ವೈದ್ಯನ ಮೇಲೆ ಗಿಳಿ ದಾಳಿ – ಮಾಲೀಕನಿಗೆ 74 ಲಕ್ಷ ರೂ. ದಂಡ, 2 ತಿಂಗಳು ಜೈಲು!
ಇತ್ತೀಚಿನ ದಿನಗಳಲ್ಲಿ ಗಿಳಿ ದಾಳಿ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಕೆಲದಿನಗಳ ಹಿಂದೆ ಗಿಳಿಯೊಂದು ಶಿಳ್ಳೆ ಹೊಡೆದು ಅಕ್ಕಪಕ್ಕದ ಮನೆಯವರಿಗೆ ತೊಂದರೆ ನೀಡಿತ್ತು. ಇದರಿಂದಾಗಿ ಗಿಳಿ ಮಾಲೀಕ ಪೊಲೀಸ್ ಠಾಣೆ ಮೆಟ್ಟಿಲೇರುವವರೆಗೂ ರಂಪಾಟ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ತೈವಾನ್ ನಲ್ಲಿ ಗಿಳಿಯೊಂದು ಹೊಸ ರಾದ್ಧಾಂತ ಸೃಷ್ಟಿಸಿದೆ. ಇದರಿಂದಾಗಿ ಗಿಳಿ ಮಾಲೀಕ ಲಕ್ಷ ಲಕ್ಷ ರೂಪಾಯಿ ದಂಡದ ಜೊತೆಗೆ ಜೈಲು ಶಿಕ್ಷೆ ಅನುಭವಿಸುವಂತೆ ಆಗಿದೆ.
ಇದನ್ನೂ ಓದಿ: ಒಂದೇ ಬಾರಿಗೆ 16 ದೋಸೆ ಪ್ಲೇಟ್ ಹಿಡಿದು ಸರ್ವ್! – ಸಪ್ಲೈಯರ್ ಟ್ಯಾಲೆಂಟ್ ಗೆ ನೆಟ್ಟಿಗರು ಫಿದಾ…
ಹೌದು, ವೈದ್ಯರೊಬ್ಬರು ತಮ್ಮ ಮನೆಯಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಅವರ ಬಳಿ ಹೋಗಿದ್ದಾನೆ. ಆತ ತನ್ನ ಗಿಳಿಯನ್ನು ಕೈಯಲ್ಲಿ ಹಿಡಿದುಕೊಂಡು ಬಂದಿದ್ದಾನೆ. ಕೆಲ ಹೊತ್ತಲ್ಲೇ ಗಿಳಿ ವೈದ್ಯನ ಮೇಲೆ ಹಾರಿ ತನ್ನ ಕೊಕ್ಕಲ್ಲಿ ಕುಕ್ಕಲು ಪ್ರಾರಂಭಿಸಿದೆ. ಈ ವೇಳೆ ಗಿಳಿ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ವೈದ್ಯ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಿಳಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ವೈದ್ಯ ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮೂರು ತಿಂಗಳ ಬಳಿಕ ಚೇತರಿಸಿಕೊಂಡಿದ್ದಾರೆ. ಆದರೆ ಅವರ ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದಾಗಿ 6 ತಿಂಗಳ ಕಾಲ ಏನು ಕೆಲಸ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ತನಗಾದ ನಷ್ಟಕ್ಕೆ ಪರಿಹಾರ ಬೇಕೆಂದು ವೈದ್ಯ ಕೋರ್ಟ್ ಮೊರೆ ಹೋಗಿದ್ದಾರೆ. ಹುವಾಂಗ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು, ಎರಡೂ ಕಡೆಯ ವಾದಗಳನ್ನು ಆಲಿಸಿದ ಬಳಿಕ ಗಿಳಿ ಮಾಲೀಕನದ್ದೇ ತಪ್ಪು ಎಂದು ಸಾಭೀತಾಗಿದೆ. ಇದಕ್ಕಾಗಿ ನ್ಯಾಯಾಧೀಶರು ಗಿಳಿ ಮಾಲೀಕನಿಗೆ ಬರೋಬ್ಬರಿ 74 ಲಕ್ಷ ರೂಪಾಯಿ ದಂಡ ಜೊತೆಗೆ ಎರಡು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದಾರೆ.