ಸಚಿನ್ ಮನಗೆದ್ದ 12ರ ಬಾಲಕಿ – ಜಹೀರ್ ಸ್ಟೈಲ್.. 1 ಪೋಸ್ಟ್.. ಪವಾಡ!
ದೇವರನ್ನೇ ಮೆಚ್ಚಿಸಿದ ಮೀನಾ ಯಾರು?
ಒಂದು ಪೋಸ್ಟ್. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾಡಿದ್ದ ಒಂದೇ ಒಂದು ಪೋಸ್ಟ್ ಆ ಬಾಲಕಿಯ ಬದುಕನ್ನೇ ಬದಲಿಸಿದೆ. ಗುಡಿಸಲಿನಲ್ಲಿದ್ದ ಅಪ್ಪಟ ಪ್ರತಿಭೆಯೊಂದು ಮೈದಾನಕ್ಕೆ ಕಾಲಿಟ್ಟಿದೆ. ಈಗ ಸೋಶಿಯಲ್ ಮೀಡಿಯಾ ತುಂಬೆಲ್ಲಾ ಆ ಪೋರಿಯದ್ದೇ ಹವಾ. ಅಷ್ಟಕ್ಕೂ ಯಾರು ಆ ಬಾಲೆ? ಆಕೆಯ ಟ್ಯಾಲೆಂಟ್ ಎಂಥಾದ್ದು? ಸಿನಿಮಾ ಸ್ಟಾರ್ಸ್, ಪೊಲಿಟಿಕಲ್ ಲೀಡರ್ಸ್ ಕೂಡ ಫಿದಾ ಆಗಿದ್ದೇಗೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ದಾಖಲೆ ಬರೆದ ನಿತೀಶ್ ಕುಮಾರ್ ರೆಡ್ಡಿ! – ಟೀಮ್ ಇಂಡಿಯಾದಲ್ಲಿ ಯುವ ಆಟಗಾರರಿಗೆ ಇನ್ನಾದ್ರೂ ಚಾನ್ಸ್ ಸಿಗುತ್ತಾ?
ವಾರದ ಹಿಂದಷ್ಟೇ ಸಚಿನ್ ತೆಂಡೂಲ್ಕರ್ ಒಂದು ಹುಡುಗಿಯ ಬೌಲಿಂಗ್ ವಿಡಿಯೋವನ್ನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಟೀಂ ಇಂಡಿಯಾದ ಗ್ರೇಟೆಸ್ಟ್ ಬೌಲರ್ ಜಹೀರ್ ಖಾನ್ ಅವರನ್ನೇ ಥೇಟ್ ಹೋಲುವಂತೆ ಬೌಲಿಂಗ್ ಆ್ಯಕ್ಷನ್ ಮಾಡುವ ವಿಡಿಯೋ ಅದು. ತಮ್ಮ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು ಮಾತ್ರವಲ್ಲ ಜಹೀರ್ ಖಾನ್ ಅವರಿಗೂ ಟ್ಯಾಗ್ ಮಾಡಿದ್ರು. ನೀವಿದನ್ನು ನೋಡಿದ್ದೀರಾ?’ ಎಂದು ಪ್ರಶ್ನಿಸಿದ್ರು. ಈಕೆಯ ಬೌಲಿಂಗ್ ಶೈಲಿ ನೋಡಲು ಎಷ್ಟೊಂದು ನಾಜೂಕು, ನಿರಾಯಾಸ ಮತ್ತು ಆಕರ್ಷಣೀಯವಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ರು. ಇದಕ್ಕೆ ಜಹೀರ್ ಖಾನ್ ಕೂಡ ಥ್ರಿಲ್ ಆಗಿ ರಿಪ್ಲೈ ಮಾಡಿದ್ರು.
ಸಚಿನ್ ವಿಡಿಯೋ ಪೋಸ್ಟ್ ಮಾಡಿದ ಬಳಿಕ ಸಾಕಷ್ಟು ವೈರಲ್ ಆಗಿತ್ತು. ಈ ವಿಡಿಯೋವನ್ನ ಈಗಾಗ್ಲೇ ನೀವು ರೀಲ್ಸ್ಗಳಲ್ಲಿ ನೋಡಿರಬಹುದು. ಅಷ್ಟಕ್ಕೂ ಈ ಬಾಲಕಿ ಹೆಸ್ರು ಸುಶೀಲಾ ಮೀನ. 2012 ರಲ್ಲಿ ರಾಜಸ್ಥಾನದ ಹಳ್ಳಿಯೊಂದರಲ್ಲಿ ಜನಿಸಿರೋ ಸುಶೀಲಾಗೆ ಈಗ 12 ವರ್ಷ ವಯಸ್ಸು. ಸರ್ಕಾರಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದಾಳೆ. ತಂದೆ ಹೆಸ್ರು ರತನ್ಲಾಲ್ ಮತ್ತು ತಾಯಿ ಮೀನಾ. ಸುಶೀಲಾಗೆ ಒಬ್ಬ ಅಣ್ಣ ಮತ್ತು ತಮ್ಮ ಇದ್ದಾನೆ. ಗುಡಿಸಲಿನಲ್ಲೇ ವಾಸ ಮಾಡುವ ಈ ಕುಟುಂಬ ಬಡತನದಲ್ಲಿದೆ. ಈಶ್ವರಲಾಲ್ ಅನ್ನೋರು ಸ್ಥಳೀಯ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕ್ರಿಕೆಟ್ ಕಲಿಸುತ್ತಿದ್ದು ಅವ್ರ ಮಾರ್ಗದರ್ಶನದಲ್ಲಿ ಮೀನಾ ಅದ್ಭುತ ಬೌಲಿಂಗ್ ಕಲಿಯುತ್ತಿದ್ದಾಳೆ.
ಸುಶೀಲಾಳ ಬೌಲಿಂಗ್ ಸ್ಟೈಲ್ ನೋಡುವ ಎಷ್ಟೋ ಜನ್ರಿಗೆ ಸೇಮ್ ಟು ಸೇಮ್ ಜಹೀರ್ ಖಾನ್ ಅವ್ರ ಮ್ಯಾನರಿಝಂ ಹೋಲಿಕೆಯಾಗ್ತಿದೆ. ಎಡಗೈ ವೇಗದ ಬೌಲರ್ ಆಗಿರುವ ಬಾಲಕಿ ಸಲೀಸಾಗಿ ಜಹೀರ್ ಖಾನ್ ಶೈಲಿಯಲ್ಲಿ ರನ್ ಅಪ್ ತೆಗೆದುಕೊಂಡು ವಿಕೆಟ್ ಬಳಿ ತಲುಪಿದಾಗ ನೆಗೆದು ಚೆಂಡೆಸೆಯುವ ಸ್ಟೈಲ್ ಎಲ್ಲರಿಗೂ ಇಷ್ಟವಾಗಿದೆ.
ಇನ್ನು ಸಚಿನ್ ವಿಡಿಯೋ ವೈರಲ್ ಆದ್ಮೇಲೆ ಸಾಕಷ್ಟು ಮಂದಿ ಸುಶೀಲಾಗೆ ನೆರವು ನೀಡ್ತಿದ್ದಾರೆ. ಕ್ರಿಕೆಟ್ ಅಭ್ಯಾಸಕ್ಕೆ ಬೇಕಾದ ಪರಿಕರಗಳನ್ನ ಕೊಡಿಸುತ್ತಿದ್ದಾರೆ. ಬಿಜೆಪಿ ನಾಯಕ ಕನ್ಹಯ್ಯಾ ಲಾಲ್ ಮೀನಾ ಅವರ ಶಾಲೆಗೆ ಭೇಟಿ ನೀಡಿ ಹೊಸ ಕ್ರಿಕೆಟ್ ಕಿಟ್ ಜೊತೆಗೆ ಸ್ವಲ್ಪ ಹಣವನ್ನೂ ನೀಡಿದ್ದಾರೆ. ಹಾಗೇ ಹತ್ತಿರದ ಕ್ರಿಕೆಟ್ ಕ್ಲಬ್ ವೊಂದಕ್ಕೆ ಜಾಯ್ನ್ ಮಾಡಿಸಿ ತರಬೇತಿ ಕೊಡಿಸುತ್ತಿದ್ದಾರೆ. ಅಚ್ಚರಿ ಅಂದ್ರೆ ಸುಶೀಲ ಮೀನಾ ತನ್ನ ಬೌಲಿಂಗ್ ಮೂಲಕ ಕನ್ನಯ್ಯ ಲಾಲ್ ಅವ್ರನ್ನೂ ಕ್ಲೀನ್ ಬೌಲ್ಡ್ ಮಾಡಿದ್ದಾಳೆ.
ಒಟ್ನಲ್ಲಿ ಸುಶೀಲಾಳಂತ ಎಷ್ಟೋ ಪ್ರತಿಭಾವಂತ ಮಕ್ಕಳು ಹಳ್ಳಿಗಳಲ್ಲೇ ಮರೆಯಾಗುತ್ತಿದ್ದಾರೆ. ಬಡತನ, ಹಣದ ಕೊರತೆ, ತರಬೇತಿ ಇಲ್ಲದೆ ಕ್ರೀಡೆಯನ್ನೇ ಬಿಡ್ತಿದ್ದಾರೆ. ಬಟ್ ಸಚಿನ್ ಮಾಡಿದಂಥ ಒಂದು ಪೋಸ್ಟ್ ಆ ಬಾಲಕಿ ಬದುಕನ್ನೇ ಬದಲಿಸಿದೆ. ಮುಂದೊಂದು ದಿನ ಆಕೆ ಟೀಂ ಇಂಡಿಯಾ ಸೇರಿದ್ರೂ ಅಚ್ಚರಿ ಪಡ್ಬೇಕಿಲ್ಲ.