ಸಿರಿಯಾದಲ್ಲಿ ಭೀಕರ ಡ್ರೋನ್ ದಾಳಿ – ಸೈನಿಕರು ಸೇರಿ 100ಕ್ಕೂ ಅಧಿಕ ಮಂದಿ ಸಾವು
13 ವರ್ಷಗಳಿಂದ ಅಂತರ್ಯುದ್ಧದಲ್ಲಿ ನಲುಗಿರುವ ಸಿರಿಯಾದಲ್ಲಿ ಮತ್ತೆ ಭೀಕರ ಡ್ರೋನ್ ದಾಳಿ ಸಂಭವಿಸಿದೆ. ಈ ದಾಳಿಯಲ್ಲಿ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸಿರಿಯಾದ ಹೋಮ್ಸ್ ನಗರದಲ್ಲಿ ಸೇನೆ ಸಿಪಾಯಿಗಳ ಸ್ನಾತಕೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡು ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಸೈನಿಕರು ಮತ್ತು ಸಾರ್ವಜನಿಕರು ಸೇರಿ 100ಕ್ಕೂ ಹೆಚ್ಚುಮಂದಿ ಮೃತಪಟ್ಟಿದ್ದು, 125ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೂತಲ್ಲೇ ಪಾರ್ಶ್ವವಾಯು ಅಟ್ಯಾಕ್! – 100ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಕಾಡುತ್ತಿದೆ ವಿಚಿತ್ರ ಕಾಯಿಲೆ!
ಸಿರಿಯಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜರುಗಿದ ತೀವ್ರವಾದ ದಾಳಿ ಇದಾಗಿದೆ ಎನ್ನಲಾಗುತ್ತಿದೆ. ಘಟನೆ ಹಿನ್ನೆಲೆಯಲ್ಲಿ ಸಿರಿಯಾ ಸರ್ಕಾರ ಮೂರು ದಿನಗಳ ಕಾಲ ಸಂತಾಪ ಪ್ರಕಟಿಸಿದೆ. ವಿದೇಶಿ ಶಕ್ತಿಗಳ ಬೆಂಬಲದಿಂದ ಉಗ್ರರು ಸ್ಫೋಟಕಗಳನ್ನು ಡ್ರೋಣ್ ನೆರವಿನಿಂದ ಸ್ಫೋಟಿಸಿ ಕೃತ್ಯವೆಸಗಿದ್ದಾರೆ ಎಂದು ಸೇನೆ ಆರೋಪಿಸಿದೆ.