40 ಬಾಲ್.. 14 ಫೋರ್.. ಸೆಂಚುರಿ! – ಸಂಜು ಸ್ಯಾಮ್ಸನ್ IS BACK
IND Vs BAN.. ಅದೆಷ್ಟು ದಾಖಲೆ?
ಇಂಥಾದ್ದೊಂದು ಕಮ್ ಬ್ಯಾಕ್ ಬೇಕಿತ್ತು. ಇಂಥಾದ್ದೊಂದು ಭರವಸೆ ಬೇಕಿತ್ತು. ಇಂಥಾದ್ದೊಂದು ಪವರ್ಫುಲ್ ಪ್ರದರ್ಶನವೇ ಬೇಕಿತ್ತು. ಟೀಂ ಇಂಡಿಯಾ ಆಟಗಾರ ಸಂಜು ಸ್ಯಾಮ್ಸನ್ಗೆ ನಿಜಕ್ಕೂ ಕೂಡ ಇಂಥಾದ್ದೊಂದು ಸಕ್ಸಸ್ ಬೇಕೇ ಬೇಕಿತ್ತು. ಇನ್ನೇನು ಭಾರತ ತಂಡದಿಂದ ಗೇಟ್ಪಾಸ್ ಹೊಸ್ತಿಲಿನಲ್ಲಿ ನಿಂತಿದ್ದ ಸಂಜುಗೆ ಮತ್ತೆ ನಿಟ್ಟುಸಿರೋ ಬಿಡೋ ಅವಕಾಶ ಸಿಕ್ಕಿದೆ. ಹೊಡಿಬಡಿ ಆಟ ಎಲ್ಲರ ಬಾಯಿ ಮುಚ್ಚಿಸಿದೆ. ಅಷ್ಟಕ್ಕೂ ಬಾಂಗ್ಲಾ ವಿರುದ್ಧದ 3ನೇ ಟಿ-20 ಪಂದ್ಯ ಸಂಜುಗೆ ಅದೆಷ್ಟು ಇಂಪಾರ್ಟೆಂಟ್ ಆಗಿತ್ತು? ಕರಿಯರ್ಗೆ ಟರ್ನಿಂಗ್ ಪಾಯಿಂಟ್ ಆಗುತ್ತಾ? ಒಂದೇ ಮ್ಯಾಚ್ನಲ್ಲಿ ಎಷ್ಟೆಲ್ಲಾ ದಾಖಲೆಗಳು ರೆಕಾರ್ಡ್ ಆದ್ವು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಿಗ್ ಬಾಸ್ ನಲ್ಲಿ ಕಿಚ್ಚನಿಗೆ ಅವಮಾನ? – ಸುದೀಪ್ ಹೊರ ಬರಲು ಇದೇ ಕಾರಣ
ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿಯಾಗಿ ಗೆದ್ದು ದಾಖಲೆ ಬರೆದಿದೆ. ಬರೋಬ್ಬರಿ 133 ರನ್‌ಗಳ ಅಂತರದಲ್ಲಿ ಗೆಲ್ಲುವ ಮೂಲಕ ಒಂದೇ ಪಂದ್ಯದಲ್ಲಿ ಹಲವು ರೆಕಾರ್ಡ್ಸ್ ಬರೆದಿದೆ. ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಬಾಂಗ್ಲಾ ಬೌಲರ್‌ಗಳು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಟೆಸ್ಟ್ ಮತ್ತು ಟಿ-20 ಎರಡೂ ಸರಣಿಯಲ್ಲೂ ಕೂಡ ಕ್ಲೀನ್ ಸ್ವೀಪ್ ಸಾಧಿಸಿದ್ದಾರೆ. ಈ ಪಂದ್ಯ ತಂಡಕ್ಕೆ ಎಷ್ಟು ಮುಖ್ಯವಾಗಿತ್ತೋ ಇಲ್ವೋ ಆದ್ರೆ ಸಂಜು ಸ್ಯಾಮ್ಸನ್ಗೆ ಮಾತ್ರ ಫ್ಯೂಚರ್ ಗೇಮರ್ ಆಗಿದೆ.
40 ಎಸೆತಗಳಲ್ಲೇ ಸೆಂಚುರಿ ಸಿಡಿಸಿ ಅಬ್ಬರಿಸಿದ ಸಂಜು!
ಕಳೆದ ಶ್ರೀಲಂಕಾ ಸರಣಿ ಸೇರಿದಂತೆ ಬಾಂಗ್ಲಾ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಫ್ಲ್ಯಾಪ್ ಶೋ ತೋರಿಸಿದ್ರು. ಈ ಮೂಲಕ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಆದ್ರೆ 3ನೇ ಮ್ಯಾಚ್ನಲ್ಲಿ ಎಲ್ಲರಿಗೂ ಉತ್ತರ ನೀಡಿದ್ದಾರೆ. ಪಂದ್ಯದ ಆರಂಭಕ್ಕೂ ಮುನ್ನ ಯಾರೊಬ್ಬರೂ ಕೂಡ ಸಂಜುಸ್ಯಾಮ್ಸನ್ ಇಂಥಾದ್ದೊಂದು ಪ್ರದರ್ಶನ ನೀಡ್ತಾರೆ ಅಂತಾ ಅಂದುಕೊಂಡಿರಲಿಲ್ಲ. ಮೊದಲು ಬ್ಯಾಟಿಂಗ್ಗೆ ಇಳಿದಿದ್ದ ಭಾರತ ತಂಡದ ಪರ ಡು ಆರ್ ಡೈನಂತೆ ಕ್ರಿಸ್ಗೆ ಬಂದಿದ್ದ ಸಂಜು ಬಾಂಗ್ಲಾ ಬೌಲರ್‌ಗಳನ್ನು ಮನಬಂದಂತೆ ಬೆಂಡೆತ್ತಿದ್ರು. ಅದ್ರಲ್ಲೂ ಒಂದೇ ಓವರ್ನಲ್ಲಿ 5 ಸಿಕ್ಸರ್ಗಳನ್ನ ಸಿಡಿಸಿದ್ರು. ಈ ಮೂಲಕ ಜಸ್ಟ್ 40 ಎಸೆತಗಳಲ್ಲೇ ಸೆಂಚುರಿ ಸಿಡಿಸಿ ತಮ್ಮೆಲ್ಲಾ ವಿರುದ್ಧದ ಟೀಕೆಗಳಿಗೆ ಉತ್ತರ ನೀಡಿದ್ರು. 47 ಎಸೆತಗಳಲ್ಲಿ ಬರೋಬ್ಬರಿ 8 ಸಿಕ್ಸರ್ಸ್ ಹಾಗೂ 11 ಬೌಂಡರಿ ಸಮೇತ 111 ರನ್ ಗಳಿಸಿದರು. ಈ ಅದ್ಭುತ ಪ್ರದರ್ಶನದ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಂಜು-ಸೂರ್ಯ ಅಬ್ಬರಕ್ಕೆ ಪತರುಗುಟ್ಟಿದ ಬಾಂಗ್ಲಾ ಬಾಯ್ಸ್!
ಒಂದ್ಕಡೆ ಸಂಜು ಅಬ್ಬರಿಸಿದ್ರೆ ಮತ್ತೊಂದೆಡೆ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಕೂಡ ಪವರ್ಫುಲ್ ಪ್ರದರ್ಶನ ತೋರಿದ್ರು. ಸಂಜು ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ಜೊತೆಯಾಟದ ನೆರವಿನಿಂದ ಕೇವಲ 10 ಓವರ್‌ಗಳಲ್ಲಿ 152 ರನ್ ಗಳಿಸುವ ಮೂಲಕ ಭಾರತ ದಾಖಲೆ ನಿರ್ಮಿಸಿತು. ಈ ಇಬ್ಬರು 70 ಎಸೆತಗಳಲ್ಲಿ ದಾಖಲೆಯ 172 ರನ್‌ಗಳ ಜೊತೆಯಾಟ ಆಡುವ ಮೂಲಕ ಮೈಲುಗಲ್ಲು ಸಾಧಿಸಿದ್ರು. ಹಾಗೇ ಕೆಳ ಕ್ರಮಾಂಕದಲ್ಲಿ ಅಬ್ಬರಿಸಿದ ಪರಾಗ್ ಹಾಗೂ ಪಾಂಡ್ಯ ಕ್ರಮವಾಗಿ 34 ಹಾಗೂ 47 ರ್ ಗಳಿಸಿದರು. ಅಂತಿಮವಾಗಿ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ದಾಖಲೆಯ 297 ರನ್ ಗಳಿಸಿತು. ಆ ಮೂಲಕ ಟಿ-20 ಅಂತಾರಷ್ಟ್ರೀಯ ಕ್ರಿಕೆಟ್‌ನ ಇನ್ನಿಂಗ್ಸ್ ಒಂದರಲ್ಲಿ ಅತೀ ಹೆಚ್ಚು ರನ್ ಗಳಿಸಿದ ಎರಡನೇ ತಂಡವೆಂಬ ಸಾಧನೆಯನ್ನು ಟೀಂ ಇಂಡಿಯಾ ಮಾಡಿದೆ. ಇದಕ್ಕೂ ಮೊದಲು ನೇಪಾಳ ತಂಡ ಮಂಗೋಲಿಯಾ ವಿರುದ್ಧದ ಪಂದ್ಯದಲ್ಲಿ 314 ರನ್ ಗಳಸಿರುವುದು ಇಲ್ಲಿಯ ವರೆಗಿನ ಗರಿಷ್ಟ ರನ್ ಆಗಿದೆ.
ಇನ್ನು ಇದೇ ಪಂದ್ಯದಲ್ಲಿ ಅರ್ಧಶತಕ ಪೂರೈಸಲು ಸಂಜು ಸ್ಯಾಮ್ಸನ್ ತೆಗೆದುಕೊಂಡಿದ್ದು ಕೇವಲ 22 ಎಸೆತಗಳನ್ನು ಮಾತ್ರ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ್ ವಿರುದ್ಧ ಅತೀ ವೇಗದ ಅರ್ಧಶತಕ ಬಾರಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಹಾಗೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸೆಂಚುರಿ ಬಾರಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಬ್ಯಾಟರ್. ಟಿ20 ಕ್ರಿಕೆಟ್‌ನಲ್ಲಿ ಅತೀ ವೇಗದ ಶತಕ ಸಿಡಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೂ ಸಂಜು ಸ್ಯಾಮನ್ಸ್ ಪಾತ್ರರಾಗಿದ್ದಾರೆ. ಈ ಪಂದ್ಯದಲ್ಲಿ ಸ್ಯಾಮ್ಸನ್ ಕೇವಲ 40 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದಾರೆ. ಇನ್ನು 35 ಎಸೆತಗಳಲ್ಲಿ ಶತಕ ಬಾರಿಸಿದ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಬೌಂಡರಿಯಲ್ಲೂ ದಾಖಲೆ ಬರೆತ ಭಾರತದ ಆಟಗಾರರು!
ಇನ್ನು ಈ ಪಂದ್ಯದಲ್ಲಿ ಒಟ್ಟು 22 ಸಿಕ್ಸರ್ ಹಾಗೂ 25 ಬೌಂಡರಿ ನೆರವಿನಿಂದ ಒಟ್ಟು 47 ಬೌಂಡರಿ ಗಳಿಸುವ ಮೂಲಕ ಇನ್ನಿಂಗ್ಸ್ ಒಂದರಲ್ಲಿ ಅತೀ ಹೆಚ್ಚು ಬೌಂಡರಿ ಗಳಸಿದ ತಂಡ ಎಂಬ ದಾಖಲೆ ತನ್ನದಾಗಿಸಿಕೊಂಡಿತು. ಹಾಗೇ 297 ರನ್ಗಳು ಇದು ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡ ಗಳಿಸಿದ ಅತಿ ಹೆಚ್ಚು ಮೊತ್ತವಾಗಿದೆ. 2017ರಲ್ಲಿ ಇಂದೋರ್ ನಲ್ಲಿ ಶ್ರೀಲಂಕಾ ವಿರುದ್ಧ 260 ರನ್ ಗಳಿಸಿದ್ದು, ಭಾರತ ಟಿ20 ಕ್ರಿಕೆಟ್‌ನಲ್ಲಿ ಈವರೆಗೆ ಗಳಿಸಿದ ದೊಡ್ಡ ಮೊತ್ತವಾಗಿದೆ. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇದು ಎರಡನೇ ಅತಿ ದೊಡ್ಡ ಮೊತ್ತವಾಗಿದೆ.
ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡ ಅತಿ ವೇಗದ ಶತಕ!
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡ ಅತಿ ವೇಗದ ಶತಕ ಬಾರಿಸಿದ ದಾಖಲೆಯನ್ನೂ ಮಾಡಿದೆ. ಟೀಂ ಇಂಡಿಯಾ ಕೇವಲ 7.1 ಓವರ್‌ಗಳಲ್ಲಿ 100 ರನ್‌ಗಳ ಗಡಿಯನ್ನು ಪೂರೈಸಿತು, ಇದು ಹೊಸ ವಿಶ್ವ ದಾಖಲೆಯಾಗಿದೆ. ಹಾಗೆಯೇ ಟೀಂ ಇಂಡಿಯಾ 10 ಓವರ್‌ಗಳಲ್ಲಿ ಗರಿಷ್ಠ ಸ್ಕೋರ್ ಮಾಡಿದ ದಾಖಲೆಯನ್ನೂ ಮಾಡಿದೆ. 10 ಓವರ್‌ಗಳಲ್ಲಿ ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ಭಾರತದ ಸ್ಕೋರ್ ಬೋರ್ಡ್‌ನಲ್ಲಿ 152 ರನ್ ಕಲೆ ಹಾಕಿದರು. ಈ ಮೂಲಕ ಭಾರತ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗದ 100, 150, 200 ಮತ್ತು 250 ರನ್ ಪೂರೈಸಿದ ದಾಖಲೆ ನಿರ್ಮಿಸಿದೆ. ಟೀಂ ಇಂಡಿಯಾ ಕೇವಲ 84 ಎಸೆತಗಳಲ್ಲಿ 200 ರನ್ ಪೂರೈಸಿತು, ಇದು ತಂಡದ ಎರಡನೇ ವೇಗದ ದ್ವಿಶತಕವಾಗಿದೆ. ಹಾಗೇಸಂಜು ಮತ್ತು ಸೂರ್ಯ ಜೋಡಿ ಮೊದಲ ಆರು ಓವರ್‌ಗಳ ಪವರ್‌ಪ್ಲೇನಲ್ಲಿ ಬರೋಬ್ಬರಿ 82 ರನ್ ಕಲೆಹಾಕಿತು. ಇದು ಪವರ್‌ಪ್ಲೇನಲ್ಲಿ ಟೀಂ ಇಂಡಿಯಾ ದಾಖಲಿಸಿದ ಅತಿದೊಡ್ಡ ಸ್ಕೋರ್ ಆಗಿದೆ.
ಒಟ್ನಲ್ಲಿ ಹೈದರಾಬಾದ್‌ನಲ್ಲಿ ಗೆಲ್ಲುವ ಗುರಿಯೊಂದಿಗೆ ಅಖಾಡಕ್ಕಿಳಿದಿದ್ದ ಬಾಂಗ್ಲಾದೇಶ ತಂಡಕ್ಕೆ ಭಾರತದ ಬ್ಯಾಟ್ಸ್‌ಮನ್‌ಗಳು ನರಕ ದರ್ಶನ ಮಾಡಿಸಿದ್ದಾರೆ. ಪಂದ್ಯದುದ್ದಕ್ಕೂ ಬೌಂಡರಿ, ಸಿಕ್ಸರ್ಗಳ ಮಳೆಗರೆದ ಟೀಂ ಇಂಡಿಯಾ ಬ್ಯಾಟರ್ಸ್ ವಿಶ್ವಕ್ರಿಕೆಟ್ನಲ್ಲಿ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ಇನ್ನು ಇದೇ ವಾರ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೀನಿಯರ್ಸ್ ಟೆಸ್ಟ್ ಸರಣಿಗೆ ಸಜ್ಜಾಗಿದ್ದು, ಮತ್ತದೇ ಗೆಲುವಿನ ಓಟ ಮುಂದುವರಿಸೋ ಜೋಶ್ನಲ್ಲಿದ್ದಾರೆ.