ಸೂರ್ಯ ಕುಮಾರ್ ಕ್ಯಾಪ್ಟನ್ ಮಾಡಿದ್ದೇ ತಪ್ಪಾಯ್ತಾ – 4, 1, 0, O, 12 ರನ್.. ಇಷ್ಟೇನಾ?

ಸೂರ್ಯ ಕುಮಾರ್ ಯಾದವ್. ಟಿ-20 ಕ್ರಿಕೆಟ್ನ ಬ್ರ್ಯಾಂಡ್ ಅಂದ್ರೂ ತಪ್ಪಾಗಲ್ಲ. ಚುಟುಕು ಫಾರ್ಮೆಟ್ನ ಸುಲ್ತಾನನಾಗಿ ಮೈದಾನದ ದಿಕ್ಕು ದಿಕ್ಕಿಗೂ, ಮೂಲೆ ಮೂಲೆಗೂ ಚೆಂಡನ್ನ ಬಾರಿಸೋ ಸೂರ್ಯನ ಆಟ ನೋಡೋದೇ ಚೆಂದ. ಚ್ಯುಯಿಂಗ್ ಗಮ್ಮ ಜಗಿಯುತ್ತಾ ಕೂಲ್ ಌಂಡ್ ಆಮ್ ಆಗಿ ಬೌಲರ್ಗಳನ್ನ ಬೆಂಡೆತ್ತೋ ಅದೇ ಸೂರ್ಯನಿಗೆ ಈಗ ಗ್ರಹಣ ಹಿಡಿದಂತಾಗಿದೆ. ಮೋಡ ಕವಿದು ಸೂರ್ಯ ಮತ್ತೊಮ್ಮೆ ಪ್ರಜ್ವಲಿಸಲಿ ಅಂತಾ ಅಭಿಮಾನಿಗಳೂ ಕೂಡ ಕಾಯ್ತಿದ್ದಾರೆ.
ಇದನ್ನೂ ಓದಿ : ಎಬಿ ಡಿವಿಲಿಯರ್ಸ್ ಕೈಗೆ ಮತ್ತೆ ಬ್ಯಾಟ್ – RCB ಪರ ಆಡ್ತಾರಾ ಆಪತ್ಬಾಂಧವ?
ಪ್ರಸ್ತುತ ತವರಿನಲ್ಲೇ ಇಂಗ್ಲೆಂಡ್ ವಿರುದ್ಧ ಭಾರತ ಐದು ಪಂದ್ಯಗಳ ಟಿ-20 ಸರಣಿ ಆಡ್ತಿದೆ. ಈಗಾಗ್ಲೇ ಎರಡು ಪಂದ್ಯಗಳು ಮುಗಿದಿದ್ದು, ಇಂಗ್ಲೆಂಡ್ ಎದುರು ಟೀಮ್ ಇಂಡಿಯಾ ಎರಡಕ್ಕೆ ಎರಡೂ ಮ್ಯಾಚ್ ಗೆದ್ದಿದೆ. ಮೊದಲನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅಬ್ಬರಿಸಿ ಬೊಬ್ಬಿರಿದ್ರೆ ಎರಡನೇ ಪಂದ್ಯದಲ್ಲಿ ತಿಲಕ್ ವರ್ಮಾ ಜವಾಬ್ದಾರಿಯುತ ಆಟವಾಗಿ ಗೆಲ್ಲಿಸಿಕೊಟ್ಟಿದ್ದಾರೆ. ಆದ್ರೆ ಎರಡೂ ಪಂದ್ಯಗಳಲ್ಲಿ ಸೂರ್ಯಕುಮಾರ್ ಬ್ಯಾಟ್ ಸೈಲೆಂಟ್ ಆಗಿದೆ. ಸಿಕ್ಸರ್ಗಳ ಸುನಾಮಿ, ಫೋರ್ಗಳ ಬಿರುಗಾಳಿ ಎಬ್ಬಿಸ್ತಿದ್ದ ಸ್ಕೈ ಈಗ ತಲೆ ತಗ್ಗಿಸಿಕೊಂಡು ಪೆವಿಲಿಯನ್ ಸೇರಿಕೊಳ್ತಿದ್ದಾರೆ. ಈಡನ್ ಗಾರ್ಡನ್ ಮೈದಾನದಲ್ಲಿ ಸೊಹ್ನೆಗೆ ವಿಕೆಟ್ ಒಪ್ಪಿಸಿದ್ದ ಸೂರ್ಯ, ಚೆಪಾಕ್ನಲ್ಲೂ ಕಮ್ ಬ್ಯಾಕ್ ಮಾಡೋಕೆ ಆಗ್ಲಿಲ್ಲ. ಎರಡನೇ ಪಂದ್ಯದಲ್ಲಿ 12 ರನ್ಗೆ ಆಟ ಮುಗಿಸಿದ್ರು.
38 ರನ್.. ಜಸ್ಟ್ ಎರಡೇ ಎರಡು ಓವರ್ಗಳಲ್ಲೇ 38 ರನ್ ಗಳಿಸೋ ತಾಕತ್ತಿರೋ ಸೂರ್ಯ ಕಳೆದ 6 ಪಂದ್ಯಗಳಿಂದ ಕಲೆ ಹಾಕಿದ್ದು ಜಸ್ಟ್ 38 ರನ್. ಇದ್ರಲ್ಲಿ ಹೈಯೆಸ್ಟ್ ಸ್ಕೋರ್ 21.. ಅದು ಕೂಡ 95ರ ಸ್ಟ್ರೈಕ್ರೇಟ್ನಲ್ಲಿ. ಕಳೆದ ಬಾರಿ ಸೌತ್ ಆಫ್ರಿಕಾ ವಿರುದ್ಧ 4 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಸೂರ್ಯ ರನ್ ಗಳಿಸೋಕೆ ಒದ್ದಾಡಿದ್ರು. ದಕ್ಷಿಣಾ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ 21 ರನ್ ಬಾರಿಸಿದ್ರು. 2ನೇ ಪಂದ್ಯದಲ್ಲಿ 4 ರನ್, ಮೂರನೇ ಪಂದ್ಯದಲ್ಲಿ 1 ರನ್ ಹಾಗೇ 4ನೇ ಫೈಟ್ನಲ್ಲಿ ಸೊಹ್ನೆಗೆ ಔಟಾಗಿದ್ರು. ಇದೀಗ ಇಂಗ್ಲೆಂಡ್ ವಿರುದ್ಧ ಭಾರತದಲ್ಲಿ ಶುರುವಾದ ಸರಣಿಯಲ್ಲೂ ಇದೇ ಆಗ್ತಿದೆ. ಕೊಲ್ಕತ್ತಾದ ಈಡನ್ ಗಾರ್ಡರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡಕ್ ಔಟ್ ಆಗಿದ್ರು. ಅಂದ್ರೆ ಖಾತೆ ತೆರೆಯೋ ಮುನ್ನವೇ ವಿಕೆಟ್ ಒಪ್ಪಿಸಿದ್ರು. ಇದೀಗ ಚೆನ್ನೈನಲ್ಲಿ ನಡೆದ ಪಂದ್ಯದಲ್ಲೂ 12 ರನ್ಗೆ ಔಟಾಗಿದ್ದಾರೆ. ಹಾಗಂತ ಈ ಎರಡು ಸರಣಿ ಮಾತ್ರ ಅಲ್ಲ. ಕಳೆದ 10 ಪಂದ್ಯಗಳಿಂದ ಸೂರ್ಯ 158 ರನ್ ಅಷ್ಟೇ ಗಳಿಸಿದ್ದಾರೆ. 17.55ರ ಬ್ಯಾಟಿಂಗ್ ಅವರೇಜ್ ಹೊಂದಿದ್ದಾರೆ. ಈ ಪೈಕಿ 1 ಅರ್ಧಶತಕ ಸಿಡಿಸಿರುವ ಸೂರ್ಯ, 146.29ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ.
ಟಿ20ಯಲ್ಲಿ ಕನ್ಸಿಸ್ಟೆನ್ಸಿಯಾಗಿ ಬ್ಯಾಟ್ ಬೀಸ್ತಿದ್ದ ಸೂರ್ಯ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿ ಬಿಡ್ತಿದ್ರು. ಎರಡ್ಮೂರು ಓವರ್ಗಳಲ್ಲೇ ಬಿಗ್ ಸ್ಕೋರ್ ಕಲೆ ಹಾಕುತ್ತಿದ್ರು. ಬಟ್ ಕಳೆದ 10 ಇನ್ನಿಂಗ್ಸ್ಗಳಿಂದ ಕೇವಲ ಒಂದು ಒಂದು ಹಾಫ್ ಸೆಂಚುರಿ ದಾಖಲಿಸಿದ್ದಾರೆ. ಕ್ಯಾಪ್ಟನ್ ಆಗಿ ಸೂರ್ಯಕುಮಾರ್ ತಂಡವನ್ನ ಅತ್ಯದ್ಭುತವಾಗಿ ಮುನ್ನಡೆಸ್ತಿದ್ದಾರೆ. ಅದ್ರಲ್ಲಿ ಎರಡು ಮಾತಿಲ್ಲ. ಬಟ್ ಕ್ಯಾಪ್ಟನ್ ಆದ್ಮೇಲೆ ಮಂಕಾಗಿದ್ದಾರೆ. 2022, 2023ರಲ್ಲಿ ಫ್ಯಾನ್ಸ್ ಕಂಡಿದ್ದ ಸೂರ್ಯ ಈಗ ಅಕ್ಷರಃ ಮರೆಯಾಗಿದ್ದಾರೆ. ಬಿಗ್ ಸ್ಕೋರ್ ಕಲೆಹಾಕಲು ಸಾಧ್ಯವಾಗ್ತಿಲ್ಲ. ತಾನೇ ಮ್ಯಾಚ್ ವಿನ್ನರ್ ಪರ್ಫಾಮೆನ್ಸ್ ನೀಡ್ತಿದ್ದ ಸೂರ್ಯ, ಈಗ ಬೇರೆಯವರು ರನ್ ಬಾರಿಸಿದಾಗ ಖುಷಿ ಪಡ್ತಿದ್ದಾರೆ.
ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಮ್ ಇಂಡಿಯಾ 19 ಪಂದ್ಯಗಳನ್ನಾಡಿದೆ. ಈ ವೇಳೆ ಭಾರತ ತಂಡವು 16 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಆದರೆ ಈ ಗೆಲುವಿನಲ್ಲಿ ಸೂರ್ಯನ ಬ್ಯಾಟ್ನಿಂದ ಹೆಚ್ಚಿನ ರನ್ಗಳೇನು ಬಂದಿಲ್ಲ. ಟಿ20 ವಿಶ್ವಕಪ್ 2024ರ ಬಳಿಕ ಸೂರ್ಯಕುಮಾರ್ ಯಾದವ್ ಭಾರತ ಟಿ20 ತಂಡದ ನಾಯಕರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಸೂರ್ಯ 12 ಪಂದ್ಯಗಳನ್ನಾಡಿದ್ದಾರೆ. ಆದರೆ ಒಮ್ಮೆಯೂ 360 ಡಿಗ್ರಿ ನರ್ತನ ತೋರಿಲ್ಲ ಎಂಬುದು ವಿಶೇಷ. ಏಕೆಂದರೆ ಈ 12 ಇನಿಂಗ್ಸ್ಗಳಲ್ಲಿ ಅವರು ಕಲೆಹಾಕಿರುವ ರನ್ ಸರಾಸರಿ ಕೇವಲ 24.50 ಮಾತ್ರ. 2022 ರಲ್ಲಿ 1164 ರನ್ ಬಾರಿಸಿದ್ದ ಸೂರ್ಯ, 2023 ರಲ್ಲಿ 17 ಇನಿಂಗ್ಸ್ಗಳಿಂದ 773 ರನ್ ಕಲೆಹಾಕಿದ್ದರು. ಆದರೀಗ 12 ಇನಿಂಗ್ಸ್ ಆಡಿದರೂ ಸೂರ್ಯನಿಗೆ 250 ರನ್ಗಳಿಸಲು ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ.