T-20, ODI, Test.. ಭಾರತ ಬ್ಯುಸಿ – ಮೇವರೆಗೂ ಟೀಂ ಇಂಡಿಯಾಗಿಲ್ಲ ರೆಸ್ಟ್
6 ಸರಣಿ, ICC ಟೂರ್ನಿ.. ಸವಾಲುಗಳೆಷ್ಟು?

T-20, ODI, Test.. ಭಾರತ ಬ್ಯುಸಿ – ಮೇವರೆಗೂ ಟೀಂ ಇಂಡಿಯಾಗಿಲ್ಲ ರೆಸ್ಟ್6 ಸರಣಿ, ICC ಟೂರ್ನಿ.. ಸವಾಲುಗಳೆಷ್ಟು?

ಐಪಿಎಲ್, ಟಿ-20 ವರ್ಲ್ಡ್​ಕಪ್, ಜಿಂಬಾಬ್ವೆ ಸಿರೀಸ್, ಶ್ರೀಲಂಕಾ ಪ್ರವಾಸ.. ಹೀಗೆ ಕಳೆದ ಐದಾರು ತಿಂಗಳಿಂದ ರೆಸ್ಟ್​​ಲೆಸ್ ಆಗಿದ್ದ ಟೀಂ ಇಂಡಿಯಾ ಬಾಯ್ಸ್ ಈಗ ಕಂಪ್ಲೀಟ್ ರಿಲ್ಯಾಕ್ಸ್ ಮೋಡ್​ಗೆ ಜಾರಿದ್ದಾರೆ. ಲಂಕಾ ವಿರುದ್ಧದ ಸರಣಿ ಬಳಿಕ ಮುಂದಿನ ಸರಣಿಗೆ ಲಾಂಗ್ ಗ್ಯಾಪ್ ಸಿಕ್ಕಿದೆ. ಸೋಲಿನ ಆತ್ಮಾವಲೋಕನ ಹಾಗೇ ತಂಡದಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳ ಬಗ್ಗೆ ಆಟಗಾರರು ಹಾಗೇ ಟೀಂ ಮ್ಯಾನೇಜ್​ಮೆಂಟ್​ಗೆ ಸುದೀರ್ಘ ಸಮಯವೂ ಸಿಕ್ಕಿದೆ. ಅಷ್ಟಕ್ಕೂ ಭಾರತದ ಮುಂದಿನ ಪಂದ್ಯ ಯಾರ ವಿರುದ್ಧ.. ಎಲ್ಲಿ? ಮುಂದಿನ ಐಪಿಎಲ್​ವರೆಗೆ ಯಾವೆಲ್ಲಾ ಸರಣಿಗಳನ್ನ ಆಡಲಿದೆ? ಟೀ ಇಂಡಿಯಾ ಶೆಡ್ಯೂಲ್ ಬಗೆಗಿನ ಇಂಟ್ರೆಸ್ಟಿಂಗ್  ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಿಗ್‌ಬಾಸ್‌ ಕನ್ನಡದಿಂದ ಕಿಚ್ಚ ಔಟ್‌? – ಸುದೀಪ್‌ ಸ್ಥಾನಕ್ಕೆ ಇಬ್ಬರಿಗೆ ಮಣೆ?

ಶ್ರೀಲಂಕಾ ಪ್ರವಾಸ ಟೀಂ ಇಂಡಿಯಾಗೆ ದೊಡ್ಡ ಆಘಾತ ನೀಡಿದೆ. ಸುಧೀರ್ಘ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದೆ. ಟಿ-20 ವಿಶ್ವಕಪ್​ನಿಂದ ಹಿಡಿದು ಲಂಕಾ ವಿರುದ್ಧದ ಟಿ-20 ಸಿರೀಸ್​ವರೆಗೂ ಸೋಲಿಲ್ಲದೆ ನುಗ್ಗಿದ್ದ ಭಾರತ ಏಕದಿನ ಸರಣಿಯಲ್ಲಿ ಮಕಾಡೆ ಮಲಗಿತ್ತು. ಒಂದೂ ಪಂದ್ಯವನ್ನೂ ಗೆಲ್ಲೋಕೆ ಆಗದೆ ಅತ್ಯಂತ ಹೀನಾಯವಾಗಿ ಸೋತು ಸುಣ್ಣವಾಗಿದ್ರು. ಸಿಂಹಳೀಯ ಸ್ಪಿನ್ನರ್​​ಗಳು ಬಾಲ್​ಗಳನ್ನೇ ಬಾಣದಂತೆ ಪ್ರಯೋಗಿಸ್ತಿದ್ರೆ ಭಾರತೀಯ ಬ್ಯಾಟರ್ಸ್ ಒಬ್ಬರ ಹಿಂದೆ ಒಬ್ಬರಂತೆ ಬೇಟೆಯಾಗಿದ್ರು. ಕಳಪೆ ಪ್ರದರ್ಶನದ ಮೂಲಕ ಕಂಗೆಟ್ಟಿರೋ ತಂಡಕ್ಕೆ ಈಗ ಸಾಲು ಸಾಲು ಸವಾಲುಗಳಿವೆ. ಒಂದರ ಹಿಂದೆ ಒಂದರಂತೆ ಸರಣಿಗಳು ಎದುರಾಗಲಿವೆ. ಅದೆಲ್ಲಕ್ಕಿಂತ ಹೆಚ್ಚಾಗಿ ಇನ್ನು ಆರು ತಿಂಗಲ್ಲೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಕೂಡ ನಡೆಯಲಿದೆ. ಸೋ ಟೀಂ ಇಂಡಿಯಾಗೆ ಮುಂದಿನ ಒಂದೊಂದು ಸರಣಿಗಳೂ ಚಾಲೆಂಜಿಂಗ್ ಆಗಿದ್ದು, ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಸದ್ಯ ಲಂಕಾ ಸರಣಿಯಿಂದ ಭಾರತ ತವರಿಗೆ ಮರಳಿದ್ದು, ಸುದೀರ್ಘ ಒಂದು ತಿಂಗಳ ಕಾಲ ಆಟಗಾರರು ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಬಾಂಗ್ಲಾ ವಿರುದ್ಧದ ಕದನಕ್ಕೆ ರೆಡಿಯಾಗ್ಬೇಕಿದೆ.

ತವರಿನಲ್ಲೇ ಬಾಂಗ್ಲಾ ವಿರುದ್ಧ ಟೆಸ್ಟ್ & ಟಿ-20 ಸರಣಿ!

ವಿಶ್ವ ಕ್ರಿಕೆಟ್‌ನಲ್ಲಿ ಬಲಿಷ್ಠ ಹಾಗೇ ಸಕ್ರಿಯವಾಗಿರುವ ಭಾರತಕ್ಕೆ ತಿಂಗಳುಗಟ್ಟಲೆ ವಿಶ್ರಾಂತಿ ಸಿರೋದು ಕಷ್ಟ. ಆದ್ರೆ ಈ ಬಾರಿ ಲಂಕಾ ವಿರುದ್ಧದ ಸರಣಿ ಬಳಿಕ ಆ ಅವಕಾಶ ಸಿಕ್ಕಿದೆ. ಭಾರತದ ಮುಂದಿನ ಪಂದ್ಯ ಸೆಪ್ಟೆಂಬರ್‌ 19ರಂದು ನಡೆಯಲಿದೆ. ಸುಮಾರು 40 ದಿನಗಳ ವಿಶ್ರಾಂತಿ ಬಳಿಕ ಭಾರತೀಯರು ಮೈದಾನಕ್ಕಿಳಿಯಲಿದ್ದಾರೆ. ತವರಿನಲ್ಲಿ ನಡೆಯುವ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡವು ಪ್ರವಾಸಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಸೆಪ್ಟೆಂಬರ್​ನಲ್ಲಿ ಬಾಂಗ್ಲಾದೇಶ್ ತಂಡವು ಸರಣಿ ಆಡಲು ಭಾರತಕ್ಕೆ ಬರಲಿದೆ. ಈ ವೇಳೆ 2 ಟೆಸ್ಟ್ ಪಂದ್ಯಗಳು ಮತ್ತು 3 ಟಿ20 ಪಂದ್ಯಗಳನ್ನಾಡಲಾಗುತ್ತದೆ. ಸೋ ಈ ಸರಣಿಯ ವೇಳಾಪಟ್ಟಿ ಹೇಗಿದೆ ಅನ್ನೋದನ್ನ ನೋಡೋದಾದ್ರೆ.

ಭಾರತ Vs ಬಾಂಗ್ಲಾ ಸರಣಿ

ಮೊದಲನೇ ಟೆಸ್ಟ್ ಸರಣಿ ಸೆಪ್ಟೆಂಬರ್ 19ರಂದು ಆರಂಭವಾಗಲಿದೆ. ಇದು ಚೆನ್ನೈನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯವು ಸೆಪ್ಟೆಂಬರ್ 27ರಿಂದ ಅಕ್ಟೋಬರ್ 1ರವರೆಗೆ ಕಾನ್ಪುರದಲ್ಲಿ ನಡೆಯಲಿದೆ. ಎರಡೂ ಟೆಸ್ಟ್ ಮ್ಯಾಚ್​ಗಳು ಬೆಳಗ್ಗೆ 9.30ಕ್ಕೆ ಆರಂಭ ಆಗುತ್ತವೆ. ಇನ್ನು ಟೆಸ್ಟ್‌ ಸರಣಿ ಬಳಿಕ ಉಭಯ ತಂಡಗಳು 3 ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿವೆ. ಅಕ್ಟೋಬರ್‌ 6ರಿಂದ ಚುಟುಕು ಸರಣಿ ಆರಂಭವಾಗಲಿದ್ದು, ಮೊದಲ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತೆ. ಎರಡನೇ ಮ್ಯಾಚ್ ಅಕ್ಟೋಬರ್ 9ರಂದು ದೆಹಲಿಯಲ್ಲಿ, ಮೂರನೇ ಪಂದ್ಯ ಹೈದ್ರಾಬಾದ್​ನಲ್ಲಿ ಆಟಲಿದೆ. ಸೋ ಮೂರೂ ಮ್ಯಾಚ್​ಗಳು ಸಂಜೆ 7ಗಂಟೆಗೆ ಆರಂಭ ಆಗಲಿವೆ.

ಬಾಂಗ್ಲಾ ಸರಣಿ ಬೆನ್ನಲ್ಲೇ ನ್ಯೂಜಿಲೆಂಜ್ ಆಗಮನ!

ಬಾಂಗ್ಲಾದೇಶ ಸರಣಿ ಆರಂಭವಾದ ಬಳಿಕ ಭಾರತಕ್ಕೆ ಬ್ರೇಕ್ ಸಿಗಲ್ಲ. ಬಾಂಗ್ಲಾದೇಶದ ಆಟಗಾರರು ಟೆಸ್ಟ್ ಮತ್ತು ಟಿ-20 ಸರಣಿ ಮುಗಿಸಿಕೊಂಡು ತವರಿಗೆ ಮರಳಿದ ಬಳಿಕ ನ್ಯೂಜಿಲೆಂಡ್ ಆಟಗಾರರು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಅಕ್ಟೋಬರ್-ನವೆಂಬರ್‌ನಲ್ಲಿ ಭಾರತ ತಂಡವು ನ್ಯೂಝಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಭಾರತದಲ್ಲೇ ಈ ಸರಣಿ ಕೂಡ ನಡೆಯಲಿದ್ದು, ಟೈಮ್ ಟೇಬಲ್ ಹೀಗಿದೆ.

ಕಿವೀಸ್‌ ವಿರುದ್ಧ ಮೂರು ಟೆಸ್ಟ್‌ ಪಂದ್ಯಗಳು ಅಕ್ಟೋಬರ್‌ 1ರಿಂದ ಆರಂಭವಾಗಲಿದ್ದು ಮೊದಲ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಎರಡನೇ ಪಂದ್ಯ ಪುಣೆ ಹಾಗೂ ಮೂರನೇ ಪಂದ್ಯ ಮುಂಬೈನಲ್ಲಿ ನಿಗದಿಯಾಗಿವೆ.

ಕಿವೀಸ್ ಸರಣಿ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸ

ಟಿ20 ವಿಶ್ವಕಪ್​ನ ಫೈನಲಿಸ್ಟ್​ಗಳಾದ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ನವೆಂಬರ್​ನಲ್ಲಿ ಮತ್ತೆ ಮುಖಾಮುಖಿಯಾಗಲಿದೆ. 4 ಟಿ20 ಪಂದ್ಯಗಳ ಈ ಸರಣಿಗೆ ಸೌತ್ ಆಫ್ರಿಕಾ ಆತಿಥ್ಯವಹಿಸಲಿದೆ.

ಭಾರತ Vs ಸೌತ್ ಆಫ್ರಿಕಾ!

ಕಿವೀಸ್ ಸರಣಿ ಮುಗಿಸಿದ ಬಳಿಕ ಭಾರತವು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ನಾಲ್ಕು ಪಂದ್ಯಗಳ ಟಿ20 ಸರಣಿಯು ನವೆಂಬರ್‌ 08ರಿಂದ 15ರವರೆಗೆ ನಡೆಯಲಿದೆ. ಮೊದಲನೇ ಟಿ-20 ನವೆಂಬರ್ 8 ರಂದು ಡರ್ಬನ್ನಲ್ಲಿ ನಡೆದ್ರೆ 2ನೇ ಟಿ20 ನವೆಂಬರ್ 10ರಂದು ಗ್ಕೆಬರ್ಹಾದಲ್ಲಿ ಆಡಲಿದೆ. ಹಾಗೇ ಮೂರನೇ ಟಿ20  ನವೆಂಬರ್ 13ಕ್ಕೆ ಸೆಂಚುರಿಯನ್ ನಲ್ಲಿ ಹಾಗೇ 4ನೇ ಟಿ20ಗೆ ನವೆಂಬರ್ 15ರಂದು ಜೋಹಾನ್ಸ್‌ಬರ್ಗ್ ಸಾಕ್ಷಿಯಾಗಲಿದೆ.

ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಕೊನೆಯ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಕಾಂಗರೂಗಳ ನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 5 ಟೆಸ್ಟ್ ಪಂದ್ಯಗಳನ್ನಾಡಲಾಗುತ್ತದೆ.

ಭಾರತ Vs ಆಸ್ಟ್ರೇಲಿಯಾ   

ನವೆಂಬರ್ 22ರಿಂದ ಟೆಸ್ಟ್ ಸರಣಿ ಆರಂಭ ಆಗಲಿದ್ದು, ಮೊದಲನೇ ಪಂದ್ಯ ಪರ್ತ್ ನಲ್ಲಿ ನಡೆದ್ರೆ 2ನೇ ಮ್ಯಾಚ್ ಡಿಸೆಂಬರ್ 6ರಂದು ಅಡಿಲೇಡ್, ಮೂರನೇ ಮ್ಯಾಚ್ ಡಿಸೆಂಬರ್ 14ರಂದು ಬ್ರಿಸ್ಬೇನ್, ನಾಲ್ಕನೇ ಪಂದ್ಯ ಡಿಸೆಂಬರ್ 26ಕ್ಕೆ ಮೆಲ್ಬೋರ್ನ್ ಹಾಗೇ ಅಂತಿಮ ಪಂದ್ಯ ಜನವರಿ 3ರಂದು ಸಿಡ್ನಿಯಲ್ಲಿ ನಡೆಯಲಿದೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಟೀಮ್ ಇಂಡಿಯಾ ಹೊಸ ವರ್ಷಕ್ಕೆ ಕಾಲಿಡಲಿದ್ದು, 2025 ರಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಭಾರತದಲ್ಲೇ ನಡೆಯಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 5 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದೆ.

ಭಾರತ Vs ಇಂಗ್ಲೆಂಡ್!  

2025ರ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಒಟ್ಟು 8 ಪಂದ್ಯಗಳನ್ನ ಎದುರಿಸಲಿದೆ. ಮೊದಲ ಟಿ-20 ಪಂದ್ಯ ಜನವರಿ 22ರಂದು ಚೆನ್ನೈನಲ್ಲಿ ನಡೆದ್ರೆ 2ನೇ ಮ್ಯಾಚ್ ಜನವರಿ 25ಕ್ಕೆ ಕೊಲ್ಕತ್ತಾ, ಮೂರನೇ ಟಿ-20 ಜನವರಿ 28ರಂದು ರಾಜ್ ಕೋಟ್ ನಲ್ಲಿ ನಡೆಯಲಿದೆ. 4ನೇ ಟಿ20 ಜನವರಿ 31ಕ್ಕೆ ಪುಣೆಯಲ್ಲಿ ಹಾಗೇ ಕೊನೇ ಪಂದ್ಯವನ್ನ ಫೆಬ್ರವರಿ 2ಕ್ಕೆ ಮುಂಬೈನಲ್ಲಿ ಆಡಲಿದೆ. ಟಿ-20 ಬಳಿಕ 3 ಏಕದಿನ ಪಂದ್ಯಗಳು ನಡೆಯಲಿದ್ದು, ಮೊದಲ ಏಕದಿನ ಪಂದ್ಯ ಫೆಬ್ರವರಿ 6ರಂದು ನಾಗ್ಪುರದಲ್ಲಿ, 2ನೇ ಪಂದ್ಯ ಫೆಬ್ರವರಿ 9ಕ್ಕೆ ಕಟಕ್​ನಲ್ಲಿ ಹಾಗೇ ಮೂರನೇ ಮ್ಯಾಚ್ ಫೆಬ್ರವರಿ 12ರಂದು ಅಹಮದಾಬಾದ್​ನಲ್ಲಿ ನಡೆಯಲಿದೆ.

ಹೀಗೆ ಬಾಂಗ್ಲಾ ಸರಣಿ ಆರಂಭದಿಂದ ಟೀಂ ಇಂಡಿಯಾಗೆ ಬಿಡುವಿಲ್ಲದೆ ಶೆಡ್ಯೂಲ್ ಫಿಕ್ಸ್ ಆಗಿದೆ. ಇಂಗ್ಲೆಂಡ್ ಸರಣಿ ಬಳಿಕ ಫೆಬ್ರವರಿ ಮೂರನೇ ವಾರದಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಶುರುವಾಗಲಿದೆ.  ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಫೆಬ್ರವರಿ ಮತ್ತು ಮಾರ್ಚ್ ಮೊದಲ ವಾರದಲ್ಲಿ ಪಾಕಿಸ್ತಾನದಲ್ಲಿ ಈ ಟೂರ್ನಿ ನಡೆಯಲಿದ್ದು ಭಾರತ ಕೂಡ ಚಾಂಪಿಯನ್ಸ್ ಟ್ರೋಫಿಗಾಗಿ ಸೆಣಸಲಿದೆ. ಆದ್ರೆ ಭಾರತದ ಪಂದ್ಯಗಳು ಎಲ್ಲಿ ನಡೆಯುತ್ತೆ ಅನ್ನೋದು ಇನ್ನೂ ಫೈನಲ್ ಆಗಿಲ್ಲ. ಇನ್ನು ಚಾಂಪಿಯನ್ಸ್ ಟ್ರೋಫಿ ಟೂರ್ನಿ ಬಳಿಕ ಭಾರತದಲ್ಲಿ 18ನೇ ಆವೃತ್ತಿಯ ಐಪಿಎಲ್ ಶುರುವಾಗಲಿದೆ. ಸೋ ಬಾಂಗ್ಲಾ ಸರಣಿಯಿಂದ ಹಿಡಿದು ಐಪಿಎಲ್​ವರೆಗೂ ಟೀಂ ಇಂಡಿಯಾ ಪ್ಲೇಯರ್ಸ್​ಗೆ ನೋ ರೆಸ್ಟ್.

Shwetha M

Leave a Reply

Your email address will not be published. Required fields are marked *