ಕಣ್ತೆರೆದ ನ್ಯಾಯದೇವತೆ – ಲೇಡಿ ಆಫ್ ಜಸ್ಟಿಸ್ ಗೆ ಹೊಸ ರೂಪ ಕೊಟ್ಟ ಸುಪ್ರೀಂ ಕೋರ್ಟ್
ನ್ಯಾಯ ದೇವತೆ ಅಂದಾಗ ಕೋರ್ಟ್ ನಲ್ಲಿ ಕಣ್ಣಿಗೆ ಪಟ್ಟಿ ಕಟ್ಟಿದ್ದ ದೇವತೆ ನಮ್ಮ ಕಣ್ಣ ಮುಂದೆ ಬರ್ತಿತ್ತು. ಇದೀಗ ಕೊನೆಗೂ ನ್ಯಾಯ ದೇವತೆಯ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನ ತೆರವುಗೊಳಿಸಲಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಆದೇಶಿಸಿದ್ದಾರೆ.
ಇದನ್ನೂ ಓದಿ: ಗಗನಾ ಫ್ರೆಂಡ್ – ಗರ್ಲ್ ಫ್ರೆಂಡ್? – Love ಬಗ್ಗೆ ಗಿಲ್ಲಿನಟ ಹೇಳಿದ್ದೇನು?
ಭಾರತದ ಮುಖ್ಯ ನ್ಯಾಯಮೂರ್ತಿ (CJI) ಡಿ.ವೈ. ಚಂದ್ರಚೂಡ್ ಅವರು ಈ ಹೊಸ ಪ್ರತಿಮೆಯ ಅನಾವರಣ ಮಾಡಿದ್ದಾರೆ. ಈ ಮೂಲಕ ಭಾರತೀಯ ನ್ಯಾಯದ ವಿಕಾಸದ ಸ್ವರೂಪವನ್ನು ಒತ್ತಿಹೇಳಿದ್ದಾರೆ. ಹೊಸ ಪ್ರತಿಮೆಯನ್ನು ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ಗ್ರಂಥಾಲಯದಲ್ಲಿ ಸ್ಥಾಪಿಸಲಾಗಿದೆ.
ಹೊಸ ಪ್ರತಿಮೆಯಲ್ಲಿ ಲೇಡಿ ಆಫ್ ಜಸ್ಟಿಸ್ (ನ್ಯಾಯದೇವತೆ)ನ ಕಣ್ಣಿನ ಪಟ್ಟಿಯನ್ನು ತೆಗೆದುಹಾಕಲಾಗಿದೆ. ಆಕೆಯ ಎಡಗೈಯಲ್ಲಿ ಕತ್ತಿಯ ಬದಲಾಗಿ ಸಂವಿಧಾನದ ಪುಸ್ತಕವನ್ನು ಇರಿಸಲಾಗಿದೆ. ಲೇಡಿ ಜಸ್ಟಿಸ್ ಪ್ರತಿಮೆಯನ್ನು ಭಾರತದಲ್ಲಿ ನ್ಯಾಯದ ಆಧುನಿಕ ಆವೃತ್ತಿಯನ್ನು ಪ್ರತಿಬಿಂಬಿಸಲು ಮರುವಿನ್ಯಾಸಗೊಳಿಸಲಾಗಿದೆ. ಹಿಂದಿನ ಆವೃತ್ತಿಯಲ್ಲಿ ನ್ಯಾಯದೇವತೆಯ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಲಾಗಿತ್ತು. ಆದರೆ, ಹೊಸ ಪ್ರತಿಮೆಯು ತೆರೆದ ಕಣ್ಣುಗಳನ್ನು ಹೊಂದಿದೆ, “ನ್ಯಾಯವು ಇನ್ನು ಮುಂದೆ ಕುರುಡಾಗಿಲ್ಲ” ಎಂಬುದನ್ನು ಇದು ಸಂಕೇತಿಸುತ್ತದೆ.
ಮೂಲಗಳ ಪ್ರಕಾರ, ಸಿಜೆಐ ಚಂದ್ರಚೂಡ್ ವಸಾಹತುಶಾಹಿ ಪರಂಪರೆಯನ್ನು ಮೀರಿ ಮುನ್ನಡೆಯುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಕಾನೂನು ಕುರುಡಲ್ಲ; ಅದು ಎಲ್ಲರನ್ನು ಸಮಾನವಾಗಿ ನೋಡುತ್ತದೆ” ಎಂದು ಅವರು ಹೇಳಿದ್ದಾರೆ. ಆದ್ದರಿಂದ, ಲೇಡಿ ಜಸ್ಟೀಸ್ನ ಹೊಸ ರೂಪವು ಈ ತತ್ವವನ್ನು ಪ್ರತಿಬಿಂಬಿಸುತ್ತದೆ, ಆಕೆಯ ಕೈಯಲ್ಲಿ ಸಂವಿಧಾನವು ಸಾಂವಿಧಾನಿಕ ಮೌಲ್ಯಗಳ ಆಧಾರದ ಮೇಲೆ ನ್ಯಾಯಕ್ಕೆ ಅವರ ಬದ್ಧತೆಯನ್ನು ಸೂಚಿಸುತ್ತದೆ.