IND Vs ENG.. ಸೆಮೀಸ್ ಗೆಲ್ಲೋದ್ಯಾರು? – 1 ಟ್ರೋಫಿ.. 4 ತಂಡ.. ಮಳೆ ಬಂದ್ರೆ?
ವಿಶ್ವಕಪ್ ಇತಿಹಾಸ ಮರುಕಳಿಸುತ್ತಾ?

ಟಿ-20 ವಿಶ್ವಕಪ್ ಇದೀಗ ರೋಚಕ ಘಟ್ಟಕ್ಕೆ ಬಂದಿದೆ. ಒಟ್ಟು 20 ತಂಡಗಳೊಂದಿಗೆ ಆರಂಭವಾದ ಹಣಾಹಣಿಯಲ್ಲಿ ಬರೋಬ್ಬರಿ 52 ಪಂದ್ಯಗಳ ಬಳಿಕ ನಾಲ್ಕು ತಂಡಗಳು ಸೆಮಿಫೈನಲ್ಗೆ ಲಗ್ಗೆ ಇಟ್ಟಿವೆ. ಮೊದಲ ಗುಂಪಿನಿಂದ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ತಂಡಗಳು ಹೊರಬಿದ್ದರೆ, ಎರಡನೇ ಗುಂಪಿನಿಂದ ವೆಸ್ಟ್ ಇಂಡೀಸ್ ಹಾಗೂ ಯುಎಸ್‌ಎ ತಂಡಗಳಿಗೆ ಗೇಟ್ಪಾಸ್ ಸಿಕ್ಕಿದೆ. ಇದರೊಂದಿಗೆ ಭಾರತ, ಅಫ್ಘಾನಿಸ್ತಾನ, ಸೌತ್ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಸೆಮಿಫೈನಲ್ ಕದನಕ್ಕೆ ಅಖಾಡ ಸಿದ್ಧವಾಗಿದೆ. ಸೆಮೀಸ್ನಲ್ಲಿ ಭಾರತದ ಎದುರಾಳಿ ಯಾರು? ಮಳೆ ಬಂದು ಮ್ಯಾಚ್ ರದ್ದಾದ್ರೆ ಕಥೆ ಏನು? ಟಿ-20 ವಿಶ್ವಕಪ್ ಇತಿಹಾಸ ಮರುಕಳಿಸಿದ್ದೇಗೆ? ಈ ಬಗೆಗಿನ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮನೀಶ್ ದಾಂಪತ್ಯದಲ್ಲಿ ಬಿರುಕು – ಶೆಟ್ಟಿಗೆ ಕೈ ಕೊಟ್ರಾ ಪಾಂಡೆ?
ಟಿ-20 ವಿಶ್ವಕಪ್ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಹತ್ತಿರವಾಗ್ತಿದೆ. ಸೂಪರ್ 8 ಫೈಟ್ನ ರಣರೋಚಕ ಕಾದಾಟದಲ್ಲಿ 4 ತಂಡಗಳು ಸೆಮೀಸ್ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿವೆ. ಮಂಗಳವಾರ ಬಾಂಗ್ಲಾದೇಶ ಹಾಗೂ ಅಫ್ಘಾನ್ ವಿರುದ್ಧ ನಡೆದ ಪಂದ್ಯದ ಫಲಿತಾಂಶ ಅಚ್ಚರಿ ರೀತಿಯಲ್ಲಿ ಹೊರಬಿದ್ದಿದ್ದು, ಸೆಮಿ ಫೈನಲ್ನಲ್ಲಿ ಯಾವೆಲ್ಲಾ ತಂಡಗಳು ಎದುರು ಬದುರಾಗಲಿವೆ ಎಂಬುದು ಅಧಿಕೃತವಾಗಿದೆ. ಎ ಗುಂಪಿನಿಂದ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ಸೆಮೀಸ್ ಅರ್ಹತೆ ಪಡೆದರೆ, ಬಿ ಗುಂಪಿನಿಂದ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಟಿಕೆಟ್ ಪಡೆದಿವೆ. ಈ ಮೂಲಕ ಒಂದು ಚಾಂಪಿಯನ್ ಶಿಪ್ಗಾಗಿ ನಾಲ್ಕು ತಂಡಗಳ ಗುದ್ದಾಟಕ್ಕೆ ಕೌಂಟ್ಡೌನ್ ಶುರುವಾಗಿದೆ.
1 ಕಪ್.. ನಾಲ್ವರ ರೇಟ್!
ಐಸಿಸಿ ಟೂರ್ನಮೆಂಟ್ ನಿಯಮದ ಪ್ರಕಾರ, ಆಯಾ ಸೂಪರ್ 8 ಗುಂಪುಗಳ ಅಗ್ರಸ್ಥಾನದ ತಂಡ ಮತ್ತೊಂದು ಗುಂಪಿನ ಎರಡನೇ ಸ್ಥಾನದ ತಂಡವನ್ನ ಸೆಮಿಫೈನಲ್‌ನಲ್ಲಿ ಎದುರಿಸುತ್ತದೆ. ಇದರ ಪ್ರಕಾರ ದಕ್ಷಿಣ ಆಫ್ರಿಕಾ ವರ್ಸಸ್ ಅಫ್ಘಾನಿಸ್ತಾನ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಜೂನ್ 27ರ ಬೆಳಗ್ಗೆ 6:00 ಗಂಟೆಗೆ ಶುರುವಾಗಲಿದೆ. ಬ್ರಿಯಾನ್ ಲಾರಾ ಸ್ಟೇಡಿಯಂ ಈ ಪಂದ್ಯಕ್ಕೆ ಸಾಕ್ಷಿಯಾಗುತ್ತೆ. ಹಾಗೇ ಸೆಮೀಸ್ನ ಎರಡನೇ ಮ್ಯಾಚ್ ಭಾರತ ವರ್ಸಸ್ ಇಂಗ್ಲೆಂಡ್ ನಡುವೆ ಜೂನ್ 27ರ ರಾತ್ರಿ 8:00 ಗಂಟೆಗೆ ಶುರುವಾಗುತ್ತೆ. ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತೆ. ಭಾರತ ಮತ್ತು ಇಂಗ್ಲೆಂಡ್ ತಂಡಗಳಿಗೆ ಇದು ಏಳನೇ ಬಾರಿ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಈವರೆಗೆ ಭಾರತವು ಆಂಗ್ಲರ ವಿರುದ್ಧ 4 ಪಂದ್ಯಗಳನ್ನ ಗೆದ್ರೆ ಇಂಗ್ಲೆಂಡ್ 1 ಸಲ ಗೆದ್ದು ಬೀಗಿದೆ. 2022ರ ಆವೃತ್ತಿಯ ಸೆಮಿ ಕದನದಲ್ಲಿಯೂ ಜೋಸ್ ಬಟ್ಲರ್ ಪಡೆಯ ವಿರುದ್ಧ ಭಾರತ ಕಣಕ್ಕಿಳಿದಿತ್ತು. ಆದರೆ 10 ವಿಕೆಟ್‌ಗಳಿಂದ ಭಾರತ ಹೀನಾಯವಾಗಿ ಸೋತಿತ್ತು. ಇನ್ನು ಫೈನಲ್ ಪಂದ್ಯವು ಜೂನ್ 29 ರಂದು ನಡೆಯಲಿದೆ. ಇಂಗ್ಲೆಂಡ್, ಭಾರತ, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ್ ತಂಡಗಳು ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದು, ಭರ್ಜರಿ ಗೇಮ್ ಪ್ಲ್ಯಾನ್ ಮಾಡ್ತಿವೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮೀಸ್ ಕದನಕ್ಕೆ ಮಳೆ ಭೀತಿ ಕೂಡ ಇದೆ. ಹಾಗೇನಾದ್ರೂ ಮಳೆ ಬಂದ್ರೆ ಯಾವುದೇ ಮೀಸಲು ದಿನ ನಿಗದಿಯಾಗಿಲ್ಲ. ಒಂದು ವೇಳೆ ಮಳೆಯಿಂದ ಅಡ್ಡಿಯಾದರೆ ಪಂದ್ಯ ನಡೆಸುವ ಸಲುವಾಗಿ 250 ನಿಮಿಷಗಳ ಹೆಚ್ಚುವರಿ ಸಮಯವನ್ನು ನಿಗದಿಪಡಿಸಲಾಗಿದೆ. ಆದ್ರೂ ಕೂಡ ಮಳೆ ನಿಲ್ಲದೆ ಒಂದೇ ಒಂದು ಎಸೆತವೂ ಕಾಣದೆ ಪಂದ್ಯ ರದ್ದಾದರೆ, ಸೂಪರ್ 8 ಹಂತದಲ್ಲಿ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಭಾರತವು ನೇರವಾಗಿ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಲಿದೆ.
ಟಿ-20 ವಿಶ್ವಕಪ್ ಬಗ್ಗೆ ಒಂದು ಅಚ್ಚರಿಯ ವಿಚಾರವನ್ನ ನಾವಿಲ್ಲಿ ಹೇಳಲೇಬೇಕು. ಇದುವರೆಗೆ ಒಟ್ಟು 8 ಆವೃತ್ತಿಯ ಟಿ20 ವಿಶ್ವಕಪ್ ನಡೆದಿದೆ. ಬಟ್ ಒಂದೇ ಒಂದು ಸಲವೂ ಕೂಡ ಆತಿಥೇಯ ತಂಡಕ್ಕೆ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ. 2007ರಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಆಯೋಜಿಸಲಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಈ ಆವೃತ್ತಿಯಲ್ಲಿ ಭಾರತ ವಿಶ್ವ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಪಾಕಿಸ್ತಾನವನ್ನು ಸೋಲಿಸುವ ಮೂಲಕ ಭಾರತ ಈ ಮಾದರಿಯ ಮೊದಲ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 2009 ರ ಟಿ20 ವಿಶ್ವಕಪ್ ಇಂಗ್ಲೆಂಡ್‌ನಲ್ಲಿ ನಡೆದಿತ್ತು. ಇದರ ಫೈನಲ್ನಲ್ಲಿ ಶ್ರೀಲಂಕಾವನ್ನು ಸೋಲಿಸುವ ಮೂಲಕ ಪಾಕಿಸ್ತಾನ ಈ ವಿಶ್ವ ಪ್ರಶಸ್ತಿಯನ್ನು ಗೆದ್ದುಕೊಂಡಿತು. 2010 ರ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್‌ನಲ್ಲಿ ನಡೆದಿತ್ತು. ಇಂಗ್ಲೆಂಡ್ ಈ ಆವೃತ್ತಿಯ ಪ್ರಶಸ್ತಿಯನ್ನು ಗೆದ್ದುಕೊಂಡಿತು. 2012 ರ ಟಿ20 ವಿಶ್ವಕಪ್ ಅನ್ನು ಶ್ರೀಲಂಕಾ ಆಯೋಜಿಸಿತ್ತು. ಈ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ ಆಯಿತು. 2014 ರ ಟಿ20 ವಿಶ್ವಕಪ್ ಬಾಂಗ್ಲಾದೇಶದಲ್ಲಿ ನಡೆದಿತ್ತು. ಭಾರತವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಶ್ರೀಲಂಕಾ ಈ ವಿಶ್ವ ಪ್ರಶಸ್ತಿಯನ್ನು ಗೆದ್ದುಕೊಂಡಿತು. 2016ರ ಟಿ20 ವಿಶ್ವಕಪ್ ಭಾರತದಲ್ಲಿ ನಡೆದಿತ್ತು. ಈ ಆವೃತ್ತಿಯ ಪ್ರಶಸ್ತಿಯನ್ನು ವೆಸ್ಟ್ ಇಂಡೀಸ್ ಗೆದ್ದುಕೊಂಡಿತು. 2021 ರ ಟಿ20 ವಿಶ್ವಕಪ್ ಅನ್ನು ಯುಎಇ ಮತ್ತು ಒಮಾನ್ ಜಂಟಿಯಾಗಿ ಆಯೋಜಿಸಿದ್ದವು. ಈ ಆವೃತ್ತಿಯ ಪ್ರಶಸ್ತಿಯನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತು. 2022 ರ ಟಿ20 ವರ್ಲ್ಡ್ ಕಪ್ ಆಸ್ಟ್ರೇಲಿಯಾದಲ್ಲಿ ನಡೆದಿತ್ತು. ಫೈನಲ್ನಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಇಂಗ್ಲೆಂಡ್ ಈ ಆವೃತ್ತಿಯ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಇನ್ನು ಈ ಬಾರಿಯೂ ಕೂಡ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ ಮ್ಯಾಚ್ ನಡೀತಿದ್ದು, ಈಗಾಗ್ಲೇ ಈ ಎರಡೂ ತಂಡಗಳು ಟೂರ್ನಿಯಿಂದ ಹೊರ ಬಿದ್ದಿವೆ. ಅಂತಿಮವಾಗಿ ಭಾರತ, ಇಂಗ್ಲೆಂಡ್, ಸೌತ್ ಆಫ್ರಿಕಾ, ಅಫ್ಘಾನಿಸ್ತಾನ ತಂಡಗಳು ಸೆಮೀಸ್ ಕಾದಾಟಕ್ಕೆ ಸಜ್ಜಾಗಿದ್ದು, ಯಾರು ಚಾಂಪಿಯನ್ ಆಗ್ತಾರೆ ಅನ್ನೋದೇ ಕುತೂಹಲ ಮೂಡಿಸಿದೆ.