ಜಲ್ಲಿಕಟ್ಟು ಸ್ಪರ್ಧೆ ವೇಳೆ ಹೋರಿ ತಿವಿದು ಇಬ್ಬರು ಸಾವು – 70ಕ್ಕೂ ಅಧಿಕ ಮಂದಿಗೆ ಗಾಯ

ಜಲ್ಲಿಕಟ್ಟು ಸ್ಪರ್ಧೆ ವೇಳೆ ಹೋರಿ ತಿವಿದು ಇಬ್ಬರು ಸಾವು – 70ಕ್ಕೂ ಅಧಿಕ ಮಂದಿಗೆ ಗಾಯ

ತಮಿಳುನಾಡಿನಲ್ಲಿ ಸುಗ್ಗಿಯ ಹಬ್ಬವಾದ ಪೊಂಗಲ್ ಅನ್ನು ವಿಬೃಂಭಣೆಯಿಂದ ಆಚರಿಸಲಾಗುತ್ತದೆ. ಈ ವೇಳೆ ಸಾಂಪ್ರದಾಯಿಕ ಆಟ ಜಲ್ಲಿಕಟ್ಟನ್ನು ಏರ್ಪಡಿಸಲಾಗುತ್ತದೆ. ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ನಡೆಯುತ್ತಿರುವ ಜಲ್ಲಿಕಟ್ಟು ಸ್ಪರ್ಧೆ ವೇಳೆ ಹೋರಿ ತಿವಿದು ಇಬ್ಬರು ಸಾವನ್ನಲ್ಲಿದ್ದಾರೆ. 70ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕೇರಳದ ಪ್ರಸಿದ್ಧ ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಿ – ಖ್ಯಾತನಟ ಸುರೇಶ್ ಗೋಪಿ ಪುತ್ರಿಯ ಮದುವೆಯಲ್ಲೂ ಭಾಗಿ

ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ಬುಧವಾರ ನಡೆದ ಜಲ್ಲಿಕಟ್ಟು ಗೂಳಿ ಪಳಗಿಸುವ ಕ್ರೀಡೆಯನ್ನು ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಆಶಾ ಅಜಿತ್, ಕ್ಷೇತ್ರದ ಸಂಸದ ಕಾರ್ತಿ ಪಿ.ಚಿದಂಬರಂ, ಡಿಎಂಕೆ ಸಚಿವ ಪೆರಿಯಕರುಪ್ಪನ್ ಅವರ ಸಮ್ಮುಖದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ 271ಗೂಳಿಗಳು ಮತ್ತು 81 ಗೂಳಿ ಪಳಗಿಸುವವರು ಭಾಗವಹಿಸಿದ್ದರು. ಈ ವೇಳೆ ಇಬ್ಬರು ಸಾವನ್ನಪ್ಪಿದ್ದು, 70 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಮಧುರೈ ಜಿಲ್ಲೆಯ ಅಲಂಗನಲ್ಲೂರು ಜಲ್ಲಿಕಟ್ಟು ಕಾರ್ಯಕ್ರಮದಲ್ಲಿ ಕನಿಷ್ಠ ಮೂವರು ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಓರ್ವ ಪಳಗಿಸುವವನು, ಓರ್ವ ಪೊಲೀಸ್ ಸಿಬ್ಬಂದಿ ಮತ್ತು ಓರ್ವ ಗೂಳಿಯ ಮಾಲೀಕ, ಮೂವರು ಗಾಯಗೊಂಡಿದ್ದಾರೆ. ಒಟ್ಟು 1,200 ಹೋರಿಗಳು ಮತ್ತು 800 ಗೂಳಿ ಪಳಗಿಸುವವರು ಜಲ್ಲಿಕಟ್ಟು ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡಿದ್ದರು.

ಕಾರ್ಯಕ್ರಮದ ವಿಜೇತರು, ಗೂಳಿ ಪಳಗಿಸುವವರು ನಿಸ್ಸಾನ್ ಮ್ಯಾಗ್ನೈಟ್ ಕಾರನ್ನು ಸ್ವೀಕರಿಸಲು ಸಿದ್ಧರಾಗಿದ್ದಾರೆ, ಹಾಗೆಯೇ ಭಾಗವಹಿಸುವ ಪ್ರತಿ ಗೂಳಿಗೆ ಚಿನ್ನದ ನಾಣ್ಯವನ್ನು ನೀಡಲಾಗುತ್ತದೆ.

ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, 90 ಸಿಬ್ಬಂದಿಯನ್ನು ಒಳಗೊಂಡ ವೈದ್ಯಕೀಯ ತಂಡ, 70 ಸಿಬ್ಬಂದಿಯನ್ನು ಒಳಗೊಂಡ ಪಶುವೈದ್ಯ ತಂಡ ಮತ್ತು ರೆಡ್‌ಕ್ರಾಸ್ ಸ್ವಯಂಸೇವಕರು ಆಂಬ್ಯುಲೆನ್ಸ್‌ಗಳೊಂದಿಗೆ ಸ್ಥಳದಲ್ಲಿದ್ದರು.

ಮದ್ರಾಸ್ ಹೈಕೋರ್ಟಿನ ಆದೇಶದ ಆಧಾರದ ಮೇಲೆ 2006 ರಲ್ಲಿ ಮೊದಲ ಬಾರಿಗೆ ಗೂಳಿ ಪಳಗಿಸುವ ಕ್ರೀಡೆಯನ್ನು ನಿಷೇಧಿಸಲಾಯಿತು. ನಂತರ 2014 ರಲ್ಲಿ, ಸುಪ್ರೀಂ ಕೋರ್ಟ್ ಕೂಡ ಪ್ರಾಣಿ ಹಿಂಸೆಯ ಆಧಾರದ ಮೇಲೆ ಕ್ರೀಡೆಯನ್ನು ನಿಷೇಧಿಸಿತ್ತು.

Shwetha M