24 ವರ್ಷ ಸರ್ವಿಸ್.. 20 ವರ್ಷ ರಜೆ! – ಬಿಟ್ಟಿ ಸರ್ಕಾರಿ ಸಂಬಳ ಪಡೆಯುತ್ತಿದ್ದ ಚಾಲಕಿ ಟೀಚರ್ ಕೊನೆಗೂ ಕೆಲಸದಿಂದ ವಜಾ
ಉದ್ಯೋಗಿಗಳಿಗೆ ವರ್ಷದಲ್ಲಿ 18 ರಿಂದ 20 ದಿನ ಒಟ್ಟು ರಜೆ ಇರಬಹುದು. ಹೆಚ್ಚು ಅಂದ್ರೆ 30 ದಿನ ಇರಬಹುದು. ಇನ್ನು ಸಿಕ್ ಲೀವ್ 6 ತಿಂಗಳು ತೆಗೆದುಕೊಳ್ಳಬಹುದು. ಇಲ್ಲೂ ಒಬ್ಬಳು ಅನಾರೋಗ್ಯದ ರಜೆ ತೆಗೆದುಕೊಂಡಿದ್ದಾಳೆ. ಆಕೆ 6 ತಿಂಗಳು 1 ವರ್ಷ ರಜೆ ತೆಗೆದುಕೊಂಡಿರಬಹುದು ಎಂದು ನೀವು ಊಹಿಸಿರಬಹುದು. ನಿಮ್ಮ ಊಹೆ ತಪ್ಪು. ಆಕೆ ಸಿಕ್ ಲೀವ್ ತೆಗೆದುಕೊಂಡಿದ್ದು ಬರೋಬ್ಬರಿ 20 ವರ್ಷ!
ಇಟಲಿಯ ವೆನಿಸ್ ಎಂಬಲ್ಲಿ ಸಿಂಜಿಯಾ ಪಾವೊಲಿನಾ ಡಿ ಲಿಯೊ ಎಂಬಾಕೆ ನಗರದ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸುಮಾರು 24 ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾಳೆ. ವಿದ್ಯಾರ್ಥಿಗಳಿಗೆ ಸಾಹಿತ್ಯ ಮತ್ತು ತತ್ವಶಾಸ್ತ್ರವನ್ನು ಕಲಿಸುತ್ತಿದ್ದಳು. ಆದರೆ ಆಕೆ ಸುಮಾರು 20 ವರ್ಷಗಳಿಂದ ನಾನಾ ಕಾರಣಗಳನ್ನು ಕೊಟ್ಟು ಕೆಲಸಕ್ಕೆ ಗೈರಾಗಿದ್ದಾಳೆ. ಬಿಟ್ಟಿಯಾಗಿ ಸಂಬಳ ಪಡೆಯುತ್ತಿದ್ದ ಆಕೆಯನ್ನು ಈಗ ಕೆಲಸದಿಂದ ವಜಾ ಮಾಡಲಾಗಿದೆ. ಸಿಂಜಿಯಾ ಸರ್ಕಾರದ ಸವಲತ್ತನ್ನು ದುರ್ಬಳಕೆ ಮಾಡಿಕೊಂಡಿದ್ದಾಳೆ. ಈ ಕೃತ್ಯಕ್ಕೆ ಆಕೆಗೆ ಇಟಲಿಯ ಅತ್ಯಂತ ಕೆಟ್ಟ ಉದ್ಯೋಗಿ ಎಂಬ ಪಟ್ಟವನ್ನು ನೀಡಲಾಗಿದೆ.
ಇದನ್ನೂ ಓದಿ: ಕೋಟಿ ಕೊಡುತ್ತೇವೆ ಅಂದರೂ ಕುರಿ ಮಾರದ ಮಾಲೀಕ! – ಈ ಕುರಿಯ ವಿಶೇಷತೆ ಏನು ಗೊತ್ತಾ?
ಸಿಂಜಿಯಾವು ತನ್ನ 24 ವರ್ಷಗಳ ಸೇವೆಯಲ್ಲಿ 20 ವರ್ಷ ರಜೆ ತೆಗೆದುಕೊಂಡಿದ್ದಾಳೆ. ಮೊದಲ 10 ವರ್ಷಗಳಲ್ಲಿ ಆಕೆ ಸಂಪೂರ್ಣವಾಗಿ ಗೈರುಹಾಜರಾಗಿದ್ದಳು, ಇತರ 14 ವರ್ಷಗಳಲ್ಲಿ ಆಕೆ ಅನಾರೋಗ್ಯ, ವೈಯಕ್ತಿಕ ಅಥವಾ ಕೌಟುಂಬಿಕ ಕಾರಣ ನೀಡಿ ರಜೆ ತೆಗೆದುಕೊಂಡಿದ್ದಳು. ಕೆಲಸಕ್ಕೆ ಗೈರುಹಾಜರಾಗಿರುವಾಗಲೂ ಆಕೆ ವೇತನವನ್ನು ಪಡೆದಿದ್ದಳು ಎಂದು ಶಿಕ್ಷಣ ಸಚಿವಾಲಯ ಹೇಳಿದೆ.
ಪರೀಕ್ಷೆ ಸಂದರ್ಭಗಳಲ್ಲಿಯೂ ಶಾಲೆಗೆ ಚಕ್ಕರ್ ಹಾಕುತ್ತಿದ್ದ ಸಿಂಜಿಯಾವು ವಿದ್ಯಾರ್ಥಿಗಳು ಗೋಗರೆದರೂ ಪಾಠ ಮಾಡುತ್ತಿರಲಿಲ್ಲ. ಆಕೆಗೆ ಮೇಸೆಜ್ ಕಳುಹಿಸಿದರೆ ಪಠ್ಯವನ್ನು ತಾವೇ ಓದುವಂತೆ ವಿದ್ಯಾರ್ಥಿಗಳ ಮೇಲೆ ರೇಗಾಡುತ್ತಿದ್ದಳು. ಅಲ್ಲದೇ, ಪರೀಕ್ಷಾ ಮೌಲ್ಯಮಾಪನದ ವೇಳೆ ವಿದ್ಯಾರ್ಥಿಗಳಿಗೆ ಮನಬಂದಂತೆ ಅಂಕ ನೀಡಿದ್ದಳು. ಈ ಹಿನ್ನೆಲೆ ಜೂನ್ 22ರಂದು ಶಾಲೆಯ ವಿದ್ಯಾರ್ಥಿಗಳು ಮುಷ್ಕರ ನಡೆಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಇಲಾಖೆ ಆಕೆಯನ್ನು ಕೆಲಸದಿಂದ ವಜಾಗೊಳಿಸಿದೆ.
ಈ ಪ್ರಕರಣವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ತನ್ನ ಕೆಲಸವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದ ಸಿಂಜಿಯಾ, ಮತ್ತೆ ಕೆಲಸಕ್ಕೆ ಸೇರಿಕೊಂಡಿದ್ದಳು. ಆದರೆ ಕೊನೆಗೆ ಈ ತೀರ್ಪನ್ನು ಮರುಪರಿಶೀಲಿಸಿದ ನ್ಯಾಯಾಲಯವು ಮಹಿಳೆಯ ಹಾಜರಿ ಪುಸ್ತಕ ಕಂಡು ತನ್ನ ತೀರ್ಪನ್ನು ಬದಲಿಸಿ. ಆಕೆಯನ್ನು ಕೆಲಸದಿಂದ ತೆಗೆದು ಹಾಕುವಂತೆ ತಾಕೀತು ಮಾಡಿದೆ.
ಕಳೆದ ಎರಡು ದಶಕಗಳಲ್ಲಿ 67 ಅನಾರೋಗ್ಯ ರಜೆ ಪ್ರಮಾಣಪತ್ರಗಳನ್ನು ಸಲ್ಲಿಸಿರುವ ಆಕೆ, ಅಪಘಾತಗಳ ಕಾರಣದಿಂದಾಗಿ ಸುದೀರ್ಘ ರಜೆಯನ್ನು ಪಡೆದಿದ್ದಳು. ಜತೆಗೆ ತನ್ನ ಮಗುವನ್ನು ನೋಡಿಕೊಳ್ಳಲು ಮಾತೃತ್ವ ರಜೆ, ಮಗುವಿನ ಅನಾರೋಗ್ಯ, ಅಂಗವೈಕಲ್ಯ ಹೊಂದಿರುವ ಸಂಬಂಧಿಕರಿಗೆ ಸಹಾಯ, ವೃತ್ತಿಗೆ ಸಂಬಂಧಿಸಿದ ತರಬೇತಿ ಪಡೆಯಲು ಸಹ ರಜೆಯನ್ನು ಪಡೆದಿದ್ದಳು. ಇಟಾಲಿಯನ್ ಸರ್ವೋಚ್ಚ ನ್ಯಾಯಾಲಯವು ಆಕೆ ಶಿಕ್ಷಕ ವೃತ್ತಿಗೆ ಯೋಗ್ಯವಾದ ವ್ಯಕ್ತಿಯಲ್ಲ ಎಂದು ಹೇಳಿದೆ. ಬಳಿಕ ಕೋರ್ಟ್ ಆಕೆಯನ್ನು ಕೆಲಸದಿಂದ ವಜಾ ಮಾಡಿದೆ.