ಸುಶಾಂತ್ ಸಿಂಗ್ ರಜಪೂತ್ ಮೃತದೇಹದ ಮೇಲಿತ್ತು ಗಾಯದ ಗುರುತು – ಮತ್ತೊಂದು ಗಂಭೀರ ಆರೋಪ
ಸುಶಾಂತ್ ಸಿಂಗ್ ರಜಪೂತ್ ಅವರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಸುಶಾಂತ್ ಸಿಂಗ್ ಸಾವಿನ ಕೇಸ್‌ನ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ತನಿಖೆ ನಡೆಯುತ್ತಿರುವಾಗಲೇ ಇನ್ನೊಂದು ಗಂಭೀರ ಆರೋಪ ಕೇಳಿಬಂದಿದೆ. ಸುಶಾಂತ್ ಸಿಂಗ್ ಅವರ ಮರಣೋತ್ತರ ಪರೀಕ್ಷೆಯಲ್ಲಿ ಭಾಗಿಯಾದ ಆಸ್ಪತ್ರೆಯ ಸಿಬ್ಬಂದಿ ನೀಡಿರುವ ಹೇಳಿಕೆಯೊಂದು ಸಂಚಲನ ಮೂಡಿಸಿದೆ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅವರನ್ನು ಕೊಲೆ ಮಾಡಲಾಗಿದೆ ಎಂದು ಕೂಪರ್ ಆಸ್ಪತ್ರೆಯ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ರೂಪಕುಮಾರ್ ಶಾ ಆರೋಪಿಸಿದ್ದಾರೆ. ‘ಸುಶಾಂತ್ ಶವ ಪತ್ತೆಯಾದಾಗ ಅವರ ದೇಹದ ಮೇಲೆ ಗಾಯಗಳಿದ್ದವು ಮತ್ತು ಅವರ ದೇಹವನ್ನು ಥಳಿಸಲಾಗಿತ್ತು’ ಎಂದು ರೂಪಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಗೆಳತಿಗೆ ಪ್ರಭಾವಿ ರಾಜಕಾರಣಿಯಿಂದ 44 ಬಾರಿ ಕರೆ? – ಬಾಲಿವುಡ್ ನಟನ ಸಾವಿಗೆ ರಾಜಕೀಯದ ನಂಟು?
‘ಸುಶಾಂತ್ ಸಿಂಗ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುವಾಗ ನಾನು ಅಲ್ಲಿಯೇ ಇದ್ದೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ವೈದ್ಯರಿಗೆ ಹೇಳಿದ್ದೆ. ಆದರೆ ಯಾರೂ ನನ್ನತ್ತ ಗಮನ ಹರಿಸಲಿಲ್ಲ’ ಎಂದು ಶಾ ಹೇಳಿದ್ದಾರೆ. ಇಷ್ಟು ದಿನ ಈ ವಿಚಾರವನ್ನು ಮುಚ್ಚಿಟ್ಟಿದ್ದೇಕೆ ಎನ್ನುವ ಪ್ರಶ್ನೆಗೂ ಅವರು ಉತ್ತರ ನೀಡಿದ್ದಾರೆ. ‘ಕೆಲಸದಲ್ಲಿ ಯಾರಿಗೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ನಾವು ಇಷ್ಟು ದಿನ ಅದರ ಬಗ್ಗೆ ಮಾತನಾಡಲಿಲ್ಲ’ ಎಂದು ಅವರು ಹೇಳಿದ್ದಾರೆ. ಇದರಿಂದ ವೈದ್ಯರು ಸತ್ಯ ಮುಚ್ಚಿಟ್ಟರಾ ಎಂಬ ಅನುಮಾನ ಮೂಡಿದೆ. ರೂಪಕುಮಾರ್ ಶಾ ಕೂಪರ್ ಆಸ್ಪತ್ರೆಯ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಒಂದೂವರೆ ತಿಂಗಳ ಹಿಂದೆ ನಿವೃತ್ತರಾಗಿದ್ದರು.
ಸುಶಾಂತ್ ಸಿಂಗ್ ರಜಪೂತ್ ಅವರ ಗರ್ಲ್ಫ್ರೆಂಡ್ ಆಗಿದ್ದ ರಿಯಾ ಚಕ್ರವರ್ತಿ ಈ ಪ್ರಕರಣದ ಪ್ರಮುಖ ಆರೋಪಿ. ಅವರು ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. ಸದ್ಯ ಜಾಮೀನು ಪಡೆದು ಅವರು ಹೊರಗಿದ್ದಾರೆ. ತನಿಖೆ ನಡೆಯುವ ಸಂದರ್ಭದಲ್ಲಿ ರಿಯಾಗೆ ‘ಎಯು’ ಹೆಸರಿನ ವ್ಯಕ್ತಿಯಿಂದ 44 ಬಾರಿ ಕರೆ ಬಂದಿದೆ. ಎಯು ಎಂದರೆ ಆದಿತ್ಯ ಉದ್ಧವ್ ಠಾಕ್ರೆ ಎಂದು ಬಿಹಾರ್ ಪೊಲೀಸರು ಹೇಳಿದ್ದರು. ಇದರಿಂದಾಗಿ ಈ ಪ್ರಕರಣಕ್ಕೆ ಹಾಗೂ ಆದಿತ್ಯ ಠಾಕ್ರೆಗೆ ಲಿಂಕ್ ಆಗಿದೆ.