ಸೂರ್ಯಕುಮಾರ್, ಶ್ರೇಯಸ್ ಅಯ್ಯರ್ ಫ್ಲಾಪ್ ಶೋ – ದೇಶಿ ಟೂರ್ನಿ ಲೆಕ್ಕಕ್ಕಿಲ್ವಾ?

ಸೂರ್ಯಕುಮಾರ್, ಶ್ರೇಯಸ್ ಅಯ್ಯರ್ ಫ್ಲಾಪ್ ಶೋ – ದೇಶಿ ಟೂರ್ನಿ ಲೆಕ್ಕಕ್ಕಿಲ್ವಾ?

ಕೋಚ್ ಗಂಭೀರ್, ಬಿಸಿಸಿಐ ಟೀಮ್ ಇಂಡಿಯಾ ಆಟಗಾರರಿಗೆ ದೇಶಿ ಟೂರ್ನಿಯ ಟಾಸ್ಕ್ ಕೊಟ್ಟಿದೆ. ನೋ ರೆಸ್ಟ್. ದೇಶಿ ಟೂರ್ನಿಯಲ್ಲಿ ಕೊಡಿ ಬೆಸ್ಟ್ ಅಂತಾ ಟಾರ್ಗೆಟ್ ನೀಡ್ತಿದ್ದಂತೆ ಸ್ಟಾರ್ ಆಟಗಾರರು ಕೂಡಾ ನಾವ್ ರೆಡಿ ಅಂತಾ ಫೀಲ್ಡಿಗೇನೋ ಇಳಿದಿದ್ದಾರೆ. ಆದ್ರೆ, ಇಳಿದಿದ್ದು ಮಾತ್ರ. ಆಡೋದಿಲ್ಲ ಅನ್ನೋ ಥರಾ ಕಾಣಿಸ್ತಿದೆ ಫರ್ಫಾಮೆನ್ಸ್. ಬುಚ್ಚಿಬಾಬು ಟೂರ್ನಿಯಲ್ಲಿ ಸ್ಟಾರ್ ಆಟಗಾರರ ಫ್ಲಾಫ್ ಶೋ ಮತ್ತೆ ಮುಂದುವರೆದಿದೆ.

ಇದನ್ನೂ ಓದಿ:ವಿಶ್ವ ಕ್ರಿಕೆಟ್‌ ಗೆ ಜಯ್ ಶಾ ಬಾಸ್ – 35 ವರ್ಷಕ್ಕೆ ICC ಗದ್ದುಗೆ ಯಾಕೆ?

ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಮುಂದಿನ ತಿಂಗಳು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಗಾಗಿ ಇನ್ನು ಟೀಂ ಇಂಡಿಯಾವನ್ನು ಪ್ರಕಟಿಸಿಲ್ಲ. ಹೀಗಾಗಿಯೇ ಕೆಲವು ಆಟಗಾರರು ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಪಡೆಯಲು ಸರ್ಕಸ್ ಮಾಡ್ತಿದ್ದಾರೆ. ಇದಕ್ಕಾಗಿಯೇ ವಿವಿಧ ದೇಶೀ ಟೂರ್ನಿಗಳಲ್ಲಿ ಆಡುತ್ತಿದ್ದಾರೆ. ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಪಡೆಯಲು ಎದುರು ನೋಡ್ತಿದ್ದಾರೆ. ಮೋಸ್ಟ್ಲಿ, ಬುಚ್ಚಿ ಬಾಬು ಟೂರ್ನಿ ಈ ವಿಚಾರಕ್ಕೆ ಇಷ್ಟೊಂದು ಹೈಪ್ ಪಡ್ಕೊಂಡಿದೆ. ಈಗ ಬುಚ್ಚಿಬಾಬು ಟೂರ್ನಿಯಲ್ಲಿ ನಮ್ಮ ಟೀಮ್ ಇಂಡಿಯಾ ಆಟಗಾರರು ಯಾವ ರೀತಿ ಫಾರ್ಮ್ ತೋರಿಸ್ತಿದ್ದಾರೆ ನೋಡೋಣ.

ಮುಂಬೈನ ಸ್ಟಾರ್ ಬ್ಯಾಟ್ಸ್​ಮನ್​ಗಳೆಂದೇ ಫೇಮಸ್ ಆದವರು ಸೂರ್ಯಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್. ಈ ಇಬ್ಬರು ಆಟಗಾರರು ಬುಚ್ಚಿ ಬಾಬು ಟೂರ್ನಿಯಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ, ಈ ಇಬ್ಬರು ಆಟಗಾರರು ದೇಶಿ ಟೂರ್ನಿಯನ್ನ ತುಂಬಾನೇ ಲೈಟ್ ಆಗಿ ತಗೊಂಡಿದಂಗೆ ಕಾಣ್ತಿದೆ. ಮುಂಬೈ ಮತ್ತು TNCA-XI ಪಂದ್ಯದಲ್ಲಿ ಸ್ಟಾರ್ ಬ್ಯಾಟ್ಸರ್ ಗಳು ಕಂಪ್ಲೀಟ್ ಫೆಲ್ಯೂರ್ ಆಗಿದ್ದಾರೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ TNCA-XI ಮೊದಲ ಇನ್ನಿಂಗ್ಸ್‌ನಲ್ಲಿ 379 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಬ್ಯಾಟಿಂಗ್ ಆರಂಭಿಸಿದ ಮುಂಬೈ ಪರ ಆರಂಭಿಕ ದಿವ್ಯಾಂಶ್ ಸಕ್ಸೇನಾ ಹೊರತುಪಡಿಸಿ, ಯಾವುದೇ ಬ್ಯಾಟ್ಸ್‌ಮನ್ ಪರಿಣಾಮಕಾರಿ ಪ್ರದರ್ಶನ ನೀಡಲಿಲ್ಲ. ಟಿಎನ್‌ಸಿಎ ಸ್ಪಿನ್‌ ದಾಳಿಗೆ ನಲುಗಿದ ಮುಂಬೈ ದಿನದಾಟದ ಅಂತ್ಯಕ್ಕೆ 8 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 181 ರನ್ ಗಳಿಸಿದೆ.

ಇನ್ನು ಈ ಪಂದ್ಯದಲ್ಲಿ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನಕ್ಕಾಗಿ ಪ್ರಬಲ ಸ್ಪರ್ಧಿಯಾಗಿರುವ ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಮೇಲೆ ಹೆಚ್ಚಿನ ನಿರೀಕ್ಷೆಗಳಿದ್ದವು. ಮುಂಬೈ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಶ್ರೇಯಸ್ ಸಂಪೂರ್ಣ ವಿಫಲರಾಗಿ ಕೇವಲ 3 ಎಸೆತಗಳಲ್ಲಿ 2 ರನ್ ಬಾರಿಸಿ ಪೆವಿಲಿಯನ್‌ಗೆ ಮರಳಿದರು. ಆ ನಂತರ ಕ್ರೀಸ್​ಗೆ ಬಂದ ಸೂರ್ಯ ತಮ್ಮದೇ ಶೈಲಿಗೆ ಬಂದ ತಕ್ಷಣ ವೇಗದ ಬ್ಯಾಟಿಂಗ್ ಆರಂಭಿಸಿದರು. ಅವರ ಮತ್ತು ದಿವ್ಯಾಂಶ್ ನಡುವೆ 40 ರನ್‌ಗಳ ಜೊತೆಯಾಟವಿತ್ತು. ಅದರಲ್ಲಿ 30 ರನ್‌ಗಳು ಸೂರ್ಯ ಅವರದ್ದಾಗಿದ್ದವು. ಆದರೆ ಲಯ ಕಳೆದುಕೊಂಡ ಸೂರ್ಯ, ಶ್ರೇಯಸ್ ಅವರಂತೆ ಎಡಗೈ ಸ್ಪಿನ್ನರ್ ಅಜಿತ್ ರಾಮ್ ಅವರ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಸೂರ್ಯ 38 ಎಸೆತಗಳಲ್ಲಿ 30 ರನ್‌ಗಳ ಇನಿಂಗ್ಸ್‌ ಆಡಿದರು. ಇದು ಮೊದಲ ಇನ್ನಿಂಗ್ಸ್ ಆಗಿದ್ದು, ಎರಡನೇ ಇನ್ನಿಂಗ್ಸ್​ನಲ್ಲಿ ಲಯ ಕಂಡುಕೊಳ್ಳುವ ಅವಕಾಶ ಇವರಿಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ದುಲೀಪ್ ಟ್ರೋಫಿಯಲ್ಲೂ ಆಡಲಿದ್ದಾರೆ. ಅಂದರೆ ಆಯ್ಕೆ ಸಮಿತಿಯನ್ನು ಮೆಚ್ಚಿಸಲು ಇವರಿಗೆ ಇನ್ನೂ ಸಾಕಷ್ಟು ಅವಕಾಶವಿದೆ. ಆದರೆ ಈ ಇಬ್ಬರು ಸ್ಪಿನ್ನರ್​ಗಳಿಗೆ ವಿಕೆಟ್ ಒಪ್ಪಿಸಿರುವುದು ಕಳವಳಕಾರಿ ಸಂಗತಿಯಾಗಿದೆ. ಪ್ರಸ್ತುತ ಭಾರತ ತಂಡದಲ್ಲಿ ಸ್ಪಿನ್ನರ್‌ಗಳ ವಿರುದ್ಧ ಶ್ರೇಯಸ್ ಅತ್ಯುತ್ತಮವಾಗಿ ಆಡುತ್ತಾರೆ ಎಂಬ ಮಾತಿದೆ. ಆದರೆ ಶ್ರೇಯಸ್ ಈ ಪಂದ್ಯದಲ್ಲಿ ಸ್ಪಿನ್ನರ್ ವಿರುದ್ಧವೇ ಮಂಕಾದರು. ಹೀಗಾಗಿ ಮುಂಬರುವ ಟೆಸ್ಟ್ ಸರಣಿಯಲ್ಲಿ ಶ್ರೇಯಸ್ ಬಾಂಗ್ಲಾದೇಶದ ಸ್ಪಿನ್ನರ್‌ಗಳನ್ನು ಹೇಗೆ ಎದುರಿಸುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಇತ್ತ ಸೂರ್ಯ ಇದುವರೆಗೆ ಒಂದೇ ಒಂದು ಟೆಸ್ಟ್ ಪಂದ್ಯವನ್ನಾಡಿದ್ದು, ಆ ಬಳಿಕ ಮತ್ತೆ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದಿಲ್ಲ. ಹೀಗಾಗಿ ಸೂರ್ಯನಿಗೆ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಥಾನ ಸಿಗಬೇಕಾದರೆ ಇಲ್ಲಿ ಭರ್ಜರಿ ಫಾರ್ಮ್ ತೋರಿಸಲೇಬೇಕಾದ ಅನಿವಾರ್ಯತೆಯೂ ಇದೆ.

 

Sulekha

Leave a Reply

Your email address will not be published. Required fields are marked *