ಶ್ರೀರಾಮನ ಸ್ಮರ್ಶಿಸಲಿದೆ ಸೂರ್ಯ ರಶ್ಮಿ..! – ರಾಮಲಲ್ಲಾನ ಹಣೆ ಮೇಲೆ ತಿಲಕದಂತೆ ಬೀಳುತ್ತೆ ರವಿಯ ಕಿರಣ!

ಶ್ರೀರಾಮನ ಸ್ಮರ್ಶಿಸಲಿದೆ ಸೂರ್ಯ ರಶ್ಮಿ..! – ರಾಮಲಲ್ಲಾನ ಹಣೆ ಮೇಲೆ ತಿಲಕದಂತೆ ಬೀಳುತ್ತೆ ರವಿಯ ಕಿರಣ!

ರಾಮನವಮಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು. ಯುಗಾದಿಯ ನಂತರದಲ್ಲಿ ಚೈತ್ರಾ ಕಾಲದಲ್ಲಿ ಬರುವ ರಾಮನವಮಿಗೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ಪ್ರತಿ ವರ್ಷ ರಾಮ ನವಮಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಶ್ರೀರಾಮನ ಭಕ್ತರಿಗೆ ಈ ಬಾರಿಯ ರಾಮನವಮಿ ತುಂಬಾನೇ ವಿಶೇಷ. ರಾಮ ಮಂದಿರ ನಿರ್ಮಾಣದ ನಂತರ ಇದು ಮೊದಲ ರಾಮನವಮಿ.

ರಾಮನವಮಿ ಹಿನ್ನೆಲೆ ರಾಮನಗರಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಲಕ್ಷಾಂತರ ಭಕ್ತರು ಬಾಲರಾಮನನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ರಾಮನವಮಿ ದಿನದಂದು (ಬುಧವಾರ) ಅಯೋಧ್ಯೆ ರಾಮಮಂದಿರದ  ಗರ್ಭಗುಡಿಯಲ್ಲಿರುವ ರಮಲಲ್ಲಾನ ಹಣೆ ಮೇಲೆ ತಿಲಕದಂತೆ ಸೂರ್ಯನ ಕಿರಣ ಬೀಳಲಿದೆ. ಅದಕ್ಕೆ ಸಹಕಾರಿಯಾದ ಆಪ್ಟಿಕಲ್‌ ಯಂತ್ರವನ್ನು ಬೆಂಗಳೂರು ಮೂಲದ ಕಂಪನಿಯೊಂದು ರಾಮ ಜನ್ಮಭೂಮಿ ಟ್ರಸ್ಟ್‌ಗೆ ಕೊಡುಗೆಯಾಗಿ ನೀಡಿರುವುದು ವಿಶೇಷ.

ಇದನ್ನೂ ಓದಿ: ರಾಮನಗರಿಯಲ್ಲಿ ರಾಮನವಮಿ ಅದ್ದೂರಿ ಆಚರಣೆ – ನಾಲ್ಕು ದಿನ ವಿಐಪಿ ದರ್ಶನ ಸ್ಥಗಿತ!

ಎರಡು ಸಾರ್ವಜನಿಕ ಸಂಸ್ಥೆಗಳು ಮತ್ತು ಜೈನ ಕುಟುಂಬ ನಿರ್ವಹಿಸುತ್ತಿರುವ ಬೆಂಗಳೂರು ಮೂಲದ ಕಂಪನಿಯು ಅಯೋಧ್ಯೆ ರಾಮಮಂದಿರಕ್ಕೆ ‘ಸೂರ್ಯ ತಿಲಕ ಯಂತ್ರ’ವನ್ನು ಕೊಡುಗೆಯಾಗಿ ನೀಡಿದೆ. 84 ಲಕ್ಷ ರೂ. ಮೌಲ್ಯದ ಈ ಯಂತ್ರವನ್ನು ಜಿಗಣಿ ಲಿಂಕ್ ರಸ್ತೆಯಲ್ಲಿರುವ ಆಪ್ಟಿಕ್ಸ್ & ಅಲೈಡ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ (OPTICA) ಕೊಡುಗೆಯಾಗಿ ನೀಡಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮತ್ತು ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CBRI) ಸಹಯೋಗದಲ್ಲಿ ಯಂತ್ರ ಅಭಿವೃದ್ಧಿಪಡಿಸಲಾಗಿದೆ.

ಕಂಪನಿಯು ಈ ಆಪ್ಟಿಕಲ್ ವ್ಯವಸ್ಥೆಯನ್ನು ಸದ್ಭಾವನೆಯ ಸೂಚಕವಾಗಿ ಅಭಿವೃದ್ಧಿಪಡಿಸಿದೆ. ಈ ಯಂತ್ರದ ವಿನ್ಯಾಸಕ್ಕೆ ನಾಲ್ಕು ತಿಂಗಳ ಸಮಯ ಬೇಕಾಯಿತು. ಪ್ರತಿ ರಾಮನವಮಿಯಂದು 3-4 ನಿಮಿಷಗಳ ಕಾಲ ರಾಮಲಲ್ಲಾ ವಿಗ್ರಹದ ಹಣೆಯ ಮೇಲೆ ಸೂರ್ಯನ ಬೆಳಕು ಬೀಳಲು ಇದು ಸಹಕಾರಿಯಾಗಲಿದೆ ಎಂದು OPTICA ಕಂಪನಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕೊಟಾರಿಯಾ ತಿಳಿಸಿದ್ದಾರೆ.

ಟೈಟಾನಿಯಂ, ಹಿತ್ತಾಳೆ ಮತ್ತು ಕಂಚು ಬಳಸಿ ಯಂತ್ರ ರೂಪಿಸಲಾಗಿದೆ. ಇದು ಪೆರಿಸ್ಕೋಪ್‌ನಂತೆ ಕಾರ್ಯನಿರ್ವಹಿಸುತ್ತದೆ. ಪೆರಿಸ್ಕೋಪಿಕ್ ವ್ಯವಸ್ಥೆಯಲ್ಲಿನ ಕನ್ನಡಿಯು ರಾಮನವಮಿಯಂದು ನಿರ್ದಿಷ್ಟ ಕೋನದಲ್ಲಿ ಸೂರ್ಯನ ಬೆಳಕನ್ನು ಸೆರೆಹಿಡಿಯುತ್ತದೆ. ಸೆರೆ ಹಿಡಿದ ಬೆಳಕು ವಿಗ್ರಹದ ಹಣೆ ಮೇಲೆ ನಿಖರವಾಗಿ ಮೂಡುತ್ತದೆ ಎಂದು ಹೇಳಿದ್ದಾರೆ.

Shwetha M