ರೋಹಿತ್-ಕೊಹ್ಲಿಗೆ ಕೊನೇ ವಿಶ್ವಕಪ್? – ವಿದಾಯಕ್ಕೆ ಸಜ್ಜಾದ IND ಸ್ಟಾರ್ಸ್? 
ಏನಿದು ಯಂಗ್ ಇಂಡಿಯಾ ಥೀಮ್?

ರೋಹಿತ್-ಕೊಹ್ಲಿಗೆ ಕೊನೇ ವಿಶ್ವಕಪ್? – ವಿದಾಯಕ್ಕೆ ಸಜ್ಜಾದ IND ಸ್ಟಾರ್ಸ್? ಏನಿದು ಯಂಗ್ ಇಂಡಿಯಾ ಥೀಮ್?

ಟಿ-20 ವಿಶ್ವಕಪ್ ಇನ್ನೇನು ಕೊನೇ ಘಟ್ಟದಲ್ಲಿದೆ. ಜೂನ್ 29ರಂದು ಫೈನಲ್ ಪಂದ್ಯ ನಡೆಯಲಿದ್ದು, ಇಲ್ಲಿ ಗೆಲ್ಲುವ ತಂಡ 2024ರ ಚುಟುಕು ಕ್ರಿಕೆಟ್​ನ ಚಾಂಪಿಯನ್ ಆಗಲಿದೆ. ಆದ್ರೆ ಇದೇ ಟೂರ್ನಿ ಭಾರತದ ಇಬ್ಬರು ಸ್ಟಾರ್ ಆಟಗಾರರ ಪಾಲಿಗೆ ಕೊನೇ ಟೂರ್ನಿಯಾಗಲಿದೆ ಎಂಬ ಚರ್ಚೆ ನಡೀತಿದೆ. ಅದು ಬೇರೆ ಯಾರೂ ಇಲ್ಲ. ಟೀಂ ಇಂಡಿಯಾದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಹಾಗೇ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ. ಈ ಇಬ್ಬರೂ ಸ್ಟಾರ್ ಪ್ಲೇಯರ್ಸ್​ಗೆ ಇದೇ ಕೊನೇ ಐಸಿಸಿ ವಿಶ್ವಕಪ್ ಟೂರ್ನಿ ಎನ್ನಲಾಗಿದೆ. ಹಾಗಾದ್ರೆ ಇನ್ಮುಂದೆ ರೋಹಿತ್ ಮತ್ತು ಕೊಹ್ಲಿ ಐಸಿಸಿ ವಿಶ್ವಕಪ್ ಪಂದ್ಯಗಳನ್ನ ಆಡೋದಿಲ್ವಾ? ಕ್ರಿಕೆಟ್ ಲೋಕದಲ್ಲಿನ ಈ ಚರ್ಚೆಗೆ ಕಾರಣ ಏನು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: AFG ಬ್ಯಾಟರ್ಸ್ ಪೆವಿಲಿಯನ್ ಪರೇಡ್ – 56 ರನ್ ಗೆ ಆಲೌಟ್.. ಹಿಂಗೂ ಆಡ್ತಾರಾ?

ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಾತ್ರವೇ ಟಿ20 ಸ್ವರೂಪದಲ್ಲಿ 4,000 ರನ್ ಗಡಿ ದಾಟಿದ್ದಾರೆ. ಇವರು ಚುಟುಕು ಸ್ವರೂಪದ ಪಂದ್ಯಗಳಲ್ಲಿ ಭಾರತದ ಸಾರ್ವಕಾಲಿಕ ಗರಿಷ್ಠ ರನ್ ಗಳಿಸಿದ ಆಟಗಾರರು. ಸದ್ಯ ಭಾರತ ತಂಡದಲ್ಲಿ ಅನುಭವಿ ಆಟಗಾರರಾಗಿರುವ ಕೊಹ್ಲಿ ಮತ್ತು ರೋಹಿತ್ ತಮ್ಮ ವೃತ್ತಿಬದುಕಿನ ಕೊನೆಯ ಹಂತದಲ್ಲಿದ್ದಾರೆ. ಇನ್ನೇನು ಕೆಲವೇ ತಿಂಗಳಲ್ಲಿ ಬಹುತೇಕ ಈ ಇಬ್ಬರು ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆ ಇದೆ ಎನ್ನಲಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಕಳೆದ ವರ್ಷ ಭಾರತದಲ್ಲಿ ನಡೆದ ಮಹತ್ವದ ಏಕದಿನ ವಿಶ್ವಕಪ್‌ ಪಂದ್ಯಾವಳಿಯನ್ನು ಗೆಲ್ಲಲು ವಿಫಲವಾಗಿದ್ದ ಭಾರತ, ಈ ಬಾರಿ ಉತ್ತಮ ಪ್ರದರ್ಶನ ನೀಡಿತ್ತು. ಆದ್ರೀಗ ಈ ಇಬ್ಬರು ದಿಗ್ಗಜರು ತಮ್ಮ ಕ್ರಿಕೆಟ್‌ ಭವಿಷ್ಯದ ಕುರಿತು ಮಹತ್ವದ ನಿರ್ಧಾರಕ್ಕೆ ಬರಲು ಸಿದ್ಧರಾಗಿದ್ದಾರೆ.

ರೋಹಿತ್ & ಕೊಹ್ಲಿ ಔಟ್!

ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಟಿ-20 ವಿಶ್ವಕಪ್ ಜರ್ನಿ ಆರಂಭಿಸಿದ್ದ ಟೀಂ ಇಂಡಿಯಾ ಈ ಸಲ ಅದ್ಬುತ ಪ್ರದರ್ಶನವನ್ನೇ ನೀಡಿದೆ. ಆದ್ರೆ ಭಾರತದ ಪರ ಓಪನರ್ ಜೋಡಿಯ ಕೊಡುಗೆ ಮಾತ್ರ ಶೂನ್ಯ. ಅದ್ರಲ್ಲೂ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಸತತ ವೈಫಲ್ಯ ಅನುಭವಿಸಿದ್ದಾರೆ. ಆದ್ರೆ ರೋಹಿತ್ ಶರ್ಮಾ ಅವರು ಐರ್ಲೆಂಡ್ ವಿರುದ್ಧ ಅರ್ಧಶತಕ ಹಾಗೂ ಆಸ್ಟ್ರೇಲಿಯಾ ವಿರುದ್ದ ಸೂಪರ್‌-8ರ ಪಂದ್ಯದಲ್ಲಿ 92 ರನ್‌ಗಳನ್ನು ಕಲೆ ಹಾಕಿದ್ದರು. ರೋಹಿತ್‌ ಶರ್ಮಾ ಆರಂಭದಲ್ಲಿ ವೈಫಲ್ಯ ಅನುಭವಿಸಿದರೂ ತಡವಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಇದ್ರ ನಡುವೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಾಸೀಮ್ ಜಾಫರ್, 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಬಳಿಕ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಹೇಳಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ. ಆದರೆ, ಇವರಿಬ್ಬರೂ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂದುವರಿಯಲಿದ್ದಾರೆ ಎಂದಿದ್ದಾರೆ. ಅಲ್ಲದೇ ಈ ನಿರ್ಧಾರ ಇಬ್ಬರೂ ಆಟಗಾರರ ಹಾಗೂ ಸೆಲೆಕ್ಟರ್‌ಗಳ ನಿರ್ಧಾರವಾಗಿದೆ. ಟಿ20 ವಿಶ್ವಕಪ್‌ ಟೂರ್ನಿಯಲ್ಲಿಯೇ ಇವರದು ಕೊನೆಯ ಪಂದ್ಯ ಎಂದು ನಾನು ನಂಬುತ್ತೇನೆ ಎಂದು ವಾಸೀಮ್ ಜಾಫರ್‌ ತಿಳಿಸಿದ್ದಾರೆ. ಹಾಗೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ 100 ಶತಕಗಳನ್ನು ಪೂರ್ಣಗೊಳಿಸಲಿದ್ದಾರೆ. ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ 29 ಟೆಸ್ಟ್‌ ಶತಕಗಳು, 50 ಒಡಿಐ ಶತಕಗಳು ಹಾಗೂ ಒಂದು ಟಿ20ಐ ಶತಕ ಸಿಡಿಸಿದ್ದಾರೆ. ಅವರಿಗೆ ಇನ್ನೂ ಸಾಕಷ್ಟು ಸಮಯವಿದೆ. ಅವರ ಫಿಟ್‌ನೆಸ್‌ ಹಾಗೂ ಅವರು ಸ್ಥಿರವಾಗಿ ರನ್‌ ಗಳಿಸುತ್ತಿರುವುದನ್ನು ನೋಡಿದರೆ, ಅವರು ಖಂಡಿತವಾಗಿಯೂ 100 ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಲಿದ್ದಾರೆಂದು ನಾನು ಭಾವಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನಂತರ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಐಕಾನ್‌ಗಳಾಗಿರುವ ಕೊಹ್ಲಿ ಮತ್ತು ರೋಹಿತ್ ಐಸಿಸಿ ಟ್ರೋಫಿಯನ್ನು ಜಂಟಿಯಾಗಿ ಗೆದ್ದಿಲ್ಲ. 2011ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ವಿರಾಟ್ ಕೊಹ್ಲಿ ವಿಶ್ವಕಪ್ ಯಶಸ್ಸಿನಲ್ಲಿ ಪಾಲ್ಗೊಂಡಿದ್ದರು. ಅತ್ತ 2007ರ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಧೋನಿ ಬಳಗದ ಭಾಗವಾಗಿದ್ದ ರೋಹಿತ್, ಇದೀಗ ದಶಕಗಳ ಬಳಿಕ 2024ರ ಆವೃತ್ತಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮುಂಬರುವ ಟಿ20 ವಿಶ್ವಕಪ್‌ ವೇಳೆಗೆ ಕೊಹ್ಲಿಗೆ 38 ವರ್ಷ ಮತ್ತು ರೋಹಿತ್‌ ಶರ್ಮಾಗೆ 40 ವರ್ಷ ತುಂಬಲಿದೆ. ಮುಂದಿನ ಟಿ20 ವಿಶ್ವಕಪ್ 2026ರಲ್ಲಿ ನಡೆಯಲಿದ್ದು, ಭಾರತ ಮತ್ತು ಶ್ರೀಲಂಕಾ ದೇಶಗಳ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಆದರೆ, ಇನ್ನೂ ಒಂದು ವರ್ಷ ಚುಟುಕು ಸ್ವರೂಪದಲ್ಲಿ ಉಭಯ ಆಟಗಾರರು ಆಡುವುದು ಅನುಮಾನ. ಆದರೆ, ತವರಿನಲ್ಲಿ ಟೂರ್ನಿ ನಡೆಯುತ್ತಿರುವ ಕಾರಣದಿಂದ ಆಡಿದರೂ ಅಚ್ಚರಿಯಿಲ್ಲ. ಸದ್ಯ ಟಿ-20 ವಿಶ್ವಕಪ್ ಬಳಿಕ ಜುಲೈ ತಿಂಗಳಲ್ಲಿ ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡ ಪ್ರಕಟಗೊಂಡಿದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌  ಟೂರ್ನಿಯಲ್ಲಿ ಮಿಂಚಿದ್ದ ರಿಯಾನ್‌ ಪರಾಗ್‌, ಅಭಿಷೇಕ್ ಶರ್ಮಾ ಹಾಗೂ ನಿತೀಶ್ ರೆಡ್ಡಿ ಅವರು ಕೂಡ ಆಯ್ಕೆಯಾಗಿದ್ದಾರೆ. ಜುಲೈ 6 ರಂದು ಆರಂಭವಾಗುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಶುಭಮನ್ ಗಿಲ್‌ ಮುನ್ನಡೆಸಲಿದ್ದಾರೆ. ಹೀಗಾಗಿ ಹಿರಿಯರು ತಂಡದಿಂದ ಹೊರನಡೆಯೋ ಲೆಕ್ಕಾಚಾರದಲ್ಲಿದ್ರೆ ಕಿರಿಯರ ಬಳಗ ಹೊಸ ಯುಗಾರಂಭಕ್ಕೆ ಸಿದ್ಧಗೊಳ್ತಿದೆ.

Shwetha M

Leave a Reply

Your email address will not be published. Required fields are marked *