ದಿಗ್ಗಜರ ಎದುರಲ್ಲೇ ಬ್ಯಾಟಿಂಗ್ ವೈಭವ – ಕಾಲಿಗೆ ಬಿದ್ದು ಹೃದಯ ಗೆದ್ದ ‘ವಂಶಿ’
ಸೂರ್ಯವಂಶಿಗೆ ಧೋನಿ ಕಿವಿಮಾತೇನು?

ವೈಭವ್ ಸೂರ್ಯವಂಶಿ.. ವಯಸ್ಸು ಜಸ್ಟ್ 14 ವರ್ಷ.. ಆಟಕ್ಕೂ ವಯಸ್ಸಿಗೂ ಸಂಬಂಧವೇ ಇಲ್ಲ.. ತಾನು ಐಪಿಎಲ್‌ಗೆ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ತನ್ನ ತಾಕತ್ತನ್ನ ಜಗತ್ತಿಗೆ ತೋರಿಸಿದ್ದಾನೆ. ಬ್ಯಾಟಿಂಗ್ ಸ್ಟೈಲ್, ಮೊದಲ ಎಸೆತದಲ್ಲೇ ಸಿಡಿಸಿದ ಸಿಕ್ಸರ್, ಈತನ ಎನರ್ಜಿ ಒಬ್ಬ ಸ್ಟಾರ್ ಆಟಗಾರನಂತೆ ಇತ್ತು. ಮನಸ್ಸು ಮಾಡಿದ್ರೆ ವಯಸ್ಸಿನ ಚೌಕಟ್ಟು ಇಲ್ಲದೇ ಸಾಧನೆ ಮಾಡಬಹುದು ಅನ್ನೋದನ್ನ ವೈಭವ್ ತೋರಿಸಿದ್ದಾನೆ. ವೈಭವ್ ಸೂರ್ಯವಂಶಿ ಸದ್ಯ ಕ್ರಿಕೆಟ್ ಲೋಕದ ನಯಾ ಸೂಪರ್ ಸ್ಟಾರ್. ಗೂಗಲ್ ಸಿ ಯಿಂದ ಹಿಡಿದು ಹಳ್ಳಿ ಹಳ್ಳಿಯ ಕ್ರಿಕೆಟ್ ಪ್ರೇಮಿಗಳ ಬಾಯಲ್ಲಿ ಈತನ ಹೆಸರು ಓಡಾಡ್ತಿದೆ. ಕ್ರಿಕೆಟ್ ಲೋಕ ಕಂಡ ಸೂಪರ್ ಸ್ಟಾರ್ಗಳು ಈತನ ಆಟಕ್ಕೆ ಫಿದಾ ಆಗಿದ್ದಾರೆ. ರಾಜಸ್ಥಾನ್ ರಾಯಲ್ಸ್‌ನ ಕೊನೆ ಪಂದ್ಯದಲ್ಲೂ ವೈಭವ್ ಗಮನ ಸೆಳೆದಿದ್ದಾನೆ.
ರಾಜಸ್ಥಾನ್ ರಾಯಲ್ಸ್ ಈ ಐಪಿಎಲ್ ಲೀಗ್‌ನಿಂದ ಹೊರ ಬಿದ್ದಿದೆ. ಕಳಪೆ ಪ್ರದರ್ಶನದಿಂದ ಪ್ಲೇಆಫ್‌ಗೆ ತಲುಪಲಿಲ್ಲ. ಆದರೆ, 14 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ತಂಡದ ಏಕೈಕ ಆಶಾಕಿರಣವಾಗಿದ್ದಾನೆ. ಈ ಯುವ ಓಪನರ್ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ IPLನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿ ಸಂಚಲನ ಮೂಡಿಸಿದ್ದಾನೆ.
206.55 ಸ್ಟ್ರೈಕ್‌ರೇಟ್‌ನಲ್ಲಿ 252 ರನ್ ಗಳಿಕೆ
ವೈಭವ್ ಸೂರ್ಯವಂಶಿ ಗುಜರಾತ್ ಟೈಟಾನ್ಸ್ ವಿರುದ್ಧ ವೇಗದ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದ. ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ. ಈ ನಡುವೆ ಈತ ಮೊತ್ತೊಂದು ಸಾಧನೆ ಮಾಡಿದ್ದಾನೆ. ಚೆನ್ನೈ ವಿರುದ್ಧದ ಪಂದ್ಯದ ಮೂಲಕ ಐತಿಹಾಸಿಕ ದಾಖಲೆಯೊಂದನ್ನು ನಿರ್ಮಿಸಿದ್ದಾನೆ. IPL ಇತಿಹಾಸದಲ್ಲಿ ಮೊದಲ 100 ಎಸೆತಗಳಲ್ಲಿ ಅತಿ ಹೆಚ್ಚಿನ ಸ್ಟ್ರೈಕ್ ರೇಟ್ ಅಂದ್ರೆ 212.38 ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ಪಾತ್ರನಾಗಿದ್ದಾನೆ. ರಾಜಸ್ಥಾನ್ ರಾಯಲ್ಸ್‌ನ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 188 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದಾಗ, ಸೂರ್ಯವಂಶಿ ತನ್ನ ಬ್ಯಾಟ್‌ನಿಂದ ರನ್ ಮಳೆ ಹರಿಸಿದ. ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್ 33 ಎಸೆತಗಳಲ್ಲಿ57 ರನ್ ಗಳಿಸಿ ಗಮನ ಸೆಳೆದ.
ಧೋನಿ ಆಶೀರ್ವಾದ ಪಡೆದ ವೈಭವ್ ಸೂರ್ಯವಂಶಿ
ಪಂದ್ಯದ ಬಳಿಕ ಹ್ಯಾಂಡ್‌ಶೇಕ್ ಸಮಯದಲ್ಲಿ ಸಿಎಸ್‌ಕೆ ನಾಯಕ ಎಂ.ಎಸ್.ಧೋನಿ ಹಾಗೂ ವೈಭವ್ ಸೂರ್ಯವಂಶಿ ನಡುವೆ ಹೃದಯಸ್ಪರ್ಶಿ ಘಟನೆ ನಡೆಯಿತು. ಇದ್ದನ್ನ ನೋಡಿ ಇಡೀ ಕ್ರಿಕೆಟ್ ಜಗತ್ತೇ ಈತನಿಗೆ ಸಲಾಂ ಹೊಡೆದಿದೆ. ವೈಭವ್ ಸೂರ್ಯವಂಶಿ ಹ್ಯಾಂಡ್‌ಶೇಕ್ ಮಾಡಿ ಮುಂದೆ ಸಾಗುವಾಗ, ಧೋನಿ ಕಾಲಿಗೆ ಬಿದ್ರು. ಅವರ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆದುಕೊಂಡರು. ಆಗ ಧೋನಿ ನಗುತ್ತಾ, ಪ್ರತಿಯಾಗಿ ವೈಭವ್ ತಲೆ ಸವರಿದರು. ಪಂದ್ಯದ ಬಳಿಕದ ಹೃದಯಸ್ಪರ್ಶಿ ಕ್ಷಣವು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೈಭವ್‌ನ ಗುಣ ಅಂದ್ರೆ ದೊಡ್ಡವರ ಕಾಲಿಗೆ ಬಿದ್ದು ಅವರ ಆಶೀರ್ವಾದ ಪಡೆಯುತ್ತಾನೆ. ಇನ್ನೂ 2011ರಲ್ಲಿ ಮುಂಬೈನಲ್ಲಿ ಎಂಎಸ್ ಧೋನಿ ಭಾರತವನ್ನು ವಿಶ್ವಕಪ್ ಗೆಲುವಿನತ್ತ ಮುನ್ನಡೆಸಿದಾಗ ಸೂರ್ಯವಂಶಿ ಕೇವಲ 5 ದಿನಗಳ ಮಗು. ಆದ್ರೆ ಆ ಮಗು ಇವತ್ತು ಧೋನಿ ಮುಂದೆ ನಿಂತು ಸಿಕ್ಸರ್‌ಗಳ ಸುರಿಮಳೆಯನ್ನೇ ಸುರಿಸುತ್ತಿದೆ ಅಂದ್ರೆ ನಿಜಕ್ಕೂ ಗ್ರೇಟ್ ಅಲ್ವಾ.. ಸಾಧನೆಗೆ ವಯಸ್ಸಿನ ಮೀತಿ ಇರಲ್ಲ ಅನ್ನೋದಕ್ಕೆ ಇವರೇ ಸಾಕ್ಷಿ.
ಭಾರತಕ್ಕೆ ಸಿಕ್ಕಿದ್ದಾನೆ ಭವಿಷ್ಯದ ಆಟಗಾರ
14 ವರ್ಷದ ಆಟಗಾರನಿಗೆ ರಾಜಸ್ಥಾನ್ ರಾಯಲ್ಸ್ 1.2 ಕೋಟಿ ರೂಪಾಯಿಗಳನ್ನು ಪಾವತಿಸಿ ಮೆಗಾ ಹರಾಜಿನಲ್ಲಿ ಖರೀದಿಸಿದಾಗ ಅನೇಕರ ಹುಬ್ಬೇರಿತ್ತು. ವೈಭವ್ ಆಡಿರುವ ಕೇವಲ 7 ಪಂದ್ಯಗಳಲ್ಲಿ 206.55 ಸ್ಟ್ರೈಕ್‌ರೇಟ್‌ನಲ್ಲಿ 252 ರನ್ ಗಳಿಸಿದ್ದಾರೆ. ತಾವು ಎದುರಿಸಿದ 101 ಎಸೆತಗಳಲ್ಲಿ 24 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧ 35 ಎಸೆತಗಳಲ್ಲಿ ಶತಕ ಸಿಡಿಸಿದ ಈತ ಅತ್ಯಂತ ವೇಗವಾಗಿ ಶತಕ ಗಳಿಸಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾನೆ. ಚೆನ್ನೈ ವಿರುದ್ಧದ ಮೊದಲ ಪಂದ್ಯದಲ್ಲೂ ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 57 ರನ್ ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದರು.