59 ವರ್ಷಗಳ ನಂತರ ಕಾಂಗ್ರೆಸ್‌ಗೆ ತಮಿಳುನಾಡಿನಲ್ಲಿ ಸಚಿವ ಸ್ಥಾನ – ವಿಜಯ್ ಸಂಪುಟ ಸೇರಿದ 23 ಶಾಸಕರು

59 ವರ್ಷಗಳ ನಂತರ ಕಾಂಗ್ರೆಸ್‌ಗೆ ತಮಿಳುನಾಡಿನಲ್ಲಿ ಸಚಿವ ಸ್ಥಾನ – ವಿಜಯ್ ಸಂಪುಟ ಸೇರಿದ 23 ಶಾಸಕರು

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ.. ಇಂದು   ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲರು ಒಟ್ಟು 23 ಶಾಸಕರಿಗೆ ಸಚಿವರಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ವಿಸ್ತರಣೆಯು ತಮಿಳುನಾಡು ರಾಜಕೀಯದಲ್ಲಿ ಹೊಸದೊಂದು ಯುಗಕ್ಕೆ ನಾಂದಿ ಹಾಡಿದೆ.

ಬರೋಬ್ಬರಿ 59 ವರ್ಷಗಳ ನಂತರ ಕಾಂಗ್ರೆಸ್ ತಮಿಳುನಾಡಿನಲ್ಲಿ ಸರ್ಕಾರದ ಭಾಗವಾಗಿದೆ. ಕಾಂಗ್ರೆಸ್‌ನ ಒಟ್ಟು 5 ಶಾಸಕರಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಇದರೊಂದಿಗೆ ಮೈತ್ರಿಪಕ್ಷವಾದ ವಿಸಿಕೆ (VCK) ಯ ಇಬ್ಬರು ಶಾಸಕರಲ್ಲಿ ಒಬ್ಬರನ್ನು ಸಚಿವರನ್ನಾಗಿ ಮಾಡಲಾಗಿದೆ.

ಇದನ್ನೂ ಓದಿ: ಸಿನಿಮಾ, ಧಾರವಾಹಿಗಳ ಸಂಭಾಷಣೆಕಾರ ನಂದೀಶ್‌ ಹೃದಾಯಾಘಾತದಿಂದ ನಿಧನ – ಕಂಬನಿ ಮಿಡಿದ ಚಿತ್ರರಂಗ

ಮತ್ತೊಂದು ಮಿತ್ರಪಕ್ಷವಾದ ಐಯುಎಂಎಲ್ ಕೂಡ ಸರ್ಕಾರ ಸೇರಲು ನಿರ್ಧರಿಸಿದೆಯಾದರೂ ಇಂದಿನ ಪ್ರಮಾಣ ವಚನ ಸಮಾರಂಭದಿಂದ ದೂರ ಉಳಿದಿದೆ. ತನ್ನ ಇಬ್ಬರು ಶಾಸಕರಲ್ಲಿ ಯಾರನ್ನು ಸಚಿವರನ್ನಾಗಿ ಮಾಡಬೇಕು ಎಂಬ ಗೊಂದಲ ಇನ್ನೂ ಬಗೆಹರಿಯದ ಕಾರಣ, ಅಂತಿಮ ನಿರ್ಧಾರವಾದ ಬಳಿಕ ಅದರ ಶಾಸಕರು ಸಚಿವರಾಗಲಿದ್ದಾರೆ.

ಇತ್ತೀಚಿನ ಚುನಾವಣೆಯಲ್ಲಿ ಸಿಎಂ ವಿಜಯ್ ಅವರ ಟಿವಿಕೆ  ಪಕ್ಷವು ಸ್ವಂತ ಬಲದಿಂದ 108 ಸ್ಥಾನಗಳನ್ನು ಗೆದ್ದಿತ್ತು. ಆದರೆ, ಬಹುಮತಕ್ಕೆ 118 ಶಾಸಕರ ಅಗತ್ಯವಿತ್ತು. ಹೀಗಾಗಿ ವಿಜಯ್ ಅವರು ಕಾಂಗ್ರೆಸ್, ಎಡಪಂಥೀಯರು ಮತ್ತು ಐಯುಎಂಎಲ್ ಬೆಂಬಲದೊಂದಿಗೆ ಮೈತ್ರಿ ಸರ್ಕಾರ ರಚಿಸಿದರು. ಅಷ್ಟೇ ಅಲ್ಲದೆ, ವಿಧಾನಸಭೆಯ ವಿಶ್ವಾಸಮತ ಪರೀಕ್ಷೆಯ ಸಂದರ್ಭದಲ್ಲಿ ವಿರೋಧ ಪಕ್ಷವಾದ ಎಡಿಎಂಕೆಯ 24 ಬಂಡಾಯ ಶಾಸಕರು ಕೂಡ ವಿಜಯ್ ಅವರ ಕೈಹಿಡಿದರು. ಹೀಗಾಗಿ ಬಹುಮತಕ್ಕಿಂತ 26 ಹೆಚ್ಚು ಅಂದರೆ ಬರೋಬ್ಬರಿ 144 ಶಾಸಕರ ಬೆಂಬಲದೊಂದಿಗೆ ವಿಜಯ್ ಸರ್ಕಾರ ಸದ್ಯ ಸುಭದ್ರವಾಗಿದೆ.

Kishor KV

Leave a Reply

Your email address will not be published. Required fields are marked *