₹56 ಕೋಟಿ ಸಾಲ ಹಿಂತಿರುಗಿಸದ ನಟ ಸನ್ನಿ ಡಿಯೋಲ್ – ಬಂಗಲೆ ಹರಾಜು ಪ್ರಕ್ರಿಯೆ ಹಿಂಪಡೆದ ಬ್ಯಾಂಕ್ ನಡೆಗೆ ಕಾಂಗ್ರೆಸ್ ಕಿಡಿ  

₹56 ಕೋಟಿ ಸಾಲ ಹಿಂತಿರುಗಿಸದ ನಟ ಸನ್ನಿ ಡಿಯೋಲ್ – ಬಂಗಲೆ ಹರಾಜು ಪ್ರಕ್ರಿಯೆ ಹಿಂಪಡೆದ ಬ್ಯಾಂಕ್ ನಡೆಗೆ ಕಾಂಗ್ರೆಸ್ ಕಿಡಿ  

ಸನ್ನಿ ಡಿಯೋಲ್. ಬಾಲಿವುಡ್ ನಟ, ನಿರ್ದೇಶಕ ಮತ್ತು ನಿರ್ಮಾಪಕ. ಕಳೆದ 30 ವರ್ಷಗಳಿಂದ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಸನ್ನಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ನಟನೆಗಾಗಿ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಎರಡು ಫಿಲ್ಮ್ ಫೇರ್ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದಾರೆ. ಇದೀಗ ಸನ್ನಿ ಡಿಯೋಲ್ ಅಭಿನಯದ ಗದರ್ 2 ಸಿನಿಮಾ ಬಾಕ್ಸ್ ಆಫೀಸ್​ ನಲ್ಲಿ ಭರ್ಕರಿ ಕಲೆಕ್ಷನ್ ಮಾಡುತ್ತಿರುವ ಹೊತ್ತಲ್ಲೇ ಸನ್ನಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಇದನ್ನೂ ಓದಿ : ಚಿರು ನಟನೆಯ ಕೊನೆ ಚಿತ್ರದ ಡಬ್ಬಿಂಗ್‌ ಮುಗಿಸಿದ ಧ್ರುವಸರ್ಜಾ – ಅ. 5 ರಂದು ತೆರೆಗೆ ಬರಲಿದೆ ‘ರಾಜಮಾರ್ತಾಂಡ’

ಗದರ್ 2 ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದು, ಇನ್ನೂ ಕೂಡ ಜನರಿಂದ ಸಿಕ್ಕಾಪಟ್ಟೆ ರೆಸ್ಪಾನ್ಸ್ ಪಡೆಯುತ್ತಿದೆ. ಈ ಮಧ್ಯೆ ಅವರು 56 ಕೋಟಿ ರೂಪಾಯಿ ಸಾಲ ಹಿಂದಿರುಗಿಸದ ಕಾರಣ ಅವರ ಒಡೆತನದ ಬಂಗಲೆಯನ್ನು ಬ್ಯಾಂಕ್ ಆಫ್ ಬರೋಡಾದವರು ಹರಾಜಿಗೆ ಇಟ್ಟಿದ್ದರು. ಈಗ ಇದನ್ನು ಹಿಂಪಡೆಯಲಾಗಿದೆ. ಇದಕ್ಕೆ ತಾಂತ್ರಿಕ ಸಮಸ್ಯೆಯ ಕಾರಣವನ್ನು ಬ್ಯಾಂಕ್​ ನೀಡಿದೆ. ಈ ಬೆಳವಣಿಗೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಟೈಮ್ಸ್ ಆಫ್ ಇಂಡಿಯಾ ಮುಂಬೈ ಎಡಿಷನ್​​ನ ಜಾಹೀರಾತು ಕಾಲಂನಲ್ಲಿ ಈ ನೋಟಿಸ್ ಪ್ರಕಟಗೊಂಡಿತ್ತು. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿತ್ತು. ‘ಗದರ್ 2’ ಮೂಲಕ ದೊಡ್ಡ ಗೆಲುವು ಪಡೆದ ನಟನಿಗೆ ಇದೆಂಥಾ ಸ್ಥಿತಿ ಬಂದಿದೆ ಎಂದು ಅನೇಕರು ಹೇಳಿಕೊಂಡಿದ್ದರು. ಆದರೆ, ಈಗ ಬ್ಯಾಂಕ್​ನವರು ಈ ಹರಾಜು ಪ್ರಕ್ರಿಯೆಯನ್ನು ಹಿಂಪಡೆದಿದ್ದಾರೆ.

ಸನ್ನಿ ಡಿಯೋಲ್ ಕೇವಲ ನಟ ಮಾತ್ರ ಅಲ್ಲ ಸಂಸದ ಕೂಡ ಹೌದು. ಅವರು ಬಿಜೆಪಿ ಪಕ್ಷದಲ್ಲಿದ್ದಾರೆ. ಈಗ ಅವರ ಬಂಗಲೆಯ ಹರಾಜು ಪ್ರಕ್ರಿಯೆ ಅರ್ಧಕ್ಕೆ ನಿಂತಿರುವ ಬಗ್ಗೆ ಕಾಂಗ್ರೆಸ್​ನವರು ಪ್ರಶ್ನೆ ಮಾಡಿದ್ದಾರೆ. ‘56 ಕೋಟಿ ರೂಪಾಯಿ ಸಾಲ ಮರುಪಾವತಿಸದ ಕಾರಣ ಬಿಜೆಪಿ ಸಂಸದ ಸನ್ನಿ ಡಿಯೋಲ್ ಬಂಗಲೆಯನ್ನು ಹರಾಜಿಗೆ ಇಡಲಾಗಿದೆ ಎಂಬ ವಿಚಾರ ದೇಶಕ್ಕೆ ಗೊತ್ತಾಯಿತು. ಆದರೆ, 24 ಗಂಟೆ ಒಳಗೆ ಬ್ಯಾಂಕ್ ಆಫ್ ಬರೋಡಾ ಈ ಹರಾಜು ಪ್ರಕ್ರಿಯೆಯನ್ನು ತಡೆದಿದೆ. ಇದಕ್ಕೆ ತಾಂತ್ರಿಕ ಕಾರಣ ನೀಡಲಾಗಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್  ಟ್ವೀಟ್ ಮಾಡಿದ್ದಾರೆ.

ಸನ್ನಿ ಡಿಯೋಲ್ 2016ರಲ್ಲಿ ‘ಘಾಯಲ್ ಒನ್ಸ್ ಅಗೇನ್’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸೋತಿತ್ತು. ಈ ಚಿತ್ರವನ್ನು ಅವರ ತಂದೆ ಧರ್ಮೇಂದ್ರ ನಿರ್ಮಾಣ ಮಾಡಿದ್ದರು. ಈ ಚಿತ್ರ ನಿರ್ಮಾಣಕ್ಕೆ ಅವರು ಈ ಬಂಗಲೆಯನ್ನು ಅಡ ಇಟ್ಟಿದ್ದರು ಎನ್ನಲಾಗಿದೆ. ಸದ್ಯ ಹರಾಜು ಪ್ರಕ್ರಿಯೆ ನಿಂತಿರುವ ವಿಚಾರದ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದಾರೆ.

suddiyaana