IPL ಸೋತವರು ವಿಶ್ವಕಪ್ ಗೆಲ್ತಾರಾ? – ರೋಹಿತ್ ಟೀಂ ಮೇಲೆ ಯಾಕೆ ಡೌಟ್?
T-20 ವಿಶ್ವಕಪ್ ಮೊದ್ಲೇ ಭಯನಾ?

IPL ಸೋತವರು ವಿಶ್ವಕಪ್ ಗೆಲ್ತಾರಾ? – ರೋಹಿತ್ ಟೀಂ ಮೇಲೆ ಯಾಕೆ ಡೌಟ್?T-20 ವಿಶ್ವಕಪ್ ಮೊದ್ಲೇ ಭಯನಾ?

ಒಂದ್ಕಡೆ ಐಪಿಎಲ್ ಹಬ್ಬ ಮುಗೀತಿದ್ರೆ ಮತ್ತೊಂದ್ಕಡೆ ಟಿ-20 ವಿಶ್ವಯುದ್ಧಕ್ಕೆ ಕೌಂಟ್​ಡೌನ್ ಶುರುವಾಗಿದೆ.   ಜೂನ್ 2ರಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ಈ ಮೆಗಾ ಬ್ಯಾಟಲ್ ಯುಎಸ್ಎ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ನಡೆಯಲಿದೆ. ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ.  ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿವೆ. ಈಗಾಗ್ಲೇ ವಿಶ್ವಕಪ್‌ಗೆ ಭಾರತ  15 ಸದಸ್ಯರ ತಂಡವನ್ನು ಪ್ರಕಟಿಸಿದೆ. 2007ರ T20 ವಿಶ್ವಕಪ್ ಗೆದ್ದ ನಂತರ, ಭಾರತ ಮತ್ತೊಮ್ಮೆ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿಲ್ಲ. 2014ರಲ್ಲಿ ಫೈನಲ್‌ಗೆ ತಲುಪಿತ್ತಾದ್ರೂ ಟ್ರೋಫಿಗೆ ಮುತ್ತಿಕ್ಕೋಕೆ ಸಾಧ್ಯವಾಗಿರಲಿಲ್ಲ.    2013ರಿಂದ ಭಾರತ ತಂಡ ಒಂದೇ ಒಂದು ICC ಟ್ರೋಫಿಯನ್ನೂ ಗೆದ್ದಿಲ್ಲ. ಈ ಸಲನಾದ್ರೂ ಈ ಕೊರಗು ನೀಗುತ್ತೆ ಅಂದ್ರೆ ವಿಶ್ವಕಪ್ ಕದನ ಆರಂಭಕ್ಕೂ ಮುನ್ನವೇ ಆತಂಕ ಶುರುವಾಗಿದೆ. ಅದಕ್ಕೆ ಕಾರಣ ಆಟಗಾರರ ಐಪಿಎಲ್ ಪ್ರದರ್ಶನ.

ಇದನ್ನೂ ಓದಿ:  RCB ಕ್ಯಾಪ್ಟನ್ಸಿಗೆ ಫಾಫ್ ಗುಡ್ ಬೈ? – ಕೊಹ್ಲಿ ನಕಾರ.. ಯಾರಿಗೆ ನಾಯಕತ್ವ?

ಟಿ20 ವಿಶ್ವಕಪ್‌ಗೆ ಪ್ರಕಟಿಸಲಾಗಿರುವ ತಂಡದಲ್ಲಿ ಸ್ಥಾನ ಪಡೆದಿರುವ ಬಹುತೇಕ ಆಟಗಾರರು ಫಾರ್ಮ್‌ನಲ್ಲಿಲ್ಲ. ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಮಾತ್ರ ಉತ್ತಮ ಪರ್ಫಾಮೆನ್ಸ್ ನೀಡಿದ್ದಾರೆ. ಉಳಿದ ಯಾವೊಬ್ಬ ಆಟಗರನೂ ಸಹ ಉತ್ತಮ ಲಯದಲ್ಲಿಲ್ಲ. ನಾಯಕ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಸಿರಾಜ್ ಕೂಡ ಫೇಲ್ಯೂರ್ ಅನುಭವಿಸಿದ್ದಾರೆ. ಐಪಿಎಲ್ ಆರಂಭದಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡುತ್ತಿದ್ದ ಶಿವಂ ದುಬೆ ನಂತರ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಇದೇ ಅಂಶ ಭಾರತ ತಂಡಕ್ಕೆ ದೊಡ್ಡ ತಲೆನೋವಾಗಿದೆ.   ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ರನ್ ಗಳಿಸುತ್ತಿದ್ದಾರೆ ಅಂದ್ರೂ ಕೂಡ ಸ್ಥಿರವಾಗಿ ಆಡುತ್ತಿಲ್ಲ. ಒಂದು ಪಂದ್ಯದಲ್ಲಿ ಆಡಿದರೆ ಎರಡು ಪಂದ್ಯಗಳಲ್ಲಿ ವಿಫಲರಾಗುತ್ತಿದ್ದಾರೆ. ಕೊಹ್ಲಿ ಮತ್ತು ಬುಮ್ರಾ ಹೊರತುಪಡಿಸಿ ಉಳಿದ ಆಟಗಾರರು ಆತ್ಮವಿಶ್ವಾಸದಿಂದ ಕಾಣುತ್ತಿಲ್ಲ. ಐಪಿಎಲ್ ನಂತೆಯೇ ವಿಶ್ವಕಪ್ ನಲ್ಲೂ ಆಯ್ಕೆಯಾಗಿರುವ ಆಟಗಾರರು ಪ್ರದರ್ಶನ ನೀಡಿದ್ರೆ ಗತಿ ಏನು ಎಂಬ ಭೀತಿ ಶುರುವಾಗಿದೆ. ಹಾಗೇ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ರೂಪದಲ್ಲಿ ಪ್ರಬಲ ಎದುರಾಳಿಗಳು ಸೂಪರ್ 8ರಲ್ಲಿ ಟೀಂ ಇಂಡಿಯಾಗೆ ಸವಾಲು ಹಾಕುವ ಸಾಧ್ಯತೆಯಿದೆ.

ಪಿಎಲ್​ ನಲ್ಲಿ ರೋಹಿತ್ ಶರ್ಮಾ ಈ ಸೀಸನ್​ನಲ್ಲಿ 14 ಪಂದ್ಯಗಳನ್ನ ಆಡಿದ್ದು 32.08 ಆವರೇಜ್​ನಲ್ಲಿ 417 ರನ್ ಕಲೆ ಹಾಕಿದ್ದಾರೆ. ಉಪನಾಯಕ ಪಾಂಡ್ಯ ಕೂಡ 14 ಮ್ಯಾಚ್ ಆಡಿ 216 ರನ್ ಸಿಡಿಸಿದ್ದಾರೆ. ಹಾಗೇ 11 ವಿಕೆಟ್​ಗಳನ್ನ ಕಿತ್ತಿದ್ದಾರೆ. ಸೂರ್ಯಕುಮಾರ್ ಯಾದವ್ 11 ಪಂದ್ಯಗಳನ್ನ ಆಡಿ 345 ರನ್ ಕಲೆ ಹಾಕಿದ್ದಾರೆ. ಇನ್ನು ಯಶಸ್ವಿ ಜೈಸ್ವಾಲ್ 14 ಪಂದ್ಯಗಳಿಂದ 393 ರನ್ ಬಾರಿಸಿದ್ದಾರೆ. ಇನ್ನು ಶಿವಂ ದುಬೆ 14   ಇನ್ನಿಂಗ್ಸ್​ಗಳಿಂದ 396 ರನ್ ಕಲೆ ಹಾಕಿದ್ದಾರೆ. ರಿಷಬ್ ಪಂತ್ 446, ಸಂಜು ಸ್ಯಾಮ್ಸನ್ 504 ರನ್ ಗಳಿಸಿದ್ದಾರೆ. ಬ್ಯಾಟ್ಸ್​​ಮನ್​ಗಳ ಪೈಕಿ ವಿರಾಟ್ ಕೊಹ್ಲಿ ಒಬ್ಬರೇ ಅದ್ಬುತ ಪ್ರದರ್ಶನ ನೀಡಿರೋದು. ಉಳಿದಂತೆ ಬೌಲರ್​ಗಳಲ್ಲಿ ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಲ್ ಒಳ್ಳೇ ಫಾರ್ಮ್​ನಲ್ಲಿದ್ದಾರೆ. ಅವ್ರನ್ನ ಬಿಟ್ರೆ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಸ್ಥಿರತೆ ಕಾಯ್ದುಕೊಂಡಿಲ್ಲ. ಹಾಗೇ ಮೀಸಲು ಆಟಗಾರರ ಲಿಸ್ಟ್​ನಲ್ಲಿ ಶುಭಮನ್ ಗಿಲ್, ರಿಂಕು ಸಿಂಗ್, ಅವೇಶ್ ಖಾನ್ ಮತ್ತು ಖಲೀಲ್ ಅಹ್ಮದ್ ಇದ್ದಾರೆ. ಒಟ್ನಲ್ಲಿ ಭಾರತವು ಜೂನ್ 5ರಂದು ಐರ್ಲೆಂಡ್ ವಿರುದ್ಧ ತನ್ನ ಟಿ20 ವಿಶ್ವಕಪ್‌ ಅಭಿಯಾನವನ್ನು ಪ್ರಾರಂಭಿಸಲಿದೆ. ಇದಾದ ನಂತರ ಜೂನ್ 9ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದ್ದು, ಇದಕ್ಕಾಗಿ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ.

Shwetha M