ಮೋದಿ ಸಂಸತ್‌ ಭವನ ಉದ್ಘಾಟನೆ ವಿರೋಧ – ಅರ್ಜಿ ವಜಾಗೊಳಿಸಿದ್ದೇಕೆ ಸುಪ್ರೀಂಕೋರ್ಟ್‌?

ಮೋದಿ ಸಂಸತ್‌ ಭವನ ಉದ್ಘಾಟನೆ ವಿರೋಧ – ಅರ್ಜಿ ವಜಾಗೊಳಿಸಿದ್ದೇಕೆ ಸುಪ್ರೀಂಕೋರ್ಟ್‌?

ನವದೆಹಲಿ: ನೂತನ ಸಂಸತ್ ಉದ್ಘಾಟನೆ ವಿಚಾರದಲ್ಲಿ ನಡೆಯುತ್ತಿರುವ ಕಿತ್ತಾಟ ಮುಗಿಯುವಂತೆ ಕಾಣುತ್ತಿಲ್ಲ. ಮೇ 28 ರಂದು ಉದ್ಘಾಟನೆಗೊಳ್ಳುತ್ತಿರುವ ಸಂಸತ್ತನ್ನು ಭಾರತದ ಪ್ರಥಮ ಪ್ರಜೆ ಆಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಸಂಸತ್ ಭವನದ ಉದ್ಘಾಟನೆ ಮಾಡಬೇಕೆಂದು ಸಲ್ಲಿಕೆಯಾದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ಇದನ್ನೂ ಓದಿ: ನೂತನ ಸಂಸತ್‌ ಭವನ ಉದ್ಘಾಟನೆ – ಕೇಂದ್ರದಿಂದ 75 ರೂಪಾಯಿಯ ವಿಶೇಷ ನಾಣ್ಯ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೂತನ ಸಂಸತ್ ಭವನ ನಿರ್ಮಾಣವಾಗಿದ್ದು, ಇದೇ ಭಾನುವಾರ ಲೋಕಾರ್ಪಣೆಯಾಗಲಿದೆ. ಪ್ರಧಾನಿ ಮೋದಿ ನೂತನ ಸಂಸತ್ತನ್ನ ಉದ್ಘಾಟನೆ ಮಾಡಲಿದ್ದಾರೆ. ಇದಕ್ಕೆ ಕಾಂಗ್ರೆಸ್‌, ಟಿಎಂಸಿ, ಆಪ್‌, ಜೆಡಿಯು ಸೇರಿದಂತೆ 20 ವಿರೋಧ ಪಕ್ಷಗಳು ಬಹಿಷ್ಕಾರ ಹಾಕಿದ್ದವು. ಈ ಬೆನ್ನಲ್ಲೇ ನೂತನ ಸಂಸತ್ತನ್ನು ರಾಷ್ಟ್ರಪತಿಗಳಿಂದ ಉದ್ಘಾಟಿಸಲು ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌  “ನೀವು ಅಂತಹ ಅರ್ಜಿಗಳನ್ನು ಏಕೆ ಸಲ್ಲಿಸುತ್ತೀರಿ ಎಂಬುದು ನಮಗೆ ತಿಳಿದಿದೆ, ಇದನ್ನು ಪರಿಗಣಿಸಲು ನಾವು ಒಲವು ತೋರುತ್ತಿಲ್ಲ. ನಾವು ನಿಮ್ಮ ಮೇಲೆ ವೆಚ್ಚವನ್ನು ಹೇರುತ್ತಿಲ್ಲ ಎಂಬುದಕ್ಕೆ ಕೃತಜ್ಞರಾಗಿರಿ” ಎಂದು ಪೀಠವು ಹೇಳಿದೆ.

ನ್ಯಾಯವಾದಿ ಜಯ ಸುಕಿನ್‌ ಎಂಬುವರು ಈ ಬಗ್ಗೆ ದಾವೆ ಹೂಡಿದ್ದರು. ಮೇ 18ರಂದು ಲೋಕಸಭೆಯ ಸೆಕ್ರೆಟರಿ ಜನರಲ್‌ ಬಿಡುಗಡೆ ಮಾಡಿರುವ ಆಹ್ವಾನ ಪತ್ರಿಕೆ ದೇಶದ ಸಂವಿಧಾನವನ್ನು ಉಲ್ಲಂಘಿಸುತ್ತಿದೆ. ರಾಷ್ಟ್ರಪತಿ ದೇಶದ ಪ್ರಥಮ ಪ್ರಜೆ ಮತ್ತು ಅವರು ಸಂಸತ್‌ ನ ಮುಖ್ಯಸ್ಥರು. ದೇಶಕ್ಕೆ ಸಂಬಂಧಿಸಿದಂತೆ ಎಲ್ಲಾ ನಿರ್ಧಾರಗಳನ್ನು ರಾಷ್ಟ್ರಪತಿಗಳ ಹೆಸರಿನಲ್ಲಿಯೇ ಕೈಗೊಳ್ಳಲಾಗುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಸಂವಿಧಾನದ 79ನೇ ವಿಧಿಯ ಅನ್ವಯ ರಾಷ್ಟ್ರಪತಿಗಳು ಸಂಸತ್‌ನ ಅವಿಭಾಜ್ಯ ಅಂಗ. ಹೀಗಾಗಿ ಉದ್ಘಾಟನಾ ಕಾರ್ಯಕ್ರಮದಿಂದ ಅವರನ್ನು ದೂರ ಇರಿಸುವಂತೆ ಇಲ್ಲ. ಈ ಹಿನ್ನೆಲೆಯಲ್ಲಿ ಲೋಕಸಭೆಯ ಕಾರ್ಯಾಲಯಕ್ಕೆ ಹೊಸ ಸಂಸತ್‌ ಭವನವನ್ನು ರಾಷ್ಟ್ರಪತಿಗಳಿಂದ ನಡೆಸಲು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿತ್ತು.

suddiyaana