ಗಾಳಿಪಟ ಹಾರಿಸಲು ಬಳಸುವ ಚೈನೀಸ್ ಮಾಂಜಾ ದಾರ ತಯಾರಿಕೆ, ಮಾರಾಟ ನಿಷೇಧ!

ಗಾಳಿಪಟ ಹಾರಿಸಲು ಬಳಸುವ ಚೈನೀಸ್ ಮಾಂಜಾ ದಾರ ತಯಾರಿಕೆ, ಮಾರಾಟ ನಿಷೇಧ!

ಆಕಾಶದಲ್ಲಿ ಗಾಳಿಪಟ ಹಾರುತ್ತಿದ್ದರೆ ಎಷ್ಟು ಸುಂದರವಾಗಿ ಕಾಣುತ್ತದೋ ಅದರಿಂದ ಅಪಾಯವೂ ಕೂಡ ಅಷ್ಟೇ ಇದೆ. ಈ ಹಿನ್ನೆಲೆಯಲ್ಲಿ ಗಾಳಿಪಟ ಹಾರಿಸಲು ಬಳಸುವ ಚೈನೀಸ್‌ ಮಾಂಜಾ ಬಳಕೆ, ತಯಾರಿಕೆ, ಮಾರಾಟ ಮಾಡುವುದನ್ನು ತಮಿಳುನಾಡು ಸರ್ಕಾರ ಬ್ಯಾನ್‌ ಮಾಡಿದೆ.

ಮಾಂಜಾದ ಎಳೆಗಳು ನೈಲಾನ್, ಪ್ಲಾಸ್ಟಿಕ್ ಅಥವಾ ಸಂಶ್ಲೇಷಿತ ವಸ್ತುಗಳಿಂದ ಮಾಡಿದ್ದಾಗಿರುತ್ತದೆ, ಕೆಲವೊಮ್ಮೆ ಗಾಜಿನಿಂದ ಕೂಡ ಲೇಪಿತವಾಗಿರುತ್ತವೆ. ಇದು ಅಪಾಯಕಾರಿಯಾಗಿದೆ. ಇವುಗಳು  ಮನುಷ್ಯರ ಕುತ್ತಿಗೆಗೆ ಸಿಲುಕಿಕೊಂಡರೆ ಕತ್ತು ಕೊಯ್ಯುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೇ ಪ್ರಾಣಿ, ಪಕ್ಷಿಗಳ ಕುತ್ತಿಗೆಗೂ ಅಪಾಯಕಾರಿಯಾಗಿದೆ. ಹೀಗಾಗಿ ತಮಿಳುನಾಡಿನಲ್ಲಿ ಗಾಳಿಪಟ ಹಾರಿಸಲು ಬಳಸುವ ಚೈನೀಸ್​ ಮಾಂಜಾ ಬಳಕೆ, ತಯಾರಿಕೆ, ಮಾರಾಟವನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಒಳ್ಳೆ ಕೆಲಸ.. ಕೈ ತುಂಬಾ ಸಂಬಳ ಸಿಗುತ್ತಿದ್ದ ಕೆಲಸ ಬಿಟ್ಟು ಬಾಂಬ್‌ ಸ್ಫೋಟಿಸಿದ್ಯಾಕೆ? – ಪೊಲೀಸರಿಗೆ ತಲೆನೋವಾದ ಕೇರಳ ಸ್ಫೋಟ ಪ್ರಕರಣ!

ತಮಿಳುನಾಡಿನಲ್ಲಿ ಮಾಂಜಾ ದಾರಗಳ ಮೇಲಿನ ನಿಷೇಧ ಇದೇ ಮೊದಲಲ್ಲ, 2017ರಲ್ಲಿ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್​ ಆಫ್ ಅನಿಮಲ್ಸ್​ ಸೇರಿದಂತೆ ಇತರೆ ಸಂಸ್ಥೆಗಳು ಸಲ್ಲಿಸಿದ ಮನವಿ ಮೇರೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಅಂತಹ ದಾರಗಳ ಮೇಲೆ ಸಂಪೂರ್ಣ ನಿಷೇಧ ಹೇರಿತ್ತು. ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿಷೇಧಿಸುವಂತೆ ನಿರ್ದೇಶನ ನೀಡಿತ್ತು. ಮಾಲ್​ಗಳಲ್ಲಿ ಅಥವಾ ದೊಡ್ಡ ಮಟ್ಟದ ಮಳಿಗೆಗಳಲ್ಲಿ ಮಾಂಜಾ ದಾರ ಮಾರಾಟ ಮಾಡುವಂತಿಲ್ಲ, ಗೂಡಂಗಡಿಯಂತಹ ಸಣ್ಣ ಪುಟ್ಟ ವ್ಯಾಪಾರ ಸ್ಥಳಗಳಲ್ಲಿ ಇವು ಮಾರಾಟವಾಗುತ್ತಿದ್ದವು.

ಗಾಳಿಪಟ ಹಾರಿಸಲು ನೈಲಾನ್ ದಾರ ಬಳಸದಂತೆ ಎಚ್ಚರಿಕೆ ನೀಡಲಾಗುತ್ತಿದೆ.  ಗಾಳಿಪಟ ಹಾರಿಸುವಾಗ ಬಟ್ಟೆ ದಾರವನ್ನು ಬಳಸಲು ಸೂಚಿಸಬೇಕು. ಇವು ಪ್ರಾಣಿ, ಪಕ್ಷಿಗಳಿಗೆ ಅಪಾಯ ಉಂಟು ಮಾಡುವುದಿಲ್ಲ ಕ್ರಮೇಣ ತುಂಡಾಗುತ್ತವೆ. ಆದರೆ ಮಾಂಜಾ ದಾರ ಸುಲಭವಾಗಿ ತುಂಡಾಗುವುದಿಲ್ಲ ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಬ್ಯಾನ್‌ ಮಾಡಲಾಗಿದೆ.

Shwetha M