ಎರಡನೇ ಟಿ20 ಪಂದ್ಯ – ಸೌತ್ ಆಫ್ರಿಕಾ ವಿರುದ್ಧ ಸೋತ ಟೀಮ್ ಇಂಡಿಯಾ

ಎರಡನೇ ಟಿ20 ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ದಕ್ಷಿಣ ಆಫ್ರಿಕಾ ತಂಡ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಫ್ರಿಕಾ 1-0 ಮುನ್ನಡೆ ಪಡೆದುಕೊಂಡಿದೆ. ಹೀಗಾಗಿ ಮೂರನೇ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.
ಸೇಂಟ್ ಜಾರ್ಜ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ಔಟಾದರು. ಇದರ ಬೆನ್ನಲ್ಲೇ ವಿಲಿಯಮ್ಸ್ ಎಸೆತದಲ್ಲಿ ಶುಭ್ಮನ್ ಗಿಲ್ ಕೂಡಾ ಸೊನ್ನೆ ಸುತ್ತಿದರು. ನಂತರ ತಿಲಕ್ ವರ್ಮಾ 29 ರನ್ ಬಾರಿಸಿ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಸೂರ್ಯಕುಮಾರ್ ಯಾದವ್ ಹಾಗೂ ರಿಂಕು ಸಿಂಗ್ ಟೀಮ್ ಇಂಡಿಯಾಗೆ ಆಸರೆಯಾಗಿ ನಿಂತರು. ಸೂರ್ಯಕುಮಾರ್ ಯಾದವ್ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ರಿಂಕು ಸಿಂಗ್ 30 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಪೂರೈಸಿದರು. ಟೀಮ್ ಇಂಡಿಯಾ 19.3 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 180 ರನ್ ಗಳಿಸುವಾಗ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಇನ್ನು ಮಳೆ ನಿಂತ ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಓವರ್ ಕಡಿತಗಳೊಂದಿಗೆ ಸೌತ್ ಆಫ್ರಿಕಾ ತಂಡಕ್ಕೆ 15 ಓವರ್‌ಗಳಲ್ಲಿ 152 ರನ್‌ಗಳ ಗುರಿ ನೀಡಲಾಯಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ 13.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 154 ರನ್ ಬಾರಿಸುವ ಮೂಲಕ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ದ್ವಿತೀಯ ಟಿ20 ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ತಂಡದ ಆಟಗಾರರನ್ನು ಬಿಟ್ಟುಕೊಡಲಿಲ್ಲ. ನಮ್ಮ ತಂಡ ನೀಡುತ್ತಿರುವ ಪ್ರದರ್ಶನ ಖುಷಿ ತಂದಿದೆ. ನಮ್ಮ ಮೆಸೇಜ್ ಸ್ಪಷ್ಟವಾಗಿದೆ. ಇಲ್ಲಿ ಬೌಲ್ ಮಾಡಲು ಸ್ವಲ್ಪ ಕಠಿಣವಾಗಿತ್ತು. ಆದರೆ ನಮ್ಮ ಹುಡುಗರು ನಮ್ಮ ಕಂಫರ್ಟ್ ಝೋನ್ನಿಂದ ಹೊರಗಿದ್ದಾರೆ. ಇದು ಸಮಾನ ಸ್ಕೋರ್ ಎಂದು ನಾನು ಭಾವಿಸುತ್ತೇನೆ. ಆದರೆ ಆಫ್ರಿಕಾದವರು ಮೊದಲ 5-6 ಓವರ್ಗಳಲ್ಲಿ ಚೆನ್ನಾಗಿಯೇ ಬ್ಯಾಟಿಂಗ್ ಮಾಡಿದರು ಎಂದು ಸೂರ್ಯಕುಮಾರ್ ಯಾದವ್ ಹೇಳಿದರು. ನಮ್ಮ ಟೀಮ್ ಇಂಡಿಯಾ ಕ್ಯಾಂಪ್ ಯಾವಾಗಲೂ ಸಂತೋಷದಿಂದ ಮತ್ತು ಉಲ್ಲಾಸದಿಂದ ತುಂಬಿರುತ್ತದೆ. ಏಕೆಂದರೆ ಮೈದಾನದಲ್ಲಿ ಏನು ನಡೆದರೂ ಅದನ್ನು ಮೈದಾನದಲ್ಲಿಯೇ ಬಿಟ್ಟುಬಿಡಿ ಎಂದು ನಾನು ಹೇಳಿದ್ದೇನೆ. ಇದೀಗ ನಾವು ಮೂರನೇ T20I ಗಾಗಿ ಎದುರು ನೋಡುತ್ತಿದ್ದೇನೆ ಎಂದು ಯಾದವ್ ಹೇಳಿದ್ದಾರೆ.