ವೈಭವ್ ಸೂರ್ಯವಂಶಿಗೆ ಟೀಮ್ ಇಂಡಿಯಾ ಜೆರ್ಸಿ – ಜೀವನದ ಕನಸು ನನಸು ಮಾಡಿಕೊಂಡ ಬೇಬಿ ಬಾಸ್

ವಂಡರ್ ಕಿಡ್ ವೈಭವ್ ಸೂರ್ಯವಂಶಿ ಕನಸು ನನಸಾಗಿದೆ. ಅದು ಕೂಡಾ ಕೇವಲ 15ನೇ ವಯಸ್ಸಿಗೆ ಟೀಮ್ ಇಂಡಿಯಾ ಜೆರ್ಸಿ ವೈಭವ್ ಸೂರ್ಯವಂಶಿ ಕೈಸೇರಿದೆ.
ಇದನ್ನೂ ಓದಿ:ಲಂಕೆಯನ್ನೇ ಸುಟ್ಟ ಸೂರ್ಯವಂಶಿ – ಭಾರತ ಕೆಣಕಿ ಮಣ್ಣು ಮುಕ್ಕಿದ SL
ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ವೈಭವ್ ಸೂರ್ಯವಂಶಿ ಸಂಭ್ರಮ ಇಮ್ಮಡಿಯಾಗಿದೆ. 15 ವರ್ಷದ ವೈಭವ್ ಸೂರ್ಯವಂಶಿಗೆ ಟೀಮ್ ಇಂಡಿಯಾ ಜೆರ್ಸಿ ಸಿಕ್ಕಿದೆ. ಬಿಸಿಸಿಐ ಈ ಖುಷಿಯ ಕ್ಷಣಗಳನ್ನು ವಿಡಿಯೋ ಮೂಲಕ ಪೋಸ್ಟ್ ಮಾಡಿದೆ. ಅದರಲ್ಲಿ ಟೀಮ್ ಮ್ಯಾನೇಜ್ಮೆಂಟ್ ವೈಭವ್ ಸೂರ್ಯವಂಶಿಗೆ ಭಾರತ ಟಿ20ಐ ತಂಡದ ಜೆರ್ಸಿಯನ್ನು ನೀಡಿದೆ. ಟೀಮ್ ಇಂಡಿಯಾ ಜೆರ್ಸಿ ಸಿಗುತ್ತಿದ್ದಂತೆ ಸೂರ್ಯವಂಶಿ ತುಂಬಾ ಸಂತೋಷದಿಂದ ಕಾಣಿಸಿಕೊಂಡಿದ್ದಾರೆ. ನಾನು ನನ್ನ ಬ್ಯಾಟ್ ಎತ್ತಿಕೊಂಡು ಕ್ರಿಕೆಟ್ ಮೈದಾನಕ್ಕೆ ಅಭ್ಯಾಸ ಮಾಡಲು ಹೋದ ಮೊದಲ ದಿನದಿಂದ ಕಂಡ ಕನಸು ಇಂದು ನನಸಾಗಿದೆ ಎಂದು ಸೂರ್ಯವಂಶಿ ಭಾವುಕರಾಗಿದ್ದಾರೆ. ಇಂದು ಅತ್ಯಂತ ಮುಖ್ಯವಾದ ಹೆಜ್ಜೆ ಪೂರ್ಣಗೊಂಡಿದೆ. ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ಇದೆಲ್ಲವೂ ಕನಸಿನಂತೆ ಭಾಸವಾಗುತ್ತಿದೆ. ಟೀಮ್ ಇಂಡಿಯಾ ಜೆರ್ಸಿಯನ್ನು ನೋಡಿದಾಗ ನನಗೆ ತುಂಬಾ ಸಂತೋಷವಾಯಿತು. ನನಗೆ ನಗು ತಡೆಯಲಾಗಲಿಲ್ಲ. ಕೆಲವೊಮ್ಮೆ ನೀವು ಅಂದುಕೊಂಡದ್ದು ಆಗುವುದಿಲ್ಲ. ಅದು ನಿಜವಾದಾಗ, ನೀವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ನನಗೂ ಇದೇ ರೀತಿಯ ಏನೋ ಆಗಿದೆ ಎಂದು ವೈಭವ್ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಭಾರತದ ಪರ ಯಾವುದೇ ಆಟಗಾರ 15ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಪಂದ್ಯವಾಡಿಲ್ಲ. ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಆಟಗಾರ ಸಚಿನ್ ತೆಂಡೂಲ್ಕರ್. 1989 ರಲ್ಲಿ ಪಾಕಿಸ್ತಾನ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವಾಡಿದಾಗ ಸಚಿನ್ ಅವರ ವಯಸ್ಸು 16 ವರ್ಷ, 205 ದಿನಗಳು. ಭಾರತದ ಪರ ಏಕದಿನ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಕೂಡ ಸಚಿನ್ ತೆಂಡೂಲ್ಕರ್. 1989 ರಲ್ಲಿ ಪಾಕಿಸ್ತಾನ್ ವಿರುದ್ಧ ಚೊಚ್ಚಲ ಒಡಿಐ ಮ್ಯಾಚ್ ಆಡಿದಾಗ ಸಚಿನ್ ತೆಂಡೂಲ್ಕರ್ ಅವರ ವಯಸ್ಸು 16 ವರ್ಷ, 238 ದಿನಗಳು.
15 ವರ್ಷದ ವೈಭವ್ ಸೂರ್ಯವಂಶಿ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಥವಾ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿದರೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ದಾಖಲೆ ನಿರ್ಮಿಸಲಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ 37 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ಬರೆಯಲಿದ್ದಾರೆ.

ನೋಡಿರಿ

