ಪಶ್ಚಿಮ ಬಂಗಾಳದ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ – ಮೋದಿ ಸೇರಿದಂತೆ ಹಲವು ನಾಯಕರು ಭಾಗಿ  

ಪಶ್ಚಿಮ ಬಂಗಾಳದ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ – ಮೋದಿ ಸೇರಿದಂತೆ ಹಲವು ನಾಯಕರು ಭಾಗಿ  

ಪಶ್ಚಿಮ ಬಂಗಾಳದಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ಬಿಜೆಪಿಯ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಕೋಲ್ಕತ್ತಾದಲ್ಲಿ ನಿನ್ನೆ ನಡೆದಿದ್ದ ಮಹತ್ವದ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರ ವೀಕ್ಷಕರ ಸಮ್ಮುಖದಲ್ಲಿ, ಸುವೇಂದು ಅಧಿಕಾರಿ ಅವರ ಹೆಸರನ್ನು ಹಿರಿಯ ನಾಯಕರು ಪ್ರಸ್ತಾಪಿಸಿದ್ದು, ಎಲ್ಲಾ ನೂತನ ಶಾಸಕರು ಇದಕ್ಕೆ ಬೆಂಬಲ ಸೂಚಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಭವಾನಿಪುರ ಕ್ಷೇತ್ರದಲ್ಲಿ ಸ್ವತಃ ಮಮತಾ ಬ್ಯಾನರ್ಜಿ ಅವರನ್ನೇ ಸೋಲಿಸುವ ಮೂಲಕ ಸುವೇಂದು ಅವರು ತಮ್ಮ ರಾಜಕೀಯ ಶಕ್ತಿಯನ್ನು ಸಾಬೀತುಪಡಿಸಿದ್ದರು. ಹೀಗಾಗಿ ಸುವೇಂದುಗೆ ಸಿಎಂ ಪಟ್ಟವೂ ಲಭಿಸಿದೆ.

ಇದನ್ನೂ ಓದಿ : ಆಗ HERO.. ಈಗ VILLAIN!  – RCBಗೆ ಜಿತೇಶ್ & ಶೆಫರ್ಡ್ ಭಾರ

ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಪಕ್ಷದ ಸರ್ಕಾರ ರಚನೆಯಾಗಿದೆ. ರಾಜ್ಯಪಾಲ ಆರ್.ಎನ್ ರವಿ ಪ್ರತಿಜ್ಞಾವಿಧಿ ಬೋಧನೆ ಮಾಡಿದ್ದು ಸುವೇಂದು ಅಧಿಕಾರಿ ಮುಖ್ಯಮಂತ್ರಿ ಪಟ್ಟಿಕ್ಕೇರಿದ್ದಾರೆ. ಸಿಎಂ ಪ್ರಮಾಣವಚನದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಸಾಕ್ಷಿಯಾಗಿ ಅಭಿನಂದನೆ ಸಲ್ಲಿಸಿದ್ರು. ಈ ಮೂಲಕ ದೇಶದಲ್ಲಿ 21 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಂತಾಗಿದೆ. ಇದೇ ವೇಳೆ ಸಿಎಂ ರೇಸ್ ನಲ್ಲಿದ್ದ ದಿಲೀಪ್ ಘೋಷ್ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಹಾಗೇ ಅಗ್ನಿಮಿತ್ರಾ ಪಾಲ್ ಸೇರಿದಂತೆ ಇನ್ನೂ ಕೆಲ ಶಾಸಕರು ಮಂತ್ರಿ ಪಟ್ಟಕ್ಕೇರಿದ್ದಾರೆ.

ಮೇ 4 ರಂದು ಪಶ್ಚಿಮ ಬಂಗಾಳದ ವಿಧಾನಸಭೆಯ ಫಲಿತಾಂಶ ಹೊರಬಿದ್ದಿದ್ದು, ಅಂದು ಬಿಜೆಪಿ 207 ಸ್ಥಾನಗಳಲ್ಲಿ ಜಯಗಳಿಸಿ, ಕಳೆದ 15 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ತೃಣಮೂಲ ಕಾಂಗ್ರೆಸ್ (TMC) ಆಡಳಿತವನ್ನು ಕೊನೆಗೊಳಿಸಿ, ಅಧಿಕಾರಕ್ಕೆ ಬಂದಿತ್ತು. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ, ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಅವರು 9,665 ಮತಗಳ ಅಂತರದಿಂದ ಜಯಗಳಿಸಿದ್ದರು. ಪಶ್ಚಿಮ ಬಂಗಾಳದ ಒಟ್ಟು 294 ಸದಸ್ಯರ ವಿಧಾನಸಭೆಗೆ 207 ಸ್ಥಾನಗಳನ್ನು ಬಿಜೆಪಿ ಗೆದ್ದು ಬೀಗಿತ್ತು. ಹಾಗೆಯೇ ಆಡಳಿತರೂಢ ಟಿಎಂಸಿ ಕೇವಲ 80 ಸ್ಥಾನಗಳಿಗೆ ಸೀಮಿತವಾಗಿತ್ತು. ಇದೀಗ ಬಿಜೆಪಿ ಸುವೇಂದು ಅಧಿಕಾರಿಯ ಹೆಸರು ಘೋಷಣೆ ಮಾಡುವುದರ ಮೂಲಕ ಬಿಜೆಪಿಯ ಮೊದಲ ಮುಖ್ಯಮಂತ್ರಿ ಎಂಬ ಖ್ಯಾತಿ ಪಡೆದಿದ್ದಾರೆ.

Shantha Kumari

Leave a Reply

Your email address will not be published. Required fields are marked *