7 ವರ್ಷ.. 6 ಟೂರ್ನಿ.. 1 ಕಪ್ – ಫೈನಲ್ ನಲ್ಲೇ ಭಾರತ ಎಡವಿದ್ದೆಷ್ಟು?

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ವರ್ಸಸ್ ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಉಭಯ ತಂಡಗಳೂ ಚಾಂಪಿಯನ್ ಪಟ್ಟಕ್ಕೇರೋಕೆ ರಣತಂತ್ರಗಳನ್ನ ರೆಡಿ ಮಾಡ್ಕೊಂಡಿವೆ. ಲೀಗ್ ಹಂತದಲ್ಲಿ ಈಗಾಗಲೇ ಈ ಎರಡು ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು ಟೀಂ ಇಂಡಿಯಾ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ಫೈನಲ್ನಲ್ಲಿ ಮತ್ತೊಮ್ಮೆ ಭಾರತಕ್ಕೆ ಸವಾಲೊಡ್ಡಲು ಸ್ಯಾಂಟ್ನರ್ ಪಡೆ ಸಜ್ಜಾಗಿದೆ. ಕಳೆದ ಕೆಲವು ವರ್ಷಗಳಿಂದ ಐಸಿಸಿ ಟೂರ್ನಿಗಳಲ್ಲಿ ಭಾರತದ ಪ್ರದರ್ಶನ ಅತ್ಯುತ್ತಮವಾಗಿದ್ದು ಟಿ-20 ವಿಶ್ವಕಪ್ನಂತೆ ಇಲ್ಲಿಯೂ ಟ್ರೋಫಿ ಗೆಲ್ಲೋ ಹಾಟ್ ಫೇವರೆಟ್ ಟೀಂ ಎನಿಸಿಕೊಂಡಿದೆ.
ಇದನ್ನೂ ಓದಿ ಭಾರತ Vs ನ್ಯೂಜಿಲೆಂಡ್ ಫೈನಲ್.. ಯಾರಾಗ್ತಾರೆ ದುಬೈನಲ್ಲಿ ಚಾಂಪಿಯನ್?:
ಕಳೆದ ಕೆಲವು ವರ್ಷಗಳಿಂದ ಭಾರತ ಐಸಿಸಿ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡುತ್ತಾ ಬಂದಿದೆ. ಭಾರತ ತಂಡ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದರೂ, ನಾಕೌಟ್ ಸುತ್ತಿಗೆ ತಲುಪುವಲ್ಲಿ ಯಶಸ್ವಿಯಾಗಿದೆ. 2017 ರಲ್ಲಿ ಕೊನೆಯ ಬಾರಿಗೆ ಚಾಂಪಿಯನ್ಸ್ ಟ್ರೋಫಿ ನಡೆದಿತ್ತು. ಆಗಲೂ ಭಾರತ ಫೈನಲ್ ತಲುಪಿತ್ತಾದರೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ನಂತರ ತಂಡವು 2019 ರ ಏಕದಿನ ವಿಶ್ವಕಪ್ನ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ನ್ಯೂಜಿಲೆಂಡ್ ವಿರುದ್ಧ ಸೋತು ಪಂದ್ಯಾವಳಿಯಿಂದ ಹೊರಬಿದ್ದಿತ್ತು. 2021 ರಲ್ಲಿ ನಡೆದ ಮೊದಲ ಡಬ್ಲ್ಯುಟಿಸಿ ಫೈನಲ್ನಲ್ಲಿಯೂ ಭಾರತ ಸೋತಿತ್ತು. ನಂತರ 2023 ರಲ್ಲಿ ನಡೆದಿದ್ದ ಡಬ್ಲ್ಯುಟಿಸಿ ಫೈನಲ್ ಮತ್ತು 2023 ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತವನ್ನು ಆಸ್ಟ್ರೇಲಿಯಾ ಸೋಲಿಸಿತ್ತು. ಆ ಬಳಿಕ 2024 ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ರೋಹಿತ್ ನಾಯಕತ್ವದಲ್ಲಿ ಭಾರತ ತಂಡ ಕಳೆದ ವರ್ಷ ದಕ್ಷಿಣ ಆಫ್ರಿಕಾವನ್ನು ಟಿ20 ವಿಶ್ವಕಪ್ನಲ್ಲಿ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಇದೀಗ ಎಂಟು ತಿಂಗಳ ನಂತರ ತಂಡವು ಎರಡನೇ ಐಸಿಸಿ ಟೂರ್ನಮೆಂಟ್ನ ಫೈನಲ್ ತಲುಪಿದೆ.
ನಿಮ್ಗೆಲ್ಲಾ ಗೊತ್ತಿರೋ ಹಾಗೇ ದುಬೈ ಪಿಚ್ ಹೇಳಿ ಕೇಳಿ ಸ್ಪಿನ್ ಫ್ರೆಂಡ್ಲಿಯಾಗಿದೆ. ಇಲ್ಲಿ ಬ್ಯಾಟರ್ಸ್ ಗಿಂತ ಬೌಲರ್ಸ್ ಮೆಲುಗೈ ಸಾಧಿಸ್ತಾರೆ. ಇದೇ ಕಾರಣಕ್ಕೆ ಭಾರತ ಈ ಪಿಚ್ನಲ್ಲಿ ನಾಲ್ವರು ಸ್ಪಿನ್ನರ್ಸ್ ನ ಕಣಕ್ಕಿಳಿಸಿತ್ತು. ಆಡಿದ ನಾಲ್ಕೂ ಪಂದ್ಯಗಳಲ್ಲೂ ಎದುರಾಳಿ ಪಡೆಯನ್ನ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಇದೇ ಟೆಕ್ನಿಕ್ ನ್ಯೂಜಿಲೆಂಡ್ ತಂಡಕ್ಕೂ ಪ್ಲಸ್ ಆಗಲಿದೆ. ಯಾಕಂದ್ರೆ ಕಿವೀಸ್ನ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ನೇತೃತ್ವದಲ್ಲಿ ಸ್ಪಿನ್ನರ್ಗಳಾದ ಮೈಕೆಲ್ ಬ್ರೇಸ್ವೆಲ್, ಗ್ಲೆನ್ ಫಿಲಿಪ್ಸ್ ಮತ್ತು ರಚಿನ್ ರವೀಂದ್ರನನ್ನ ಕಣಕ್ಕಿಳಿಸೋ ಅವಕಾಶ ಹೊಂದಿದ್ದಾರೆ. ಅಲ್ದೇ ರಚಿನ್ ಮತ್ತು ಫಿಲಿಪ್ಸ್ ಬ್ಯಾಟಿಂಗ್ನಲ್ಲೂ ಅಬ್ಬರಿಸೋ ತಾಕತ್ತು ಹೊಂದಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಇದನ್ನ ಪ್ರೂವ್ ಮಾಡಿ ತೋರಿಸಿದ್ದಾರೆ. ಹಾಗೇ ಪೇಸರ್ಸ್ ಕೂಡ ಬಲಿಷ್ಠವಾಗಿದ್ದಾರೆ. ಹೀಗಾಗಿ ಮೊದಲ ಪವರ್ಪ್ಲೇನಲ್ಲಿ ರನ್ಗಳು ನಿರ್ಣಾಯಕವಾಗಿರುವುದರಿಂದ ಇವ್ರನ್ನ ಎದುರಿಸಲು ಭಾರತವು ಗೇಮ್ ಪ್ಲ್ಯಾನ್ ಮಾಡ್ಲೇಬೇಕಾಗಿದೆ.