ತಮಿಳುನಾಡಿನಲ್ಲಿ ಮಳೆಯ ರೌದ್ರಾವತಾರ – ಭಾರಿ ಮಳೆಗೆ ಹಲವು ಪ್ರದೇಶಗಳು ಜಲಾವೃತ, ರೈಲು, ವಿಮಾನ ಸಂಚಾರದಲ್ಲಿ ವ್ಯತ್ಯಯ
ಮಿಚಾಂಗ್ ಚಂಡಮಾರುತದಿಂದ ಉಂಟಾದ ವಿಪರೀತ ಮಳೆ ಮತ್ತು ಪ್ರವಾಹದಿಂದ ಹಾನಿಯಿಂದ ತಮಿಳುನಾಡು ಇನ್ನೂ ಚೇತರಿಸಿಕೊಂಡಿಲ್ಲ. ಇನ್ನೂ ಜನರ ಜೀವನ ಸುಧಾರಿಸಿಲ್ಲ. ಪರಿಸ್ಥಿತಿ ಕೊಂಚ ಸುಧಾರಿಸುತ್ತಿದೆ ಅನ್ನುವಾಗಲೇ ತಮಿಳುನಾಡಿನದಲ್ಲಿ ಭಾರಿ ಮಳೆಯಾಗುತ್ತಿದೆ ಎಂದು ವರದಿಯಾಗಿದೆ.
ಭಾರೀ ಮಳೆಯಿಂದಾಗಿ ದಕ್ಷಿಣ ತಮಿಳುನಾಡಿನ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ತಿರುನೆಲ್ವೇಲಿ, ಟುಟಿಕೋರಿನ್, ತೆಂಕಶಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರೈಲು, ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ತೂತುಕುಡಿ ಜಿಲ್ಲೆಯ ತಿರುಚೆಂದೂರಿನಲ್ಲಿ ಭಾನುವಾರ ಮಧ್ಯರಾತ್ರಿ 1:30 ರವರೆಗೆ ಕೇವಲ 15 ಗಂಟೆಗಳ ಅವಧಿಯಲ್ಲಿ 60 ಸೆಂ.ಮೀ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಲಿಬಿಯಾ ಕರಾವಳಿಯಲ್ಲಿ ದೋಣಿ ಮುಳುಗಿ 60ಕ್ಕೂ ಹೆಚ್ಚು ಮಂದಿ ಸಾವು
ತಿರುನಲ್ವೇಲಿ ಜಿಲ್ಲೆಯ ಪಾಲಯಂಕೊಟ್ಟೈನಲ್ಲಿ 26 ಸೆಂ.ಮೀ, ಕನ್ಯಾಕುಮಾರಿಯಲ್ಲಿ 17.3 ಸೆಂ.ಮೀ ಮಳೆಯಾಗಿದೆ. ಧಾರಾಕಾರ ಮಳೆಯಿಂದಾಗಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸೋಮವಾರ ಶಾಲಾ – ಕಾಲೇಜು, ಬ್ಯಾಂಕ್‌ಗಳು, ಖಾಸಗಿ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
ಪಾಪನಾಸಂ, ಪೆರುಂಜನಿ ಮತ್ತು ಪೆಚುಪರೈ ಅಣೆಕಟ್ಟುಗಳಿಂದ ನೀರು ಬಿಡುತ್ತಿರುವುದರಿಂದ ತಿರುನಲ್ವೇಲಿ, ತೂತುಕುಡಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳ ಹಲವೆಡೆ ಪ್ರವಾಹ ಉಂಟಾಗಿದೆ. ತಾಮರಪರಣಿ ನದಿ ಉಕ್ಕಿ ಹರಿಯುತ್ತಿದೆ. ಅಣೆಕಟ್ಟುಗಳಲ್ಲಿನ ನೀರಿನ ಸರಿಯಾದ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಸೋಮವಾರ ಕೂಡ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಕೊಮೊರಿನ್ ಪ್ರದೇಶದಲ್ಲಿ ಚಂಡಮಾರುತವು ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಸಾಧ್ಯತೆ ಇದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ನಿಯೋಜಿಸಿದ್ದಾರೆ. ಪ್ರತಿ ಪೀಡಿತ ಜಿಲ್ಲೆಯ ಮೇಲ್ವಿಚಾರಣೆಗೆ ಹಿರಿಯ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಸಂಕಷ್ಟದಲ್ಲಿರುವ ಪ್ರದೇಶಗಳಲ್ಲಿ ಪರಿಹಾರ ಕೇಂದ್ರಗಳು ಮತ್ತು ದೋಣಿಗಳನ್ನು ಸಿದ್ಧಪಡಿಸುವಂತೆ ಮತ್ತು ಅಗತ್ಯವಿದ್ದಲ್ಲಿ ಜನರನ್ನು ಬೇಗನೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸ್ಟಾಲಿನ್ ಸೂಚನೆ ನೀಡಿದ್ದಾರೆ.
ತಲಾ 50 ಸದಸ್ಯರನ್ನು ಒಳಗೊಂಡ ಎರಡು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ತಿರುನಲ್ವೇಲಿ ಮತ್ತು ಟುಟಿಕೋರಿನ್ ಜಿಲ್ಲೆಗಳಿಗೆ ಧಾವಿಸಿದ್ದು, ಮೂರು ರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್ಡಿಆರ್ಎಫ್) ಕನ್ಯಾಕುಮಾರಿ ಜಿಲ್ಲೆಯಲ್ಲಿ ತಂಡಗಳನ್ನು ನಿಯೋಜಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಳಿಗೆ ನೆರವಾಗಲು ಮಳೆ, ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 4,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಬಲವಾಗಿ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.