ತಮಿಳುನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ? – 234 ಕ್ಷೇತ್ರಗಳ ಮೇಲೂ ನಟನ ಕಣ್ಣು?
ತಮಿಳು ಚಿತ್ರರಂಗದ ಬಹುಬೇಡಿಕೆಯ ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ವಿಚಾರ ಈಗ ಜೋರಾಗಿಯೇ ಸದ್ದು ಮಾಡುತ್ತಿದೆ. 2026ರ ವಿಧಾನಸಭಾ ಚುನಾವಣೆಗೆ ಅವರು ಸಜ್ಜಾಗುತ್ತಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಆಂಧ್ರ, ತಮಿಳುನಾಡು ಭಾಗಗಳಲ್ಲಿ ರಾಜಕೀಯಕ್ಕೆ ಚಿತ್ರರಂಗದ ಪ್ರಮುಖರು ಎಂಟ್ರಿಕೊಡುವುದು ಹೊಸತೇನಲ್ಲ. ಈಗ ದಳಪತಿ ವಿಜಯ್ ಕೂಡಾ ರಾಜಕೀಯಕ್ಕೆ ಎಂಟ್ರಿಕೊಡುವ ತಯಾರಿಯಲ್ಲಿದ್ದಾರೆ.
ಇದನ್ನೂ ಓದಿ: ‘ದೇವಸ್ಥಾನಕ್ಕೆ ಹೋಗುವವರು ಚಪ್ಪಲಿ ಹಾಕುತ್ತಾರೆಯೇ’? – ಫ್ಯಾನ್ಸ್ ಭೇಟಿ ವೇಳೆ ಚಪ್ಪಲಿ ಹಾಕದ ಗುಟ್ಟು ತಿಳಿಸಿದ ಅಮಿತಾಬ್ ಬಚ್ಚನ್!
2026ರಲ್ಲಿ ನಡೆಯುವ ತಮಿಳುನಾಡು ರಾಜಕೀಯಕ್ಕೆ ದಳಪತಿ ವಿಜಯ್ ಎಂಟ್ರಿ ನೀಡುತ್ತಾರೆ ಎಂದು ಹೇಳಲಾಗ್ತಿದೆ. ಅಂದಹಾಗೆ, ಈ ವಿಚಾರ ಚರ್ಚೆಗೆ ಬರಲು ಕಾರಣ, ದಳಪತಿ ವಿಜಯ್ ಅವರು ಸಿನಿಮಾ ಕೆಲಸಗಳ ಜೊತೆ ಹೆಚ್ಚೆಚ್ಚು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ರಾಜಕೀಯ ನಾಯಕರ ಜೊತೆಯೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ 10ನೇ ತರಗತಿ ಹಾಗೂ 12ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಜೂನ್ 17 ರಂದು ಸನ್ಮಾನಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ದೊಡ್ಡ ಮಟ್ಟದ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆ ಹಾಗೂ ತಾಲೂಕು ಎಂದು ಆಯ್ಕೆ ಮಾಡದೇ ದಳಪತಿ ವಿಜಯ್ ಅವರು 234 ವಿಧಾನಸಭಾ ಕ್ಷೇತ್ರವನ್ನು ಸೆಲೆಕ್ಟ್ ಮಾಡಿಕೊಂಡಿದ್ದಾರೆ. ಪ್ರತಿ ಕ್ಷೇತ್ರದ ಟಾಪ್ ಮೂವರಿಗೆ ಸನ್ಮಾನ ಮಾಡಲಾಗುತ್ತಿದೆ. ‘ವಿಜಯ್ ಮಕ್ಕಳ್ ಇಯಕ್ಕಮ್’ ಮೂಲಕ ಈ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿ ಕ್ಷೇತ್ರದ ಟಾಪ್ 3 ವಿದ್ಯಾರ್ಥಿಗಳಿಗೆ ಬಹುಮಾನದ ಜೊತೆಗೆ ನಗದು ಪ್ರೋತ್ಸಾಹ ಧನವನ್ನೂ ನೀಡುವುದಾಗಿ ಈಗಾಗಲೇ ಘೋಷಿಸಲಾಗಿದೆ. ಈ ಬೆಳವಣಿಗೆಗಳನ್ನು ಗಮನಿಸಿ ವಿಜಯ್ ಶೀಘ್ರದಲ್ಲೇ ರಾಜಕೀಯ ಅಖಾಡಕ್ಕಿಳಿಯಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅದಕ್ಕಾಗಿಯೇ ಕ್ಷೇತ್ರ ಎಂಬ ಪದವನ್ನು ಪ್ರಸ್ತಾಪಿಸಲಾಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.