ಬಾಕ್ಸಾಫೀಸ್ ನಲ್ಲಿ ₹300 ಕೋಟಿ ಬಾಚಿಕೊಂಡ ‘ಗದರ್ 2’ – ಸನ್ನಿ ಡಿಯೋಲ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್

ಬಾಕ್ಸಾಫೀಸ್ ನಲ್ಲಿ ₹300 ಕೋಟಿ ಬಾಚಿಕೊಂಡ ‘ಗದರ್ 2’ – ಸನ್ನಿ ಡಿಯೋಲ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್

ಬಾಲಿವುಡ್‌ನ ಎವರ್‌ಗ್ರೀನ್ ಸಿನಿಮಾಗಳಲ್ಲಿ ‘ಗದರ್’ ಕೂಡ ಒಂದು. ಸನ್ನಿ ಡಿಯೋಲ್ ಹಾಗೂ ಅಮಿಶಾ ಪಟೇಲ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾ ಎನಿಸಿಕೊಂಡಿತ್ತು. 2001ರಲ್ಲಿ ತೆರೆಕಂಡಿದ್ದ ‘ಗದರ್’ ಸಿನಿಪ್ರಿಯರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಈಗ ಅದೇ ಸಿನಿಮಾದ ಸೀಕ್ವೆಲ್ 22 ವರ್ಷಗಳ ಬಳಿಕ ನಿರ್ಮಾಣಗೊಂಡು ರಿಲೀಸ್ ಆಗಿದೆ. ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದ್ದು ಕೋಟಿ ಕೋಟಿ ಲೂಟಿ ಮಾಡುತ್ತಿದೆ.

ಇದನ್ನೂ ಓದಿ : ಮಲಯಾಳಂ ನಟ ದುಲ್ಕರ್ ಸಲ್ಮಾನ್‌ಗೆ ರಾಜ್ ಬಿ ಶೆಟ್ಟಿ ಡೈರೆಕ್ಟರ್ – ಸುದ್ದಿ ಕೇಳಿ ಖುಷಿಯಾದ ಫ್ಯಾನ್ಸ್

ಕಳೆದ ವಾರ ರಿಲೀಸ್ ಆಗಿದ್ದ ಈ ಸಿನಿಮಾ ಅಬ್ಬರ ಇನ್ನೂ ಕಡಿಮೆ ಆಗುತ್ತಿಲ್ಲ. ಭಾರತದ ಬಾಕ್ಸ್ ಆಫೀಸ್​ನಲ್ಲಿ ಕೇವಲ ಎಂಟು ದಿನಕ್ಕೆ ಈ ಚಿತ್ರ 300 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ‘ಗದರ್ 2’ ಯಶ್ ನಟನೆಯ ‘ಕೆಜಿಎಫ್ 2’ ಹಾಗೂ ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರ (Pathaan Movie) ಮಾಡಿದ್ದ ದಾಖಲೆಯನ್ನು ಉಡೀಸ್ ಮಾಡಿದೆ. ಶನಿವಾರ (ಆಗಸ್ಟ್ 19) ಹಾಗೂ ಭಾನುವಾರ (ಆಗಸ್ಟ್ 20) ಚಿತ್ರಕ್ಕೆ ಮತ್ತಷ್ಟು ಕಲೆಕ್ಷನ್ ಆಗಲಿದೆ.

ಸಾಮಾನ್ಯವಾಗಿ ಸಿನಿಮಾಗಳು ರಿಲೀಸ್ ಆದ ಸಂದರ್ಭದಲ್ಲಿ ಮೊದಲ ಶುಕ್ರವಾರ ಭರ್ಜರಿ ಕಲೆಕ್ಷನ್ ಮಾಡುತ್ತದೆ. ಎರಡನೇ ಶುಕ್ರವಾರ ಎನ್ನುವಾಗ ಸಿನಿಮಾದ ಅಬ್ಬರ ಕೊಂಚ ಕಡಿಮೆ ಆಗಿರುತ್ತದೆ. ಆದರೆ, ‘ಗದರ್ 2’ ಚಿತ್ರಕ್ಕೆ ಇದು ಅನ್ವಯ ಆಗಿಲ್ಲ. ಆಗಸ್ಟ್ 11ರಿಂದ ಇಲ್ಲಿಯವರೆಗೆ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಮೂಲಕ ಸಿನಿಮಾ ಸಖತ್ ಕಲೆಕ್ಷನ್ ಮಾಡುತ್ತಿದೆ. ಇನ್ನು ಗದರ್ 2 ನಲ್ಲಿ ಮುಖ್ಯಭೂಮಿಕೆಯಲ್ಲಿರುವ ಸನ್ನಿ ಡಿಯೋಲ್  ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆದರೆ, ಅವರಿಗೆ ಇಷ್ಟು ದೊಡ್ಡ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. ‘ಗದರ್ 2’ ಚಿತ್ರದ ಮೂಲಕ ಅವರು ಅತಿ ದೊಡ್ಡ ಗೆಲುವು ಕಂಡಿದ್ದಾರೆ. ಈ ಗೆಲುವಿನಿಂದ ಅವರಿಗೆ ಬರೋ ಆಫರ್​ಗಳ ಸಂಖ್ಯೆ ಹೆಚ್ಚಾಗಿದೆ.

ಗದರ್ 2 ಸಿನಿಮಾ ಹಳೇ ಸಿನಿಮಾದ ಸೀಕ್ವೆಲ್ ಆಗಿದೆ. 2001ರಲ್ಲಿ ರಿಲೀಸ್​ ಆಗಿದ್ದ ‘ಗದರ್’ ಬಾಕ್ಸಾಫೀಸ್​ನಲ್ಲಿ ದಾಖಲೆ ಗಳಿಕೆ ಮಾಡಿಕೊಂಡಿತ್ತು. 1947ರ ಭಾರತ & ಪಾಕಿಸ್ತಾನ ವಿಭಜನೆ ಹಿನ್ನೆಲೆಯಲ್ಲಿ ನಿರ್ದೇಶಕ ಅನಿಲ್​ ಶರ್ಮಾ ಕಾಲ್ಪನಿಕ ಪ್ರೇಮಕಥೆ ಹೇಳಿದ್ದರು. ಇದೀಗ 22 ವರ್ಷಗಳ ಬಳಿಕ ಆ ಕಥೆ ಮುಂದುವರಿದಿದೆ. ಈ ಸೀಕ್ವಲ್​ನಲ್ಲಿ 1971ರಲ್ಲಿ ನಡೆದ ಭಾರತ & ಪಾಕಿಸ್ತಾನ ಯುದ್ಧದ ಬ್ಯಾಕ್​ಗ್ರೌಂಡ್​ನಲ್ಲಿ ಕಥೆ ಹೇಳಿದ್ದಾರೆ. ಮೊದಲ ಭಾಗದಲ್ಲಿ ಪತ್ನಿ ಸಕೀನಾಗಾಗಿ (ಅಮೀಷಾ) ಪಾಕಿಸ್ತಾನಕ್ಕೆ ಹೋಗುವ ತಾರಾ ಸಿಂಗ್​ (ಸನ್ನಿ ಡಿಯೋಲ್​), ಸೀಕ್ವಲ್​ನಲ್ಲಿ ಏನು ಮಾಡುತ್ತಾನೆ? ಎಂಬುದೇ ಕಥೆ.

70ರ ದಶಕದ ಕಾಲಘಟ್ಟವನ್ನು ಈ ಸಿನಿಮಾದಲ್ಲಿ ಸೆರೆ ಹಿಡಿಯುವಲ್ಲಿ ಸಿನಿಮಾ ತಂಡ ಯಶಸ್ವಿಯಾಗಿದೆ. ಸನ್ನಿ ಡಿಯೋಲ್ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆಕ್ಷನ್, ಡ್ರಾಮ, ಭಾವನಾತ್ಮಕ ಸನ್ನಿವೇಶಗಳಲ್ಲಿ ಸನ್ನಿ ಡಿಯೋಲ್ ಪ್ರೇಕ್ಷಕರ ಮುಂದೆ ಎದುರಾಗಿದ್ದಾರೆ. ಮಾಸ್ ಸಿನಿಮಾ ಇಷ್ಟ ಪಡುವ ಪ್ರೇಕ್ಷಕರಿಗೆ ‘ಗದರ್ 2′ ಇಷ್ಟ ಆಗಿದೆ. ಸನ್ನಿ ಡಿಯೋಲ್ ಪಾತ್ರಕ್ಕೆ ಶ್ರಮ ಪಟ್ಟಿರೋದು ಎದ್ದು ಕಾಣುತ್ತೆ. ಹಾಗೇ ಅಮಿಶಾ ಪಟೇಲ್ ಕೂಡ ಗಮನ ಸೆಳೆಯುತ್ತಾರೆ. ಸನ್ನಿ ಡಿಯೋಲ್ ಮಗನಾಗಿ ಉತ್ಕಟ್ ಶರ್ಮಾ ಮಿಂಚಿದ್ದಾರೆ.

suddiyaana