ಸೂರ್ಯ ದಿ ಬ್ಯಾಟರ್ ಕಾಣೆಯಾಗಿದ್ದಾರೆ – ನಾಯಕ ಸೂರ್ಯಕುಮಾರ್ಗೆ ದಿಢೀರ್ ಜ್ಞಾನೋದಯ

ಸೂರ್ಯ ದಿ ಬ್ಯಾಟರ್ ಕಾಣೆಯಾಗಿದ್ದಾರೆ – ನಾಯಕ ಸೂರ್ಯಕುಮಾರ್ಗೆ ದಿಢೀರ್ ಜ್ಞಾನೋದಯ

ಸೌತ್ ಆಫ್ರಿಕಾ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಸರಣಿ ಗೆದ್ದು ಬೀಗಿದೆ. ನಾಯಕನ ಫೇಲ್ಯೂರ್ ನಡುವೆ ಟೀಮ್ ಇಂಡಿಯಾ ಶೈನ್ ಆಗಿದೆ. ಸೋಲಿಲ್ಲದ ಸರದಾರ ಎಂಬ ಹೆಗ್ಗಳಿಕೆ ಸೂರ್ಯನಿಗೆ ಸಿಕ್ಕಿದರೂ ಕೂಡಾ ಬ್ಯಾಟಿಂಗ್‌ನಲ್ಲಿ ಡಲ್ ಆಗಿರೋದು ಸ್ವತಃ ಸೂರ್ಯನಿಗೆ ಗೊತ್ತಾಗಿದೆ.

ಇದನ್ನೂ ಓದಿ:ನಾನು ಆಡುತ್ತಿದ್ದೇನೆ, ಆದ್ರೆ ರನ್ಸ್‌ ಬರುತ್ತಿಲ್ಲ ಅಷ್ಟೇ – ಸೂರ್ಯಕುಮಾರ್ ಉತ್ತರಕ್ಕೆ ತಲೆಕೆಡಿಸಿಕೊಂಡ ಫ್ಯಾನ್ಸ್

ಸೌತ್ ಆಫ್ರಿಕಾ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಬಗ್ಗು ಬಡಿದ ಸೂರ್ಯಕುಮಾರ್ ಪಡೆ ಸರಣಿ ಗೆದ್ದು ಬೀಗಿದೆ. 5 ಪಂದ್ಯಗಳ ಸರಣಿಯನ್ನು ಭಾರತ ತಂಡ 3-1 ಅಂತರದಿಂದ ಗೆದ್ದುಕೊಂಡಿದೆ. ಇಲ್ಲಿ ಎಲ್ಲರ ಗಮನ ಸೆಳೆದಿದ್ದು ಸೂರ್ಯಕುಮಾರ್ ಬ್ಯಾಟಿಂಗ್. ಸತತವಾಗಿ ಫಾರ್ಮ್ ಕಳೆದುಕೊಂಡಿರುವ ಸೂರ್ಯ ಈ ಪಂದ್ಯದಲ್ಲೂ ಸೌಂಡ್ ಮಾಡಿಲ್ಲ. ನಿಜ ಹೇಳಬೇಕೆಂದರೆ, ಸೂರ್ಯನ ಬ್ಯಾಟಿಂಗ್ ಗ್ರಹಣ ಇನ್ನೂ ಬಿಟ್ಟಿಲ್ಲ. ವಿಶೇಷವೆಂದರೆ ಈ ವಿಚಾರದಲ್ಲಿ ಸ್ವತಃ ಸೂರ್ಯನಿಗೆ ಜ್ಞಾನೋದಯವಾಗಿದೆ.

ಸರಣಿ ಗೆದ್ದ ಸಂಭ್ರಮದಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಆದರೆ, ನನ್ನ ಕಡೆಯಿಂದ ಉತ್ತಮ ಪ್ರದರ್ಶನ ಮೂಡಿಬಂದಿಲ್ಲ ಎಂದು ಒಪ್ಪಿಕೊಂಡರು. ಬಹುಶಃ ನಮಗೆ ಸೂರ್ಯ ದಿ ಬ್ಯಾಟರ್ ಕಾಣಿಸದಿರುವುದು ಒಂದೇ ಕೊರತೆ. ಅವನು ಎಲ್ಲೋ ಕಾಣೆಯಾಗಿದ್ದಾನೆ ಅಂತ ನನಗೆ ಅನಿಸುತ್ತದೆ. ಆದರೆ ಖಂಡಿತವಾಗಿಯೂ ಅವನು ಇನ್ನೂ ಬಲಿಷ್ಠನಾಗಿ ಕಂಬ್ಯಾಕ್ ಮಾಡಲಿದ್ದಾನೆ ಎಂದು ಸೂರ್ಯಕುಮಾರ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದರು.

ಒಂದು ತಂಡವಾಗಿ, ನಾನು ನಿಜವಾಗಿಯೂ ಸಂತೋಷವಾಗಿದ್ದೇನೆ. ಏಕೆಂದರೆ ತಂಡವು ಸಂಕಷ್ಟದಲ್ಲಿದ್ದಾಗಲೆಲ್ಲಾ, ಯಾರಾದರೂ ಯಾವಾಗಲೂ ಕೊಡುಗೆ ನೀಡುತ್ತಾರೆ. ತಂಡದ ಇಂತಹ ಪ್ರದರ್ಶನದಿಂದ ನಾಯಕನಾಗಿ, ಅದು ತುಂಬಾ ತೃಪ್ತಿಕರವಾಗಿದೆ ಎಂದು ಸೂರ್ಯಕುಮಾರ್ ಯಾದವ್ ಇದೇ ವೇಳೆ ಹೇಳಿದರು. ಅಂತೂ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ವೈಫಲ್ಯ ಮುಂದುವರೆದಿರುವುದು ಸ್ವತಃ ಅವರಿಗೆ ಗೊತ್ತಾಗಿದೆ. ಇದರ ಬಗ್ಗೆ ಅವರೇ ಒಪ್ಪಿಕೊಂಡಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ಗ್ರೇಟ್ ಕಮ್‌ಬ್ಯಾಕ್ ಮಾಡುವುದಾಗಿಯೂ ಹೇಳಿದ್ದಾರೆ. ತಮ್ಮ ವೈಫಲ್ಯದಿಂದ ಶೀಘ್ರದಲ್ಲೇ ಹೊರಬರಲಿದ್ದೇನೆ ಎಂದು ಹೇಳಿರುವ ಸೂರ್ಯಕುಮಾರ್ ಯಾದವ್ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಹೇಗೆ ಪ್ರಜ್ವಲಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

Sulekha