ಎಡಗಾಲಿನ ಬದಲು ಬಲಗಾಲಿಗೆ ಆಪರೇಷನ್ ಮಾಡಿದ ವೈದ್ಯ – ಮಹಿಳೆ ಎಚ್ಚರವಾದಾಗ ಆಗಿದ್ದೇನು?

ಎಡಗಾಲಿನ ಬದಲು ಬಲಗಾಲಿಗೆ ಆಪರೇಷನ್ ಮಾಡಿದ ವೈದ್ಯ – ಮಹಿಳೆ ಎಚ್ಚರವಾದಾಗ ಆಗಿದ್ದೇನು?

ಆ ಮಹಿಳೆಗೆ ಸಿಕ್ಕಾಪಟ್ಟೆ ಕಾಲುನೋವಿತ್ತು. ಹೀಗಾಗಿ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿದ್ರು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕು ಅಂತಾ ಶಸ್ತ್ರಚಿಕಿತ್ಸೆಯನ್ನೂ ಮಾಡಿದ್ರು. ಆದ್ರೆ ಮಹಿಳೆ ಎಡಗಾಲು ನೋವು ಅಂತಾ ಹೋಗಿದ್ದಕ್ಕೆ ಬಲಗಾಲಿಗೆ ಆಪರೇಷನ್ ಮಾಡಿದ್ದಾರೆ.

ಕೇರಳದ ಕಕ್ಕೋಡಿಯ ಸಜಿನಾ ಸುಕುಮಾರನ್ (60) ಅವರು ತಮ್ಮ ಎಡಗಾಲಿನ ಹಿಮ್ಮಡಿಯ ನರಕ್ಕೆ ಗಾಯವಾಗಿತ್ತೆಂದು ಮಾವೂರು ರಸ್ತೆಯಲ್ಲಿರುವ ರಾಷ್ಟ್ರೀಯ ಆಸ್ಪತ್ರೆಯ ಡಾ.ಬೆಹಿರ್ಶನ್ ಅವರ ಬಳಿ ಚಿಕಿತ್ಸೆ ಪಡೆದಿದ್ದರು. ನಂತರ ಶಸ್ತ್ರ ಚಿಕಿತ್ಸೆ (Operation) ಮಾಡಿಸಿಕೊಳ್ಳಲು ಮುಂದಾದ ಸಜಿನಾ ಅವರಿಗೆ ಒಂದು ಶಾಕ್ ಕಾದಿತ್ತು!

ಇದನ್ನೂ ಓದಿ :  ಮಾರ್ಚ್ 1ರಿಂದ ತಿರುಪತಿ ತಿಮ್ಮಪ್ಪನ ದರ್ಶನ ಮತ್ತಷ್ಟೂ ಸುಲಭ – ಮುಖ ಗುರುತಿಸುವಿಕೆಯಿಂದ ಭಕ್ತರಿಗೆ ಆರಾಮ..!

ತಮ್ಮ ಎಡಗಾಲಿನ ಹಿಮ್ಮಡಿಯಲ್ಲಿ ನೋವು ಎಂದು ಶಸ್ತ್ರ ಚಿಕಿತ್ಸೆಗೆ ಒಪ್ಪಿದ ಸಜಿನಾ ಶಸ್ತ್ರ ಚಿಕಿತ್ಸೆ ನಂತರ ಎದ್ದು ನೋಡಿದಾಗ ಎಡಗಾಲಿನ ಬದಲು ಬಲಗಾಲಿಗೆ ಆಪರೇಷನ್ ಮಾಡಿರುವುದು ತಿಳಿದು ಬಂದಿದೆ. ಒಂದು ವರ್ಷದ ಹಿಂದೆ ಸಜಿನಾ ಅವರಿಗೆ ತಮ್ಮ ಎಡಕಾಲು ಬಾಗಿಲಿಗೆ ಸಿಕ್ಕಿ ಗಾಯವಾಗಿತ್ತಂತೆ. ನೋವು ಕಡಿಮೆಯಾಗದ ಕಾರಣ ವೈದ್ಯರ ಮೊರೆ ಹೋಗಿದ್ದಾರೆ. ಮೊದಲು ಖಾಸಗಿ ಕ್ಲಿನಿಕ್‌ನಲ್ಲಿ ಡಾ.ಬೆಹಿರ್ಶನ್ ಬಳಿ ಚಿಕಿತ್ಸೆ ಪಡೆದು ನಂತರ ಫೆ.20 ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ (ಫೆ.21) ಡಾ.ಬೆಹಿರ್ಶನ್ ಅವರೇ ಸಜಿನಾ ಅವರ ಶಸ್ತ್ರಚಿಕಿತ್ಸೆ ಮಾಡಿದರು. ‘ನನಗೆ ಪ್ರಜ್ಞೆ ಬಂದಾಗ, ನನ್ನ ಬಲಗಾಲು ಭಾರವಾದಂತೆನಿಸಿತು. ನಾನು ನನ್ನ ಎಡಗಾಲಿನ ನೋವಿಗೆ ಶಸ್ತ್ರ ಚಿಕಿತ್ಸೆ ಪಡೆದುಕೊಳ್ಳಲು ಒಪ್ಪಿಗೆ ನೀಡಿದ್ದೆ ಆದರೆ ಎದ್ದು ನೋಡಿದಾಗ ನನ್ನ ಬಲಗಾಲನ್ನು ಆಪರೇಷನ್ ಮಾಡಿದ್ದರು. ನನ್ನ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿರುವುದನ್ನು ನೋಡಿ ನಾನು ಆಘಾತಕ್ಕೊಳಗಾಗಿದ್ದೆ. ತಕ್ಷಣ ನರ್ಸ್‌ಗೆ ಕರೆ ಮಾಡಿ ವೈದ್ಯರನ್ನು ಕರೆಯುವಂತೆ ಕೇಳಿಕೊಂಡೆ. ಆಗಲೇ ಅವರಿಗೂ ಆದ ತಪ್ಪಿನ ಅರಿವಾಗಿದ್ದು’ ಎಂದು ಸಜಿನಾ ಹೇಳಿದರು.

‘ನನ್ನ ತಾಯಿಯ ಬಲಗಾಲಿನಲ್ಲಿಯೂ ಬ್ಲಾಕ್ ಆಗಿದೆ ಎಂಬುದು ವೈದ್ಯರ ಮೊದಲ ಪ್ರತಿಕ್ರಿಯೆಯಾಗಿತ್ತು. ಆದರೆ ಅವರು ಆ ಕಾಲಿನ ಬ್ಲಾಕ್ ಅನ್ನು ಪತ್ತೆಹಚ್ಚಲು ಯಾವುದೇ ರೀತಿಯ ಎಕ್ಸ್-ರೇ ಅಥವಾ ಸ್ಕ್ಯಾನ್ ತೆಗೆದುಕೊಂಡಿರಲಿಲ್ಲ’ ಎಂದು ಸುಜಿನ ಅವರ ಮಗಳು ತಿಳಿಸಿದ್ದಾರೆ.

ಈ ಕುರಿತು ಡಿಎಂಒ ಹಾಗೂ ಆರೋಗ್ಯ ಸಚಿವರಿಗೆ ದೂರು ಸಲ್ಲಿಸಿದ್ದೇವೆ ಎಂದು ಸಜಿನಾ ಅವರ ಸಂಬಂಧಿಕರು ತಿಳಿಸಿದ್ದಾರೆ. ಆದರೆ ಮಹಿಳೆಗೆ ಎರಡೂ ಕಾಲುಗಳಲ್ಲಿ ಸಮಸ್ಯೆ ಇತ್ತು ಶಸ್ತ್ರಚಿಕಿತ್ಸೆಗೂ ಮುನ್ನ ಈ ಬಗ್ಗೆ ಸಜಿನಾ ಮತ್ತು ಅವರ ಪತಿಗೆ ತಿಳಿಸಿದ್ದೇವೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ. ಆಸ್ಪತ್ರೆಯ ಎಂಡಿ ಡಾ.ಕೆ.ಎಂ.ಆಶಿಕ್, ‘ಸಜಿನಾ ಅವರ ಕಾಲಿನ ಹಿಮ್ಮಡಿ ನೋವಿಗೆ ಚಿಕಿತ್ಸೆ ನೀಡಲಾಗಿದ್ದು, ಕೆಲ ದಿನಗಳಿಂದ ಡಾ.ಬೆಹಿರ್ಶನ್ ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ನಾವು ಸುಜಿನಾ ಅವರ ಬಲಗಾಲನ್ನು ಪರೀಕ್ಷಿಸಿದ ನಂತರ ಆ ಕಾಲಿನಲ್ಲಿನ ಗಾಯವನ್ನು ಕಂಡುಕೊಂಡಿದ್ದೇವೆ ಮತ್ತು ಅದನ್ನು ಸುಜಿನಾ ಮತ್ತು ಅವರ ಪತಿಗೆ ತಿಳಿಸಿದ್ದೆವು. ವಿಷಯ ತಿಳಿದ ಬಳಿಕ ಸುಜಿನಾ ಅವರೇ ಶಸ್ತ್ರ ಚಿಕಿತ್ಸೆಗೆ ಒಪ್ಪಿಗೆ ನೀಡಿದ್ದರು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

suddiyaana