ಬಸ್ ಗಳು, ರೈಲುಗಳ ಹೆಚ್ಚುವರಿ ಸೇವೆಯಿಂದಲೇ ಭಕ್ತರ ದಾಂಗುಡಿ – ಶಬರಿಮಲೆ ಅವ್ಯವಸ್ಥೆ ಬಗ್ಗೆ ರಾಜಕೀಯ ಜಟಾಪಟಿ

ಬಸ್ ಗಳು, ರೈಲುಗಳ ಹೆಚ್ಚುವರಿ ಸೇವೆಯಿಂದಲೇ ಭಕ್ತರ ದಾಂಗುಡಿ – ಶಬರಿಮಲೆ ಅವ್ಯವಸ್ಥೆ ಬಗ್ಗೆ ರಾಜಕೀಯ ಜಟಾಪಟಿ

ಶಬರಿಮಲೆಯಲ್ಲಿ ಲಕ್ಷಾಂತರ ಭಕ್ತರು ಇರೋದ್ರಿಂದ ಈಗ ಹೊರಟಿರುವ ಭಕ್ತರು ಸ್ವಲ್ಪ ತಡಮಾಡಿ ಹೊರಡುವಂತೆ ಮನವಿ ಮಾಡುತ್ತಿದ್ದಾರೆ. ಶಬರಿಮಲೆಯಗೆ ಹಿಂದೆಂದೂ ಕಾಣದ ರೀತಿಯಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದರ್ಶನ ಸಮಯವನ್ನು ವಿಸ್ತರಿಸಲಾಗಿದೆ. ರಾತ್ರಿ 11 ಗಂಟೆಯವರೆಗೆ ಭಕ್ತರು ದರ್ಶನ ಪಡೆಯಬಹುದು. ಬೆಳಗಿನ ಜಾವ 3 ಗಂಟೆಯಿಂದಲೇ ಭಕ್ತರಿಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಇಷ್ಟಾದ್ರೂ ಜನದಟ್ಟಣೆ ಮಾತ್ರ ಕರಗುತ್ತಿಲ್ಲ. ಅಷ್ಟಕ್ಕೂ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಾಗೋಕೆ ಕಾರಣವೂ ಇದೆ. ಸರ್ಕಾರಗಳೇ ನೀಡಿರುವ ಹಲವು ಆಫರ್ ಗಳು.

ಆಶ್ಚರ್ಯ ಎಂದರೆ ಈ ಬಾರಿ ಶಬರಿಮಲೆ ದೇವಸ್ಥಾನಕ್ಕೆ ತೆರಳುವ ಮಹಿಳೆಯರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಹತ್ತು ವರ್ಷದೊಳಗಿನ ಹೆಣ್ಣುಮಕ್ಕಳು ಹಾಗೂ 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯಳು ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪನ ದರ್ಶನ ಪಡೆಯುತ್ತಿದ್ದಾರೆ. ಮಹಿಳೆಯರ ಸಂಖ್ಯೆ ಶೇಕಡಾ 25ರಷ್ಟು ಹೆಚ್ಚಾಗಿದೆ ಎಂದು ಸಮೀಕ್ಷೆಯಿಂದಲೂ ಬಹಿರಂಗಗೊಂಡಿದೆ. ವಿವಿಧ ರಾಜ್ಯಗಳು ಸೇರಿದಂತೆ ಕರ್ನಾಟಕದಿಂದ ಶಬರಿಮಲೆಗೆ ತೆರಳುವ ಭಕ್ತರಿಗೆ ಹಲವು ಸೌಲಭ್ಯಗಳನ್ನ ಕಲ್ಪಿಸಿರುವುದು ಕೂಡ ಭಕ್ತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.  ಶಬರಿಮಲೆ ಯಾತ್ರಿಕರ ದಟ್ಟಣೆ ಪರಿಗಣಿಸಿ ನೈರುತ್ಯ ರೈಲ್ವೆಯು ಹುಬ್ಬಳ್ಳಿಯಿಂದ ಬೆಂಗಳೂರು ಮಾರ್ಗವಾಗಿ ಕೇರಳದ ಕೊಟ್ಟಾಯಂಗೆ 2 ವಿಶೇಷ ರೈಲುಗಳನ್ನು ಆರಂಭಿಸಿದೆ. ಅಲ್ಲದೆ ಬೆಂಗಳೂರಿನಿಂದ ಕೇರಳದ ಪತ್ತನಂತಿಟ್ಟ ಜಿಲ್ಲೆಯ ನಿಲಕ್ಕಲ್​ಗೆ ಹೊಸ ವೋಲ್ವೋ ಬಸ್ ಸೇವೆ ಆರಂಭಿಸಲಾಗಿದೆ. ಡಿಸೆಂಬರ್ 1ರಿಂದ ಶಬರಿಮಲೆಗೆ KSRTC ವೋಲ್ವೋ ಬಸ್ ಸಂಚಾರ ನಡೆಸುತ್ತಿದೆ. ಪ್ರತಿ ಪ್ರಯಾಣಿಕರಿಗೆ 1,600 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಮತ್ತೊಂದು ನಾನ್ ಎಸಿ ರಾಜಹಂಸ ಬಸ್ ಕೂಡ ಶಬರಿಮಲೆಗೆ ಸಂಚರಿಸುತ್ತಿದೆ.  ರಾಜಹಂಸದಲ್ಲಿ ಬೆಂಗಳೂರಿನಿಂದ ಶಬರಿಮಲೆಗೆ ಪ್ರತಿ ಟಿಕೆಟ್ ಬೆಲೆ 940 ರೂಪಾಯಿ ನಿಗದಿ ಪಡಿಸಲಾಗಿದೆ.

ಇದನ್ನೂ ಓದಿ : ಸಂಸತ್ ಭವನದಲ್ಲಿ ಭಾರಿ ಭದ್ರತಾ ಲೋಪ – 6 ಆರೋಪಿಗಳ ಪೈಕಿ ಐವರನ್ನು ಬಂಧಿಸಿದ ಪೊಲೀಸರು

ಭಕ್ತರ ಸಂಖ್ಯೆ ಹೆಚ್ಚಾದಂತೆಲ್ಲಾ ಮೂಲಭೂತ ಸೌಕರ್ಯಗಳ ಕೊರತೆಯೂ ಉಂಟಾಗುತ್ತಿದೆ. ಅಲ್ಲದೆ ಶುಚಿತ್ವವಂತೂ ಇಲ್ಲದಾಗಿದೆ. ಇದೇ ಕಾರಣಕ್ಕೆ ಶಬರಿಮಲೆಯ ಭಕ್ತರಿಗೆ ಇರುವ ವ್ಯವಸ್ಥೆಗಳ ಮೇಲೆ ಕೇರಳ ಹೈಕೋರ್ಟ್ ಕೂಡ ನಿಗಾ ಇರಿಸಿದೆ. ಜನದಟ್ಟಣೆಯಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದ್ದು, ವೃದ್ಧರು ಮತ್ತು ಮಕ್ಕಳಿಗೆ ಪ್ರತ್ಯೇಕ ಸರತಿ ಸಾಲು ರಚಿಸಲಾಗಿದೆ. ಆದರೆ ಈ ಸಾಲುಗಳನ್ನೂ ಭಕ್ತರು ಆಕ್ರಮಿಸಿಕೊಳ್ಳುತ್ತಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದೆ. ಪುಟ್ಟ ಪುಟ್ಟ ಮಕ್ಕಳ ಜೊತೆ ಅಯ್ಯಪ್ಪನ ದರ್ಶನಕ್ಕೆ ಬಂದ ಭಕ್ತರು ಹಿಂದಕ್ಕೂ ಹೋಗಲಾಗದೆ ಮುಂದಕ್ಕೂ ಹೋಗಲಾಗದೆ ಒದ್ದಾಡುತ್ತಿದ್ದಾರೆ. ಒಂದ್ಕಡೆ ಭಕ್ತರು ಹತ್ತಾರು ಸಮಸ್ಯೆ ಎದುರಿಸುತ್ತಿದ್ರೆ ಮತ್ತೊಂದೆಡೆ ಇದೇ ವಿಚಾರ ರಾಜಕೀಯ ಜಟಾಪಟಿಗೂ ಕಾರಣವಾಗಿದೆ.

ಮತ್ತೊಂದೆಡೆ ಶಬರಿಮಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾದಂತೆ ಸಾಲು ಸಾಲು ಸಮಸ್ಯೆಗಳು ಉಂಟಾಗುತ್ತಿದ್ದು, ರಾಜಕೀಯ ತಿಕ್ಕಾಟಕ್ಕೂ ಕಾರಣವಾಗಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರವನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ದೇಗುಲದಲ್ಲಿ ಭಾರೀ ನೂಕುನುಗ್ಗಲು ಉಂಟಾಗಿ ಉದ್ಭವಿಸಿರುವ ಸಮಸ್ಯೆಗಳನ್ನು ಬಗೆಹರಿಸಲು ಉನ್ನತ ಮಟ್ಟದ ಸಚಿವರ ತಂಡವನ್ನು ಪಂಬಾಗೆ ಕಳುಹಿಸುವಂತೆ ಒತ್ತಾಯಿಸಿದೆ. ದೇವಸ್ಥಾನದ ಆಡಳಿತ ನಡೆಸುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ವಿಫಲವಾದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ಕೊಟ್ಟಿದೆ. ಆದ್ರೆ ಕೇರಳ ಸರ್ಕಾರ ಮಾತ್ರ ಇದನ್ನು ರಾಜಕೀಯಗೊಳಿಸಬೇಡಿ. ಪರಿಸ್ಥಿತಿಯನ್ನು ಸಾಮಾನ್ಯಗೊಳಿಸಲು ಆಡಳಿತದೊಂದಿಗೆ ಸಹಕರಿಸುವಂತೆ ಪ್ರತಿಪಕ್ಷಗಳಿಗೆ ಮನವಿ ಮಾಡಿದೆ. ಹಾಗೂ ಮಂಗಳವಾರ ಜನದಟ್ಟಣೆ ಸಮಸ್ಯೆಗಳ ಕುರಿತು ಚರ್ಚಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪರಿಶೀಲನಾ ಸಭೆ ನಡೆಸಿದ್ದಾರೆ. ಸಚಿವರು, ಮುಖ್ಯ ಕಾರ್ಯದರ್ಶಿ, ದೇವಸ್ವಂ ಮಂಡಳಿ ಅಧ್ಯಕ್ಷರು, ಆಯುಕ್ತರು, ರಾಜ್ಯ ಪೊಲೀಸ್ ಮುಖ್ಯಸ್ಥರು ಸೇರಿದಂತೆ  ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿ ಚರ್ಚೆ ನಡೆಸಿದ್ದಾರೆ.

ಶಬರಿಮಲೆ ಭಾರತದ ಪ್ರಸಿದ್ದ ಮತ್ತು ವಿಶ್ವದ ಅತಿದೊಡ್ಡ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಪ್ರತಿನಿತ್ಯ ಇಲ್ಲಿಗೆ ಲಕ್ಷಾಂತರ ಜನ ಆಗಮಿಸುತ್ತಾರೆ. ವಿಶೇಷವಾಗಿ ಶಬರಿಮಲೆ ಸೀಸನ್‌ನಲ್ಲಿ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಇನ್ನೂ ಹೆಚ್ಚಾಗಿದೆ. ಕಠಿಣ ವ್ರತಗಳನ್ನು ಮಾಡುವ ಮೂಲಕ ಶಬರಿಮಲೆಗೆ ತೆರಳುವ ಭಕ್ತರು ಅಯ್ಯಪ್ಪನ ದರ್ಶನ ಪಡೆಯುತ್ತಾರೆ. 18 ಬೆಟ್ಟಗಳನ್ನು ಹತ್ತಿ, 18 ಮೆಟ್ಟಿಲುಗಳ ಮೇಲೆ ಕುಳಿತಿರುವ ಮಣಿಕಂಠನ ದರ್ಶನ ಪಡೆಯುವುದು ನಿಜಕ್ಕೂ ಅವಿಸ್ಮರಣೀಯ ಗಳಿಗೆ. ಪಡಿಮೆಟ್ಟಲು ಹತ್ತಿದವರ ಇಷ್ಟಾರ್ಥಗಳು ನೆರವೇರುತ್ತವೆ ಎಂಬುದು ಭಕ್ತರ ನಂಬಿಕೆ. ಜನವರಿಯಲ್ಲಿ ಮಕರ ಸಂಕ್ರಮಣದ ದಿನ ದೇಗುಲದಲ್ಲಿ ವಾರ್ಷಿಕ ಉತ್ಸವ ನಡೆಯಲಿದ್ದು, ಮಕರ ಜ್ಯೋತಿಯ ದರ್ಶನವಾಗುತ್ತದೆ. ಉತ್ಸವದ ದಿನ ಲಕ್ಷಾಂತರ ಭಕ್ತರು ಶಬರಿಮಲೆಗೆ ತೆರಳುತ್ತಾರೆ. ಕರ್ನಾಟಕದಿಂದಲೂ ಹೆಚ್ಚಿನ ಸಂಖ್ಯೆಯ ಭಕ್ತರು ಶಬರಿಮಲೆಗೆ ಯಾತ್ರೆ ಕೈಗೊಳ್ಳುತ್ತಾರೆ. ಆದ್ರೆ ಈ ಬಾರಿ ಅತೀ ಹೆಚ್ಚು ಭಕ್ತರು ತೆರಳಿರೋದ್ರಿಂದ ಜನದಟ್ಟಣೆ ಉಂಟಾಗಿದೆ. ಸಾಲು ಸಾಲು ಸಮಸ್ಯೆಗಳಾಗುತ್ತಿವೆ. ಹೀಗಾಗಿ ಅಲ್ಲಿನ ಸರ್ಕಾರ ಮತ್ತು ಆಡಳಿತ ಮಂಡಳಿ ಭಕ್ತರ ಹಿತದೃಷ್ಟಿಯಿಂದ ಕ್ರಮಗಳನ್ನ ಕೈಗೊಳ್ಳಬೇಕಾಗಿದೆ. ಸದ್ಯ ಭಕ್ತರು ಕೂಡ ಅಲ್ಲಿನ ಪರಿಸ್ಥಿತಿಗಳನ್ನ ತಿಳಿದುಕೊಂಡು ಯಾತ್ರೆ ಕೈಗೊಳ್ಳಬೇಕಾಗಿದೆ.

Shantha Kumari