ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್!
‘ಸ್ಯಾಂಡಲ್‌ವುಡ್ ಕ್ವೀನ್’ ರಮ್ಯಾ ಮೊದಲ ಬಾರಿಗೆ ನಿರ್ಮಾಣ ಮಾಡಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಚಿತ್ರೀಕರಣ ಮುಗಿಸಿ ಒಂದು ವರ್ಷ ಕಳೆದಿದೆ. ಇದೀಗ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಮುಂದಿನ ನವೆಂಬರ್ ನವೆಂಬರ್ 24 ರಂದು ಚಿತ್ರ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾದ ಶೂಟಿಂಗ್ ನವೆಂಬರ್ 14, 2022ರಂದೇ ಮುಗಿಸಿರುವುದಾಗಿ ರಮ್ಯಾ ಸಂಸ್ಥೆಯು ಹೇಳಿಕೊಂಡಿತ್ತು. ಆನಂತರ ಸಿನಿಮಾದ ಟೈಟಲ್ ವಿಚಾರವಾಗಿ ವಿವಾದವೆದ್ದಿತ್ತು. ಬಳಿಕ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್‌ನಲ್ಲಿ ರಮ್ಯಾ ಪರವಾಗಿ ತೀರ್ಪು ಬಂದಿದೆ. ಹೀಗಾಗಿ ಸಿನಿಮಾ ರಿಲೀಸ್‌ಗೆ ಇದ್ದ ತೊಂದರೆ ನಿವಾರಣೆಯಾಗಿದೆ. ಇದೀಗ ಮುಂದಿನ ನವೆಂಬರ್ 24 ರಂದು ತಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ಚಿತ್ರತಂಡ ಮಾಹಿತಿ ನೀಡಿದೆ.
ಇದನ್ನೂ ಓದಿ: ಹೋಟೆಲ್‌ನಲ್ಲಿ ಟೀ ಮಾರುತ್ತಿದ್ದಾರೆ ರಜಿನಿಕಾಂತ್! – ವೈರಲ್ ಆದ ವಿಡಿಯೋ ಅಸಲಿಯತ್ತೇನು?
ಆಪಲ್ ಬಾಕ್ಸ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಸಿರಿ ರವಿಕುಮಾರ್ ಮತ್ತು ರಾಜ್ ಶೆಟ್ಟಿ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ನಿರ್ದೇಶನದ ಜೊತೆಗೆ ನಟಿಸಿರುವ ರಾಜ್ ಬಿ ಶೆಟ್ಟಿ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರವನ್ನೇ ನಿರ್ವಹಣೆ ಮಾಡಿದ್ದಾರೆ.
ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾದಲ್ಲಿ ರಮ್ಯಾ ಅವರೇ ನಟಿಸಬೇಕಿತ್ತು. ಹಾಗಂತ ಅನೌನ್ಸ್ ಕೂಡ ಆಗಿತ್ತು. ಆದರೆ, ತಾವು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ, ಕೇವಲ ನಿರ್ಮಾಪಕಿಯಾಗಿ ಮಾತ್ರ ಇರುತ್ತೇನೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು ರಮ್ಯಾ. ಈ ವಿಷಯ ತಿಳಿಸಿದ ಕೆಲವೇ ದಿನಗಳ ನಂತರ ಮತ್ತೊಂದು ಸಿಹಿ ಸುದ್ದಿಯನ್ನೂ ನೀಡಿ, ತಾವು ಡಾಲಿ ಧನಂಜಯ್ ಜೊತೆ ಉತ್ತರಕಾಂಡ ಚಿತ್ರದಲ್ಲಿ ನಟಿಸುತ್ತಿರುವುದಾಗಿಯೂ ತಿಳಿಸಿದ್ದರು.