ರಾತ್ರೋ ರಾತ್ರಿ ಸರ್ಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳ ಭೇಟಿ – 89 ವಿದ್ಯಾರ್ಥಿನಿಯರು ಅಲ್ಲಿ ಇರಲೇ ಇಲ್ಲ!
ಹಾಸ್ಟೆಲ್‌ಗಳಲ್ಲಿ ವಾರ್ಡನ್‌ಗಳು ರೂಮ್‌ಗಳಿಗೆ ಬಂದು ವಿದ್ಯಾರ್ಥಿಗಳು ಓದುತ್ತಿದ್ದಾರಾ? ರೂಮ್ ಕ್ಲೀನ್ ಆಗಿ ಇಟ್ಟುಕೊಂಡಿದ್ದಾರಾ ಅಂತಾ ವಿದ್ಯಾರ್ಥಿಗಳ ಚಟುವಟಿಕೆಗಳ ಮೇಲೆ ಸದಾ ಕಣ್ಣಿಟ್ಟಿರುತ್ತಾರೆ. ಇನ್ನೂ ಸರ್ಕಾರಿ ಹಾಸ್ಟೆಲ್‌ಗಳಲ್ಲಿಯೂ ಅಧಿಕಾರಿಗಳು ಆಗಾಗ ಬಂದು ಅಲ್ಲಿನ ವ್ಯವಸ್ಥೆ ಸರಿಯಾಗಿದೆಯಾ ಅಂತಾ ಪರಿಶೀಲನೆ ನಡೆಸುತ್ತಾರೆ. ಇದೀಗ ಉತ್ತರ ಪ್ರದೇಶದಲ್ಲಿ ಸರ್ಕಾರ ನಡೆಸುತ್ತಿರುವ ವಸತಿ ಶಾಲೆಯೊಂದಕ್ಕೆ ರಾತ್ರಿ ವೇಳೆ ಅಧಿಕಾರಿಗಳು ಭೇಟಿ ಕೊಟ್ಟು ತಪಾಸನೆ ನಡೆಸಿದ್ದಾರೆ. ಈ ವೇಳೆ ಅಲ್ಲಿನ ಸ್ಥಿತಿಯನ್ನು ಕಂಡು ಶಾಕ್ ಆಗಿದ್ದಾರೆ.
ಅಧಿಕಾರಿಗಳು ಸೋಮವಾರ ರಾತ್ರಿ ಉತ್ತರ ಪ್ರದೇಶದ ಗೊಂಡಾದಲ್ಲಿನ ಪರಸ್ಪುರದ ಕಸ್ತೂರಬಾ ಗಾಂಧಿ ವಸತಿ ಬಾಲಕಿಯರ ಶಾಲೆಗೆ ಅಧಿಕಾರಿಗಳು ದಿಢೀರ್ ಭೇಟಿ ಕೊಟ್ಟು ತಪಾಸಣೆ ನಡೆಸಿದ್ದಾರೆ. ಈ ವೇಳೆ ಅಲ್ಲಿನ ಸ್ಥಿತಿ ಕಂಡು ಗಲಿಬಿಲಿಗೊಂಡಿದ್ದಾರೆ. ಯಾಕಂದರೆ ಹಾಸ್ಟೆಲ್‌ನಲ್ಲಿದ್ದ 100 ವಿದ್ಯಾರ್ಥಿನಿಯರಲ್ಲಿ ಕೇವಲ 11 ಮಂದಿ ಮಾತ್ರ ಅಲ್ಲಿ ಹಾಜರಿರುವುದು ಕಂಡುಬಂದಿದೆ. ಈ ಹಿನ್ನೆಲೆ ವಾರ್ಡನ್ ಸೇರಿದಂತೆ ನಾಲ್ವರ ವಿರುದ್ಧ ಪೊಲೀಸ್ ಕೇಸ್ ಅಥವಾ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: ಮಗನ ಮದುವೆಗೆ ತಂದೆಯೇ ದುಷ್ಮನ್! – ಗಡ್ಡ ಶೇವ್ ಮಾಡಿಲ್ಲವೆಂದು ಮದುವೆಯನ್ನೇ ಕ್ಯಾನ್ಸಲ್ ಮಾಡಿದ ಅಪ್ಪ!
“ಅಲ್ಲಿ ಒಟ್ಟು 100 ವಿದ್ಯಾರ್ಥಿನಿಯರು ನೋಂದಾಯಿಸಿಕೊಂಡಿದ್ದಾರೆ. ಆದರೆ 11 ವಿದ್ಯಾರ್ಥಿನಿಯರು ಮಾತ್ರ ಶಾಲೆಯಲ್ಲಿ ಹಾಜರಿರುವುದು ಕಂಡುಬಂದಿದೆ. ಈ ಹಿನ್ನೆಲೆ 89 ವಿದ್ಯಾರ್ಥಿನಿಯರ ಗೈರುಹಾಜರಿಯ ಬಗ್ಗೆ ವಾರ್ಡನ್ ಸರಿತಾ ಸಿಂಗ್ ಅವರನ್ನು ಕೇಳಿದಾಗ ತೃಪ್ತಿಕರ ಉತ್ತರವನ್ನು ನೀಡಿಲ್ಲ. ಈ ಹಿನ್ನೆಲೆ ವಾರ್ಡನ್ ಸೇರಿದಂತೆ ನಾಲ್ವರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ ” ಎಂದು ಜಿಲ್ಲಾಧಿಕಾರಿ ನೇಹಾ ಶರ್ಮಾ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಶಾಲಾ ವಾರ್ಡನ್, ಪೂರ್ಣಾವಧಿ ಶಿಕ್ಷಕ, ಕಾವಲುಗಾರ ಮತ್ತು ಪ್ರಾಂತೀಯ ರಕ್ಷಣಾ ದಳದ (ಪಿಆರ್‌ಡಿ) ಗೇಟ್ ಬಳಿ ರಾತ್ರಿ ವೇಳೆ ಕರ್ತವ್ಯ ಕಾಯುತ್ತಿದ್ದ ಜವಾನನ ವಿರುದ್ಧ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾ ಮೂಲ ಶಿಕ್ಷಾ ಅಧಿಕಾರಿ (ಬಿಎಸ್‌ಎ) ಪ್ರೇಮ್ ಚಂದ್ ಯಾದವ್ ತಿಳಿಸಿದ್ದಾರೆ.
ಇದರೊಂದಿಗೆ ನೌಕರರ ವಿರುದ್ಧವೂ ಇಲಾಖಾ ಕ್ರಮ ಕೈಗೊಳ್ಳಲಾಗುತ್ತಿದ್ದು, ಕರ್ತವ್ಯದಲ್ಲಿರುವ ಸಿಬ್ಬಂದಿ ವಿರುದ್ಧ ಇಲಾಖಾ ಕ್ರಮಕ್ಕಾಗಿ ಜಿಲ್ಲಾ ಯುವ ಕಲ್ಯಾಣಾಧಿಕಾರಿಗೆ ಪ್ರತ್ಯೇಕ ಪತ್ರ ಬರೆಯಲಾಗಿದೆ ಎಂದು ಬಿಎಸ್‌ಎ ತಿಳಿಸಿದೆ.