2026ಕ್ಕೆ ಟೀಂ ಇಂಡಿಯಾಗೆ ವೈಭವ್? – ಸಚಿನ್ ರಂತೆ ಕ್ರಿಕೆಟ್ ಆಳ್ತಾರಾ ಸೂರ್ಯವಂಶಿ?
24 ವರ್ಷ.. ತೆಂಡೂಲ್ಕರ್ ನಡೆದಿದ್ದೇ ದಾರಿ!

ವೈಭವ್ ಸೂರ್ಯವಂಶಿ. ಟೀಂ ಇಂಡಿಯಾದ ಸೆನ್ಸೇಷನಲ್ ಕ್ರಿಕೆಟರ್. ತಮ್ಮ ವಯಸ್ಸಿಗೂ ಪ್ರದರ್ಶನಕ್ಕೂ ಅನುಮಾನ ಹುಟ್ಟುವಂತೆ ಆಡ್ತಿರೋ ಹುಡುಗ. ದೇಶದ ಅತ್ಯುನ್ನತ ಮಕ್ಕಳ ಪ್ರಶಸ್ತಿಯಾದ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನೂ ಪಡೆದಿದ್ದಾರೆ. ಶುಕ್ರವಾರವಷ್ಟೇ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ವೈಭವ್ರ ಈ ಸಾಧನೆ ನೋಡಿ ಮಾಜಿ ಕ್ರಿಕೆಟಿಗರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ಗೆ ಹೋಲಿಕೆ ಮಾಡ್ತಿದ್ದಾರೆ. ಈಗಲೇ ಟೀಂ ಇಂಡಿಯಾಗೆ ಸೇರಿಸಿಕೊಳ್ಳಿ, ಫ್ಯೂಚರ್ ಸಚಿನ್ ಆಗ್ತಾರೆ ಅಂತೆಲ್ಲಾ ಹೇಳಿದ್ದಾರೆ.
ಇದನ್ನೂ ಓದಿ : ಶ್ರೀಲಂಕಾ ವಿರುದ್ಧ ಟೀಂ IND ಅಬ್ಬರ – 3ನೇ ಟಿ20I ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡ ಭಾರತ ಮಹಿಳಾ ತಂಡ
ಡೊಮೆಸ್ಟಿಕ್ ಇರ್ಲಿ ಇಂಟರ್ ನ್ಯಾಷನಲ್ ಇರ್ಲಿ ಫಿಯರ್ ಲೆಸ್ ಆಗಿ ಬ್ಯಾಟ್ ಬೀಸ್ತಿರೋ ವೈಭವ್ ಸೂರ್ಯವಂಶಿ ಸದ್ಯ ಕ್ರಿಕೆಟ್ ಲೋಕದ ಯಂಗ್ ಡೈನಮೇಟ್. ಐಪಿಎಲ್, ಅಂಡರ್ 19 ಯೂತ್ ಟೆಸ್ಟ್, ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟಿ20, ಅಂಡರ್-19 ಏಷ್ಯಾ ಕಪ್, ಸೈಯದ್ ಮುಷ್ತಾಕ್ ಅಲಿ ಟಿ20, ವಿಜಯ್ ಹಜಾರೆ ಟ್ರೋಫಿ ಹೀಗೆ ಪ್ರತೀ ಟೂರ್ನಿಯಲ್ಲೂ ವೈಭವ್ ಸಿಡಿಲಬ್ಬರದ ಶತಕ ಬಾರಿಸಿದ್ದಾರೆ. 15 ವರ್ಷವೂ ತುಂಬದ ವೈಭವ್ರನ್ನ ಟೀಂ ಇಂಡಿಯಾಗೆ ಸೇರಿಸಿಕೊಳ್ಳಿ ಅನ್ನೋ ಕೂಗು ಎದ್ದಿದೆ. ಶಶಿ ತರೂರ್, ಕೆ.ಶ್ರೀಕಾಂತ್ ಹೀಗೆ ಹೇಳಿದ್ದಾರೆ. ಅದ್ರಲ್ಲೂ ಸಚಿನ್ ತೆಂಡೂಲ್ಕರ್ರನ್ನ 16 ವರ್ಷಕ್ಕೆ ಭಾರತದ ಪರ ಆಡಿಸಿದ್ದಕ್ಕೇ ಸಚಿನ್ ಕ್ರಿಕೆಟ್ ದೇವರಾಗಿದ್ದು ಅನ್ನೋ ವಾದವೂ ಇದೆ. 1989 ರಿಂದ 2013 ರವರೆಗೆ ಅಂದ್ರೆ ಬರೋಬ್ಬರಿ 24 ವರ್ಷಗಳ ಕಾಲ ಭಾರತದ ಪರ ಸಚಿನ್ ನಡೆದದ್ದೇ ದಾರಿಯಾಗಿತ್ತು. ಈಗ್ಲೂ ಕೂಡ ಸಚಿನ್ ಇಡೀ ಕ್ರಿಕೆಟ್ ಜಗತ್ತಿನ ಮೇರುಪರ್ವತ.
16ನೇ ವಯಸ್ಸಲ್ಲಿ ಎಂಟ್ರಿ.. 24 ವರ್ಷ ಅನಭಿಶಕ್ತ ದೊರೆ!
ಕ್ರಿಕೆಟ್ ದೇವರು ಅಂತಾನೇ ಕರೆಸಿಕೊಳ್ಳೋ ಸಚಿನ್ ತೆಂಡೂಲ್ಕರ್ 1989ರ ನವೆಂಬರ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿರಿಸಿದ್ದರು. ಆಗಿನ್ನು 16 ವರ್ಷ ವಯಸ್ಸು. ಪಾಕಿಸ್ತಾನ ವಿರುದ್ಧ ಟೆಸ್ಟ್ ಪಂದ್ಯ ಆಡುವುದರ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ರು. ಅಲ್ಲಿಂದ ಈಚೆಗೆ ಹಿಂತಿರುಗಿ ನೋಡಿದ್ದೇ ಇಲ್ಲ. ಭಾರತೀಯ ಸರಕಾರದಿಂದ ಸರ್ವೋಚ್ಛ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಪ್ರಶಸ್ತಿ ಜೊತೆ ಹಲವು ಅಭೂತಪೂರ್ವ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಮನೆ ಮನೆ ಮಾತಾಗಲು ಸಚಿನ್ ಕೊಡುಗೆ ತುಂಬಾನೇ ದೊಡ್ಡದಿದೆ. ಕ್ರಿಕೆಟ್ ಇತಿಹಾಸದಲ್ಲೇ ಅತೀಹೆಚ್ಚು ರನ್ ಗಳಿಸಿರೋ ಸಚಿನ್ರ ಈ ನಾಲ್ಕು ದಾಖಲೆಗಳನ್ನ ಭವಿಷ್ಯದಲ್ಲೂ ಯಾರಿಂದಲೂ ಬ್ರೇಕ್ ಮಾಡೋದು ಕಷ್ಟ ಇದೆ.
ಸಚಿನ್ ರ ಮುರಿಯಲಾಗದ ದಾಖಲೆಗಳು!
ಏಕದಿನ ಮಾದರಿಯಲ್ಲಿ 22 ವರ್ಷ 91 ದಿನಗಳ ವೃತ್ತಿಜೀವನ
ಶತಕಗಳ ಶತಕ ಬಾರಿಸಿದ ಜಗತ್ತಿನ ಏಕೈಕ ಕ್ರಿಕೆಟರ್ ಸಚಿನ್
ಒಂದು ವರ್ಷದಲ್ಲಿ ಅತೀ ಹೆಚ್ಚು ರನ್ಸ್, 1998ರಲ್ಲಿ 1894 ರನ್ಸ್
ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರ
ಇನ್ನು 100ನೇ ಶತಕಕ್ಕಾಗಿ ಸಚಿನ್ ಭರ್ತಿ ಒಂದು ವರ್ಷ ನಾಲ್ಕು ದಿನ ಕಾಯ್ಬೇಕಾಗಿತ್ತು. 2011ರಲ್ಲಿ ಏಕದಿನ ವಿಶ್ವಕಪ್‌ನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಸಾಧನೆ ಮಾಡಿದ್ದ ಸಚಿನ್ 2012ರ ಮಾರ್ಚ್ನಲ್ಲಿ ಢಾಕಾದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಐತಿಹಾಸಿಕ ಸಾಧನೆ ಮಾಡಿದರು. ಬಳಿಕ 2013ರ ನವೆಂಬರ್ ತಿಂಗಳಲ್ಲಿ ತಮ್ಮ ಕೊನೆಯ ಇನ್ನಿಂಗ್ಸ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 74 ರನ್ ಪೇರಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ದಾಖಲೆಯ 200 ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್, 53.78ರ ಸರಾಸರಿಯಲ್ಲಿ 15921 ರನ್ ಪೇರಿಸಿದ್ದಾರೆ. ಹಾಗೆಯೇ 463 ಏಕದಿನ ಪಂದ್ಯಗಳಲ್ಲಿ 44.83ರ ಸರಾಸರಿಯಲ್ಲಿ 18426 ರನ್ ಗಳಿಸಿದ್ದಾರೆ. ಟೆಸ್ಟ್ ನಲ್ಲಿ 51 ಹಾಗೂ ಏಕದಿನದಲ್ಲಿ 49 ಶತಕ ಬಾರಿಸಿದ್ದಾರೆ. ಒಟ್ನಲ್ಲಿ ಸಚಿನ್ ಕ್ರಿಕೆಟ್ ಜಗತ್ತಿನ ಅನಭಿಶಕ್ತ ದೊರೆ ಆಗಿದ್ದಾರೆ. ಈಗ ವೈಭವ್ ಸೂರ್ಯವಂಶಿ ಸಚಿನ್ ಅವ್ರಿಗೆ ಕಂಪೇರ್ ಮಾಡೋ ಥರ ಪರ್ಫಾಮ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವೈಭವ್ ಕೂಡ ಚಿಕ್ಕ ವಯಸ್ಸಲ್ಲೇ ಟೀಂ ಇಂಡಿಯಾ ಸೇರುವ ಎಲ್ಲಾ ಚಾನ್ಸಸ್ ಇದೆ.

ನೋಡಿರಿ

