ಮಾವುತರ ಬದುಕು ಬದಲಿಸಿದ ಆಸ್ಕರ್ ಪ್ರಶಸ್ತಿ – ಭರ್ಜರಿ ಗಿಫ್ಟ್ ನೀಡಿದ ತಮಿಳುನಾಡು ಸಿಎಂ
ತಮಿಳಿನ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಒಲಿದ ಮೇಲೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರ ತಂಡಕ್ಕೆ ಶುಭಾಶಯ ಕೋರಿದ್ದಾರೆ. ಅದರಲ್ಲೂ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಆಸ್ಕರ್ ಪ್ರಶಸ್ತಿ ವಿಜೇತ ಡಾಕ್ಯುಮೆಂಟರಿಯ ಕಥಾ ನಾಯಕ ಮತ್ತು ನಾಯಕಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಸಾಕ್ಷ್ಯಚಿತ್ರದಲ್ಲಿರುವ ಆನೆ ರಘುವನ್ನ ರಕ್ಷಿಸಿದ್ದ ದಂಪತಿಯನ್ನ ತಮಿಳುನಾಡು ಸಿಎಂ ಸ್ಟಾಲಿನ್ ಸನ್ಮಾನಿಸಿದ್ದಾರೆ.
ಇದನ್ನೂ ಓದಿ: ದಿ ಎಲಿಫೆಂಟ್ ವಿಸ್ಪರರ್ಸ್ ‘ರಘು’ಗೆ ಸಖತ್ ಡಿಮ್ಯಾಂಡ್ – ವಿದೇಶದಿಂದಲೂ ಬರ್ತಿದ್ದಾರೆ ಫ್ಯಾನ್ಸ್..!
ಬೊಮ್ಮನ್ ಮತ್ತು ಬೆಳ್ಳಿ ದಂಪತಿ ರಘು ಹೆಸರಿನ ಆನೆಯನ್ನ ಬೇಟೆಗಾರರಿಂದ ರಕ್ಷಿಸಿ ತಾವೇ ಸಾಕಿ ಬೆಳೆಸಿದ್ದರು. ಆನೆ ಮತ್ತು ದಂಪತಿಯ ನೈಜ ಕಥೆಯನ್ನಾಧರಿಸಿ ಕಾರ್ತಿಕಿ ಮತ್ತು ಗುನೀತ್ ಮೊಂಗಾ ಕಿರು ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದರು. ಹೀಗಾಗಿ ಆದಿವಾಸಿ ದಂಪತಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸ್ಟಾಲಿನ್ ತಮ್ಮ ಕಚೇರಿಯಲ್ಲಿ ಸನ್ಮಾನಿಸಿದ್ದಾರೆ. ನೆನಪಿನ ಫಲಕ ಮತ್ತು ಎರಡು ಲಕ್ಷ ರೂಪಾಯಿ ಬಹುಮಾನ ನೀಡಿದ್ದಾರೆ. ಕೇವಲ ಈ ಇಬ್ಬರಿಗೆ ಮಾತ್ರ ಬಹುಮಾನ ನೀಡಿಲ್ಲ. ಮದು ಮಲೈ ಅರಣ್ಯದಲ್ಲಿರುವ ಎಲಿಫೆಂಟ್ ಕ್ಯಾಂಪ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 91 ಸಿಬ್ಬಂದಿಗೆ ತಲಾ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಅಷ್ಟೇ ಅಲ್ಲ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮಾವುತರಿಗೆ ಮನೆ ಕಟ್ಟಿಕೊಡಲು 9.1 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಘೋಷಿಸಿದ್ದಾರೆ. ದಂಪತಿಗೆ ಸನ್ಮಾನಿಸಿ ಚೆಕ್ ನೀಡಿರುವ ಫೋಟೋವನ್ನು ಸ್ಟಾಲಿನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.