ಕೌವ್ ಕೌವ್ ಹಾರ್ದಿಕ್ ಪಾಂಡ್ಯ – T-20 ವಿಶ್ವಕಪ್ ನಿಂದ ಔಟ್?

ಕೌವ್ ಕೌವ್ ಹಾರ್ದಿಕ್ ಪಾಂಡ್ಯ – T-20 ವಿಶ್ವಕಪ್ ನಿಂದ ಔಟ್?

ಐಪಿಎಲ್ ಟೂರ್ನಿ ಆರಂಭಕ್ಕೂ ಮೊದ್ಲೇ ಕಾಂಟ್ರವರ್ಸಿ ಕ್ಯಾಪ್ಟನ್ ಆಗಿ ಬಂದಿದ್ದ ಹಾರ್ದಿಕ್ ಪಾಂಡ್ಯ ಇಂದಿಗೂ ಕೂಡ ಲಯ ಕಂಡುಕೊಳ್ಳೋಕೆ ಆಗ್ತಿಲ್ಲ. ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಗತ್ತಿನಿಂತ ಟೀಂ ಲೀಡ್ ಮಾಡ್ತಿದ್ದ ಪಾಂಡ್ಯ ಮುಂಬೈ ಇಂಡಿಯನ್ಸ್​ಗೆ ಬಂದ ಮೇಲೆ ಕಂಪ್ಲೀಟ್ ಫೇಲ್ಯೂರ್ ಆಗಿದ್ದಾರೆ. ತಂಡವನ್ನೂ ಲೀಡ್ ಮಾಡೋಕೆ ಆಗದೆ, ಸಹ ಆಟಗಾರರನ್ನ ಸಂಭಾಳಿಸೋಕೆ ಆಗದೆ ತಾನೂ ಕೂಡ ಬೆಸ್ಟ್ ಪರ್ಫಾಮೆನ್ಸ್ ನೀಡೋಕೆ ಆಗದೆ ಒದ್ದಾಡ್ತಿದ್ದಾರೆ. ಇದೀಗ ಟಿ-20 ವರ್ಲ್ಡ್​​ಕಪ್​ಗೂ ಪಾಂಡ್ಯ ಸೆಲೆಕ್ಟ್ ಆಗೋದು ಡೌಟ್ ಇದೆ. ಮಂಗಳವಾರ ಲಕ್ನೋ ಸೂಪರ್ ಜೇಂಟ್ಸ್ ವಿರುದ್ಧ ಮುಂಬೈ ಪಂದ್ಯ ನಡೆಯಲಿದ್ದು ಪಾಂಡ್ಯ ಪಾಲಿಗೂ ತುಂಬಾನೇ ಇಂಪಾರ್ಟೆಂಟ್ ಆಗಲಿದೆ. ಅಷ್ಟಕ್ಕೂ ಈ ಮ್ಯಾಚ್ ಪಾಂಡ್ಯಗೆ ಟರ್ನಿಂಗ್ ಪಾಯಿಂಟ್ ಆಗುತ್ತಾ? ಆರಂಭದಲ್ಲಿ ನಗ್ತಾ ಇದ್ದ ಪಾಂಡ್ಯ ಈಗ ತಾಳ್ಮೆ ಕಳೆದುಕೊಂಡು ಕಿರುಚಾಡ್ತಾ ಇರೋದೇಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕೆಕೆಆರ್ ವಿರುದ್ಧ ಸೋತ ಡೆಲ್ಲಿ – ಕೋಲ್ಕತ್ತಾಗೆ 7 ವಿಕೆಟ್‌ಗಳ ಭರ್ಜರಿ ಜಯ

ಐಪಿಎಲ್ ಟೂರ್ನಿ ಆರಂಭದಲ್ಲೇ ಹ್ಯಾಟ್ರಿಕ್‌ ಸೋಲಿನ ಬಳಿಕ ಗೆಲುವಿನ ಲಯಕ್ಕೆ ಮರಳಿದ್ದ ಮುಂಬೈ ಇಂಡಿಯನ್ಸ್ ಮತ್ತೆ ಸೋಲಿನ ಸುಳಿಯಲ್ಲಿ ಸಿಲುಕಿದೆ. 5 ಬಾರಿ ಚಾಂಪಿಯನ್‌ ಆಗಿದ್ದ ಎಂಐ ತಂಡ ಮಂಗಳವಾರ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಸೆಣಸಾಡಲಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಆಡಿರುವ 9 ಪಂದ್ಯಗಳಲ್ಲಿ 3ರಲ್ಲಿ ಮಾತ್ರ ಗೆದ್ದಿದೆ. ಇನ್ಮುಂದೆ ಆಡುವ ಎಲ್ಲಾ ಪಂದ್ಯದಲ್ಲಿ ಗೆದ್ದರಷ್ಟೇ ತಂಡ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯಲಿದೆ. ಹಾಗೇನಾದ್ರೂ ಪಂದ್ಯ ಕೈ ಚೆಲ್ಲಿದ್ರೆ ರೇಸ್‌ನಿಂದ ಹೊರಬೀಳುವುದು ಪಕ್ಕಾ ಆಗಲಿದೆ. ಹೀಗಾಗಿ ಬೆಸ್ಪ್ ಪರ್ಫಾಮೆನ್ಸ್ ನೀಡಿ ಗೆಲ್ಲಲೇಬೇಕಾದ ಅನಿವಾರ್ಯತೆ ಎಂಐ ಟೀಮ್​ಗೆ ಇದೆ. ಅಲ್ದೇ ಇವತ್ತು ಮುಂಬೈಗೆ 5 ಬಾರಿ ಟ್ರೋಫಿ ತಂದು ಕೊಟ್ಟ ಹಿಟ್​ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹುಟ್ಟುಹಬ್ಬ. 37ನೇ ವರ್ಷಕ್ಕೆ ಕಾಲಿಟ್ಟರೋ ರೋಹಿತ್ ಶರ್ಮಾಗೆ ಗೆಲುವಿನ ಮೂಲಕ ಗಿಫ್ಟ್ ನೀಡಬೇಕಿದೆ. ಹೀಗಾಗಿ ತಂಡದ ಇತರೆ ಆಟಗಾರರಿಗೂ ಈ ಮ್ಯಾಚ್ ತುಂಬಾನೇ ಸ್ಪೆಷಲ್ ಆಗಿದೆ.

ಮುಂಬೈ ಟೀಮ್​ನಲ್ಲಿ ದಿಗ್ಗಜ ಆಟಗಾರರೇ ಇದ್ದಾರೆ. ಆದ್ರೆ ಬ್ಯಾಟಿಂಗ್‌ ವಿಭಾಗ ಅಬ್ಬರಿಸುತ್ತಿದ್ದರೂ, ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ ಇತರ ಬೌಲರ್‌ಗಳು ನಿರೀಕ್ಷಿತ ಪ್ರದರ್ಶನ ನೀಡದಿರುವುದು ತಂಡಕ್ಕೆ ತಲೆನೋವಾಗಿದೆ. ಮತ್ತೊಂದೆಡೆ ಕನ್ನಡಿಗ ಕೆ.ಎಲ್ ರಾಹುಲ್ ನೇತೃತ್ವದ ಎಲ್​ಎಸ್​ಜಿ ಆಡಿರುವ 9ರಲ್ಲಿ 5 ಪಂದ್ಯಗಳನ್ನ ಗೆದ್ದಿದೆ. ಈ ಪಂದ್ಯದಲ್ಲಿ ಗೆದ್ದರೆ ತಂಡದ ಪ್ಲೇ-ಆಫ್‌ ಹಾದಿ ಸುಲಭವಾಗಲಿದ್ದು, ಸೋತರೆ ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಲಿದೆ. ಅದ್ರಲ್ಲೂ ಇಲ್ಲಿ ಕೆ.ಎಲ್ ರಾಹುಲ್ ಟಿ20 ವಿಶ್ವಕಪ್‌ ಆಯ್ಕೆ ರೇಸ್‌ನಲ್ಲಿದ್ದು, ಆಯ್ಕೆ ಸಮಿತಿಯ ಗಮನ ಸೆಳೆಯಬೇಕಿದ್ರೆ ಒಳ್ಳೆಯ ಪ್ರದರ್ಶನ ನೀಡಬೇಕಿದೆ.

ಇನ್ನು ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆದ ಮೇಲೆ ಪಾಂಡ್ಯ ತುಂಬಾನೇ ಒತ್ತಡಕ್ಕೆ ಸಿಲುಕಿದ್ದಾರೆ. ರೋಹಿತ್ ಶರ್ಮಾರನ್ನ ಮುಂಬೈ ಕ್ಯಾಪ್ಟನ್ಸಿಯಿಂದ ಇಳಿಸಿ ನಾಯಕನಾಗಿದ್ದಕ್ಕೆ ಪಾಂಡ್ಯ ಐಪಿಎಲ್ ಆರಂಭದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ರು. ಪಂದ್ಯದ ವೇಳೆಯೂ ಅಭಿಮಾನಿಗಳು ಗ್ಯಾಲರಿಯಲ್ಲೇ ಘೋಷಣೆ ಕೂಗಿ ಆಕ್ರೋಶ ಹೊರ ಹಾಕುತ್ತಿದ್ರು. ಸೋಶಿಯಲ್ ಮೀಡಿಯಾದಲ್ಲಂತೂ ಹಾರ್ಪಿಕ್ ಪಾಂಡ್ಯ ಅಂತೆಲ್ಲಾ ಟೀಕಿಸಿದ್ರು. ಆದ್ರೆ ಆರಂಭದಲ್ಲಿ ತಮ್ಮ ನಗುವಿನ ನಾಟಕದ ಮೂಲಕವೇ ಎಲ್ಲವನ್ನೂ ಇಗ್ನೋರ್ ಮಾಡ್ತಿದ್ರು. ಮುಂಬೈ ತಂಡ ಸೋತ್ರೂ, ಗೆದ್ರೂ ನಗ್ತಾನೇ ಇರೋರು. ಆದ್ರೀಗ ಪಾಂಡ್ಯ ಮತ್ತೆ ತಮ್ಮ ತಂಡದ ಆಟಗಾರರ ಮೇಲೆ ಸಿಟ್ಟಾಗ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಸಹ ಆಟಗಾರರ ಮೇಲೆಯೇ ಕೂಗಾಡಿದ್ದರು. 20 ಓವರ್‌ಗಳಲ್ಲಿ ಕೇವಲ ನಾಲ್ಕು ವಿಕೆಟ್ ನಷ್ಟಕ್ಕೆ ಡೆಲ್ಲಿ ತಂಡ 257 ರನ್‌ ಗಳ ಬೃಹತ್ ಗುರಿ ನೀಡಿತ್ತು. ಡೆಲ್ಲಿ ಬ್ಯಾಟ್ಸ್‌ಮನ್‌ಗಳ ಆರ್ಭಟವನ್ನು ಕಟ್ಟಿಹಾಕುವಲ್ಲಿ ವಿಫಲರಾದ ತಮ್ಮ ಬೌಲರ್‌ಗಳ ವಿರುದ್ಧ ಹಾರ್ದಿಕ್ ಪಾಂಡ್ಯ ಕಿರುಚಾಡಿದ್ರು. ಈ ಸೀನ್ ವೈರಲ್ ಆಗ್ತಿದ್ದಂತೆ ಪಾಂಡ್ಯ ವಿರುದ್ಧ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ರು. ಪಾಂಡ್ಯ ಕಿರುಚಾಟಕ್ಕೆ ಕಾಗೆ ಕೌವ್ ಕೌವ್ ಅನ್ನೋ ಸೌಂಡ್ ರಿಮಿಕ್ಸ್ ಮಾಡಿ ಟ್ರೋಲ್ ಮಾಡಿದ್ರು. ಹೀಗೆ ಪಾಂಡ್ಯ ಟ್ರೋಲ್, ಸೋಲಿನ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವಾಗ್ಲೇ ವಿಶ್ವಕಪ್ ಟೂರ್ನಿಗೆ ಸೆಲೆಕ್ಟ್ ಆಗ್ತಾರೋ ಇಲ್ವೋ ಅನ್ನೋ ಚರ್ಚೆ ನಡೀತಿದೆ. ಕಳಪೆ ಫಾರ್ಮ್​ನಲ್ಲಿರೋ ಪಾಂಡ್ಯರನ್ನ ಬಿಸಿಸಿಐ ಕೈ ಬಿಡುತ್ತೆ ಎಂಬ ಮಾತುಗಳೂ ಕೇಳಿ ಬರ್ತಿವೆ.

ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಜೂನ್‌ 1ರಿಂದ 29ರವರೆಗೆ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ನಡೆಯಲಿದೆ.  ಈ ಟೂರ್ನಿಗೆ ಭಾರತ ತಂಡದ ವೈಸ್‌ ಕ್ಯಾಪ್ಟನ್ ಜವಾಬ್ದಾರಿಯನ್ನು ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ ರಿಷಭ್ ಪಂತ್‌ ವಹಿಸಿಕೊಳ್ಳುವ ದಟ್ಟವಾಗುತ್ತಿದೆ. ರೋಹಿತ್‌ ಶರ್ಮಾ ತಂಡದ ಕ್ಯಾಪ್ಟನ್‌ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಈ ಮೊದಲೇ ಘೋಷಣೆ ಮಾಡಿತ್ತು. ಆದ್ರೆ ವೈಸ್‌ ಕ್ಯಾಪ್ಟನ್‌ ರೇಸ್‌ನಲ್ಲಿ ಮುಂದಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ರಿಷಭ್ ಪಂತ್‌ ಸಡ್ಡು ಹೊಡೆದಿದ್ದಾರೆ. ಅಜಿತ್‌ ಅಗರ್ಕರ್‌ ಸಾರಥ್ಯದಲ್ಲಿ ಟೀಮ್ ಇಂಡಿಯಾ ಸೆಲೆಕ್ಷನ್ ಕಮಿಟಿ ಏಪ್ರಿಲ್ 30 ಮತ್ತು   ಮೇ 1ರಂದು ಮಹತ್ವದ ಸಭೆ ನಡೆಸಲಿದ್ದು, ಭಾರತದ ಟಿ20 ವಿಶ್ವಕಪ್‌ ತಂಡ ಕಟ್ಟಲಿದ್ದಾರೆ. ರೋಹಿತ್‌ ಶರ್ಮಾ ಬಳಿಕ ಭಾರತ ತಂಡದ ನಾಯಕತ್ವವನ್ನು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯಗೆ ವಹಿಸಲು ಎಲ್ಲ ತಯಾರಿ ನಡೆಸಲಾಗಿತ್ತು. ಆದರೆ, ಐಪಿಎಲ್‌ 2024 ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿ ಭಾರಿ ನಿರಾಸೆ ಮೂಡಿಸಿದೆ. ಮುಂಬೈ ಇಂಡಿಯನ್ಸ್ ತಂಡ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದು, ಕ್ಯಾಪ್ಟನ್ಸಿಯಲ್ಲಿ ಹಾರ್ದಿಕ್‌ ಮುಗ್ಗರಿಸಿರುವುದನ್ನು ಸ್ಪಷ್ಟವಾಗಿದೆ. ಅಲ್ದೇ ಆನ್‌ಫೀಲ್ಡ್‌ನಲ್ಲಿ ಹಾರ್ದಿಕ್‌ ತೆಗೆದುಕೊಂಡ ಹಲವು ನಿರ್ಧಾರಗಳನ್ನು ಟೀಕೆ ಮಾಡಲಾಗಿದೆ. ಹೀಗಾಗಿ ಟೀಮ್ ಇಂಡಿಯಾದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಸ್ಥಾನಕ್ಕೆ ರಿಷಭ್ ಪಂತ್‌ ಮೊದಲ ಆಯ್ಕೆ ಆಗಿದ್ದಾರೆ. ಅಷ್ಟೇ ಅಲ್ಲದೆ ಟಿ20 ವಿಶ್ವಕಪ್‌ಗೆ ಕಟ್ಟಲಾಗುವ 15 ಆಟಗಾರರ ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯಗೆ ಸ್ಥಾನ ಸಿಗುವುದು ಅನುಮಾನ ಎನ್ನಲಾಗಿದೆ.

ಅಷ್ಟಕ್ಕೂ ಇಲ್ಲಿ ಪಾಂಡ್ಯ ಸೈಡ್​ಲೈನ್ ಆಗ್ತಿರೋದಕ್ಕೆ ಕಾರಣ ಅವ್ರೇ.. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಉತ್ತಮವಾಗಿ ಮುನ್ನಡೆಸಲು ವಿಫಲವಾಗಿರುವ ಪಾಂಡ್ಯ, ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಪಾಂಡ್ಯ ಅವರ ಕೆಲವು ಪ್ರಶ್ನಾರ್ಹ ನಿರ್ಧಾರಗಳು ಮತ್ತು ಇತ್ತೀಚಿನ ಸೋಲಿನ ನಂತರ ಭಾರೀ ಟ್ರೋಲ್ ಆಗ್ತಿದ್ದಾರೆ. ಇದೇ ಕಾರಣದಿಂದ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಉಪನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ, ಟಿ20 ವರ್ಲ್ಡ್​ಕಪ್​ಗೆ ಈ ಸ್ಥಾನ ಕಳೆದುಕೊಳ್ಳುವುದು ಖಚಿತ ಎಂದು ಹೇಳಲಾಗುತ್ತಿದೆ.

Shwetha M