ಜಲ್ಲಿಕಟ್ಟು, ಕಂಬಳಕ್ಕೆ ಸುಪ್ರೀಂ ಕೋರ್ಟ್ ರಿಲೀಫ್ – ರಕ್ತಸಿಕ್ತ ಕ್ರೀಡೆಯಲ್ಲ ಎಂದು ತೀರ್ಪಿನಲ್ಲಿ ಹೇಳಿದ್ದೇಕೆ?
ನವದೆಹಲಿ: ಸುಪ್ರೀಂ ಕೋರ್ಟ್ ಗುರುವಾರ ಸಾಂಪ್ರದಾಯಿಕ ಗೂಳಿ ಪಳಗಿಸುವ ಕ್ರೀಡೆ ‘ಜಲ್ಲಿಕಟ್ಟು’ ಓಟದ ಸಿಂಧುತ್ವವನ್ನು ಎತ್ತಿಹಿಡಿದಿದ್ದು, ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. “ಜಲ್ಲಿಕಟ್ಟು” ಕ್ರೌರ್ಯದ ಹೊರತಾಗಿಯೂ, ಯಾರೂ ಯಾವುದೇ ಆಯುಧವನ್ನು ಬಳಸುವುದಿಲ್ಲ ಮತ್ತು ರಕ್ತವು ಕೇವಲ ಪ್ರಾಸಂಗಿಕ ವಿಷಯವಾಗಿರುವುದರಿಂದ ಇದನ್ನು ರಕ್ತಸಿಕ್ತ ಕ್ರೀಡೆ ಎಂದು ಕರೆಯಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
‘ಜಲ್ಲಿಕಟ್ಟು’ ಮತ್ತು ಕಂಬಳ ಕ್ರೀಡೆಗೆ ಅವಕಾಶ ನೀಡುವ ತಮಿಳುನಾಡು ಮತ್ತು ಮಹಾರಾಷ್ಟ್ರ ಸರ್ಕಾರಗಳ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿಟಿ ರವಿಕುಮಾರ್ ಅವರನ್ನೊಳಗೊಂಡ ಪಂಚ ನ್ಯಾಯಮೂರ್ತಿಗಳ ಸಂವಿಧಾನ ಪೀಠ ಗುರುವಾರ ಈ ತೀರ್ಪು ಪ್ರಕಟಿಸಿದೆ.
ಗೂಳಿ ಪಳಗಿಸುವ ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ನೀಡುವ ತಮಿಳುನಾಡು ಕಾನೂನನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಜಲ್ಲಿಕಟ್ಟುನೊಂದಿಗೆ ಕರ್ನಾಟಕದ ಕಂಬಳ ಮತ್ತು ಮಹಾರಾಷ್ಟ್ರದ ಎತ್ತಿನ ಗಾಡಿ ಓಟದ ಸಿಂಧುತ್ವವನ್ನು ಎತ್ತಿ ಹಿಡಿದಿದ್ದು, ಈ ರಾಜ್ಯಗಳಿಗೂ ರಿಲೀಫ್ ಸಿಕ್ಕಿದೆ. ಆದರೆ ಈ ಹಿಂದೆ ಮಾಡಲಾದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದೆ.
ʼಈ ಕ್ರೀಡೆಯಲ್ಲಿ ಕ್ರೌರ್ಯವಿದ್ದರೂ ಜನರು ಪ್ರಾಣಿಗಳನ್ನು ಕೊಲ್ಲುವ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಸಾವು ಇದೆ ಎಂದರೆ ಅದು ರಕ್ತಸಿಕ್ತ ಕ್ರೀಡೆ ಎಂದು ಅರ್ಥವಲ್ಲ. ಭಾಗವಹಿಸಿದ ಗೂಳಿಗಳ ಮೇಲೆ ಹತ್ತಲು ಹೋಗುವವರು ರಕ್ತ ಹರಿಸುವ ಸಲುವಾಗಿ ಭಾಗವಹಿಸುತ್ತಾರೆ ಎಂದು ನಾನು ಸೂಚಿಸುವುದಿಲ್ಲ. ಜನರು ಕೊಲ್ಲಲು ಹೋಗುವುದಿಲ್ಲ. ಪ್ರಾಣಿ, ರಕ್ತವು ಪ್ರಾಸಂಗಿಕ ವಿಷಯವಾಗಿರಬಹುದು” ಎಂದು ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿಟಿ ರವಿಕುಮಾರ್ ಅವರನ್ನೊಳಗೊಂಡ ಪೀಠವು ಅಭಿಪ್ರಾಯಪಟ್ಟಿದೆ.