ಸ್ಕಾಟ್ಲೆಂಡ್ ಜೆರ್ಸಿ ಮೇಲೆ ಕನ್ನಡ ಡಿಂಡಿಮ – ನಂದಿನಿ ಲೋಗೋ ನೋಡಿ ಸಿಎಂ ಸಿದ್ದು ಸಂತಸ

ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಕೆಎಮ್ಫ್ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಕ್ಕೆ ಪ್ರಾಯೋಕತ್ವ ನೀಡಿದೆ. ನಂದಿನಿ ಲೋಗೋ ಹೊಂದಿರುವ ಜೆರ್ಸಿಯಲ್ಲಿ ಈ ಎರಡೂ ತಂಡಗಳ ಆಟಗಾರರು ವಿಶ್ವಕಪ್ನಲ್ಲಿ ಕಣಕ್ಕಿಳಿಯಲಿದ್ದಾರೆ.
ಸ್ಕಾಟ್ಲೆಂಡ್ ತಂಡ ಟಿ20 ವಿಶ್ವಕಪ್ ಜೆರ್ಸಿಯನ್ನು ಬಿಡುಗಡೆ ಮಾಡಿದ್ದು, ವಿಶೇಷ ಅಂದ್ರೆ ಸ್ಕಾಂಟ್ಲೆಂಡ್ ತಂಡದ ಆಟಗಾರರ ತೋಳಿನಲ್ಲಿ ಕನ್ನಡದಲ್ಲೇ ನಂದಿನಿ ಲೋಗೊ ಇರಲಿದೆ. ಇದು ಕನ್ನಡಿಗರಲ್ಲಿ ಸಂಭ್ರಮ ಹೆಚ್ಚಿಸುವಂತೆ ಮಾಡಿದೆ. ಜೆರ್ಸಿ ಬಿಡುಗಡೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿ, ನಮ್ಮ ತಂಡ ಮತ್ತು ಬೆಂಬಲಿಗರಿಗೆ ಟಿ20 ವಿಶ್ವಕಪ್ನಲ್ಲಿ ನಂದಿನಿಯೊಂದಿಗೆ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ ಎಂದು ಹೇಳಿದೆ.
ಇದನ್ನೂ ಓದಿ: ಕನ್ನಡ ಓದಲು ಬರಲ್ಲ.. ವರ್ಷಕ್ಕೆ 3 ಪರೀಕ್ಷೆ ನಡೆಸಲು ಹೊರಟು ಸುಮ್ಮನಾದರು – ಮಧು ಬಂಗಾರಪ್ಪ ವಿರುದ್ಧ ನಾರಾಯಣಸ್ವಾಮಿ ಕಿಡಿ
ಸ್ಕಾಟ್ಲೆಂಡ್ ತಂಡ ಜೆರ್ಸಿಯಲ್ಲಿ ನಂದಿನಿ ಲೋಗೋ ಹಾಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಸಿಎಂ, ಮಲೇಷಿಯಾ, ವಿಯೆಟ್ನಾಂ, ಸಿಂಗಾಪುರ, ಅಮೇರಿಕಾ, ದುಬೈ, ಯುಎಇ ಮುಂತಾದ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಈಗ T20 ವಿಶ್ವಕಪ್ ಪಂದ್ಯಕೂಟದಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ. ರಾಜ್ಯದ ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನಗಳು ಮತ್ತು ನಾಡಿನ ರೈತರ ಶ್ರಮವೆರಡನ್ನೂ ವಿಶ್ವಕ್ಕೆ ಪರಿಚಯಿಸುವ ಸಂಕಲ್ಪ ನಮ್ಮದು. ನಂದಿನಿಯನ್ನು ಜಾಗತಿಕ ಬ್ರಾಂಡ್ ಆಗಿ ರೂಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ. ಈ ಬಾರಿ ವಿಶ್ವಕಪ್ನಲ್ಲಿ ರಾರಾಜಿಸಲಿದೆ ನಂದಿನಿ, ಕಂಗೊಳಿಸಲಿದೆ ಕನ್ನಡ ಎಂದು ಬರೆದುಕೊಂಡಿದ್ದಾರೆ.
ಜೂನ್ 01 ರಿಂದ 29 ವರೆಗೂ ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾಗಿಯಾಗುತ್ತಿರುವ ಎರಡು ತಂಡಗಳ ಜೆರ್ಸಿ ಮೇಲೆ ಕೆಎಂಎಫ್ ಲೋಗೋ ಅನಾವರಣಗೊಳ್ಳಲಿದೆ. ಅಲ್ಲದೇ ಪಂದ್ಯಾವಳಿ ಸಮಯದಲ್ಲಿ ಜಾಹೀರಾತು, ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಸಿಗಲಿದೆ. ಪರಿಣಾಮ ಜಾಗತಿಕ ಮಟ್ಟದಲ್ಲಿ ನಂದಿನಿ ಉತ್ಪನ್ನಗಳ ಪ್ರಚಾರ ಲಭ್ಯವಾಗಲಿದೆ. ಸಣ್ಣ ತಂಡಗಳೊಂದಿಗೆ ಪಾಲುದಾರಿಕೆ ಮಾಡುವ ಮೂಲಕ ಕಡಿಮೆ ವೆಚ್ಚದಲ್ಲಿ ಬ್ರ್ಯಾಂಡ್ ಮಾಡಲು ಕೆಎಂಎಫ್ ಮುಂದಾಗಿದೆ.