ಅಕಾಲಿಕ ಮಳೆಯ ಅಬ್ಬರ – 2 ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ
ಚೆನ್ನೈ: ಚಳಿಗಾಲ ಮುಗಿದು ಇನ್ನೇನು ಬೇಸಿಗೆ ಕಾಲ ಆರಂಭವಾಗಲಿದೆ. ಆದರೆ ನೆರೆ ರಾಜ್ಯ ತಮಿಳುನಾಡಿನಲ್ಲಿ ಮಾತ್ರ ವರುಣ ದಿಢೀರ್ ಲಗ್ಗೆ ಇಟ್ಟಿದ್ದಾನೆ. ನಾಗಾಪಟ್ಟಣಂ ಹಾಗೂ ತಿರುವರೂರು ಜಿಲ್ಲೆಗಳಲ್ಲಿ ಬುಧವಾರ ರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎರಡೂ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಇದನ್ನೂ ಓದಿ: ಕೇದಾರನಾಥ ಧಾಮಕ್ಕೆ ಹಿಮದ ಹೊದಿಕೆ – ಕಣ್ಮನ ಸೆಳೆಯುತ್ತಿದೆ ಭಕ್ತಿಯ ತಾಣ
ನಾಗಪಟ್ಟಣಂ, ತಿರುವರೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಬಸ್ ಗಳು ನಿಲ್ದಾಣದಲ್ಲಿಯೇ ನಿಂತಿದ್ದು, ಸಂಪರ್ಕಕೂಡ ಕಡಿತಗೊಂಡಿದೆ. ಅಲ್ಲದೇ ಮುನ್ನೆಚ್ಚರಿಕಾ ಕ್ರಮವಾಗಿ ಒಂದು ದಿನದ ಮಟ್ಟಿಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ನೈಋತ್ಯ ಬಂಗಾಳ ಕೊಲ್ಲಿಯಲ್ಲಿ, ಶ್ರೀಲಂಕಾ ಕರಾವಳಿಯಿಂದ 80 ಕಿಮೀ ದೂರದಲ್ಲಿ ಮತ್ತು ತಮಿಳುನಾಡಿನ ಕಾರೈಕಲ್‌ನಿಂದ 400 ಕಿಮೀ ದೂರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಗುರುವಾರ, ದಕ್ಷಿಣ ತಮಿಳುನಾಡಿನ ಅನೇಕ ಸ್ಥಳಗಳಲ್ಲಿ ಮತ್ತು ಉತ್ತರ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೇ ಇಂದು ಮತ್ತು ನಾಳೆ ಸಮುದ್ರದಲ್ಲಿ ಬಿರುಗಾಳಿ ಹೆಚ್ಚಾಗಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಸೂಚನೆ ನೀಡಲಾಗಿದೆ.
ಇನ್ನು ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಪ್ರದೇಶಗಳಲ್ಲಿ ಮುಂಜಾನೆಯ ಸಮಯದಲ್ಲಿ ದಟ್ಟ ಮಂಜು ಆವರಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 18 ಡಿಗ್ರಿ ಸೆಲ್ಸಿಯಸ್ ಇರುತ್ತದೆ’ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Depression over Southwest BoB lay centered at 2330 IST about 60 km Noetheast of Batticaloa (Sri Lanka) and 400 km Southeast of Karaikal (India). Very likely to move nearly west-southwest and cross Sri Lanka coast between Batticaloa and Trincomalee around early morning of 02 Feb pic.twitter.com/qhb6jJ6T0q
— India Meteorological Department (@Indiametdept) February 1, 2023