ಒಂದೇ ದಿನದಲ್ಲಿ ನಡೆಯುವ ಕಥೆಯೇ ಟಗರು ಪಲ್ಯ – ಹಳ್ಳಿ ಸೊಗಡಿನ ಚಿತ್ರದಲ್ಲಿ ಪ್ರತಿಭಾವಂತ ಕಲಾವಿದರ ಸಂಗಮ

ಒಂದೇ ದಿನದಲ್ಲಿ ನಡೆಯುವ ಕಥೆಯೇ ಟಗರು ಪಲ್ಯ – ಹಳ್ಳಿ ಸೊಗಡಿನ ಚಿತ್ರದಲ್ಲಿ ಪ್ರತಿಭಾವಂತ ಕಲಾವಿದರ ಸಂಗಮ

ಒಂದೇ ದಿನದಲ್ಲಿ ನಡೆಯುವ ಕಥೆಯನ್ನು ಸಿನಿಮಾ ಮೂಲಕ ತೋರಿಸುವುದು ಅಷ್ಟು ಸುಲಭವಲ್ಲ. ಆದರೆ, ‘ಟಗರು ಪಲ್ಯ’ ಸಿನಿಮಾ ನೋಡಿದ ಮೇಲೆ ಈ ಸವಾಲಿನ ಕೆಲಸವನ್ನು ನಿರ್ದೇಶಕರು ಅಚ್ಚುಕಟ್ಟಾಗಿಯೇ ಮಾಡಿದ್ದಾರೆ ಅಂತಾ ಅನಿಸದೆ ಇರಲ್ಲ. ಮುಂಜಾನೆಯಿಂದ ಸಂಜೆ ತನಕ ನಡೆಯುವ ಕಥೆಯನ್ನು ಎಲ್ಲೂ ಬೋರಾಗದಂತೆ ಕಟ್ಟಿಕೊಟ್ಟಿದ್ದಾರೆ. ಹಳ್ಳಿ ಸೊಗಡಿನ ಸಿನಿಮಾ ಟಗರು ಪಲ್ಯವನ್ನು ಇನ್ನೂ ಚೆಂದವಾಗಿ ಕಾಣುವಂತೆ ಮಾಡಿದ್ದು ಕಲಾವಿದರು.

ಇದನ್ನೂ ಓದಿ: ಕ್ಯಾಪ್ಟನ್ಸಿ ಟಾಸ್ಕ್ ಆಯ್ಕೆ ವೇಳೆ ಸಂಗೀತಾ ಮತ್ತು ಕಾರ್ತಿಕ್ ನಡುವೆ ಬಿರುಕು – ನಮ್ರತಾ ವಿಚಾರಕ್ಕೆ ಕೊನೆಯಾಗುತ್ತಾ ಸುಂದರ ಸ್ನೇಹ?

ಪ್ರತಿಭಾವಂತ ಕಲಾವಿದರ ಸಂಗಮದಿಂದ ಮೂಡಿ ಬಂದ ಚಿತ್ರವೇ ಟಗರು ಪಲ್ಯ. ಗ್ರಾಮೀಣ ಭಾಗದಲ್ಲಿ ನಡೆಯುವ ಒಂದು ಆಚರಣೆಯನ್ನೇ ಕಥೆಯಾಗಿಟ್ಟುಕೊಂಡು ಹೊಸ ನಿರ್ದೇಶಕ ಉಮೇಶ್ ಕೆ. ಕೃಪಾ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಡಾಲಿ ಧನಂಜಯ್ ಅವರು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಕಾಡಿನೊಳಗೆ ಇರುವ ಊರಿನ ದೇವಿಗೆ ಹರಕೆ ತೀರಿಸಲು ಬರುವ ಕುಟುಂಬದ ಕಥೆ ಈ ಸಿನಿಮಾದಲ್ಲಿದೆ. ಕುರಿಯನ್ನು ಬಲಿ ಕೊಡುವುದಕ್ಕೂ ಮುನ್ನ ಆ ಕುರಿ ತಲೆ ಅಲ್ಲಾಡಿಸುವ ಮೂಲಕ ಅನುಮತಿ ನೀಡಬೇಕು. ತಲೆ ಅಲ್ಲಾಡಿಸದ ಹೊರತು ಕುರಿಯನ್ನು ಕಡಿಯುವಂತಿಲ್ಲ ಎಂಬುದು ಜನರ ನಂಬಿಕೆ. ತಲೆ ಅಲ್ಲಾಡಿಸದಿದ್ದರೆ ಆ ಸಂದರ್ಭದಲ್ಲಿ ಎದುರಾಗುವ ಪ್ರಸಂಗಗಳು ಹೇಗಿರುತ್ತದೆ ಎಂಬುದನ್ನೇ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ ನಿರ್ದೇಶಕ ಉಮೇಶ್. ಈ ಚಿತ್ರಕ್ಕೆ ನಾಗಭೂಷಣ ಹೀರೋ, ಅಮೃತಾ ಪ್ರೇಮ್ ಹೀರೋಯಿನ್. ಆದರೆ ಅವರನ್ನೂ ಮೀರಿಸುವ ರೀತಿಯಲ್ಲಿ ರಂಗಾಯಣ ರಘು ಮತ್ತು ತಾರಾ ಅನುರಾಧಾ ಅವರ ಪಾತ್ರಗಳು ಮೂಡಿಬಂದಿವೆ. ಇಡೀ ಸಿನಿಮಾವನ್ನು ರಂಗಾಯಣ ರಘು ಅವರು ಆವರಿಸಿಕೊಂಡಿದ್ದಾರೆ. ಮಗಳಿಗೆ ಮದುವೆ ಮಾಡಬೇಕು ಎಂದು ಸಿಕ್ಕಾಪಟ್ಟೆ ಕಷ್ಟಪಡುವ ತಂದೆಯ ಪಾತ್ರವನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರ ಪತ್ನಿಯ ಪಾತ್ರದಲ್ಲಿ ನಟಿ ತಾರಾ ಕೂಡ ಉತ್ತಮವಾಗಿ ನಟಿಸಿದ್ದಾರೆ. ಈ ಸಿನಿಮಾದ ಎಲ್ಲ ಪಾತ್ರಗಳಿಗೂ ಅವುಗಳದ್ದೇ ಆದಂತಹ ಮಹತ್ವ ಇದೆ. ಚಿತ್ರಾ ಶೆಣೈ, ವಾಸುಕಿ ವೈಭವ್, ಶ್ರೀನಾಥ ವಸಿಷ್ಠ, ಹುಲಿ ಕಾರ್ತಿಕ್, ಶರತ್ ಲೋಹಿತಾಶ್ವ, ವೈಜನಾಥ ಬೀರಾದರ, ಚಂದ್ರಕಲಾ ಸೇರಿದಂತೆ ಎಲ್ಲ ಕಲಾವಿದರು ‘ಟಗರು ಪಲ್ಯ’ ಸಿನಿಮಾದ ಮೆರುಗು ಹೆಚ್ಚಿಸಿದ್ದಾರೆ. ಏನನ್ನೂ ಮಾಡದೇ ಸುಮ್ಮನೇ ನಿಂತರೂ ಕೂಡ ‘7 ಸ್ಟಾರ್ ಸುಲ್ತಾನ್’ ಎಂಬ ಟಗರು ಭರ್ಜರಿ ಚಪ್ಪಾಳೆ ಗಿಟ್ಟಿಸುತ್ತದೆ. ಅದು ಕೂಡ ಪ್ರಮಖ ಪಾತ್ರವಾಗಿ ಆಕರ್ಷಿಸುತ್ತದೆ. ನೆನಪಿರಲಿ’ ಪ್ರೇಮ್ ಅವರ ಪುತ್ರಿ ಅಮೃತಾಗೆ ಇದು ಮೊದಲ ಸಿನಿಮಾ. ಅವರ ವಯಸ್ಸಿಗೆ ತಕ್ಕಂತಹ ಪಾತ್ರವೇ ಇಲ್ಲಿ ಅವರಿಗೆ ಸಿಕ್ಕಿದೆ. ಹದಿಹರೆಯದ ಹುಡುಗಿಯ ತಳಮಳಗಳನ್ನು ಅವರು ಚೆನ್ನಾಗಿ ಅಭಿವ್ಯಕ್ತಿಸಿದ್ದಾರೆ. ಮೊದಲಾರ್ಧದಲ್ಲಿ ಅವರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲವಾದರೂ ಪ್ರೀ-ಕ್ಲೈಮ್ಯಾಕ್ಸ್ ವೇಳೆಗೆ ಅವರ ಪಾತ್ರ ಹೆಚ್ಚು ಇಷ್ಟವಾಗುತ್ತಾ ಹೋಗುತ್ತದೆ.

ಮೊದಲಾರ್ಧದಲ್ಲಿ ಕುರಿ ಕಡಿಯಲು ಪ್ರಯತ್ನಿಸುವ ದೃಶ್ಯಗಳು ಪದೇಪದೇ ರಿಪೀಟ್ ಆದಾಗ ಸ್ವಲ್ಪ ಬೋರು ಎನಿಸಬಹುದು. ಕುರಿ ತಲೆ ಅಲ್ಲಾಡಿಸಲಿ ಎಂದು ಕಥೆಯಲ್ಲಿನ ಪಾತ್ರಗಳು ಗಂಟೆಗಟ್ಟಲೆ ಕಾಯುವ ರೀತಿಯೇ ಪ್ರೇಕ್ಷಕರು ಕೂಡ ಕಥೆ ಬೇಗ ತೆರೆದುಕೊಳ್ಳಲಿ ಎಂದು ಕಾಯುವಂತಾಗುತ್ತದೆ. ಇಂಥ ಚಿಕ್ಕಪುಟ್ಟ ಮೈನಸ್ ಅಂಶಗಳನ್ನು ಹೊರತುಪಡಿಸಿದರೆ ಈ ಸಿನಿಮಾ ಮೆಚ್ಚುಗೆಗೆ ಅರ್ಹವಾಗಿದೆ. ಮೊದಲಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧದಲ್ಲಿ ‘ಟಗರು ಪಲ್ಯ’ ಸಿನಿಮಾದ ವೇಗ ಹೆಚ್ಚಾಗಿದೆ. ಫ್ಯಾಮಿಲಿ ಪ್ರೇಕ್ಷಕರಿಗೆ ಹಿಡಿಸುವಂತಾ ಸಿನಿಮಾವೇ ಟಗರು ಪಲ್ಯ.

Sulekha