ಕೊಲೆ ಅಪರಾಧಿಗಳಿಗೆ ತಾಲಿಬಾನ್‌ ಸರ್ಕಾರದಿಂದ ಘೋರ ಶಿಕ್ಷೆ – ಕ್ರೀಡಾಂಗಣದಲ್ಲಿ ಇಬ್ಬರ ತಲೆಗೆ 15 ಬಾರಿ ಗುಂಡಿಟ್ಟು ಮರಣದಂಡನೆ

ಕೊಲೆ ಅಪರಾಧಿಗಳಿಗೆ ತಾಲಿಬಾನ್‌ ಸರ್ಕಾರದಿಂದ ಘೋರ ಶಿಕ್ಷೆ – ಕ್ರೀಡಾಂಗಣದಲ್ಲಿ ಇಬ್ಬರ ತಲೆಗೆ 15 ಬಾರಿ ಗುಂಡಿಟ್ಟು ಮರಣದಂಡನೆ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಪಡೆ ಆಡಳಿತ ಗದ್ದುಗೆ ಏರಿ ಮೂರು ವರ್ಷಗಳಾಗುತ್ತಾ ಬಂದಿದೆ. ತಾಲಿಬಾನ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಅಫ್ಘಾನಿಸ್ತಾನದಲ್ಲಿ ಕಾನೂನುಗಳನ್ನು ಮನಬಂದಂತೆ ಬದಲಾಯಿಸುತ್ತಿದೆ. ಅಷ್ಟೇ ಅಲ್ಲದೇ ತಪ್ಪು ಮಾಡಿದವರಿಗೂ ಘೋರ ಶಿಕ್ಷೆಗಳನ್ನು ನೀಡುತ್ತಿದೆ. ಇದೀಗ ಕೊಲೆಯೊಂದರ ಅಪರಾಧಿಗಳಿಗೆ ಭಯಾನಕ ಶಿಕ್ಷೆ ವಿಧಿಸಿದೆ. ಕ್ರೀಡಾಂಗಣದಲ್ಲಿ ಇಬ್ಬರು ಅಪರಾಧಿಗಳ ತಲೆಗೆ ಬರೋಬ್ಬರಿ 15 ಬಾರಿ ಗುಂಡಿಟ್ಟು ಮರಣದಂಡನೆ ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ: 6 ಬಾಲ್.. 6 ಸಿಕ್ಸರ್ – ಯುವ ದಾಂಡಿಗ ವಂಶಿಕೃಷ್ಣ ಕಮಾಲ್

ಹೌದು, ಸೆಪ್ಟೆಂಬರ್ 2017 ಮತ್ತು ಜನವರಿ 202ರಲ್ಲಿ ನಡೆದ 2 ಪ್ರತ್ಯೇಕ ಕೊಲೆ ಪ್ರಕರಣದಲ್ಲಿ ಸಯ್ಯದ್ ಜಮಾಲ್ ಮತ್ತು ಗುಲ್ ಖಾನ್ ರನ್ನು ದೋಷಿ ಎಂದು ತಾಲಿಬಾನ್ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ತಾಲಿಬಾನ್‌ ನಾಯಕ ಹೈಬತುಲ್ಲಾ ಅಖುಂದ್‌ಜಾದಾ ಇಬ್ಬರಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಾಲಿಬಾನ್‌ ಸರ್ಕಾರ  ಸಾರ್ವಜನಿಕವಾಗಿ ಕ್ರೀಡಾಂಗಣದಲ್ಲಿ ತಲೆಗೆ 15 ಬಾರಿ ಗುಂಡಿಟ್ಟು ಮರಣದಂಡನೆ ಶಿಕ್ಷೆ ನೀಡಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಇಬ್ಬರು ಅಪರಾಧಿಗಳನ್ನು ಗುರುವಾರ ಮಧ್ಯಾಹ್ನ 12 ಗಂಟೆಗೆ ಘಜ್ನಿ ನಗರದ ಅಲಿ ಲಲಾ ಪ್ರದೇಶದಲ್ಲಿರುವ ಫುಟ್ಬಾಲ್ ಕ್ರೀಡಾಂಗಣಕ್ಕೆ ಕರೆ ತರಲಾಯಿತು. ಈ ವೇಳೆ ಕ್ರೀಡಾಂಗಣದ ಸುತ್ತ ಸಾವಿರಾರು ಮಂದಿ ಜಮಾಯಿಸಿದ್ದರು. ಒಬ್ಬನ ತಲೆಗೆ 8, ಮತ್ತೊಬ್ಬನ ತಲೆಗೆ 7 ಗುಂಡುಗಳನ್ನು ಹಾರಿಸಿ ಹತ್ಯೆ ಮಾಡಲಾಯಿತು.

ಮರಣದಂಡನೆ ಶಿಕ್ಷೆ ನೀಡುವುದಕ್ಕೂ ಮುನ್ನ ಅಪರಾಧಿಗಳ ಕುಟುಂಬಸ್ಥರು ಬಂದು ವಿನಾಯ್ತಿ ನೀಡುವಂತೆ ಮನವಿ ಮಾಡಿಕೊಂಡರು. ಆದರೆ ಇದಕ್ಕೆ ಕ್ಯಾರೇ ಎನ್ನದೇ ಗುಂಡು ಹಾರಿಸಿ ಕೊಲ್ಲಲಾಯಿತು. ಒಟ್ಟಿನಲ್ಲಿ ಈ ಮೂಲಕ ದಶಕಗಳ ಹಿಂದೆ ಅಫ್ಘಾನಿಸ್ತಾನದಲ್ಲಿದ್ದ ತಾಲಿಬಾನ್‌ನ ಷರಿಯಾ ವ್ಯವಸ್ಥೆ ಮತ್ತೊಮ್ಮೆ ಮುನ್ನೆಲೆಗೆ ಬಂದಂತಾಗಿದೆ.

Shwetha M