ಫುಟ್ಬಾಲ್ ಗೆ ಛೆಟ್ರಿ ಗುಡ್ ಬೈ – ಕೋಚ್ ಮಗಳನ್ನೇ ಪ್ರೀತಿಸಿದ್ದ ಚತುರ
ಸುನಿಲ್ & ಕೊಹ್ಲಿ ಬಾಂಧವ್ಯ ಎಂಥಾದ್ದು?

ಫುಟ್ಬಾಲ್ ಗೆ ಛೆಟ್ರಿ ಗುಡ್ ಬೈ – ಕೋಚ್ ಮಗಳನ್ನೇ ಪ್ರೀತಿಸಿದ್ದ ಚತುರಸುನಿಲ್ & ಕೊಹ್ಲಿ ಬಾಂಧವ್ಯ ಎಂಥಾದ್ದು?

ಭಾರತದಲ್ಲಿ ಕ್ರಿಕೆಟ್ ಗೆ ಸಿಗುತ್ತಿರೋ ರಾಜಮರ್ಯಾದೆ ನಡುವೆ ಅದೆಷ್ಟೋ ಆಟಗಳು ಮರೆಯಾಗಿವೆ. ಹತ್ತಾರು ಪ್ರತಿಭಾನ್ವಿತ ಆಟಗಾರರ ಸಾಧನೆ ಎಲೆ ಮರೆಯ ಕಾಯಿಯಂತೆ ಮರೆಯಾಗಿದೆ. ಇಂಥಾ ಪರಿಸ್ಥಿತಿಯಲ್ಲೂ ಇಡೀ ಭಾರತವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ದಿಟ್ಟ ಆಟಗಾರ ಸುನಿಲ್ ಛೆಟ್ರಿ. ಭಾರತೀಯ ಫುಟ್​ಬಾಲ್ ದಂತಕಥೆ ಅಂತಾನೇ ಕರೆಸಿಕೊಳ್ಳೋ ಸುನಿಲ್ ಛೆಟ್ರಿ ಇದೀಗ ಅಂತಾರಾಷ್ಟ್ರೀಯ ಫುಟ್​ಬಾಲ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ಜೂನ್ 6 ರಂದು ಕೊಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಕುವೈತ್ ವಿರುದ್ಧದ ಪಂದ್ಯದ ಮೂಲಕ ಇಂಟರ್​ನ್ಯಾಷನಲ್​ ಫುಟ್​ಬಾಲ್​ಗೆ ವಿದಾಯ ಹೇಳುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ, ನಾನು ಎಂದಿಗೂ ಮರೆಯದ ಮತ್ತು ಆಗಾಗ್ಗೆ ನೆನಪಿಸಿಕೊಳ್ಳುವ ಒಂದು ದಿನವಿದೆ. ಅದು ನನ್ನ ದೇಶಕ್ಕಾಗಿ ಆಡಿದ ಮೊದಲ ಪಂದ್ಯದ ದಿನ. ಅದು ನಂಬಲಸಾಧ್ಯವಾಗಿತ್ತು. ನಿಜ ಹೇಳಬೇಕೆಂದರೆ, ನನ್ನ ದೇಶದಲ್ಲಿ ನನಗಿಂತ ಹೆಚ್ಚು ಪ್ರೀತಿ, ವಾತ್ಸಲ್ಯ, ಅಭಿಮಾನಗಳನ್ನು ಅಭಿಮಾನಿಗಳಿಂದ ಪಡೆದ ಯಾವ ಆಟಗಾರನೂ ಇಲ್ಲ ಎಂಬುದೇ ನನ್ನ ಭಾವನೆ. ಅಷ್ಟೊಂದು ಪ್ರೀತಿ ಕೊಟ್ಟಿದ್ದಾರೆ. ಆದರೆ ಎಲ್ಲದಕ್ಕೂ ಅಂತ್ಯವಿದೆ. ಅದರಂತೆ ಇದೀಗ ನಾನು ಸಹ ಅಂತಾರಾಷ್ಟ್ರೀಯ ಫುಟ್​ಬಾಲ್​ಗೆ ವಿದಾಯ ಹೇಳುತ್ತಿರುವುದಾಗಿ ಸುನಿಲ್ ಛೆಟ್ರಿ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: 1 ರನ್.. 1 ಸೋಲು.. RCBಗೆ ಕಪ್ – WPLನಂತೆಯೇ ನಡೀತಿದ್ಯಾ IPL?

ಕಾಲ್ಚೆಂಡಿನ ಚತುರ ಛೆಟ್ರಿ!  

ವಿಶ್ವಶ್ರೇಷ್ಠ ಕಾಲ್ಚೆಂಡಿನ ಚತುರ ಎನಿಸಿರುವ ಛೆಟ್ರಿ ಅವರು ಜನಿಸಿದ್ದು 1984ರ ಆಗಸ್ಟ್​ 3ರಂದು. 39ನೇ ವರ್ಷದ ಛೆಟ್ರಿ ಹುಟ್ಟಿದ್ದು ಆಂಧ್ರಪ್ರದೇಶದ ಸಿಕಂದರಾಬಾದ್​​ ಅಂದ್ರೆ ಈಗಿನ ತೆಲಂಗಾಣದಲ್ಲಿ. ತಂದೆ ಕೆಬಿ ಛೆಟ್ರಿ, ತಾಯಿ ಸುಶೀಲಾ ಛೆಟ್ರಿ. ಸುನಿಲ್ ಛೆಟ್ರಿ ಅವರು ಕ್ರೀಡಾ ಹಿನ್ನೆಲೆಯುಳ್ಳ ಕುಟುಂಬಕ್ಕೆ ಸೇರಿದವರು. ಅವರ ತಂದೆ ಭಾರತೀಯ ಸೇನೆಯಲ್ಲಿ ಇಎಂಇ ಕಾರ್ಪ್ಸ್‌ ಅಧಿಕಾರಿಯಾಗಿದ್ದರು. ಸೇನೆಯ ಪರ ಫುಟ್ಬಾಲ್ ಕೂಡ​​ ಆಡುತ್ತಿದ್ದರು. ತಾಯಿ ನೇಪಾಳ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ತಂಡದ ಆಟಗಾರ್ತಿಯಾಗಿದ್ದರು. ಪೋಷಕರು ಫುಟ್ಬಾಲ್ ಹಿನ್ನೆಲೆಯವರಾದ ಕಾರಣ ಸುನಿಲ್​ ಛೆಟ್ರಿ, ಚಿಕ್ಕ ವಯಸ್ಸಿನಲ್ಲೇ ಫುಟ್ಬಾಲ್​ ಕಡೆ ಆಸಕ್ತಿ ಹೊಂದಿದ್ದರು.  ದೇಶೀಯ ಫುಟ್ಬಾಲ್​ನಲ್ಲಿ ಡೆಲ್ಲಿ ಸೇರಿ ಅನೇಕ ಕ್ಲಬ್​​ಗಳ ಪರ ಕಣಕ್ಕಿಳಿದಿರುವ ಛೆಟ್ರಿ, ಅತ್ಯಂತ ಯಶಸ್ವಿ ವೃತ್ತಿಪರ ವೃತ್ತಿಜೀವನ ಹೊಂದಿದ್ದಾರೆ. 2001ರಲ್ಲಿ ಡೆಲ್ಲಿ ಸಿಟಿ ಫುಟ್‌ಬಾಲ್ ಕ್ಲಬ್‌ನಲ್ಲಿ ಡೆಬ್ಯೂ ಮಾಡಿದ ಛೆಟ್ರಿ, 2002ರಲ್ಲಿ ಮೋಹನ್ ಬಗಾನ್‌ನಿಂದ ಆಯ್ಕೆಯಾದರು. ಪ್ರಸ್ತುತ, ಸುನಿಲ್ ಛೆಟ್ರಿ ಇಂಡಿಯಾ ಸೂಪರ್​ ಲೀಗ್‌ನಲ್ಲಿ ಬೆಂಗಳೂರು ಎಫ್‌ಸಿ ಜೊತೆ ಕಣಕ್ಕಿಳಿಯುತ್ತಿದ್ದಾರೆ. 2004ರಲ್ಲಿ ಭಾರತೀಯ ಅಂಡರ್-20 ತಂಡದ ಪರ ಚೊಚ್ಚಲ ಪಂದ್ಯ ಆಡಿದ್ದ ಸುನಿಲ್, 2005ರಲ್ಲಿ ಭಾರತೀಯ ಫುಟ್ಬಾಲ್ ತಂಡದ ಖಾಯಂ ಸದಸ್ಯರಾದರು. ಅಂದಿನಿಂದ ಇದುವರೆಗೂ ಮಿಂಚಿನ ಪ್ರದರ್ಶನ ತೋರುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೋಲು ಗಳಿಸಿದ ಸಕ್ರಿಯ ಆಟಗಾರರ ಪೈಕಿ 3ನೇ ಹಾಗೂ ಒಟ್ಟಾರೆ 4ನೇ ಸ್ಥಾನದಲ್ಲಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ, ಅಲಿ ದೇಯಿ, ಲಿಯೋನೆಲ್‌ ಮೆಸ್ಸಿ ನಂತರದ ಸ್ಥಾನ ಪಡೆದಿದ್ದಾರೆ. ಛೆಟ್ರಿ ಒಟ್ಟು 150 ಪಂದ್ಯಗಳಲ್ಲಿ 94 ಗೋಲು ಗಳಿಸಿದ್ದಾರೆ.

ಇನ್ನು ಛೆಟ್ರಿ ಬಗ್ಗೆ ಒಂದು ಇಂಟ್ರೆಸ್ಟಿಂಗ್ ಮಾಹಿತಿಯನ್ನ ನೀಡ್ಲೇಬೇಕು. ತನ್ನ ಕೋಚ್​ ಆಗಿದ್ದ ಮೋಹನ್ ಬಗಾನ್ ಅವ್ರ ಮಗಳನ್ನೇ ಸುನಿಲ್​ ಛೆಟ್ರಿ ಪ್ರೀತಿಸಿ ಮದುವೆಯಾಗಿದ್ದಾರೆ. ಸುನಿಲ್ ಛೆಟ್ರಿ ಅವರು 2017ರಲ್ಲಿ ಸೋನಮ್ ಭಟ್ಟಾಚಾರ್ಯ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ಮದುವೆಗೂ ಮುನ್ನ 13 ವರ್ಷಗಳ ಪರಸ್ಪರ ಡೇಟಿಂಗ್ ಮಾಡಿದ್ದರು. ಸದ್ಯ ಫುಟ್​ಬಾಲ್​ನಲ್ಲಿ ಛೆಟ್ರಿ ಅಮೋಘ ಸಾಧನೆಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಭಾರತದ ಅಮೂಲ್ಯ ಕ್ರೀಡಾ ಪ್ರಶಸ್ತಿ ಅರ್ಜುನ ಪ್ರಶಸ್ತಿ ಪಡೆದಿದ್ದಾರೆ. 2019ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನೂ ಸ್ವೀಕರಿಸಿದ್ದಾರೆ. 2005ರಲ್ಲಿ ಭಾರತದ ಪರ ಡೆಬ್ಯೂ ಮಾಡಿದ್ದ ಛೆಟ್ರಿ ಅವರು 19 ವರ್ಷಗಳ ಸುದೀರ್ಘ ವೃತ್ತಿಜೀವನ ಕೊನೆಗೊಳಿಸಲು ಸಿದ್ಧರಾಗಿದ್ದಾರೆ. ಭಾರತದ ಶ್ರೇಷ್ಠ ಫುಟ್ಬಾಲ್ ಆಟಗಾರ ಛೆಟ್ರಿ, ಗಮನಾರ್ಹ ಸಾಧನೆಗಳು, ಕ್ರೀಡೆಗೆ ನೀಡಿದ ಕೊಡುಗೆಗಳು ಅನನ್ಯ. ಭಾರತದಲ್ಲಿ ಫುಟ್ಬಾಲ್ ಕ್ರೇಜ್ ಹುಟ್ಟಿದ್ದೇ ಇವರಿಂದ ಎಂದರೆ ಬಹುಶ: ತಪ್ಪಾಗಲ್ಲ. ಇದೀಗ ಕುವೈತ್ ವಿರುದ್ಧದ ವಿಶ್ವಕಪ್ ಅರ್ಹತಾ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕೆರಿಯರ್ ಅಂತ್ಯಗೊಳಿಸಲು ಸುನಿಲ್ ಛೆಟ್ರಿ ನಿರ್ಧರಿಸಿದ್ದಾರೆ. ಛೆಟ್ರಿ ವಿದಾಯದ ವಿಡಿಯೋಗೆ ವಿರಾಟ್ ಕೊಹ್ಲಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಸಹೋದರ ಹೆಮ್ಮೆ ಎಂದು ಮಧ್ಯೆ ಒಂದು ಲವ್ ಎಮೋಜಿ ಹಾಕಿದ್ದಾರೆ.

Shwetha M