ಟಿ20 ವಿಶ್ವಕಪ್‌ನಲ್ಲಿ ಆಸೀಸ್‌ಗೆ ಮುಖಭಂಗ – ಜಿಂಬಾಬ್ವೆ ವಿರುದ್ಧ ಸೋತ ಆಸ್ಟ್ರೇಲಿಯಾ

ಟಿ20 ವಿಶ್ವಕಪ್‌ನಲ್ಲಿ ಆಸೀಸ್‌ಗೆ ಮುಖಭಂಗ –  ಜಿಂಬಾಬ್ವೆ ವಿರುದ್ಧ ಸೋತ ಆಸ್ಟ್ರೇಲಿಯಾ

ಆಸ್ಟ್ರೇಲಿಯಾಗೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ತಂಡ ಆಘಾತಕಾರಿ ಸೋಲಿನ ಏಟು ನೀಡಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಜಿಂಬಾಬ್ವೆ 23 ರನ್‌ ಅಂತರದ ಅಮೋಘ ಗೆಲುವು ಸಾಧಿಸಿತು. ಇದು ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ಆಸೀಸ್‌ಗೆ ಎದುರಾದ ಎರಡನೇ ಸೋಲು. ಇದಕ್ಕೂ ಮುನ್ನ 2007ರ ಉದ್ಘಾಟನ ಆವೃತ್ತಿಯಲ್ಲಿ 5 ವಿಕೆಟ್‌ ಸೋಲು ಕಂಡಿತ್ತು. ಒಟ್ಟಾರೆ ಐಸಿಸಿ ಟೂರ್ನಿಯಲ್ಲಿ ಮೂರನೇ ಸೋಲು. ಮೊದಲ ಸೋಲು 1983 ಏಕದಿನ ವಿಶ್ವಕಪ್‌ನಲ್ಲಿ ಎದುರಾಗಿತ್ತು. ಅಲ್ಲಿ 13 ರನ್‌ ಸೋಲು ಕಂಡಿತ್ತು.

ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಜಿಂಬಾಬ್ವೆ 2 ವಿಕೆಟ್‌ಗೆ 169 ರನ್‌ ಬಾರಿಸಿತು. ಜವಾಬಿತ್ತ ಆಸ್ಟ್ರೇಲಿಯಾ ತಂಡ ವೇಗಿ ಬ್ಲೆಸಿಂಗ್ ಮುಜರಬಾನಿ ದಾಳಿಗೆ ನಲುಗಿ 19.3 ಓವರ್‌ಗಳಲ್ಲಿ 146 ರನ್‌ಗೆ ಸರ್ವಪತನ ಕಂಡಿತು. 17 ರನ್‌ ವೆಚ್ಚದಲ್ಲಿ 4 ವಿಕೆಟ್‌ ಕಿತ್ತ ಮುಜರಬಾನಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: ಗೆದ್ದಿದ್ದು ಭಾರತ.. ಬಿದ್ದಿದ್ದು ಪಾಕ್ – ಕಿಶನ್ ಕಿಚ್ಚಿಗೆ ನಡುಗಿದ ನಮೀಬಿಯಾ

ಚೇಸಿಂಗ್‌ ವೇಳೆ ಆಸ್ಟ್ರೇಲಿಯಾ ಆರಂಭದಲ್ಲೇ ಆಘಾತ ಎದುರಿಸಿತು. ಯುವ ವೇಗಿ ಮು ಜರಬಾನಿಯ ಘಾತಕ ಬೌಲಿಂಗ್‌ ದಾಳಿಗೆ ತಡೆಯೊಡ್ಡಲು ವಿಫಲರಾಗಿ 29 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಜೋಶ್ ಇಂಗ್ಲಿಶ್ 8 ರನ್ ಗಳಿಸಿದರೆ, ಕ್ಯಾಮರೋನ್ ಗ್ರೀನ್ ಹಾಗೂ ಟಿಮ್ ಡೇವಿಡ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಹಾದಿ ಹಿಡಿದರು. ಹಂಗಾಮಿ ನಾಯಕ ಟ್ರಾವಿಸ್‌ ಹೆಡ್ 17 ರನ್‌ಗಳಿಸಿ ನಿರಾಸೆ ಮೂಡಿಸಿದರು.

ಮುಜರಬಾನಿಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡಿದ ಬ್ರಾಡ್ ಇವಾನ್ಸ್ 23 ರನ್‌ಗೆ ಮೂರು ವಿಕೆಟ್‌ ಕಿತ್ತರು. ಮುಜರಬಾನಿ ನಾಲ್ಕು ಓವರ್‌ಗಳಲ್ಲಿ ಕೇವಲ 17 ರನ್‌ ಬಿಟ್ಟುಕೊಟ್ಟು 4 ಪ್ರಮುಖ ವಿಕೆಟ್‌ ಕೆಡವಿದರು. ಇದೇ ವೇಳೆ ಟಿ20ಯಲ್ಲಿ 100 ವಿಕೆಟ್‌ ಪೂರ್ತಿಗೊಳಿಸಿದ ಮೈಲುಗಲ್ಲನ್ನೂ ತಲುಪಿದರು.


Kishor KV