೂಡ ಒಪ್ಪಿಕೊಂಡಿದ್ದಾರೆ. ಹಾಗಂತ ಈ ಜವಾಬ್ದಾರಿ ಅವರ ಕ್ರಿಕೆಟ್ ಬುದಕಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗೇ ಉದ್ಯೋಗದ ಜೊತೆಗೆ ಹೈದರಾಬಾದ್‌ನಲ್ಲಿ ಮನೆಗಾಗಿ ಜಮೀನು ನೀಡಲಾಗಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಆದೇಶದಂತೆ ಈಗಾಗಲೇ ಸ್ಪೀಡ್ ಸ್ಟಾರ್ ಮೊಹಮ್ಮದ್ ಸಿರಾಜ್ ಗೆ ಜುಬಿಲಿ ಹಿಲ್ಸ್ ನ ನಂ.78 ರಲ್ಲಿ 600 ಸ್ಕ್ವೇರ್ ಯಾರ್ಡ್ ನ ಸೈಟ್ ಅನ್ನು ನೀಡಲಾಗಿದೆ.
ಯಾವಾಗ ಬೇಕಿದ್ದರೂ ಹುದ್ದೆ ಅಲಂಕರಿಸಬಹುದು ಸಿರಾಜ್!
ಸಿರಾಜ್ಗೆ ಸರ್ಕಾರ ಉದ್ಯೋಗ ಸಿಕ್ಕರೂ ಸದ್ಯಕ್ಕಂತು ಟೀಮ್ ಇಂಡಿಯಾವನ್ನು ತೊರೆಯುವ ಸಾಧ್ಯತೆಯಿಲ್ಲ. ಏಕೆಂದರೆ ಸಿರಾಜ್ ಅವರಿಗೆ ನೀಡಲಾಗಿರುವುದು ಗೌರವಾನ್ವಿತ ಹುದ್ದೆ. ಈ ಹುದ್ದೆಯನ್ನು ಅವರು ಯಾವಾಗ ಬೇಕಿದ್ದರೂ ಅಲಂಕರಿಸಬಹುದು. ಅಂದರೆ ಟೀಮ್ ಇಂಡಿಯಾದಿಂದ ನಿವೃತ್ತರಾದ ಬಳಿಕ ಅವರು ಡಿಎಸ್ಪಿ ಆಗಿ ಕಾರ್ಯ ನಿರ್ವಹಿಸಬಹುದು. ಹಾಗಾಗಿ ಸಿರಾಜ್ ಸದ್ಯಕ್ಕಂತು ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮುಂದುವರೆಯಲಿದ್ದಾರೆ. ಇನ್ನು ಕ್ರಿಕೆಟ್ ನಿವೃತ್ತಿಯ ಬಳಿಕ ಅವರು ಡಿಎಸ್ಪಿ ಹುದ್ದೆಯನ್ನು ಅಲಂಕರಿಸುವ ಮುನ್ನ 2 ವರ್ಷಗಳ ಪೊಲೀಸ್ ಟ್ರೈನಿಂಗ್ ಕೂಡ ಮುಗಿಸಬೇಕು. ಇದಾದ ಬಳಿಕವಷ್ಟೇ ಅವರು ಅಧಿಕೃತವಾಗಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರವ ಹಿಸಿಕೊಳ್ಳಬಹುದಾಗಿದೆ.
ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದ ವೇಗದ ಬೌಲರ್!
ಕ್ರಿಕೆಟ್ ಆಟದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವುದು ಪ್ರತಿಯೊಬ್ಬ ಬೌಲರ್‌ನ ಕನಸಾಗಿರುತ್ತದೆ. ಆದರೆ ಇಲ್ಲಿಯವರೆಗೆ ಇತಿಹಾಸದಲ್ಲಿ ಕೆಲವೇ ಕೆಲವು ಬೌಲರ್‌ಗಳು ಮಾತ್ರ ಈ ಸಾಧನೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಲ್ಲಿ ಒಬ್ಬರು ಮೊಹಮ್ಮದ್ ಸಿರಾಜ್. 2023ರ ಏಷ್ಯಾಕಪ್‌ನಲ್ಲಿ ಸಿರಾಜ್ ಶ್ರೀಲಂಕಾ ತಂಡದ ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು. ಕಿಲ್ಲಿಂಗ್ ಬೌಲಿಂಗ್ ಅಬ್ಬರಕ್ಕೆ ಶ್ರೀಲಂಕಾ ಬ್ಯಾಟ್ಸ್‌ಮನ್ಸ್ ಅಳುವುದೊಂದೇ ಬಾಕಿ ಎಂಬಂತಿತ್ತು. ಅಂದು ಸಿರಾಜ್ 7 ಓವರ್‌ಗಳಲ್ಲಿ 21 ರನ್ ನೀಡಿ 6 ವಿಕೆಟ್ ಪಡೆದಿದ್ದರು. 6 ವಿಕೆಟ್‌ಗಳ ಸಾಧನೆ ಸಾಮಾನ್ಯ ವಿಷಯವಲ್ಲ. ಆದರೆ ಅದಕ್ಕೂ ಮುನ್ನ ಕೇವಲ 16 ಎಸೆತಗಳಲ್ಲಿ 5 ವಿಕೆಟ್ ಪಡೆದಿದ್ದರು ಅನ್ನೋದು ಮತ್ತೊಂದು ಗಮನಾರ್ಹ ವಿಷಯ. ಅದ್ರಲ್ಲೂ ಒಂದೇ ಓವರ್‌ನಲ್ಲಿ 4 ವಿಕೆಟ್ ಪಡೆದು ಸಂಚಲನ ಮೂಡಿಸಿದ್ದರು.
ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಆಗಿರುವ ಸಿರಾಜ್, ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ದೊಡ್ಡ ಎತ್ತರಕ್ಕೆ ಬೆಳೆದ ಆಟಗಾರ. ಆರಂಭದಲ್ಲಿ ದೇಶೀಯ ಟೂರ್ನಿಯಲ್ಲಿ ಅಬ್ಬರಿಸಿದ್ದ ಸಿರಾಜ್, ನಂತರ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಟೀಮ್ ಇಂಡಿಯಾದಲ್ಲಿ ಆಡುವ ಸ್ಥಾನ ಪಡೆದರು. ಟೀಂ ಇಂಡಿಯಾದಲ್ಲೂ ಕೂಡ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಟೀಂ ಇಂಡಿಯಾ ಪರ ಸಿರಾಜ್ 29 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 78 ವಿಕೆಟ್‌ಗಳು ಕಬಳಿಸಿದ್ದಾರೆ. ಇದರಲ್ಲಿ 15 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಬಳಿಸಿರುವುದು ಸಿರಾಜ್ ಅವರ ಶ್ರೇಷ್ಠ ಸಾಧನೆ ಆಗಿದೆ. ಇನ್ನು ಟೀಮ್ ಇಂಡಿಯಾ ಪರ 44 ಏಕದಿನ ಪಂದ್ಯಗಳಲ್ಲಿ 71 ಹಾಗೂ 16 ಟಿ20 ಪಂದ್ಯಗಳಲ್ಲಿ 14 ವಿಕೆಟ್ ಉರುಳಿಸಿದ್ದಾರೆ. ಸಾಮಾನ್ಯ ಆಟೋ ಚಾಲಕನ ಮಗನಾಗಿ ಕ್ರಿಕೆಟ್ ಜೀವನ ಆರಂಭಿಸಿದ ಸಿರಾಜ್ ತಮ್ಮ ಅಸಾಧಾರಣ ಪ್ರತಿಭೆಯಿಂದಲೇ ಭಾರತ ತಂಡ ಸೇರಿ ಈಗ ಪ್ರಮುಖ ವೇಗಿ ಎನಿಸಿಕೊಂಡಿದ್ದಾರೆ. 2024ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿರುವ ಮೊಹಮ್ಮದ್ ಸಿರಾಜ್ಗೆ ಬಿಸಿಸಿಐ ಮೂಲಕ ₹5 ಕೋಟಿ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಆರ್ಸಿಬಿ ಪರವಾಗಿ ಆಡೋ ಸಿರಾಜ್ಗೆ ಒಂದು ಸೀಸನ್‌ಗೆ 7 ಕೋಟಿ ಸಂಭಾವನೆ ನೀಡಲಾಗುತ್ತದೆ. ಸಿರಾಜ್ ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಎ ದರ್ಜೆಯಲ್ಲಿದ್ದು, ವಾರ್ಷಿಕವಾಗಿ 5 ಕೋಟಿ ರೂ. ಪಡೆಯುತ್ತಿದ್ದಾರೆ. ಇದೀಗ ಪೊಲೀಸ್ ಅಧಿಕಾರಿ ಆಗಿದ್ದು, ತಿಂಗಳಿಗೆ 1,37,050 ರೂಪಾಯಿ ಇರಲಿದೆ.
ಬಟ್ ಇಲ್ಲಿ ಮೊಹಮ್ಮದ್ ಸಿರಾಜ್ರ ಈ ಸಾಧನೆ ಹಿಂದೆ ಇರೋ ಬಹುದೊಡ್ಡ ಶಕ್ತಿ ಕಿಂಗ್ ವಿರಾಟ್ ಕೊಹ್ಲಿ ಅನ್ನೋದನ್ನ ನಾವಿಲ್ಲಿ ಹೇಳಲೇಬೇಕು. ಖುದ್ದು ಸಿರಾಜ್ ಕೂಡ ಇದನ್ನ ಎಷ್ಟೋ ಸಲ ಹೇಳಿಕೊಂಡಿದ್ದಾರೆ. ಆರ್ಸಿಬಿಯಲ್ಲಿ ಸಿರಾಜ್ಗೆ ಅಣ್ಣನಾಗಿ ನಿಂತ ಕೊಹ್ಲಿ ಪ್ರತೀ ಹಂತದಲ್ಲೂ ಕೂಡ ಜೊತೆ ನಿಲ್ಲುತ್ತಿದ್ರು. ಟೀಂ ಇಂಡಿಯಾದಲ್ಲಿ ಚಾನ್ಸ್ ಕೊಡಿಸುವಲ್ಲೂ ಮಹತ್ವದ ಪಾತ್ರ ವಹಿಸಿದ್ದಾರೆ. ಇದೇ ಕಾರಣಕ್ಕೆ ಹಿಂದೊಮ್ಮೆ ಸಿರಾಜ್, ನನ್ನ ವೃತ್ತಿ ಜೀವನದ ಯಶಸ್ಸಿಗೆ ವಿರಾಟ್ ಕೊಹ್ಲಿಯೇ ಕಾರಣ ಎಂದಿದ್ರು. ಒಟ್ನಲ್ಲಿ ಕಳೆದ ಬಾಂಗ್ಲಾ ಟೆಸ್ಟ್ ಸರಣಿಯಲ್ಲಿ ವೇಗದ ವಿಭಾಗವನ್ನು ಮುನ್ನಡೆಸಿದ್ದ ಮೊಹಮ್ಮದ್ ಸಿರಾಜ್ 4 ವಿಕೆಟ್ ಪಡೆದು ಸರಣಿಯನ್ನು 2-0 ಯಿಂದ ಕ್ಲೀನ್ ಸ್ವೀಪ್ ಸಾಧಿಸಲು ನೆರವಾಗಿದ್ದರು. ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ20-ಐ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಸಿರಾಜ್, ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದ್ರ ನಡುವೆ ತೆಲಂಗಾಣ ಸರ್ಕಾರದ ದೊಡ್ಡ ಗಿಫ್ಟ್ ನೀಡಿದೆ. ಸಿರಾಜ್ರ ಈ ಸಕ್ಸಸ್ಫುಲ್ ಜರ್ನಿ ಹೀಗೇ ಕಂಟಿನ್ಯೂ ಆಗಲಿ ಅನ್ನೋದೇ ಅಭಿಮಾನಿಗಳ ಆಶಯ.