ಇನ್ನೂ ಬಗೆಹರಿಯದ ವಿಪಕ್ಷ ನಾಯಕನ ಆಯ್ಕೆ ಕಗ್ಗಂಟು – ರಾಜ್ಯಕ್ಕೆ ಇಬ್ಬರು ವೀಕ್ಷಕರ ಆಗಮನ
ಬೆಂಗಳೂರು: ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಹಾಗಿದ್ದರೂ ಬಿಜೆಪಿ ಇನ್ನೂ ವಿಪಕ್ಷ ನಾಯಕನ ಆಯ್ಕೆ ಮಾಡಿಲ್ಲ. ವಿರೋಧ ಪಕ್ಷದ ನಾಯಕನ ಆಯ್ಕೆ ಈಗ ಹೈಕಮಾಂಡ್‌ಗೆ ಕಗ್ಗಂಟಾಗಿ ಪರಿಗಣಿಸಿದೆ. ಚುನಾವಣೆಯಾಗಿ ಎರಡು ತಿಂಗಳಾಗುತ್ತಾ ಬಂದಿದ್ದರೂ ಕೂಡ ವಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: ಗುಂಪುಗೂಡಂಗಿಲ್ಲ, ಮೆರವಣಿಗೆ ಮಾಡಂಗಿಲ್ಲ.. ಸುತ್ತಮುತ್ತ ನಿಷೇಧಾಜ್ಞೆ – ಬಜೆಟ್ ಅಧಿವೇಶನಕ್ಕೆ ಸಜ್ಜಾಯ್ತು ವಿಧಾನಸೌಧ
ವಿಪಕ್ಷ ನಾಯಕನ ಆಯ್ಕೆ ಕಗ್ಗಂಟಾಗಿರುವುದರಿಂದ ಸೋಮವಾರ ರಾಜ್ಯಕ್ಕೆ ಇಬ್ಬರು ವೀಕ್ಷಕರು ಆಗಮಿಸಲಿದ್ದು, ಶಾಸಕರ ಜೊತೆ ಚರ್ಚಿಸಿ ಅವರ ಅಭಿಪ್ರಾಯ ಪಡೆದು ಹೈಕಮಾಂಡ್‌ಗೆ ವರದಿ ನೀಡಲಿದ್ದಾರೆ. ಬಳಿಕ ಪ್ರತಿಪಕ್ಷ ನಾಯಕನ ಆಯ್ಕೆ ಆಗಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವೀಕ್ಷಕರಾಗಿ ಮನ್ಸೂಕ್ ಮಾಂಡವೀಯ ಮತ್ತು ವಿನೋದ್ ತಾವಡೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಅಧಿವೇಶನಕ್ಕೂ ಮುನ್ನ ವಿಪಕ್ಷ ನಾಯಕನ ಆಯ್ಕೆ ಇಲ್ಲ. ಸದ್ಯ ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ ಎಂದು ಬಿಎಸ್‌ವೈ ಹೇಳಿದ್ದಾರೆ.
ವಿಪಕ್ಷ ನಾಯಕನ ಆಯ್ಕೆ ಸಂಬಂಧ ಭಾನುವಾರ ರಾತ್ರಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆಗೆ ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಬಿ.ಎಸ್ ಯಡಿಯೂರಪ್ಪ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪರ ಬ್ಯಾಟ್ ಬೀಸಿದ್ದಾರೆ ಎನ್ನಲಾಗಿದೆ.
ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದು, ಸುನೀಲ್ ಕುಮಾರ್, ಅಶ್ವಥ್ ನಾರಯಣ್ ಆಯ್ಕೆಯಾದ್ರು ಅಡ್ಡಿ ಇಲ್ಲ ಎಂದಿದ್ದಾರೆ. ಅಂತಿಮವಾಗಿ ನೀವೇ ನಿರ್ಧಾರ ಮಾಡಿ ಎಂದು ಬಿಎಸ್‌ವೈ ವರಿಷ್ಠರಿಗೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.