ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಮಾನವ್ ಸುತಾರ್ ಚರಿತ್ರೆ – ಅಫ್ಘಾನಿಸ್ತಾನದ ಮೇಲೆ ಫಾಲೋಆನ್ ಹೇರಿದ ಟೀಮ್ ಇಂಡಿಯಾ

ಟೀಮ್ ಇಂಡಿಯಾದಲ್ಲಿ ಟೆಸ್ಟ್ ಪಂದ್ಯ ಆಡಬೇಕು ಅನ್ನೋದು ಅದೆಷ್ಟೋ ಯುವ ಕ್ರಿಕೆಟಿಗರ ಕನಸು. ಇದೀಗ ಗುಜರಾತ್ ತಂಡದ ಪ್ಲೇಯರ್ ಮಾನವ್ ಸುತಾರ್ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಚರಿತ್ರೆ ಸೃಷ್ಟಿಸಿದ್ದಾರೆ. ಜೊತೆಗೆ ಟೀಮ್ ಇಂಡಿಯಾ ಕೂಡಾ ಅಫ್ಘಾನಿಸ್ತಾನದ ವಿರುದ್ಧ ತನ್ನ ಗೆಲುವು ಖಚಿತಪಡಿಸಿಕೊಂಡಿದೆ.
ಇದನ್ನೂ ಓದಿ:SIXER MACHINE ಸೂರ್ಯವಂಶಿ – ಭಾರತದ ಪರವೂ ಬ್ಯಾಟಿಂಗ್ ವೈಭವ
ಮುಲ್ಲನ್ಪುರ್ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತದ ವಿರುದ್ಧ ಅಫ್ಘಾನಿಸ್ತಾನ ಮೊದಲ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಇದೀಗ ಪ್ರಥಮ ಇನಿಂಗ್ಸ್ನಲ್ಲಿ ಅಫ್ಘಾನಿಸ್ತಾನ್ ತಂಡ ಕೇವಲ 152 ರನ್ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಬ್ಯಾಟಿಂಗ್ ಸೆಲೆಕ್ಟ್ ಮಾಡಿಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (100), ಶುಭ್‌ಮನ್ ಗಿಲ್ (126) ಶತಕ ಬಾರಿಸಿದರೆ, ಸಾಯಿ ಸುದರ್ಶನ್, ವಾಷಿಂಗ್ಟನ್ ಸುಂದರ್ ಹಾಗೂ ರಿಷಭ್ ಪಂತ್ ಅರ್ಧಶತಕ ಸಿಡಿಸಿದ್ದರು. ಈ ಮೂಲಕ ಟೀಮ್ ಇಂಡಿಯಾ 8 ವಿಕೆಟ್ ನಷ್ಟಕ್ಕೆ 564 ರನ್ಗಳಿಸಿ ಡಿಕ್ಲೇರ್ ಘೋಷಿಸಿತ್ತು. ನಂತರ ಮೊದಲ ಇನಿಂಗ್ಸ್ ಆಡಿದ ಅಫ್ಘಾನಿಸ್ತಾನ್ ತಂಡ ಕೇವಲ 152 ರನ್ಗಳಿಗೆ ಆಲೌಟ್ ಆಗಿ ಮೊದಲ ಇನಿಂಗ್ಸ್ನಲ್ಲಿ 412 ರನ್ಗಳ ಹಿನ್ನಡೆ ಅನುಭವಿಸಿದೆ.
ಇನ್ನು ಈ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಮಾನವ್ ಸುತಾರ್ ಚರಿತ್ರೆ ಸೃಷ್ಟಿಸಿದ್ದಾರೆ. ಪಾದಾರ್ಪಣೆ ಪಂದ್ಯದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಇನ್ನಿಂಗ್ಸ್ನ ಆರನೇ ಓವರ್‌ನಲ್ಲಿ ಶುಭ್‌ಮನ್ ಗಿಲ್ ತಮ್ಮ ಬೌಲಿಂಗ್ಗೆ ಇಳಿಸಿದ ತಕ್ಷಣ, ಅವರು ತಮ್ಮ ಅತ್ಯುತ್ತಮ ಲೆಂಗ್ತ್ ಮತ್ತು ಟರ್ನ್‌ನಿಂದ ನಾಲ್ಕನೇ ಎಸೆತದಲ್ಲಿ ಅಫ್ಘಾನ್ ತಂಡದ ಬೌಲರ್ ಅಬ್ದುಲ್ ಮಲಿಕ್ ವಿಕೆಟ್ ಪಡೆದರು. ಈ ಮೂಲಕ ಸುತಾರ್ ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ಓವರ್‌ನಲ್ಲಿ ಮೊದಲ ವಿಕೆಟ್ ಪಡೆದರು. ಸುತಾರ್ ತಮ್ಮ ಟೆಸ್ಟ್ ಚೊಚ್ಚಲ ಪಂದ್ಯದ ಮೊದಲ ಓವರ್‌ನಲ್ಲಿ ವಿಕೆಟ್ ಪಡೆದ ಎಂಟನೇ ಭಾರತೀಯ ಬೌಲರ್ ಎನಿಸಿಕೊಂಡರು. ಮಾನವ್ ಸುತಾರ್ 26 ಓವರ್ಗಳಲ್ಲಿ ಕೇವಲ 33 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಕನ್ನಡಿಗ ಬೌಲರ್ ಪ್ರಸಿದ್ಧ್ ಕೃಷ್ಣ ಮೂರು ವಿಕೆಟ್ ಪಡೆದಿದ್ದಾರೆ.

ನೋಡಿರಿ

