ಡಾಕ್ಟರ್ ಗೆ ಸಿಕ್ಕಿತಾ ಜನಬಲ.. – ಡಿಕೆ ಬ್ರದರ್ಸ್ ಗೆ ಭಯವೇಕೆ?

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಕಂಡಿರೋ ಸಂಸದ ಡಿ.ಕೆ ಸುರೇಶ್ ಈ ಬಾರಿಯೂ ನಾನೇ ಗೆಲ್ಲೋದು ಅನ್ನೋ ಕಾನ್ಫಿಡೆನ್ಸ್ನಲ್ಲಿದ್ರು. ಎದುರಾಳಿ ಯಾರೇ ಆದ್ರೂ ಗೆಲುವು ನಮಗೇ ಅನ್ನೋ ವಿಶ್ವಾಸದಲ್ಲಿದ್ರು. ಆದ್ರೆ ಯಾವಾಗ ದೊಡ್ಡಗೌಡ್ರ ಅಳಿಯ ಡಾ.ಸಿಎನ್ ಮಂಜುನಾಥ್ ಕಣಕ್ಕೆ ಇಳಿದ್ರೋ ಇಡೀ ಕ್ಷೇತ್ರದ ಚಿತ್ರಣ ಬದಲಾಗಿದೆ. ಇಬ್ಬರ ಮಧ್ಯೆ ನೆಕ್ ಟು ನೆಕ್ ಫೈಟ್ ಏರ್ಪಟ್ಟಿದೆ. ಇದೇ ಈಗ ಡಿಕೆ ಬ್ರದರ್ಸ್ ಆತಂಕಕ್ಕೂ ಕಾರಣವಾಗಿದೆ. ಡಾ. ಮಂಜುನಾಥ್ ಅವರು ನನ್ನ ತಮ್ಮನಿಗೆ ತೀವ್ರ ಪ್ರತಿಸ್ಪರ್ಧಿ ಎಂದು ನನಗೆ ಅನಿಸುತ್ತಿಲ್ಲ ಎಂದು ಹೇಳುತ್ತಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವ್ರೇ ಈಗ ಸತತವಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ರೋಡ್ ಶೋ, ಸಮಾವೇಶಕ್ಕೆ ಸೀಮಿತವಾಗಿದ್ದ ಪ್ರಚಾರ, ಈಗ ಕ್ಷೇತ್ರದ ಅಪಾರ್ಟ್‌ಮೆಂಟ್‌ಗಳಲ್ಲಿ ಸುತ್ತುತ್ತಾ ಮತಯಾಚಿಸಿದ್ದಾರೆ. ಡಿಕೆಶಿಯವ್ರ ಈ ಸುತ್ತಾಟಕ್ಕೆ ಕಾರಣವೂ ಇದೆ.
ಇದನ್ನೂ ಓದಿ:ಗುಜರಾತ್ ಟೈಟಾನ್ಸ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ – ಗುಜರಾತ್ ಗೆ ಹೀನಾಯ ಸೋಲು!
ಡಿಕೆಶಿಗೆ ಡಾಕ್ಟರ್ ಭಯ!
ಡಿ.ಕೆ ಶಿವಕುಮಾರ್ ಅವರ ಕಳೆದೊಂದು ವಾರದ ಕಾರ್ಯಕ್ರಮದ ಪಟ್ಟಿಯನ್ನು ಅವಲೋಕಿಸಿದಾಗ ಬಹುತೇಕ ಎಲ್ಲಾ ದಿನವೂ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯ ಪ್ರದೇಶಗಳಲ್ಲಿ ಮತಯಾಚಿಸಿದ್ದಾರೆ. ಕ್ಷೇತ್ರದ ಮುಖಂಡರನ್ನು ಕರೆಸಿ ಮಾತನಾಡುತ್ತಿದ್ದಾರೆ, ಸಮೀಕ್ಷೆಯನ್ನು ತರಿಸಿಕೊಳ್ಳುತ್ತಿದ್ದಾರೆ. ತುಂಬಾನೇ ಕಾನ್ಫಿಡೆನ್ಸ್ ಆಗಿದ್ದ ಡಿ.ಕೆ.ಶಿವಕುಮಾರ್, ಸಹೋದರನ ಗೆಲುವಿಗಾಗಿ ಇಷ್ಟು ಪರಿಶ್ರಮ ಪಡಬೇಕಾಗಿರುವುದಕ್ಕೆ ಕಾರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಡಾ.ಮಂಜುನಾಥ್ ಅವರ ಜನಪ್ರಿಯತೆ. ಹೃದಯವಂತ ಡಾಕ್ಟರ್ ಎಂದು ಬಿಜೆಪಿ/ಜೆಡಿಎಸ್ ಆರಂಭಿಸಿದ್ದ ಧ್ವನಿ ಈಗ ಕ್ಷೇತ್ರದ ಜನರಿಗೂ ತಲುಪುತ್ತಿದೆ. ಗ್ರೌಂಡ್ ರಿಪೋರ್ಟ್ ನಲ್ಲಿ ಬದಲಾಗುತ್ತಿರುವ ಸನ್ನಿವೇಶದ ಬಗ್ಗೆ ಕಾಂಗ್ರೆಸ್ಗೆ ಎಚ್ಚರಿಕೆಯನ್ನು ನೀಡಲಾಗಿದೆ. ಡಿಕೆಶಿ ಕೈಸೇರಿರುವ ಸಮೀಕ್ಷೆಯು ಇದನ್ನೇ ಹೇಳುತ್ತಿರುವುದರಿಂದ, ಪ್ರಚಾರದ ವೇಗವನ್ನು ಕ್ಷೇತ್ರದಲ್ಲಿ ಹೆಚ್ಚಿಸಿದ್ದಾರೆ ಎನ್ನಲಾಗುತ್ತಿದೆ.
ಬೇರೆಲ್ಲಾ ಕ್ಷೇತ್ರಗಳಲ್ಲೂ ಮೈತ್ರಿ ಇದ್ರೂ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆ ಅಷ್ಟಕ್ಕಷ್ಟೇ. ಆದ್ರೆ ಡಾ.ಮಂಜುನಾಥ್ ವಿಚಾರದಲ್ಲಿ ಮಾತ್ರ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಒಂದಾಗಿ ಕೆಲಸ ಮಾಡುತ್ತಿರುವುದು ಕೇಸರಿ ಪಡೆಗೆ ಪ್ಲಸ್ ಪಾಯಿಂಟ್ ಆಗಿದೆ. ಇನ್ನು, ಹೃದಯವಂತ ವರ್ಸಸ್ ಲೂಟಿಕೋರ ಎಂದು ಜೆಡಿಎಸ್ ಪ್ರಚಾರ ಮಾಡುತ್ತಿರುವುದು ಮತದಾರರ ಗಮನ ಸೆಳೀತಿದೆ. ಮತ್ತೊಂದೆಡೆ ಮಂಜುನಾಥ್ ಅವರು ಗೆದ್ದರೆ ಕೇಂದ್ರದ ಮಂತ್ರಿಯಾಗುವುದು ಖಂಡಿತ ಎಂದು ದೇವೇಗೌಡ್ರು ಹೇಳುತ್ತಿದ್ದಾರೆ.
‘ಕೈ’ಗೆ ಸರ್ಜನ್ ಶಾಕ್!
ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಎಂಟು ಅಸೆಂಬ್ಲಿಯಲ್ಲಿ ಆರು ಜನ ಕಾಂಗ್ರೆಸ್ ಶಾಸಕರು ಇದ್ದರೂ, ಅತಿಹೆಚ್ಚು ಮತದಾರರನ್ನು ಹೊಂದಿರುವ ರಾಜರಾಜೇಶ್ವರಿ ನಗರ ಮತ್ತು ಬೆಂಗಳೂರು ದಕ್ಷಿಣ ಅಸೆಂಬ್ಲಿಯಲ್ಲಿ ಲೀಡ್ ಗಳಿಸುವುದು ಕಾಂಗ್ರೆಸ್ಸಿಗೆ ಸವಾಲಾಗಿದೆ. ಉಳಿದ ಆರು ಅಸೆಂಬ್ಲಿಯಲ್ಲಿ ಜೆಡಿಎಸ್ ನೆಲೆಯೂ ಉತ್ತಮವಾಗಿರುವುದರಿಂದ, ಡಿ.ಕೆ.ಸುರೇಶ್ ಅವರನ್ನು ಸೋಲಿಸಲೇಬೇಕು ಎಂದು ಗೌಡ್ರ ಕುಟುಂಬ ಪಣ ತೊಟ್ಟಿದೆ. ಹಲವು ಆರೋಪವನ್ನು ಡಿಕೆಶಿ ಮೇಲೆ ಮಾಡುತ್ತಿದ್ದಾರೆ. ಇನ್ನೊಂದು ಕಡೆ, ತೀವ್ರವಾದ ರಾಜಕೀಯ ದಾಳಿಗೆ ಮುಂದಾಗದೇ ಡಾ.ಮಂಜುನಾಥ್ ಸೌಮ್ಯತೆಯಿಂದ ಮತಯಾಚಿಸುತ್ತಿದ್ದಾರೆ. ಜಯದೇವ ಸಂಸ್ಥೆಯ ನಿರ್ದೇಶಕರ ಸ್ಥಾನದಿಂದ ಮಂಜುನಾಥ್ ಅವರನ್ನು ತೆಗಿಸಲು ಡಿ.ಕೆ.ಶಿವಕುಮಾರ್, ಅಂದಿನ ಸಿಎಂ ಎಸ್.ಎಂ.ಕೃಷ್ಣ ಅವರಿಗೆ ಪತ್ರವನ್ನು ಬರೆದಿದ್ದರು ಎನ್ನುವ ಮಾತನ್ನು ದೇವೇಗೌಡ್ರು ಚುನಾವಣಾ ಸಭೆಯಲ್ಲಿ ಹೇಳುತ್ತಿದ್ದಾರೆ.
ಡಿಕೆ ಬ್ರದರ್ಸ್ ವಿರುದ್ಧ ಬುಸುಗುಡುವ ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಾಗಿ ತೊಡೆತಟ್ಟಿರೋದು ಕೈಗೆ ಹೊಡೆತ ಕೊಡುವ ಆತಂಕ ಮೂಡಿಸಿದೆ. ಇದೇ ಕಾರಣಕ್ಕೆ ಬೆಂಗಳೂರು ಗ್ರಾಮಾಂತರದಲ್ಲಿ ಸುರೇಶ್ ರನ್ನ ಗೆಲ್ಲಿಸಲೇಬೇಕು ಎಂದು ಡಿಕೆಶಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡ್ತಿದ್ದಾರೆ. ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲೋದು ಯಾರು ಎಂದು ಸುದ್ದಿಯಾನದಲ್ಲಿ ಕೇಳಲಾದ ಪ್ರಶ್ನೆಗೆ 9 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಅದ್ರಲ್ಲಿ 71 ಪರ್ಸೆಂಟ್ ಜನ ಡಾ.ಸಿ.ಎನ್ ಮಂಜುನಾಥ್ ಗೆಲ್ಲುತ್ತಾರೆ ಎಂದು ವೋಟ್ ಮಾಡಿದ್ರೆ 29 ಪರ್ಸೆಂಟ್ ಜನ ಡಿ.ಕೆ ಸುರೇಶ್ ಗೆಲ್ಲುತ್ತಾರೆ ಎನ್ನುತ್ತಿದ್ದಾರೆ. ಈ ಮೂಲಕ ಹೃದಯವಂತ ದಾಕ್ಟರ್ ಬಗ್ಗೆ ಒಲವು ಹೆಚ್ಚಾಗುತ್ತಿದೆ. ಒಟ್ನಲ್ಲಿ 2014ರಿಂದ ಮೂರು ಬಾರಿ ಗೆದ್ದಿರೋ ಡಿ.ಕೆ ಸುರೇಶ್ಗೆ ಸಿ.ಎನ್ ಮಂಜುನಾಥ್ ಸೋಲಿನ ಶಾಕ್ ನೀಡ್ತಾರೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಡಿಕೆಶಿ ಫುಲ್ ಅಲರ್ಟ್ ಆಗಿ ಮತದಾರರ ಮನ ಗೆಲ್ಲೋ ಕಸರತ್ತು ನಡೆಸುತ್ತಿದ್ದಾರೆ. ಆದ್ರೆ ಅಂತಿಮವಾಗಿ ಯಾರು ಗೆಲ್ಲಬೇಕು ಅನ್ನೋ ನಿರ್ಧಾರ ಮಾಡೋದು ಮಾತ್ರ ಮತದಾರರೇ..